ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯನ್ನು ಶೀಘ್ರದಲ್ಲಿಯೇ ಮಂಜೂರಾತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು
ಕೊಪ್ಪಳ (ಆ.2) : ನನಗೂ ಕೊಪ್ಪಳಕ್ಕೂ ಅವಿನಾಭಾವ ಸಂಬಂಧ ಇದೆ. ಕೊಪ್ಪಳ ಬಗ್ಗೆ ವಿಶೇಷ ಪ್ರೀತಿ ಇದೆ. ಇಲ್ಲಿಯ ಜನಪ್ರತಿನಿಧಿಗಳು ನನಗೆ ತುಂಬಾ ಹತ್ತಿರ. ಹೀಗಾಗಿಯೇ ನಾನು ಇಲ್ಲಿಗೆ ಏನಾದರೂ ಕೊಡಲೇಬೇಕು. ಸಂಸದ ಸಂಗಣ್ಣ ಕರಡಿ ಅವರ ಕೋರಿಕೆಯಂತೆ ಇಲ್ಲಿಗೆ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯನ್ನು ಶೀಘ್ರದಲ್ಲಿಯೇ ಮಂಜೂರಾತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಸೋಮವಾರ ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ನೂತನವಾಗಿ ನಿರ್ಮಿಸಲಾದ ತಾಯಿ ಮತ್ತು ಮಕ್ಕಳ 100 ಹಾಸಿಗೆಗಳ ಆಸ್ಪತ್ರೆ, ಗಂಗಾವತಿ ಮತ್ತು ಕುಷ್ಟಗಿ ತಾಲೂಕು ಆಸ್ಪತ್ರೆಗಳ ಐಸಿಯು(ICU) ಘಟಕಗಳು ಹಾಗೂ ಕುಷ್ಟಗಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ, ಹನುಮಸಾಗರದ ಆಸ್ಪತ್ರೆ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
undefined
ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆ ಬಾಗಿಲಲ್ಲೇ ಮಹಿಳೆಯ ಹೆರಿಗೆ..!
ವೇದಿಕೆಯ ಮೇಲಿದ್ದ ವೈದ್ಯಕೀಯ ಸಚಿವ ಸುಧಾಕರ್(Minister Dr.K.Sudhakar) ಅವರನ್ನು ಬಹಿರಂಗವಾಗಿಯೇ ಕೇಳಿದ ಸಿಎಂ ಅವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(Super Specality Hospital)ಗೆ ಎಷ್ಟುಬೇಕಾಗುತ್ತದೆ? ಇಲ್ಲಿಗೆ ನಾನು ಕೊಡಲೇಬೇಕು ಎಂದರು. ಅದಕ್ಕೆ ಡಿ. ಸುಧಾಕರ ಅವರು .127 ಕೋಟಿ ಎಂದು ಹೇಳಿದರು. ಆಗ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆಯ್ತು, ನಾನು .127 ಕೋಟಿ ನೀಡುತ್ತೇನೆ. ಕೊಪ್ಪಳದಲ್ಲಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಪ್ರಾರಂಭಿಸಿ ಎಂದು ಸಚಿವ ಸುಧಾಕರ್ ಅವರಿಗೆ ಸೂಚಿಸಿದರು.
ಸಚಿವ ಸುಧಾಕರ್ ಅವರು, ನೀವು ಹಣ ಕೊಡುವುದಾದರೆ ನಮ್ಮದೇನು ಅಭ್ಯಂತರ ಇಲ್ಲ. ಕೂಡಲೇ ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದರು.
ಆಗ ಜನರತ್ತ ನೋಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕೊಪ್ಪಳದ ಮೇಲೆ ನನಗೆ ಅತಿಯಾದ ಪ್ರೀತಿ ಎನ್ನುತ್ತಲೇ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಪ್ರಾರಂಭಿಸುವ ಕುರಿತು ಭರವಸೆ ನೀಡಿದರು. ಕೊಪ್ಪಳ ಏತ ನೀರಾವರಿ ಯೋಜನೆ ಆಗಲೇಬೇಕು. ಇದು ಇಷ್ಟುದಿನಗಳ ಕಾಲ ಆಗಿಲ್ಲ ಎನ್ನುವುದೇ ಬೇಸರದ ಸಂಗತಿ. ಸಚಿವ ಹಾಲಪ್ಪ ಆಚಾರ್ ಅವರೇ ನಿಮ್ಮ ಕೋರಿಕೆಯಂತೆ ಅದಕ್ಕೆ ಎಷ್ಟೇ ಹಣ ಬೇಕಾಗಿದ್ದರೂ ನೀಡುತ್ತೇನೆ. ಕೂಡಲೇ ಅದನ್ನು ಪೂರ್ಣಗೊಳಿಸಿ, ರೈತರ ಭೂಮಿಗೆ ನೀರು ಒದಗಿಸಿ ಎಂದರು.
ದಿಕ್ಕಿಲ್ಲದವನಿಗೆ ಸಾಕ್ಷಾತ್ ದೇವರಾದ ಡಾಕ್ಟರ್: ಕೊಪ್ಪಳ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ವಿಮಾನ ನಿಲ್ದಾಣಕ್ಕೂ ಈಗಾಗಲೇ ಕೆಕೆಆರ್‌ಡಿಬಿಯಿಂದ .50 ಕೋಟಿಯನ್ನು ನೀಡಲಾಗಿದ್ದು, ಡಿಪಿಆರ್ ಮಾಡಲು ಸೂಚಿಸಿದ್ದೇನೆ. ಅದಕ್ಕೂ ತ್ವರಿತವಾಗಿ ಅನುಷ್ಠಾನ ಮಾಡುವುದಕ್ಕೆ ಕ್ರಮ ವಹಿಸಲಾಗುವುದು. ಕೊಪ್ಪಳದಲ್ಲಿ ಕೈಗಾರಿಕೆಗಳು ಇವೆ. ಫಲವತ್ತಾದ ಭೂಮಿ ಇದೆ. ದೇಶದ ಮೊದಲ ‘ಆಟಿಕೆ ಕ್ಲಸ್ಟರ್’ ಪ್ರಾರಂಭವಾಗುತ್ತಿದೆ. ಅನೇಕ ಕೈಗಾರಿಕೆಗಳು ಇರುವುದರಿಂದ ಇಲ್ಲಿ ಶೀಘ್ರದಲ್ಲಿಯೇ ಕೈಗಾರಿಕಾ ಸಮ್ಮೇಳನವನ್ನು ನಡೆಸಲಾಗುವುದು ಎಂದರು.
ನೀರಾವರಿ ಯೋಜನೆಯಲ್ಲಿ ಎ ಸ್ಕೀಂ ಮತ್ತು ಬಿ ಸ್ಕೀಂ ಎಂದು ವಿನಾಕಾರಣ ಸಮಯ ವ್ಯರ್ಥ ಮಾಡಲಾಗುತ್ತಿತ್ತು. ಮಹಾನ್ ನಾಯಕರೊಬ್ಬರಿಂದ ವಿಳಂಬವಾಗಲು ಕಾರಣವಾಗಿದೆ. ಅಷ್ಟೇ ಅಲ್ಲ, ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಮಧ್ಯಪ್ರದೇಶ ಮಾದರಿಯಲ್ಲಿ ಅನುಷ್ಠಾನ ಕ್ರಮ ವಹಿಸಲಾಗಿದೆ ಎಂದರು.
ಆರೋಗ್ಯ ಸಚಿವ ಡಾ.ಕೆ. ಸುಧಾಕರ ಮಾತನಾಡಿ, ರಾಜ್ಯದಲ್ಲಿ ಒಟ್ಟು 100 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗಂಗಾವತಿಯ ತಾಲೂಕು ಆಸ್ಪತ್ರೆಯಲ್ಲಿ 2 ಇಸಿಆರ್‌ಪಿ (ಎಮರ್ಜೆನ್ಸಿ ಕೋವಿಡ್- 19 ರೆಸ್ಪಾನ್ಸ್ ಪ್ಯಾಕೇಜ್) ಐಸಿಯು ಘಟಕಗಳನ್ನು ಒದಗಿಸಲಾಗಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.
ಜಿಪಂ ಸಿಇಒ ಬಿ. ¶ೌಜಿಯಾ ತರನ್ನುಮ್ ಸ್ವಾಗತಿಸಿದರು. ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜ, ಶಾಸಕರಾದ ಅಮರೇಗೌಡ ಎಲ್. ಪಾಟೀಲ್ ಭಯ್ಯಾಪುರ, ಪರಣ್ಣ ಈಶ್ವರಪ್ಪ ಮುನವಳ್ಳಿ ಹಾಗೂ ಬಸವರಾಜ ದಢೇಸ್ಗೂರು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಶರಣಗೌಡ ಅನ್ನದಾನಗೌಡ ಪಾಟೀಲ ಭಯ್ಯಾಪೂರ ಹಾಗೂ ಹೇಮಲತಾ ನಾಯಕ, ಕಾಡಾ ಅಧ್ಯಕ್ಷ ಕೆ. ಶೇಷಗಿರಿರಾವ್, ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪಾಟೀಲ್, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಇತರರು ಇದ್ದರು.ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.
ಕೋವಿಡ್ ಸಂದರ್ಭವನ್ನು ಸರ್ಕಾರದಿಂದ ಯಶಸ್ವಿ ನಿರ್ವಹಣೆ ಮಾಡಲಾಗಿದೆ. ಯಲಬುರ್ಗಾ, ಕುಷ್ಟಗಿ ತಾಲೂಕುಗಳಿಗೆ ನಿರಂತರ ನೀರು ಪೂರೈಕೆಗೆ ಕೃಷ್ಣಾ ನದಿಯಿಂದ ನೀರು ಪಡೆಯಲು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸರ್ಕಾರದಿಂದ ಯೋಜನೆಗಳನ್ನು ಘೋಷಿಸಲಾಗಿದೆ.
ಹಾಲಪ್ಪ ಆಚಾರ್ ಸಚಿವ
ಜಿಲ್ಲೆಗೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ .50 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ನೀಡಿದೆ. ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭವಾಗಲಿದ್ದು, ಈ ಮೂಲಕ ಜಿಲ್ಲೆಯ ಜನರ ಬಹುದಿನದ ಕನಸು ನನಸಾಗುತ್ತಿದೆ.
ಸಂಗಣ್ಣ ಕರಡಿ ಸಂಸದ
ಮುಖ್ಯಮಂತ್ರಿ ಬೊಮ್ಮಾಯಿಯವರು ಜಿಲ್ಲೆಯಲ್ಲಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಕಾಮಗಾರಿ ಮುಕ್ತಾಯಗೊಳಿಸಿ, ರೈತರಿಗೆ ನೀರು ಸೌಲಭ್ಯ ಒದಗಿಸಬೇಕು.
ರಾಘವೇಂದ್ರ ಹಿಟ್ನಾಳ ಶಾಸಕ