ಮೈಸೂರು : ಒತ್ತುವರಿಯಾಗಿದ್ದ ಕೊಟ್ಯಂತರ ಬೆಲೆಯ ಸರ್ಕಾರಿ ಭೂಮಿ ವಶಕ್ಕೆ

By Kannadaprabha NewsFirst Published Jun 8, 2021, 12:52 PM IST
Highlights
  • ಅಕ್ರಮವಾಗಿ ಸರ್ಕಾರಿ ಭೂಮಿ ಒತ್ತುವರಿ
  • ಒತ್ತುವರಿಯಾಗಿದ್ದ ಸರ್ಕಾರಿ ಭೂಮಿ ವಶಕ್ಕೆ ಪಡೆದ ತಹಸೀಲ್ದಾರ್‌
  • ತಹಸೀಲ್ದಾರ್‌ ಮೋಹನ್‌ಕುಮಾರಿ ಕಾರ್ಯಾಚರಣೆ ನಡೆಸಿ ಸರ್ಕಾರಿ ಭೂಮಿ ವಶಕ್ಕೆ 

  ನಂಜನಗೂಡು (ಜೂ.08):  ಪಟ್ಟಣದ ಚಾಮರಾಜನಗರ ಬೈಪಾಸ್‌ ಮುಖ್ಯರಸ್ತೆಯ ಶ್ರೀ ಶ್ರೀಕಂಠೇಶ್ವರ ದೇವಾಯದ ಸಮೀಪದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಕೋಟ್ಯಾಂತರ ರು. ಬೆಲೆ ಬಾಳುವ 14.5 ಕುಂಟೆ ಸರ್ಕಾರಿ ಭೂಮಿಯನ್ನು ತಹಸೀಲ್ದಾರ್‌ ಮೋಹನ್‌ಕುಮಾರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು.

ಬೆಳ್ಳಂಬೆಳಗ್ಗೆಯೇ ತಹಸೀಲ್ದಾರ್‌ ಮೋಹನ್‌ಕುಮಾರಿ, ನಗರಸಭಾ ಆಯುಕ್ತ ರಾಜಣ್ಣ, ಸಿಪಿಐ ಲಕ್ಷ್ಮೇಕಾಂತ ತಳವಾರ್‌, ಪಿಎಸ್‌ಐ ರವಿಕುಮಾರ್‌ ಹಾಗೂ ಭೂ ಮಾಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಸರ್ವೆ ನಂಬರ್‌ 12ರಲ್ಲಿ ಮಹದೇಶ್ವರ ಪ್ಯಾಲೇಸ್‌ ವಸತಿಗೃಹ ಬಳಿಯಲ್ಲಿ ಒತ್ತುವರಿಯಾಗಿದ್ದ ಭೂ ಪ್ರದೇಶವನ್ನು ಅಳತೆ ಕಾರ್ಯವನ್ನು ನಡೆಸಿ ಗುರುತು ಕಲ್ಲುಗಳನ್ನು ನೆಟ್ಟರು. ನಂತರ ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾದರು. ಒತ್ತುವರಿಯನ್ನು ತೆರವುಗೊಳಿಸಲು ಜೆಸಿಬಿ ಬರುತ್ತಿದ್ದಂತೆಯೇ ಸ್ಥಳೀಯರು ಕಾರ್ಯಾಚರಣೆಗೆ ಅಡ್ಡಿಪಡಿಸಿದರು.

ಬೆಂಗ್ಳೂರು ದಕ್ಷಿಣ ಶಾಸಕರಿಂದ ಕೆರೆ ಒತ್ತುವರಿ

ಈ ವೇಳೆ ಲಾಡ್ಜ್‌ ಮಾಲೀಕ ಹಾಗೂ ನಗರಸಭೆ ಮಾಜಿ ಸದಸ್ಯ ಮಂಜುನಾಥ್‌ ಮಾತನಾಡಿ, ಈ ಹಿಂದೆಯಿದ್ದ ತಹಸೀಲ್ದಾರ್‌ ಒತ್ತುವರಿಯಾಗಿಲ್ಲ ಎಂಬುದಾಗಿ ಹೇಳಿದ್ದಾರೆ. ಈಗ ನೀವು ಏಕಾಏಕಿ ಬಂದು ಜಾಗ ವಶಕ್ಕೆ ಪಡೆಯಲು ಬಂದಿದ್ದೀರಿ. ಇದೇ ರೀತಿ ಒತ್ತುವರಿ ತೆರವು ಮಾಡುವುದಾದರೆ ಸಾವಿರಾರು ಕಡೆ ಒತ್ತುವರಿಯಾಗಿದೆ. ಅಲ್ಲೆಲ್ಲಾ ತೆರವು ಮಾಡಲು ನಿಮ್ಮಿಂದ ಸಾಧ್ಯವೇ. ನೀವು ಯಾರೋ ಒತ್ತಡಕ್ಕೆ ಸಿಲುಕಿ ಬಂದಿರುವುದಾಗಿ ಹರಿಹಾಯ್ದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್‌ ಮೋಹನಕುಮಾರಿ, ಸರ್ಕಾರಿ ದಾಖಲೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಒತ್ತುವರಿಯಾಗಿರುವ ಸರ್ಕಾರಿ ಭೂ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ಬಂದಿರುವುದಾಗಿ ಸ್ಪಷ್ಟಪಡಿಸಿದರು.

ಇದೇ ಸಂದರ್ಭ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಕಳಲೆ ಎನ್‌. ಕೇಶವಮೂರ್ತಿ ಒತ್ತುವರಿದಾರರ ಪರವಾಗಿ ನೆರವಾಗಲು ಮುಂದಾದರು. ಈ ವೇಳೆ ಕೇಶವಮೂರ್ತಿ ಹಾಗೂ ಮೋಹನಕುಮಾರಿ ನಡುವೆ ಮಾತಿನ ಜಟಾಪಟಿ ನಡೆಯಿತು. ಈ ಸಂಬಂಧ ವರ್ಷಗಳ ಹಿಂದೆಯೇ ಒತ್ತುವರಿದಾರರಿಗೆ ನೋಟೀಸ್‌ ನೀಡಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ಸಹ ಸರ್ಕಾರಿ ಜಾಗವನ್ನು ನೀಡದೆ ಇರುವುದರಿಂದಾಗಿ ಸರ್ಕಾರಿ ದಾಖಲೆ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಅನುಸಾರ ಕಾರ್ಯಾಚರಣೆ ನಡೆಸುತ್ತಿದ್ದು, ಇದಕ್ಕೆ ಅಡ್ಡಿಪಡಿಸದಂತೆ ಕೇಶವಮೂರ್ತಿ ಅವರಿಗೆ ಮೋಹನಕುಮಾರಿ ತಿಳಿಸಿದರು.

ಬೆಂಗಳೂರಲ್ಲಿ 21 ಎಕರೆ ಒತ್ತುವರಿ ಜಮೀನು ತೆರವು ...

ಬಳಿಕ ವಸತಿಗೃಹದಿಂದ ಹಿಡಿದು ರಾಣಪ್ಪ ಕಲ್ಯಾಣ ಮಂಟಪದವರೆಗೆ ಸರ್ವೆ ನಂಬರ್‌ 12ರಲ್ಲಿ ಒತ್ತುವರಿ ಪ್ರದೇಶವನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ಮುಂದುವರೆಯಿತು.

ಈ ವೇಳೆ ತಹಸೀಲ್ದಾರ್‌ ಮೋಹನಕುಮಾರಿ ಮಾತನಾಡಿ, ಸರ್ವೆ ನಂ.12ರಲ್ಲಿ ಒತ್ತುವರಿ ಸರ್ಕಾರಿ ಭೂಮಿ ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆದಿದೆ. ಆ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದವರಿಗೆ ನೋಟೀಸ್‌ ನೀಡಲಾಗಿದೆ. ಇನ್ನು ಖಾಸಗಿ ವಸತಿಗೃಹದ ಮಾಲೀಕರು ಜಿಲ್ಲಾಧಿಕಾರಿಗಳು ಹಾಗೂ ನಗರಸಭೆಯಿಂದ ಅನುಮತಿ ಪಡೆಯದ ಜಾಗದಲ್ಲಿ ಸಭಾಂಗಣ ನಿರ್ಮಿಸಿದ್ದು, ಈ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ತಾಲೂಕಿನ ಹಲವೆಡೆ ಸರ್ಕಾರಿ ಭೂಮಿ, ಕೆರೆ, ಗೋಮಾಳ ಒತ್ತುವರಿಯಾಗಿರುವ ಬಗ್ಗೆ ದೂರುಗಳಿದ್ದು, ಹಂತ ಹಂತವಾಗಿ ತೆರವು ಮಾಡಲಾಗುವುದು ಎಂದು ತಿಳಿಸಿದರು.

click me!