Chikkamagaluru: ಸ್ಮಶಾನದ ಮಂಜೂರು ಜಾಗ ಒತ್ತುವರಿ ಆರೋಪ, ಮೂಡಿಗೆರೆ ತಾಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ

By Suvarna News  |  First Published Dec 19, 2022, 9:41 PM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ  ಹಳೆಕೋಟೆ ಗ್ರಾಮದ ಬಿ.ಕೆ.ಸುಂದರೆಶ್ ಬಡಾವಣೆಯ ನಿವಾಸಿಗಳು ಗ್ರಾಮದಲ್ಲಿ ಸ್ಮಶಾನಕ್ಕೆಂದು ಸರ್ಕಾರ ಭೂಮಿ ಮೀಸಲಿಟ್ಟಿದ್ದರೂ ಅದನ್ನು ಪ್ರಭಾವಿ ಭೂಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ  ಧರಣಿ ಸತ್ಯಾಗ್ರಹ ನಡೆಸಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು(ಡಿ.19): ಗ್ರಾಮದಲ್ಲಿ ಸ್ಮಶಾನಕ್ಕೆಂದು ಸರ್ಕಾರ ಭೂಮಿ ಮೀಸಲಿಟ್ಟಿದ್ದರೂ ಅದನ್ನು ಪ್ರಭಾವಿ ಭೂಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಪರದಾಟಪಡಬೇಕಾಗಿದ್ದು , ಸ್ಮಶಾನಕ್ಕಾಗಿ ಮೀಸಲಿದ್ದ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿಕೊಡಿ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ  ಹಳೆಕೋಟೆ ಗ್ರಾಮದ ಬಿ.ಕೆ.ಸುಂದರೆಶ್ ಬಡಾವಣೆಯ ನಿವಾಸಿಗಳು ಮೂಡಿಗೆರೆ ತಾಲೂಕು ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

Tap to resize

Latest Videos

ಅಧಿಕಾರಿಗಳಿಗೆ ಮನವಿ ನೀಡಿದ್ರೆ ಪ್ರಯೋಜನವಿಲ್ಲ : ಗ್ರಾಮಸ್ಥರು ಆರೋಪ 
ಮೂಡಿಗೆರೆ ತಾಲ್ಲೂಕಿನ ಹಳೆಕೋಟೆ ಗ್ರಾಮದ ಬಿ.ಕೆ.ಸುಂದರೇಶ್ ಬಡಾವಣೆಯಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬಗಳಿವೆ. ಅದರಲ್ಲಿ ಬಹುತೇಕ ಎಸ್ಸಿ ಎಸ್ಟಿ ಜನಾಂಗದವರೇ ವಾಸ ಮಾಡುತ್ತಿದ್ದು, ಅಲ್ಲಿ ಯಾರಾದರೂ ಮೃತಪಟ್ಟರೆ ಮನೆಯ ಹಿತ್ತಲಲ್ಲಿ ಶವಸಂಸ್ಕಾರ ಮಾಡುವ ಅನಿವಾರ್ಯತೆ ಉಂಟಾಗಿದೆ. ನಮಗೆ ಸರ್ಕಾರದಿಂದ ಯಾವುದೇ ಸೌಕರ್ಯವೂ ಸಿಕ್ಕಿಲ್ಲ. ಅಧಿಕಾರಿಗಳ ಬಳಿ ಅರ್ಜಿ ಸಲ್ಲಿಸಿ ಸಾಕಾಗಿದೆ. ಕೊನೆಗೆ ಪ್ರತಿಭಟನೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಸ್ಮಶಾನ ಭೂಮಿ ಖರೀದಿ ತಡವಾದ್ರೆ ದೇಣಿಗೆ ಸಂಗ್ರಹಿಸಿ ನೀಡ್ತೇವೆ: ಈಶ್ವರ ಖಂಡ್ರೆ

ಈ ವೇಳೆ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಹಳೇಕೋಟೆ ಗ್ರಾಮದ ಸ.ನಂ.52ರಲ್ಲಿ 58ಎಕರೆ ಖಾಲಿ ಭೂಮಿಯಿದೆ. ಆ ಪೈಕಿ 40ಎಕರೆ ಭೂಮಿ ಕೃಷಿ ಸಂಶೋಧನಾ ಕೇಂದ್ರಕ್ಕೆ ನೀಡಲಾಗಿದೆ. ಉಳಿದ 18 ಎಕರೆಯಲ್ಲಿ ಸ್ಮಶಾನಕ್ಕಾಗಿ 1999ರಲ್ಲಿ 3.10 ಎಕರೆ ಸರ್ಕಾರದಿಂದ ಮಂಜೂರಾಗಿದ್ದು, 10ಗುಂಟೆ ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸಲಾಗಿತ್ತು. ಇದಲ್ಲದೆ 1.20 ಎಕರೆ ಜಾಗ ಸಮುದಾಯಭವನಕ್ಕೆ ನೀಡಲಾಗಿದೆ. ಆದರೆ ಭೂಮಾಲೀಕರು ಸ್ಮಶಾನಕ್ಕೆ ಮೀಸಲಿರಿಸಿದ್ದ ಹಾಗೂ ಸಮುದಾಯಕ್ಕೆ ನೀಡಲಾಗಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ತಾಲೂಕಿನಲ್ಲಿ ಸಾವಿರಾರು ಎಕರೆ ಜಾಗ ಒತ್ತುವರಿಯಾಗಿದ್ದು ಅದನ್ನು ಖುಲ್ಲಾಗೊಳಿಸಿ ಬಡವರಿಗೆ ಹಂಚಿಕೆ ಮಾಡಬೇಕಾದ ಸರ್ಕಾರ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಅದೇ ಭೂಮಾಲಿಕರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಹೊರಟಿದೆ ಎಂದು ಕಿಡಿಕಾರಿದ್ರು.

ದಕ್ಷಿಣ ಭಾರತದ ಭಯಾನಕ ಸ್ಥಳಗಳಿವು, ಹಾರರ್ ಪ್ಲೇಸಿಗೆ ಹೋಗೋ ಪ್ಲ್ಯಾನ್ ಇದ್ರೆ ಟ್ರೈ ಮಾಡಿ

ಇನ್ನು 15ದಿನದೊಳಗೆ ಒತ್ತುವರಿದಾರರಿಂದ ಸ್ಮಶಾನ ಭೂಮಿ ತೆರವುಗೊಳಿಸಿ ಅಂತ್ಯಸಂಸ್ಕಾರಕ್ಕೆ ಅನುಕೂಲಮಾಡಿ ಕೊಡದಿದ್ದಲ್ಲಿ ತಾಲೂಕು ಆಡಳಿತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ತಾಲೂಕು ಕಛೇರಿ ಎದುರು ಹೆಣವಿಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ತಹಸೀಲ್ದಾರ್ ನಾಗರಾಜು ಅವರಿಗೆ ಮನವಿ ಸಲ್ಲಿಸಿ ಧರಣಿ ಸತ್ಯಾಗ್ರಹವನ್ನು ಒಂದು ದಿನದ ಮಟ್ಟಿಗೆ ಸೀಮಿತಗೊಳಿಸಿದರು.

click me!