17 ಜನ ಬಿಜೆಪಿಯತ್ತ ಮುಖ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ತಪ್ಪಿರುವುದು ಬೆಂಬಲಿಗರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಮನಗರ [ಫೆ.07]: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನದ ಅವಕಾಶ ನೀಡದಿರುವುದಕ್ಕೆ ಅವರ ಬೆಂಬಲಿಗರು ನಿರಾಸೆಗೊಂಡಿದ್ದಾರೆ.
ವಿಶೇಷವಾಗಿ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಸಿ.ಪಿ. ಯೋಗೇಶ್ವರ್ ಬೆಂಬಲಿಗರು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಿಂದಿಸುವಂತಹ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಸಿ.ಪಿ. ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಬಿಜೆಪಿಯಲ್ಲಿ ಇತ್ತು. ಆ ನಿರೀಕ್ಷೆಯಲ್ಲಿಯೇ ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟದಿಂದ ರಾಮನಗರದವರೆಗೆ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿದ್ದರು.
ಅವಕಾಶವಂಚಿತರಿಗೆ ಮುಂದಿನ ಬಾರಿ ಅವಕಾಶ: ಬೊಮ್ಮಾಯಿ...
ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರಿಗೆ ಅವಕಾಶ ಸಿಗುತ್ತಿಲ್ಲವೆಂಬ ಸುದ್ದಿ ಹರಡುತ್ತಿದ್ದಂತೆ ಬೆಂಬಲಿಗರು ತೀವ್ರ ನಿರಾಸೆಗೊಂಡರು. ಅಲ್ಲದೆ, ರಸ್ತೆ ಬದಿಯಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು, ಪಕ್ಷದ ವರಿಷ್ಠರ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.