ಆನಂದ್ ಎಂ.ಸೌದಿ 

ಕಲಬುರಗಿ(ಫೆ.07):  ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ, ಇತ್ತೀಚೆಗೆ ನಡೆದ ಬೀದರ್‌ನ ಶಹೀನ್ ಶಾಲೆಯ ಪ್ರಕರಣದ ಬಗ್ಗೆ ಆಕ್ರೋಶ, ದೆಹಲಿಯ ಶಹೀನಬಾಗ್ ಹೋರಾಟದ ಪ್ರಸ್ತಾಪ. ಸ್ತ್ರೀ ಲೋಕದ ತಲ್ಲಣಗಳು ಎಂಬ ವಿಚಾರಗೋಷ್ಠಿಯಲ್ಲಿ ಮೇಳೈಸಿದ ಪ್ರಮುಖ ವಿಚಾರಗಳಿವು. 

ಮಹಿಳೆ ಮತ್ತು ಪ್ರಭುತ್ವ:

‘ಮಹಿಳೆ ಮತ್ತು ಪ್ರಭುತ್ವ’ದ ವಿಚಾರವಾಗಿ ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಮಾತನಾಡಿ, ನಾನು ಹಿಂದೆ ಪತ್ರಿಕೆಯ ಪುರವಣಿಗಳ ತಯಾರಿಕೆ ನೇತೃತ್ವ ವಹಿಸಿ ಇಂತಹ ಸಮ್ಮೇಳನಗಳಲ್ಲಿ ಪುರವಣಿಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೆ. ಈಗ ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದ ವೇದಿಕೆಯ ಗೌರವ ಸಿಕ್ಕಿದೆ. ಸಮ್ಮೇಳಾನಧ್ಯಕ್ಷ ಡಾ.ಎಚ್. ಎಸ್.ವೆಂಕಟೇಶಮೂರ್ತಿ ಹಾಗೂ ತಾವು ಒಂದೇ ಶಾಲೆಯ ಸಹಪಾಠಿಗಳು ಎಂದು ಮೆಲುಕು ಹಾಕಿದರು. 

ಗಡಿನಾಡಲ್ಲಲ್ಲ , ಕನ್ನಡಕ್ಕೆ ಬೆಂಗಳೂರಲ್ಲೇ ಆತಂಕ ಇರೋದು: ರವಿ ಹೆಗಡೆ

ಹಿಸ್ಟರಿ ಅನ್ನೋ ಸ್ಪೆಲ್ಲಿಂಗಿನಲ್ಲೇ ‘ಹಿಸ್’(ಅವನ) ಸ್ಟೋರಿ ಅಡಗಿದೆ. ಇಲ್ಲಿ ಅವಳು(ಮಹಿಳೆ) ಬಗೆಗಿಂತ ಹೆಚ್ಚಾಗಿ, ಮೊದಲಿನಿಂದಲೂ ಅವನ (ಹಿಸ್) ಸ್ಟೋರಿಗಳೇ ವಿಜೃಂಭಿಸುವ ಮೂಲಕ ಮಹಿಳೆಯನ್ನು ಮೊದಲಿನಿಂದಲೂ ನಿರ್ಲಕ್ಷಿಸಲಾಗುತ್ತಿದೆ ಎಂದರು. ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಮಹಿಳೆಯನ್ನು ತೀರ ಕನಿಷ್ಠ ದೃಷ್ಟಿಯಿಂದ ಪ್ರಭುತ್ವ ನೋಡುತ್ತಿದೆ ಎಂದು ಸರ್ಕಾರಗಳು ಹಾಗೂ ಪುರುಷ ಪ್ರಧಾನ ವ್ಯವಸ್ಥೆ ಬಗ್ಗೆ ಟೀಕಿಸಿದರು. 

ಮಹಿಳಾ ರೂಪಕವಾದ ಲಕ್ಷ್ಮೀಯನ್ನು ಸಂಪತ್ತಿನಲ್ಲಿ, ಸರಸ್ವತಿಯನ್ನು ಅಕ್ಷರದಲ್ಲಿ ಹಾಗೂ ಪರಾಶಕ್ತಿ ಎಂದು ದೇವಿಯನ್ನೂ ಪೂಜಿಸುತ್ತಾದರೂ ವಾಸ್ತವದಲ್ಲಿ ಈ ಮೂರು ಮಹಿಳೆಯರಿಗೆ ನಿಜವಾದ ಅರ್ಥದಲ್ಲಿ ಗೌರವ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪೌರಾಣಿಕ ಕತೆಗಳ ಇಂದ್ರನೂ ಸೇರಿದಂತೆ ಈವರೆಗೆ ಮಹಿಳೆಯರನ್ನು ಅಗೌರವದಿಂದ ಕಾಣಲಾಗುತ್ತಿದೆ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹಿಳೆಯರ ಪಾತ್ರವನ್ನೂ ಕಡೆಗಣಿಸುವಂತಿಲ್ಲ. ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಡಿಲ್ಲ, ಅಂದಿನ ಕಾಲದಲ್ಲಿನ ಅವರ ಮೇಲೂ ಆಗುತ್ತಿರುವ ದಾಸ್ಯ ವ್ಯವಸ್ಥೆ, ದಬ್ಬಾಳಿಕೆ, ಶೋಷಣೆಗೆ ಮುಕ್ತಿ ಸಿಕ್ಕು, ಕೊನೆಗೆ ಪ್ರಭುತ್ವದ ಸ್ವಾತಂತ್ರ್ಯದ ಜೊತೆಗೆ ತಮಗೂ ಸ್ವಾತಂತ್ರ್ಯ ದೊರಕೀತು ಅನ್ನೋ ಭಾವನೆ ಅಲ್ಲಡಗಿತ್ತು. ರಿಯಾಯಿತಿ, ವಿನಾಯಿತಿಗಳಿಂದ ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಸಾಮಾನ್ಯ ಶೌಚಾಲಯ ವ್ಯವಸ್ಥೆಯಿಂದ ಮಹಿಳೆ ವಂಚಿತಳಾಗಿದ್ದಾಳೆ. 

ಮೀಸಲಾತಿ ಮೂಲಕ ರಾಜಕೀಯದಲ್ಲಿ ಸ್ಪರ್ಧಿಸಿ, ಕಾನೂನು ಕಟ್ಟಳೆಗಳನ್ನು ಮಾಡುವಲ್ಲಿ ಮಹಿಳೆ ಮುಂದಾಗಬೇಕಿದೆ. ತಮ್ಮ ಭತ್ಯೆ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಬಹುಮತ, ಸಹಮತ ಇಲ್ಲದಿದ್ದರೂ ಮಸೂದೆಗಳನ್ನು ಅಂಗೀಕಾರಗೊಳಿಸುವ ಸರ್ಕಾರಗಳು ಮಹಿಳೆಯರ ಮೀಸಲಾತಿ ವಿಚಾರದಲ್ಲಿ ಮೌನಕ್ಕೆ ಶರಣರಾಗಿದ್ದಾರೆಂದು ಕುಟುಕಿದರು. 

ಮಹಿಳೆ ಮತ್ತು ಲೋಕಗ್ರಹಿಕೆ: 

ಈ ಕುರಿತು ಮಾತನಾಡಿದ ಪ್ರೊ.ಶಿವಗಂಗಾ ರುಮ್ಮಾ, ಆಳುವ ಸರ್ಕಾರಗಳು ಮೌಢ್ಯದ ಮೂಲಕ ಮಹಿಳೆಯನ್ನು ಆಳುತ್ತಿದ್ದಾರೆ. ಬೀದರಿನ ಶಹೀನ್ ಶಾಲೆಯಲ್ಲಿ ನಡೆದ ಘಟನೆ, ಕವಿ ಸಿರಾಜ್ ಬಿಸ್ನಳ್ಳಿ ಮುಂತಾದವರ ವಿರುದ್ಧ ಸರ್ಕಾರದ ಕ್ರಮಗಳನ್ನು ಖಂಡಿಸಿದರು. ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸುವುದನ್ನೇ ಮುಖ್ಯವಾಗಿಟ್ಟುಕೊಳ್ಳುವ ಬದಲು, ಮಹಿಳೆಯರು ರಾಜಕೀಯವಾಗಿ ಚುನಾಯಿತರಾಗಿ ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ನಡಾವಳಿಗಳನ್ನು ತಿದ್ದುವ ಅಧಿಕಾರ ಪಡೆಯಬಹುದು ಎಂದರು.

ಪೌರತ್ವ ತಿದ್ದುಪಡಿಗೆ ವಿರೋಧ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಹೋರಾಟದಲ್ಲಿ ಮಹಿಳೆಯರು ಮುಂಚೂಣಿಯಲ್ಲಿರುವುದನ್ನು ನೋಡಿದರೆ ಜಾಗೃತ ವ್ಯವಸ್ಥೆ ಕಂಡುಬರುತ್ತಿದೆ ಎಂದ ಡಾ.ಪೂರ್ಣಿಮಾ, ಪುರಾವೆ ಅನ್ನೋದು ಪ್ರಜಾತಂತ್ರದ ವಿರೋಧಿ ನೀತಿ. ಇದರ ವಿರುದ್ಧ ವಿಶ್ವವಿದ್ಯಾಲಯಗಳಲ್ಲಿ, ಬೀದಿಗಳಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಮಹಿಳೆಯರ ಪಾತ್ರ ಅವರಲ್ಲಿ ಹೊಸ ಯೋಚನೆಗೆ ದಾರಿಯಾಗಿದೆ. ಪ್ರಭುತ್ವದ ವಿರುದ್ಧ ಮಹಿಳೆಯರ ದನಿ ಎತ್ತಿದ್ದಾರೆಂದರು.

ಶಾಸ್ತ್ರೀಯ ಭಾಷೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ: ಶೆಟ್ಟರ್

ಮಹಿಳೆ ಮತ್ತು ಸೃಜನಶೀಲತೆ ‘ಮಹಿಳೆ ಮತ್ತು ಸೃಜನಶೀಲತೆ’ ವಿಷಯ ಮಂಡಿಸಿದ ಲೇಖಕಿ ಹಾಗೂ ಉಪನ್ಯಾಸಕಿ ತಾರಿಣಿ ಶುಭದಾಯಿನಿ, ಮಹಿಳೆಯರನ್ನು ಅಡುಗೆ ಕೋಣೆ, ಮಕ್ಕಳ ಹೆರಲು, ಮುಂತಾದ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ರಾಜ ಕೀಯ ಹಾಗೂ ಸಾಮಾಜಿಕವಾಗಿ ಮಹಿಳೆ ಬಲಿಷ್ಠಳಾಗಬೇಕು ಎಂದರು. ಮಹಿಳೆಯರ ಸಬಲೀಕರಣಕ್ಕೆಂದೇ ರಚಿತವಾದ ಸ್ತ್ರೀಶಕ್ತಿ ಗುಂಪುಗಳು ಹಾಗೂ ಸ್ವಸಹಾಯ ಸಂಘ ಗಳನ್ನು ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿ ತಗೊಳಿಸಿವೆ. ಬಡ್ಡಿ ವ್ಯವಹಾರವೇ ಅಂತಿಮ ಎಂದಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಛಾಯಾಚಿತ್ರವಿಲ್ಲದೆ ಮಾಧ್ಯಮವಿಲ್ಲ’

ಸಾವಿರ ಶಬ್ದಗಳಿಗೆ ಒಂದು ಛಾಯಾಚಿತ್ರ ಸಮಾನವಾಗಿರುತ್ತದೆ. ಛಾಯಾಚಿತ್ರವಿಲ್ಲದೆ ಮಾಧ್ಯಮ ಕ್ಷೇತ್ರವಿಲ್ಲ ಎಂದು ಡಾ. ವಿ.ಜಿ. ಅಂದಾನಿ ಹೇಳಿದರು. ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಕಲಾ ಸಂಗಮ ಗೋಷ್ಠಿಯಲ್ಲಿ ಚಿತ್ರ ಮತ್ತು ಶಿಲ್ಪಕಲೆ ವಿಷಯದ ಕುರಿತು ಮಾತನಾಡಿ, ಛಾಯಾ ಚಿತ್ರಗಳ ಚಾಲ್ತಿಯು ಶತಮಾನಗಳ ಹಿಂದಿನಿಂದಲೂ ಕಾಣಬಹುದು. ಅದರಲ್ಲಿ ನಾಟಕ ಕ್ಷೇತ್ರದಲ್ಲಿ ಸಿನೆಮಾ ರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ. ಪ್ರಾಚೀನ ಕಾಲದ ರಾಜ ಮಹಾರಾಜರಿಂದಲೂ ಚಿತ್ರಕಲೆಗೆ ಮಹತ್ವವಿದೆ. ಹಲವಾರು ಕ್ಷೇತ್ರದಲ್ಲಿ ಚಿತ್ರ ಶಿಲ್ಪ ಕಲೆಯ ಪ್ರಾಮುಖ್ಯತೆ ಪಡೆದಿದೆ ಎಂದರು. 

ಡಾ. ಶಂಕರ ಸರ್ವಮಂಗಲ ಸಂಗೀತ ಮತ್ತು ಗಮಕದ ಕುರಿತು ವಿಷಯ ಮಂಡಿಸಿ, ಸಂಗೀತ ಕಲೆ ಇಡೀ ಜಗತ್ತಿಗೆ ಹರಡಿದೆ. ಸಂಗೀತ ಕಲಾವಿದರಿಗೆ ಬುದ್ಧಿ ಶಕ್ತಿ ಚುರಾಕಾಗಿರುತ್ತದೆ ಎಂದರು. ಪ್ರಭಾಕರ್ ಸಾಥಖೇಡ್ ರಂಗಭೂಮಿ ಕುರಿತು ಮಾತನಾಡಿ, ಬಣ್ಣದ ಲೋಕದ ಜಗತ್ತಿಗೆ ರಂಗಭೂಮಿ ಪರಿಪೂರ್ಣ ಅರ್ಥ ನೀಡುತ್ತದೆ, ಅನೇಕ ನಟ ನಟಿಯರು ರಂಗಭೂಮಿಯಿಂದಲೇ ಸಿನಿಮಾ ಪ್ರವೇಶ ಮಾಡಿದ್ದಾರೆ ಎಂದರು. ಕಾಶಿನಾಥ ಗುತ್ತೇದಾರ ನಿರೂಪಿಸಿದರು, ನೊಣವಿನಕೇರಿ ರಾಮಯ್ಯ ಸ್ವಾಗತಿಸಿದರು, ನಿರ್ವಹಣೆ ಭಾನುಕುಮಾರ ಗಿರೇಗೊಳ, ಕಾಂತಿಶೆಟ್ಟಿ ವಂದಿಸಿದರು

ಶೋಷಣೆಯನ್ನು ಪ್ರಶ್ನಿಸುವ ಶಕ್ತಿ ಬೆಳೆಸಿಕೊಳ್ಳಿ: 

ಲಲಿತಾ ನಾಯಕ್ ‘ಬದಲಾಗುತ್ತಿರುವ ಮಹಿಳಾ ಸಂವೇದನೆ’ ಬಗ್ಗೆ, ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವೆ ಡಾ.ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಮಹಿಳೆ ಶೋಷಣೆಗೊಳಗಾಗುತ್ತಿದ್ದಾಳೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಇದನ್ನು ಪ್ರತಿರೋಧಿಸುವ, ಪ್ರಶ್ನಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ದೇಗುಲ ಪ್ರವೇಶಗಳನ್ನು ಆದ್ಯತಾ ವಿಷಯಗಳನ್ನಾಗಿಸದೆ, ರಾಜಕೀಯವಾಗಿ ಚುನಾಯಿತ ಪ್ರತಿನಿಧಿಗಳಾಗುವ ಮೂಲಕ ಮಹಿಳೆಯರು ಮುಂದೆ ಬರಬೇಕು ಎಂದರು. ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಿದರೆ ಎಲ್ಲವೂ ಮುಗಿಯೆತೆಂದು ಭಾವಿಸಬಾರದು. ಅದಕ್ಕೆ ಕಾರಣ ಹುಡುಕಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಸರ್ಕಾರ ದಾಖಲೆಗಳನ್ನು ಕೇಳುತ್ತಿದೆ. ಇದು ಬ್ರಿಟಿಷರ ಕಾಲದಲ್ಲಿನ ಒಡೆದು ಆಳುವ ನೀತಿಯಂತಿದೆ. ನಮ್ಮ ಸಂವಿಧಾನ ಬದ್ಧ ಹಕ್ಕುಗಳನ್ನು ಯಾರೂ ಪ್ರಶ್ನಿಸಬಾರದು ಎಂದು ಹೇಳಿದರು. ಡಾ.ಎಸ್.ಪಿ. ಉಮಾದೇವಿ ಸ್ವಾಗತಿಸಿದರು, ಬಾ.ಹ.ರಮಾಕುಮಾರಿ ನಿರೂಪಿಸಿದರು, ಕುಮಾರಿ ರಮಾ ನಂದೂರಕರ್ ನಿರ್ವಹಿಸಿದರು, ಮಂಗಳಾ ಮೆಟಗುಡ್ಡ ವಂದಿಸಿದರು.