ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲೇ ಸುಮಾರು ಒಂದೂವರೆ ಕೋಟಿಯಷ್ಟು ಕುರುಬ ಸಮುದಾಯದವರಿದ್ದಾರೆ. ಇದರಿಂದ ರಾಜ್ಯದ ಕೋಟ್ಯಂತರ ಸಮುದಾಯದವರಿಗೆ ಅನುಕೂಲವಾಗಲಿದೆ: ಎಂಟಿಬಿ ನಾಗರಾಜ್
ಹೊಸಕೋಟೆ(ಅ.23): ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಕುರುಬ ಸಮುದಾಯದವರಿಗಾಗಿ ತಿರುಪತಿ ತಿರುಮಲ ಬೆಟ್ಟದ ಮೇಲೆ ಕಾಗಿನೆಲೆ ಶಾಖಾ ಮಠ ನಿರ್ಮಾಣಕ್ಕೆ 2 ಎಕರೆಯಷ್ಟು ಭೂಮಿ ನೀಡಬೇಕೆಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ರಾಜಕೀಯ ಮುಖಂಡರೊಂದಿಗೆ ಶುಕ್ರವಾರ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಟಿಟಿಡಿ ಅಧ್ಯಕ್ಷರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲೇ ಸುಮಾರು ಒಂದೂವರೆ ಕೋಟಿಯಷ್ಟು ಕುರುಬ ಸಮುದಾಯದವರಿದ್ದಾರೆ. ಇದರಿಂದ ರಾಜ್ಯದ ಕೋಟ್ಯಂತರ ಸಮುದಾಯದವರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಕಾಗಿನೆಲೆ ಶಾಖಾಮಠ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಟಿಟಿಡಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಮುಂದೆ ಆಂಧ್ರಪ್ರದೇಶ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಇಂಗಿತ ವ್ಯಕ್ತಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
undefined
ಬಾಗಲಕೋಟೆ: ತಿರುಮಲದಲ್ಲಿ ಬಿವಿವಿ ಸಂಘಕ್ಕೆ ಜಮೀನು ಹಂಚಿಕೆ
ಅವಿನಾಭಾವ ಸಂಬಂಧ:
ದಾಸಶ್ರೇಷ್ಠ ಭಕ್ತ ಕನಕದಾಸರಿಗೂ ತಿರುಪತಿ ತಿಮ್ಮಪ್ಪನಿಗೂ ಅವಿನಾಭಾವ ಸಂಬಂಧವಿದೆ. ಕನಕದಾಸರ ಮಾತಾಪಿತೃವಿಗೆ ಸಂತಾನ ಭಾಗ್ಯವಿರಲಿಲ್ಲ. ಆ ವೇಳೆ ವೆಂಕಟೇಶ್ವರ ಸ್ವಾಮಿ ಕನಸಿನಲ್ಲಿ ಬಂದು ದರ್ಶನ ಪಡೆಯುವಂತೆ ಅನುಗ್ರಹಿಸಿದಾಗ ತಿರುಮಲಕ್ಕೆ ಬಂದು ದೇವರ ದರ್ಶನ ಪಡೆದು ಹರಕೆ ತೀರಿಸಿದರು. ದೇವರ ಅನುಗ್ರಹದಿಂದ ಕನಕದಾಸರು ಜನಿಸಿದರು. ಅವರಿಗೆ ತಿಮ್ಮಪ್ಪನಾಯಕ ಎಂದೇ ನಾಮಕರಣ ಮಾಡಲಾಗಿತ್ತು ಎಂಬ ಐತಿಹ್ಯವಿದೆ. ಅಲ್ಲದೆ ಕನಕದಾಸರು ವೆಂಕಟೇಶ್ವರ ಸ್ವಾಮಿ ಕುರಿತು ಸಾವಿರಾರು ಕೀರ್ತನೆಗಳನ್ನು ರಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪುಣ್ಯಕ್ಷೇತ್ರದಲ್ಲಿ ಕಾಗಿನೆಲೆ ಗುರುಪೀಠದ ಶಾಖಾ ಮಠ ನಿರ್ಮಾಣ ಮಾಡುವ ಚಿಂತನೆ ನಡೆದಿದೆ ಎಂದು ಎಂಟಿಬಿ ತಿಳಿಸಿದರು.
ರಾಜ್ಯದ ಕುರುಬ ಸಮುದಾಯದ ಪರವಾಗಿ ಹಾಗೂ ಸರ್ಕಾರದ ಪರವಾಗಿ ಈ ಮಹಾತ್ವಕಾಂಕ್ಷಿ ಯೋಜನೆ ಬಗ್ಗೆ ಟಿಟಿಡಿ ಅಧ್ಯಕ್ಷರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೆ ಕಾಗಿನೆಲೆ ಗುರುಪೀಠದ ಸ್ವಾಮೀಜಿ ಹಾಗೂ ಸಮುದಾಯದ ಮುಖಂಡರೊಂದಿಗೆ ಸೇರಿ ಆಂದ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ವಿಷಯ ಪ್ರಸ್ತಾಪಿಸುವುದಾಗಿ ವೈ.ವಿ ಸುಬ್ಬಾರೆಡ್ಡಿ ಅವರು ಭರವಸೆ ನೀಡಿದ್ದಾರೆ. ಎಷ್ಟು ಗ ಭೂಮಿ ದೊರೆಯುತ್ತದೋ ಅಷ್ಟುಬೇಗ ಶಾಖಾ ಮಠ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.