ಕಲಬುರಗಿ ಸಾಹಿತ್ಯ ಸಮ್ಮೇಳನ| ಈ ಬಾರಿ ಪುಸ್ತಕ ಮಾರಾಟದಲ್ಲಿಯೂ ಹೊಸ ದಾಖಲೆ ಬರೆಯುವ ನಿರೀಕ್ಷೆ|50ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳ ಸ್ಥಾಪನೆ|ಸಾಹಿತ್ಯ, ಸಂಸ್ಕೃತಿಕ, ಮಾನವೀಕ, ಸ್ಪರ್ಧಾತ್ಮಕ ಸೇರಿದಂತೆ ತರಹೇವಾರಿ ವಿಷಯಗಳ ಪುಸ್ತಕಗಳು ಮಾರಾಟ|
ಕಲಬುರಗಿ(ಫೆ.07): ಈಗಾಗಲೇ ಪ್ರತಿನಿಧಿಗಳ ಸಂಖ್ಯಾಬಲ, ವಿಶಾಲ ವೇದಿಕೆಯಲ್ಲಿ ಹಿಂದಿನ ಸಮ್ಮೇಳನಗಳನ್ನೆಲ್ಲ ಹಿಂದಿಕ್ಕಿ ಸುದ್ದಿ ಮಾಡಿರುವ ಕಲಬುರಗಿ ಸಾಹಿತ್ಯ ಸಮ್ಮೇಳನ ಈ ಬಾರಿ ಪುಸ್ತಕ ಮಾರಾಟದಲ್ಲಿಯೂ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. 850ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಸ್ಥಾಪನೆಗೊಂಡಿದ್ದು ಸಮ್ಮೇಳನದ ಮೊದಲ ದಿನವೇ ಜನಜಾತ್ರೆ ಅಲ್ಲಿ ಸೇರಿತ್ತು, 2ನೇ ದಿನವೂ ಈ ಜನಜಂಗುಳಿ ಪುಸ್ತಕ ಮಳಿಗೆ ಸಾಲಲ್ಲಿ ಕಂಡಿದ್ದರಿಂದ ಪುಸ್ತಕ ಮಾರಾಟದ ಹೊಸ ದಾಖಲೆ ನಿರೀಕ್ಷಿಸಲಾಗುತ್ತಿದೆ.
ಶ್ರೀವಿಜಯ ಪ್ರಧಾನ ವೇದಿಕೆ ಪಕ್ಕದಲ್ಲೇ 850 ರಷ್ಟು ಪುಸ್ತಕ ಮಳಿಗೆಗಳು, ಸಾಹಿತ್ಯ, ಸಂಸ್ಕೃತಿಕ, ಮಾನವೀಕ, ಸ್ಪರ್ಧಾತ್ಮಕ... ಹೀಗೆ ತರಹೇವಾರಿ ವಿಷಯಗಳ ಪುಸ್ತಕಗಳು... ಹಿಂದಿನ ಯಾವ ಸಮ್ಮೇಳನಗಳಲ್ಲಿಯೂ ಕಾಣದಷ್ಟು ಜನ ಜಂಗುಳಿ ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಕಂಡಿರೋದು ಮಳಿಗೆ ಮಾಲೀಕರ ಖುಷಿಗೆ ಕಾರಣವಾಗಿದೆ. ಊಟಕ್ಕೆ ಜನಜಾತ್ರೆ, ಪುಸ್ತಕ ಕೊಳ್ಳಲು ಯಾರೂ ಇಲ್ಲ ಎಂಬ ಮಾತು ಈ ಸಮ್ಮೇಳನದಲ್ಲಿ ಹುಸಿಯಾಗಲಿದೆ. 800 ಕ್ಕೂ ಅಧಿಕ ಮಳಿಗೆಗಳು ಗುಲಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ದಾಖಲೆ ಎಂಬಂತೆ ಪುಸ್ತಕ ಮಳಿಗೆ ಬಂದಿವೆ.
undefined
ಸಾಹಿತ್ಯ ಸಮ್ಮೇಳನ: ಇತಿಹಾಸದಲ್ಲೂ ಮಹಿಳೆಯರ ಕಡೆಗಣನೆ, ಪೂರ್ಣಿಮಾ
ಸಮ್ಮೇಳನಕ್ಕೆ ಈ ಮಳಿಗೆಗಳೇ ತೋರಣದಂತೆ ಕಳೆಗಟ್ಟಿವೆ ಎನ್ನಬಹುದು. ದಾಖಲೆಯನ್ನಬಹುದಾದ 850ಕ್ಕೂ ಹೆಚ್ಚಿನ ಪುಸ್ತಕ ಮಳಿಗೆಗಳು, ಪುಸ್ತಕ ವ್ಯಾಪಾರಿಗಳು ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡಿರುವುದರಿಂದಾಗಿ ಸಾಹಿತ್ಯ ಪ್ರಿಯರಿಗೆ ಭೂರಿ ಭೋಜನ ಒದಗಿಸಿದಂತಾಗಿದೆ. ಸಾಹಿತ್ಯ ಪ್ರಿಯರು ಮುಖ್ಯವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಪುಸ್ತಕ ಪ್ರೇಮಿಗಳು ಪುಸ್ತಕ ಮಳಿಗೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪುಸ್ತಕ ಖರೀದಿಸುತ್ತಿದ್ದುದು ಈ ಸಮ್ಮೇಳನದಲ್ಲಿ ಪುಸ್ತಕ ಖರೀದಿ ಜೋರಾಗಿಯೇ ನಡೆಯುವುದರ ಸಂಕೇತವಾಗಿ ಕಂಡಿದೆ. ಈ ಪುಸ್ತಕ ಮಳಿಗೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ದೊಡ್ಡ ಮಳಿಗೆಗಳಿದ್ದು, ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಗಳು, ಧಾರ್ಮಿಕ ಪುಸ್ತಕ ಪ್ರಕಾಶನ ಸಂಸ್ಥೆಗಳು, ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಜ್ಞಾನ ಮಂಜರಿಗಳ ಪ್ರಕಾಶಕರು, ಕೃಷಿ, ಯೋಗ, ಶಿಕ್ಷಣ, ಮಕ್ಕಳ ಸಾಹಿತ್ಯ, ವಚನ, ದಾಸ ಹಾಗೂ ದಲಿತ ಸಾಹಿತ್ಯ ಸೇರಿದಂತೆ ಹತ್ತು ಹಲವು ಸಾಹಿತ್ಯ ಪ್ರಕಾರಗಳಿಗಾಗಿಯೇ ಮೀಸಲಿರುವ ಪ್ರಕಾಶನ ಸಂಸ್ಥೆಗಳು ಹಾಗೂ ಸಣ್ಣ ಪುಟ್ಟ ನೂರಾರು ಪ್ರಕಾಶಕರು, ಬುಕ್ ಸ್ಟಾಲ್‌ನವರು ಪಾಲ್ಗೊಂಡಿದ್ದಾರೆ.
ಶಾಸ್ತ್ರೀಯ ಭಾಷೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ: ಶೆಟ್ಟರ್
ಪುಸ್ತಕ ಮಾರಾಟ ಹೆಚ್ಚಿಸಲು ಶೇ.10 ರಿಂದ 50 ರವರೆಗೆ ರಿಯಾಯಿತಿ ಮಾರಾಟ ಬಹುತೇಕ ಮಳಿಗೆಗಳಲ್ಲೂ ಕಂಡುಬರುತ್ತಿದೆ. ಕೆಲವು ಪ್ರಕಾಶನಗಳು ಹಳೆಯ ಪುಸ್ತಕಗಳಿಗೆ ಶೇ.೫೦ ಕ್ಕಿಂತ ಹೆಚ್ಚಿನ ರಿಯಾಯಿತಿ ನೀಡುತ್ತಿದ್ದರೆ, ಕೆಲವರು ಒಂದು ಪುಸ್ತಕ ಖರೀದಿಸಿದರೆ, ಇನ್ನೊಂದು ಉಚಿತ ಎನ್ನುವ ಫಲಕ ಹಾಕಿ ವ್ಯವಹಾರ ಹೆಚ್ಚಿಸಿಕೊಂಡಿದ್ದಾರೆ. ಸುವ್ಯವಸ್ಥಿತ ಮಳಿಗೆಗಳು ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಸುವ್ಯವಸ್ಥಿತವಾದ ಸ್ಥಳಾವಕಾಶ ಒದಗಿಸಿದ್ದು, ಮಳೆ, ಬಿಸಿಲಿಗೂ ತೊಂದರೆಯಾಗದ ರೀತಿ ಆಧುನಿಕವಾಗಿ ಗುಣಮಟ್ಟದ ವ್ಯವಸ್ಥೆ ಮಾಡಲಾಗಿದೆ.
ಪುಸ್ತಕ ಪ್ರಕಾಶಕರು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದು, ಅದರಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್, ನವ ಜೋತಿ ಪ್ರಕಾಶನ, ವಿಜಯಪುರದ ಪ್ರಿಯದರ್ಶಿನಿ ಪ್ರಕಾಶನ, ನವಕರ್ನಾಟಕ ಪ್ರಕಾಶನ, ಗದುಗಿನ ಲಡಾಯಿ ಪ್ರಕಾಶನ, ಶಿವಕುಮಾರ ಏಜೆನ್ಸಿ, ಶಾಬಾದಿಮಠ ಪ್ರಕಾಶನ, ಗಣೇಶ ಪ್ರಕಾಶನ, ಶಿವಮೊಗ್ಗದ ಚಿರಂತನ ಬುಕ್ ಹೌಸ್, ಅಭಿರುಚಿ ಪ್ರಕಾಶನ ಮೈಸೂರು, ಕಲಬುರಗಿಯ ಸ್ನೇಹ ಪ್ರಕಾಶನ, ಸಿದ್ದಲಿಂಗೇಶ್ವರ ಬುಕ್‌ಡಿಪೋ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಮುಖವಾಗಿ ಕಂಡು ಬಂದವು. ಮೈಸೂರು ವಿಶ್ವವಿದ್ಯಾಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ, ಕಲಬುರಗಿಯ ಶರಣ ಬಸವ ವಿವಿ ಪ್ರಸಾರಾಂಗಗಳು, ಪುಸ್ತಕ ಪ್ರದರ್ಶನದಲ್ಲಿ ಕಡಿಮೆ ಬೆಲೆಯ ಅವತರಣಿಕೆಗಳು ಪುಸ್ತಕ ಪ್ರಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತಿವೆ. ಧಾರ್ಮಿಕ ಮಳಿಗೆಗಳು ಇನ್ನು ಪುಸ್ತಕ ಪ್ರಕಾಶನದಲ್ಲಿ ಧಾರ್ಮಿಕ ಸಾಹಿತ್ಯ ಗಮನ ಸೆಳೆಯುವಂತಿದ್ದು, ಕಲಬುರಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮ, ಬೆಂಗಳೂರು ಇಸ್ಕಾನ್ ಟೆಂಪಲ್‌ನವರು ಶ್ರೀಕೃಷ್ಣ ಭಗವಾನ್ ಕುರಿತು, ಅಲ್ಲದೆ ಬಸವಣ್ಣವರು, ಡಾ. ಅಂಬೇಡ್ಕರ್ ಅವರ ಸಮಗ್ರ ಸಂಪುಟಗಳನ್ನು ಒಳಗೊಂಡ ಪುಸ್ತಕಗಳ ಮಾರಾಟ ಜೋರಾಗಿತ್ತು. ಇನ್ನು ಇಸ್ಲಾಂ ಧರ್ಮದ ಕುರಿತ ಕುರಾನ್ ಹಾಗೂ ಇತರೆ ಪ್ರಕಟಣೆಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದುದು ಪುಸ್ತಕ ಮಳಿಗೆಯಲ್ಲಿ ಕಂಡುಬಂದಿತು.
ಗಡಿನಾಡಲ್ಲಲ್ಲ , ಕನ್ನಡಕ್ಕೆ ಬೆಂಗಳೂರಲ್ಲೇ ಆತಂಕ ಇರೋದು: ರವಿ ಹೆಗಡೆ
ಶಾಲೆಗಳಲ್ಲಿ ಶಿಕ್ಷಕರಿಗೆ ಬೋಧಿಸಲು ಅನುಕೂಲವಾಗುವಂತೆ, ದೊಡ್ಡ ಅಳತೆಯ ಪಟಗಳನ್ನು, ಬೋಧನಾ ಮಾದರಿಗಳನ್ನು ತಯಾರಿಸಿದ್ದು, ಮಳಿಗೆಗಳ ಮೇಲೆಯೇ 'ಶಿಕ್ಷಕರಿಗೆ ಮಾತ್ರ’ಎಂಬ ಹೆಸರಿಟ್ಟಿದ್ದು, ಶಿಕ್ಷಕರನ್ನು ಆಕರ್ಷಿಸುವಂತಿತ್ತು. ಇಂಗ್ಲಿಷ್‌ನಲ್ಲಿ ಕಾಲಗಳ ಕಲಿಕೆಗೆ ಪಾಠವನ್ನು ಸಿದ್ಧಗೊಳಿಸಿ ಮಾರಾಟಕ್ಕಿರಿಸಿದೆ. ಕರ್ನಾಟಕ, ವಿಶ್ವ ಭೂಪಟ, ಭಾರತದೇಶ, ಕಲಬುರಗಿ ಜಿಲ್ಲೆಯ ನಕ್ಷೆಗಳನ್ನು ದೊಡ್ಡ ಅಳತೆ, ಪೋಸ್ಟರ್‌ಗಳ ಅಳತೆಯಲ್ಲಿ ತಯಾರಿಸಿ, ಮಾರಾಟಕ್ಕೆ ಇಟ್ಟಿದ್ದು, ವಿದ್ಯಾರ್ಥಿಗಳು ಖರೀದಿಗೆ ಮುಗಿಬಿದ್ದಿರುವುದು ಕಂಡಿತು. ಸಮ್ಮೇಳನದ ಅಂಗವಾಗಿ ಎಲ್ಲಾ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ರಜೆ ನೀಡಿದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳು, ಬಂಧುಗಳ ಸಮೇತ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿ, ಖುಷಿಯಾಗಿ ಎಲ್ಲ ಮಳಿಗೆಗಳನ್ನು ಆಸಕ್ತಿಯಿಂದ ವೀಕ್ಷಿಸಿ, ಪುಸ್ತಕ ಖರೀದಿಗೆ ಮುಂದಾಗಿದ್ದಾರೆ. ಪುಸ್ತಕ ಮಳಿಗೆಗಳಲ್ಲಿ ಸಮ್ಮೇಳನದ ಮೊದಲ ದಿನ ಉತ್ತಮ ವಹಿವಾಟು ನಡೆದಿದ್ದು, ಪುಸ್ತಕ ಪ್ರಕಾಶಕರು, ಮಾರಾಟಗಾರರು ಖುಷಿಯಲ್ಲಿದ್ದಾರೆ. ಇನ್ನೂ ಸಮ್ಮೇಳನ ಇರೋದರಿಂದ ಈ ಹಿಂದಿನ ಸಮ್ಮೇಳನಗಳ ಪುಸ್ತಕ ಮಾರಾಟ ಹಿಂದಿಕ್ಕುವಂತೆ ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟ ದಾಖಲಾಗುವ ಎಲ್ಲ ಲಕ್ಷಣಗಲು ಕಂಡಿವೆ ಎಂದು ಅನೇಕರು ಹೇಳುತ್ತಿದ್ದಾರೆ.