* ಧಾರವಾಡದ ಪುತ್ರಿಯ ಮನೆ ರಜತ ನಗರದಲ್ಲಿ ವಯೋಸಹಜ ಅನಾರೋಗ್ಯದಿಂದ ಸಾವು
* ನಟರಾಜ ಏಣಗಿ ತೀರಿ ಹೋದ ನಂತರ ತುಂಬ ನೊಂದಿದ್ದ ಲಕ್ಷ್ಮೀಬಾಯಿ
* ಲಕ್ಷ್ಮೀಬಾಯಿ ತ್ಯಜಿಸಿದ್ದು ರಂಗಭೂಮಿಗೆ ದೊಡ್ಡ ನಷ್ಟ
ಧಾರವಾಡ(ಮೇ.05): ರಂಗಭೂಮಿ ಕಂಡ ಅದ್ಭುತ ನಟಿ, ದಿ. ಏಣಗಿ ಬಾಳಪ್ಪ(Enagi Balappa) ಅವರ ಪತ್ನಿ ಲಕ್ಷ್ಮೀಬಾಯಿ ಏಣಗಿ (95) ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ನಿಧನ ಹೊಂದಿದರು.
ಪುತ್ರ, ಖ್ಯಾತ ರಂಗಭೂಮಿ ನಟ ನಟರಾಜ ಏಣಗಿ ತೀರಿ ಹೋದ ನಂತರ ತುಂಬ ನೊಂದಿದ್ದ ಲಕ್ಷ್ಮೀಬಾಯಿ(Lakshimbai Enagi) ಅವರು ಪತಿ ಬಾಳಪ್ಪ ಅವರನ್ನು ಸಹ ಇತ್ತೀಚಿನ ವರ್ಷಗಳಲ್ಲಿ ಕಳೆದುಕೊಂಡು ಮತ್ತಷ್ಟು ಕುಗ್ಗಿದ್ದರು. ಇಷ್ಟಾಗಿಯೂ ಜೀವನದಲ್ಲಿ ಭರವಸೆ ಇಟ್ಟುಕೊಂಡಿದ್ದ ತಾಯಿ ಲಕ್ಷ್ಮೀಬಾಯಿ ಕೊನೆಗೂ ಬುಧವಾರ ಇಹಲೋಕ ತ್ಯಜಿಸಿದ್ದು ರಂಗಭೂಮಿ ದೊಡ್ಡ ನಷ್ಟ ಉಂಟಾಗಿದೆ. ಮೃತರಿಗೆ ಪುತ್ರಿ ಭಾಗ್ಯಶ್ರೀ, ಸೊಸೆ ಲತಾ, ಮೊಮ್ಮಕ್ಕಳಾದ ಅಮೋಘ ಹಾಗೂ ಆದೇಶ ಇದ್ದು, ಬುಧವಾರ ಮಧ್ಯಾಹ್ನ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ(Funeral) ಜರುಗಿತು.
Rajashekhar Mansoor Passed Away: ಪ್ರಸಿದ್ಧ ಹಿಂದೂಸ್ತಾನಿ ಗಾಯಕ ರಾಜಶೇಖರ್ ಮನ್ಸೂರ್ ನಿಧನ
ಒಂದು ನಾಟಕದಲ್ಲಿ(Drama) ಅಭಿನಯಿಸದ ಮಾತ್ರಕ್ಕೆ ಕಲಾದೇವತೆಯನ್ನು ಒಲಿಸಿಕೊಳ್ಳುವುದು ಸಾಧ್ಯವೇ ಇಲ್ಲ. ವೃತ್ತಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರು ಅದನ್ನು ಒಂದು ತಪಸ್ಸಿನ ಹಾಗೇ ಸ್ವೀಕರಿಸಿಬೇಕು. ಅಂದಾಗ ಮಾತ್ರ ಶ್ರೇಷ್ಠ ನಟ ನಟಿಯರಾಗಲು ಸಾಧ್ಯ ಎಂದು ಮಾಧ್ಯಮಗಳ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಲಕ್ಷ್ಮೀಬಾಯಿ ಅವರು ಅತ್ಯಂತ ಏಣಗಿ ಸರಳ ಜೀವಿ.
ನಾಡೋಜ ಏಣಗಿ ಬಾಳಪ್ಪನವರ ಬಾಳ ಸಂಗಾತಿಯಾಗಿ ಅವರು ಅಭಿನಯಿಸುತ್ತಿದ್ದ ನಾಟಕಗಳಲ್ಲಿ ಪ್ರಮುಖ ನಟಿಯಾಗಿ, ಕಂಪನಿಯ ಮಾಲಕಿಯಾಗಿ ರಂಗಭೂಮಿಯ ಶ್ರೇಯಸ್ಸಿಗೆ ಶ್ರಮಿಸಿದವರು. ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ಬಾಲನಟಿಯಾಗಿ ರಂಗಭೂಮಿ ವೃತ್ತಿ ಆರಂಭಿಸಿದ ಲಕ್ಷ್ಮೀಬಾಯಿ ತದನಂತರ 1948ರಲ್ಲಿ ಏಣಗಿ ಬಾಳಪ್ಪ ಅವರ ಕಲಾವೈಭವ ನಾಟ್ಯ ಸಂಘವನ್ನು ಸೇರಿದ್ದರು. ಏಣಗಿ ಬಾಳಪ್ಪ ಅವರ 2ನೇ ಪತ್ನಿಯಾಗಿ ತಮ್ಮ ಕೌಟುಂಬಿಕ ಜೀವನ ಶುರು ಮಾಡಿದ ಅವರು ಪತಿಯೊಂದಿಗೆ ಕೊನೆಯವರೆಗೂ ರಂಗಭೂಮಿಗಾಗಿ ಜೀವನ ಮುಡಿಪಿಟ್ಟರು.
ರಂಗಭೂಮಿಯಲ್ಲಿ ಮಹಿಳಾ ಕಲಾವಿದರ ಕೊರತೆಯಿಂದ ಏಣಗಿ ಬಾಳಪ್ಪನವರೇ ಮಹಿಳಾ ಪಾತ್ರ ನಿಭಾಯಿಸುತ್ತಿದ್ದರು. ಯಾವಾಗ ಲಕ್ಷ್ಮೀಬಾಯಿ ಅವರನ್ನು ಮದುವೆಯಾದರೋ ನಂತರದಲ್ಲಿ ಏಣಗಿ ಅವರು ಸ್ತ್ರೀ ಪಾತ್ರಗಳನ್ನು ನಿಲ್ಲಿಸಿದರು. ಕಿತ್ತೂರು ಚೆನ್ನಮ್ಮ, ದ್ರೌಪದಿ, ಹೇಮರಡ್ಡಿ ಮಲ್ಲಮ್ಮ, ಪಠಾಣಿ ಪಾಷಾ, ಚಲೇಜಾವ್, ಕುರುಕ್ಷೇತ್ರ, ಬಡತನ ಭೂತ, ಸೀತೆ, ತಾರಾಮತಿ ಸಕ್ಕೂಬಾಯಿ, ನೀಲಾಂಬಿಕೆ, ದೇವರ ಮಗು ಮುಂತಾದ ನಾಟಕಗಳನ್ನು ಲಕ್ಷ್ಮೀಬಾಯಿ ಅವರು ಅಭಿನಯಿಸಿದ್ದಾರೆ. ಸಿಂಗಾರೆವ್ವ ಧಾರಾವಾಹಿಯಲ್ಲಿ ಇವರ ತಾಯಿ ಪಾತ್ರ ತುಂಬ ಹೆಸರು ಗಳಿಸಿತ್ತು. ಲಕ್ಷ್ಮೀಬಾಯಿ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಮೈಸೂರಿನ ನಟನಾ ರಂಗ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸನ್ಮಾನಗಳು ಸಂದಿವೆ.
ನಿನಾಂಸ ರಂಗಶಿಕ್ಷಣದಲ್ಲಿ ಈ ತಾಯಿ ಪರಿಚಯವಾಯಿತು. ಅಲ್ಲಿಂದ ಧಾರವಾಡಕ್ಕೆ ಬಂದು ರಂಗ ಪಯಣ ಶುರು ಮಾಡಿದಾಗ ಅದೇ ಹೊತ್ತಿಗೆ ಬಾಳಪ್ಪನವರು ತಮ್ಮ ಕಲಾವೈಭವ ನಾಟ್ಯಸಂಘದ ಬಾಗಿಲು ಮುಚ್ಚಿ 1991ರಲ್ಲಿ ಹವ್ಯಾಸಿ ರಂಗಭೂಮಿ ನಂಟನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿದ್ದರು. ಮಕ್ಕಳಾದ ನಟರಾಜ, ಭಾಗ್ಯಶ್ರೀಗೆ ರಂಗ ಬುನಾದಿ ಹಾಕುವುದೇ ಅವರ ಉದ್ದೇಶವಾಗಿತ್ತು. ಆಗ ತಿಂಗಳಾನುಗಟ್ಟಲೇ ನಮ್ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಲಕ್ಷ್ಮೀಬಾಯಿ ಅವರನ್ನು ನಮ್ಮ ಇಡೀ ರಂಗಭೂಮಿಯು ಅವ್ವಾವ್ರು ಎಂದು ಕರೆಯುತ್ತಿತ್ತು. ನಮ್ಮ ಓರೆಕೋರೆಗಳನ್ನು ವಿನಯವಾಗಿ ತಿದ್ದುತ್ತಿದ್ದ ಅವರು ಏಣಗಿ ಅವರ ಸ್ತ್ರೀ ಪಾತ್ರಕ್ಕೆ ಮುಕ್ತಿ ನೀಡಿದವರು. ಅದಕ್ಕಾಗಿಯೇ ಏಣಿಗಿ ಅವರು ಆಗಾಗ, ಇಕಿ ಬಂದಿದ್ದಕನ ನನ್ನ ಉದ್ದ ಕೂದಲಿಗೆ ಮುಕ್ತಿ ಸಿಕ್ತು ಎಂದು ಲಕ್ಷ್ಮೀಬಾಯಿ ಬಗ್ಗೆ ಹೇಳುತ್ತಿದ್ದರು ಎಂದು ದಂಪತಿಯನ್ನು ಸ್ಮರಿಸಿಕೊಂಡರು ರಂಗ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ.
ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ನಿಧನ
ಮೃತರ ಆತ್ಮಕ್ಕೆ ರಂಗಭೂಮಿ ಕಲಾವಿದರಾದ ಡಾ. ಶಶಿಧರ ನರೇಂದ್ರ, ರವಿ ಕುಲಕರ್ಣಿ, ರಂಗಾಯಣ ನಿರ್ದೇಶಕ ರಮೇಶ ಪರವೀನಾಯ್ಕರ್, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಕನ್ನಡ ರಂಗಭೂಮಿ ಕಂಡ ಶ್ರೇಷ್ಠ ನಟಿ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ ಅವರ ನಿಧನರಾಗಿರುವುದು ಇಡೀ ವೃತ್ತಿರಂಗಭೂಮಿಗೆ ತುಂಬಲಾರದ ನಷ್ಟ. ಅಸಾಮಾನ್ಯ ರಂಗಕಲಾವಿದ ದಿ. ಏಣಗಿ ಬಾಳಪ್ಪನವರ ಪತ್ನಿಯಾಗಿ ರಂಗಭೂಮಿಗೆ ಇವರ ಕೊಡುಗೆ ಅಪಾರ. ವೃತ್ತಿ ರಂಗಭೂಮಿಯ ಭೀಷ್ಮ ಏಣಗಿ ಬಾಳಪ್ಪ, ರಂಗ ಕಲಾವಿದ ಪುತ್ರ ಏಣಗಿ ನಟರಾಜ ಸೇರಿ ಇಡೀ ಕುಟುಂಬವೇ ಒಂದು ರಂಗ ವಿಶ್ವವಿದ್ಯಾಲಯದಂತಿತ್ತು. ಒಂದು ಕಾಲದ ವೃತ್ತಿ ರಂಗಭೂಮಿಯ ರಾಣಿಯಾಗಿ ಮೆರೆದವರು ಲಕ್ಷ್ಮೀಬಾಯಿ ಅವರು ಅಂತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ತಿಳಿಸಿದ್ದಾರೆ.