ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವೆ: ಜಾರಕಿಹೊಳಿ

Published : Oct 23, 2022, 07:04 PM ISTUpdated : Oct 23, 2022, 07:06 PM IST
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವೆ: ಜಾರಕಿಹೊಳಿ

ಸಾರಾಂಶ

ಪಂಚಮಸಾಲಿ ಸಮಾಜದವರು 2ಎ ಮೀಸಲಾತಿ ಸಂಬಂಧ ಹಲವು ದಿನಗಳಿಂದ ಹೋರಾಟಕ್ಕೆ ಇಳಿದಿದ್ದು, ಅವರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ ಜಾರಕಿಹೊಳಿ

ಮೂಡಲಗಿ(ಅ.23):  ಈಗಾಗಲೇ ಸರ್ಕಾರದ ಮೀಸಲಾತಿ ಸಂಬಂಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, ಈ ಸಮಾಜಗಳ ಮೀಸಲಾತಿ ಬೇಡಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪಟ್ಟಣದ ಬಸವ ಮಂಟಪದಲ್ಲಿ ಶನಿವಾರ ಕಿತ್ತೂರು ಚನ್ನಮ್ಮ ಯುವಕ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದವರು 2ಎ ಮೀಸಲಾತಿ ಸಂಬಂಧ ಹಲವು ದಿನಗಳಿಂದ ಹೋರಾಟಕ್ಕೆ ಇಳಿದಿದ್ದು, ಅವರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.

ಈ ಸಮುದಾಯದ ಜೊತೆಗೆ ಉಪ್ಪಾರ ಹಾಗೂ ಕುರುಬ ಸಮಾಜದವರು ಸಹ ತಮ್ಮ ಸಮಾಜವನ್ನು ಎಸ್ಸಿ ಅಥವಾ ಎಸ್ಟಿಗೆ ಸೇರ್ಪಡೆ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾದಿಗ ಸಮಾಜದವರು ಸಹ ನ್ಯಾ. ಸದಾಶಿವ ಆಯೋಗದ ಜಾರಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಈ ಸಮುದಾಯಗಳ ಮೀಸಲಾತಿ ಸಂಬಂಧ ನಡೆಯುತ್ತಿರುವ ಹೋರಾಟಕ್ಕೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ. ಆದರೆ ಮೀಸಲಾತಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲ ನಾಯಕರುಗಳನ್ನು ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾವೆಲ್ಲರೂ ಒಗ್ಗಟಿನಿಂದ ಕೂಡಿಕೊಂಡು ಮುಖ್ಯಮಂತ್ರಿಗಳ ಮೇಲೆ ಹಕ್ಕೋತ್ತಾಯ ಮಂಡಿಸೋಣ. ಶೀಘ್ರದಲ್ಲೇ ಎಲ್ಲ ಜನಪ್ರತಿನಿಧಿಗಳು, ಆಯಾ ಸಮಾಜಗಳ ಮುಖಂಡರು ಸೇರಿಕೊಂಡು ಸಭೆ ನಡೆಸಿ ಬೆಂಗಳೂರಿಗೆ ನಿಯೋಗವನ್ನು ತೆಗೆದುಕೊಂಡು ಹೋಗೊಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಿ ಮೀಸಲಾತಿ ಹೋರಾಟವನ್ನು ಯಶಸ್ವಿಗೊಳಿಸೋಣ ಎಂದು ತಿಳಿಸಿದರು.

ಪಂಚಮಸಾಲಿ ಮೀಸಲಾತಿ: ಡಿ.12ಕ್ಕೆ 25 ಲಕ್ಷ ಜನರೊಂದಿಗೆ ವಿಧಾನಸೌಧ ಮುತ್ತಿಗೆ, ಕೂಡಲ ಶ್ರೀ

ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮಾಜಗಳಿಗೆ ಮೀಸಲಾತಿ ನೀಡಿದರೆ ಬೇರೆ ಸಮಾಜಗಳಿಗೆ ಅನ್ಯಾಯವಾಗುವುದಿಲ್ಲ. ತಮಿಳುನಾಡಿನ ಅಂದಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು 9 ಶೆಡ್ಯೂಲ್‌ ಮಾಡಿದಂತೆ, ನಮ್ಮಲ್ಲಿಯೂ ಮುಖ್ಯಮಂತ್ರಿಗಳು ತಮಿಳುನಾಡಿನ ಮಾದರಿ ಅನುಸರಿಸಿಕೊಂಡು ಹೋದರೆ ಯಾರೊಬ್ಬರೂ ಕೋರ್ಚ್‌- ಕಚೇರಿಗೆ ಅಲಿಯುವ ಅವಶ್ಯ ಬರುವುದಿಲ್ಲ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ 9 ಶೆಡ್ಯೂಲ್‌ ಮಾಡಿದರೆ ಮೀಸಲಾತಿ ಸಂಬಂಧ ನಡೆಸುತ್ತಿರುವ ಆಯಾ ಸಮಾಜಗಳಿಗೆ ಸರ್ಕಾರದ ಮೀಸಲಾತಿ ಸಿಕ್ಕೇ ಸಿಗುತ್ತದೆ. ಯಾವ ಸಮಾಜಕ್ಕೂ ಇದರಿಂದ ಅನ್ಯಾಯವಾಗುವುದಿಲ್ಲ. ಇತ್ತೀಚೆಗೆ ನಮ್ಮ ಸರ್ಕಾರವು ಎಸ್ಸಿ, ಎಸ್ಟಿಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡಿದೆ ಎಂದು ಹೇಳಿದರು.

ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುಮುಖ್ಯ ಬೇಡಿಕೆಯಾದ ಉಪನೋಂದಣಿ ಅಧಿಕಾರಿಗಳ ಕಚೇರಿಯು ಇದೇ ತಿಂಗಳಾಂತ್ಯದೊಳಗೆ ಕಾರ್ಯರಂಭ ಮಾಡಲಿದೆ. ಈಗಾಗಲೇ ಕಚೇರಿಯ ಆರಂಭಕ್ಕೆ ಅಗತ್ಯವಿರುವ ಎಲ್ಲ ಕಾರ್ಯಗಳು ಪೂರ್ಣಗೊಂಡಿದ್ದು, ಕಚೇರಿ ಆರಂಭಿಸುವುದು ಮಾತ್ರ ಬಾಕಿ ಇದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನನ್ನ ಬಳಿಯೂ ರೆಕಾರ್ಡಿಂಗ್‌ ಇದೆ, ಅದನ್ನು ತೆಗೆದರೆ ನಿಮ್ಮದೆಲ್ಲವೂ ಬಂದ್‌: ಯತ್ನಾಳ್‌ ಬಾಂಬ್‌..!

ಸ್ವಾತಂತ್ರ ಹೋರಾಟದಲ್ಲಿ ಕಿತ್ತೂರು ಚನ್ನಮ್ಮ, ಸಂಗೋಳ್ಳಿ ರಾಯಣ್ಣ ಸೇರಿದಂತೆ ಅನೇಕರ ತ್ಯಾಗ ಬಲಿದಾನವಿದೆ ಬ್ರೀಟಿಷರ ವಿರುದ್ದ ಹೋರಾಡಿದ ಕಿತ್ತೂರು ಚನ್ನಮ್ಮ ಹಾಗೂ ಸಂಗೋಳ್ಳಿ ರಾಯಣ್ಣ ನಮ್ಮ ಬೆಳಗಾವಿ ನೆಲದವರು ಎಂಬುವುದು ಇನ್ನೂ ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಕಿತ್ತೂರು ಚನ್ನಮ್ಮನ ಹಾಗೂ ಸಂಗೋಳ್ಳಿ ರಾಯಣ್ಣನ ಹೋರಾಟದ ಮನೋಭಾವನೆಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರಸ್ತುತವಾಗಿದೆ ಎಂದು ಹೇಳಿದರು.

ವೇದಮೂರ್ತಿ ನಿರಂಜನ ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ಕಿತ್ತೂರು ಚನ್ನಮ್ಮಳ ಹೋರಾಟಗಳನ್ನು ವಿವರಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಅಮೃತಬೋಧ ಸ್ವಾಮಿಜಿ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಹಕಾರಿ ಧುರೀಣ ಬಿ.ಆರ್‌. ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಡಿ.ಡಿ.ಪಾಟೀಲ, ಬಸವಪ್ರಭು ನಿಡಗುಂದಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ನಿಲಕಂಠ ಕಪ್ಪಲಗುದ್ದಿ, ಆರ್‌.ಪಿ.ಸೋನವಾಲ್ಕರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಿಜೆಪಿ ಅರಭಾವಿ ಮಂಡಲಾಧ್ಯಕ್ಷ ಮಹಾದೇವ ಶೆಕ್ಕಿ, ಬಸವರಾಜ ಪಾಟೀಲ, ಸುಭಾಷ ಪಾಟೀಲ, ಮಲ್ಲು ಪಾಟೀಲ, ತಿಪ್ಪಣ್ಣ ಕುರಬಗಟ್ಟಿ, ಶಿವನಗೌಡ ಪಾಟೀಲ, ಹಣಮಂತ ತೇರದಾಳ, ರಾಜು ಬೈರಗೋಳ, ಮಲ್ಲಿಕಾರ್ಜುನ ಕಬ್ಬೂರ, ಎಂ.ಎಂ.ಪಾಟೀಲ, ಕಿತ್ತೂರು ಚನ್ನಮ್ಮ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
 

PREV
Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ