ಕೈಬಾಂಬ್‌ನ್ನು ಆಹಾರವೆಂದು ತಿಳಿದು ಸೇವಿಸುತ್ತಿರುವಾಗ ಏಕಾ ಏಕಿ ಸ್ಫೋಟ|ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯ ಬಳಿಯ ಅರಣ್ಯದಲ್ಲಿ ನಡೆದ ಘಟನೆ| ಹೋರಿಯ ಬಾಯಿ ಸಂಪೂರ್ಣ ಛಿದ್ರ, ಹೋರಿಯ ಸ್ಥಿತಿ ಚಿಂತಾಜನಕವಾಗಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಮೂಕಪ್ರಾಣಿ|
ಮುಂಡಗೋಡ(ಏ.07): ಕೈಬಾಂಬ್ ಸ್ಪೋಟಗೊಂಡು (ಹೋರಿ) ಜಾನುವಾರುವೊಂದು ತೀವ್ರ ಗಾಯಗೊಂಡ ಘಟನೆ ತಾಲೂಕಿನ ಸನವಳ್ಳಿ ಜಲಾಶಯ ಬಳಿಯ ಅರಣ್ಯದಲ್ಲಿ ಮಂಗಳವಾರ ಸಂಭವಿಸಿದೆ.
ಅಪ್ಪು ನಾಯರ ಎಂಬುವವರಿಗೆ ಸೇರಿದ ಜಾನುವಾರ ಇದಾಗಿದ್ದು, ಎಂದಿನಂತೆ ಅರಣ್ಯ ಪ್ರದೇಶದಲ್ಲಿ ಮೇಯುತ್ತಿದ್ದಾಗ ಯಾರೋ ಕಾಡು ಪ್ರಾಣಿಯನ್ನು ಬೇಟೆಯಾಡಲೆಂದೇ ಪೂರ್ವನಿಯೋಜಿತವಾಗಿ ಇರಸಲಾಗಿದ್ದ ಕೈಬಾಂಬ್‌ನ್ನು ಆಹಾರವೆಂದು ತಿಳಿದು ಸೇವಿಸುತ್ತಿರುವಾಗ ಏಕಾ ಏಕಿ ಸ್ಫೋಟಗೊಂಡ ಪರಿಣಾಮ ಹೋರಿಯ ಬಾಯಿ ಸಂಪೂರ್ಣ ಛಿದ್ರವಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದ್ದು ಸ್ಪೋಟಗೊಂಡ ಸ್ಥಳದ ಪಕ್ಕದಲ್ಲಿಯೇ ಇನ್ನೊಂದು ಬಿಳಿ ಬಣ್ಣದ ಸಂಶಯಾಸ್ಪದ ವಸ್ತು ಪತ್ತೆಯಾಗಿದ್ದು, ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೋರಿಯ ಸ್ಥಿತಿ ಚಿಂತಾಜನಕವಾಗಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿದೆ.
ಹೋರಿ ಬಾಯಲ್ಲಿ ಸ್ಫೋಟಕ ಬ್ಲಾಸ್ಟ್: ಮೂಕಪ್ರಾಣಿಯ ಬಾಯಿ ಛಿದ್ರ ಛಿದ್ರ
ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಹಾಗೂ ರೈತ ರಾಜು ಗುಬ್ಬಕ್ಕನವರ ಆಗ್ರಹಿಸಿದ್ದಾರೆ.
ಕೈಬಾಂಬ್ ಸ್ಪೋಟದಿಂದ ಜಾನುವಾರು ತೀವ್ರ ಗಾಯಗೊಂಡಿದೆ ಎಂದು ಹೇಳಲಾಗುತ್ತಿದೆ. ಅದೇ ಸ್ಥಳದಲ್ಲಿ ಕೈಬಾಂಬ್ ನಂತಹ ಸಂಶಯಾಸ್ಪದ ವಸ್ತು ಪತ್ತೆಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ಬುಧವಾರದಂದು ಪತ್ತೆಯಾಗಿರುವ ವಸ್ತುವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಕೈಬಾಂಬ್ ಹೌದಾ ಅಲ್ಲ ಎಂಬುವುದನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಾನುವಾರು ಮಾಲೀಕರು ಅರ್ಜಿ ಸಲ್ಲಿಸಿದಲ್ಲಿ ಇಲಾಖೆಯಿಂದ ಸಿಗಬೇಕಾದ ಪರಿಹಾರ ಒದಗಿಸಲಾಗುವುದು ಎಂದು ಮುಂಡಗೋಡ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳಳ್ಳಿ ತಿಳಿಸಿದ್ದಾರೆ.