Dasara Elephant 2026: ಭೀಮನ ಅಭಿಮಾನಿಗಳಿಗೆ ನಿರಾಸೆ; ಅಭಿಮನ್ಯು ಯುಗಾಂತ್ಯ, ಅಂಬಾರಿ ರೇಸ್‌ನಲ್ಲಿರುವ 4 ಪ್ರಮುಖ ಆನೆಗಳು

Published : Aug 19, 2026, 02:59 PM IST
Mysuru Dasara Bheema elephant

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 6 ವರ್ಷ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿದೆ. ಅಭಿಮನ್ಯು ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಧನಂಜಯ, ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಆನೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂತಿಮವಾಗಿ ಅಂಬಾರಿ ಹೊರಲಿರುವ ಆನೆಯನ್ನು ತಾಲೀಮಿನ ನಂತರ ಘೋಷಿಸಲಾಗುವುದು.

ಮೈಸೂರು: ​ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆನೆಗಳ ಆಯ್ಕೆಯಾಗಿದೆ. ಅರಮನೆ ನಗರಿಗೆ ಹೆಜ್ಜೆ ಹಾಕಲು ಗಜಪಡೆ ಸಜ್ಜಾಗಿದೆ. ಆದರೆ ಈ ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಪ್ರಿಯರಿಗೆ ತೀವ್ರ ನಿರಾಸೆ ಎದುರಾಗಿದೆ. ಸತತ 6 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಅತ್ಯಂತ ಗಂಭೀರವಾಗಿ ಹೊತ್ತು ಸಾಗಿದ್ದ ಕ್ಯಾಪ್ಟನ್ ಅಭಿಮನ್ಯು ಈ ಬಾರಿಯ ದಸರಾ ಪಟ್ಟಿಯಿಂದ ಹೊರಬಿದ್ದಿದ್ದಾನೆ. ಅಭಿಮನ್ಯುನನ್ನು ಕೈಬಿಟ್ಟಿದ್ದೇಕೆ? ಮುಂದಿನ ಅಂಬಾರಿ ಆನೆ ಯಾರು? ಇಲ್ಲಿದೆ ಈ ಕುರಿತ ಕಂಪ್ಲೀಟ್ ರಿಪೋರ್ಟ್.

ದಸರಾ ಅಂಬಾರಿ: ಅಭಿಮನ್ಯು ಯುಗಾಂತ್ಯ, ಹೊಸ ನಾಯಕನ ಹುಡುಕಾಟ

60ರ ಹೊಸ್ತಿಲಿನಲ್ಲಿ ನಿಂತು ನಿವೃತ್ತಿ ಪಡೆದ ಕಾಂಬಿಂಗ್ ಸ್ಪೆಷಲಿಸ್ಟ್ ಈ ಬಾರಿ ಮೈಸೂರಿಗೆ ಬರ್ತಿಲ್ಲ. ಹಾಗಾಗಿ ನಾಡಹಬ್ಬ ಮೈಸೂರು ದಸರಾದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯ ಹೀರೋ ಅಭಿಮನ್ಯುವಿನ ಗಜ ಗಾಂಭೀರ್ಯದ ನಡಿಗೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಕಳೆದ ಏಪ್ರಿಲ್ ತಿಂಗಳಿಗೆ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕಠಿಣ ನಿಯಮಾವಳಿಗಳ ಅನ್ವಯ ಆತನಿಗೆ ದಸರಾ ಹೊಣೆಗಾರಿಕೆಯಿಂದ ವಿಶ್ರಾಂತಿ ನೀಡಲಾಗಿದೆ. ಇದಕ್ಕೆ ದಂತ ಮುರಿದಿರುವುದು ಕಾರಣವಲ್ಲ, ಕೇವಲ ವಯೋಮಿತಿಯ ಆಧಾರದಲ್ಲೇ ಆತನನ್ನು ಗೌರವಯುತವಾಗಿ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ ಎಂಬುದನ್ನು. ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸ್ಪಷ್ಟಪಡಿಸಿದ್ದಾರೆ.

ಅಂಬಾರಿ ರೇಸ್‌ನಲ್ಲಿರುವ 4 ಪ್ರಮುಖ ಆನೆಗಳು

​ಅಭಿಮನ್ಯು ನಿವೃತ್ತಿ ಬೆನ್ನಲ್ಲೇ ಈಗ ಮುಂದಿನ ಕ್ಯಾಪ್ಟನ್ ಯಾರು? ಎಂಬ ಕುತೂಹಲ ಗರಿಗೆದರಿದೆ. ಸದ್ಯ 4 ಬಲಿಷ್ಠ ಆನೆಗಳು ಅಂಬಾರಿ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ​ಧನಂಜಯ, ​ಮಹೇಂದ್ರ, ​ಪ್ರಶಾಂತ ಹಾಗೂ ​ಏಕಲವ್ಯ ಆನೆಗಳು ಚಿನ್ನದ ಅಂಬಾರಿ ಹೊರಬಲ್ಲ ಸಾಮರ್ಥ್ಯ ಹೊಂದಿದ್ದು, ಅರಮನೆ ಆವರಣದಲ್ಲಿ ನಡೆಯುವ ತಾಲೀಮಿನ ಅಂತಿಮ ವಾರದಲ್ಲಿ ಅಧಿಕೃತವಾಗಿ ಅಂಬಾರಿ ಹೊರಲಿರುವ ಆನೆಯ ಹೆಸರನ್ನು ಘೋಷಿಸಲಾಗುತ್ತದೆ ಎಂದು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.

ಆಗಸ್ಟ್ 26ಕ್ಕೆ ಗಜಪಯಣ ದಿನಾಂಕ ನಿಗಧಿಯಾಗಿದ್ದು, ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ, ಕಾವೇರಿ. ನಾಡಿನತ್ತ ಹೆಜ್ಜೆ ಹಾಕಲಿವೆ. ​ಎರಡನೇ ಹಂತದಲ್ಲಿ ರೂಪ, ಚೈತ್ರ, ಶ್ರೀಕಂಠ ಆನೆಗಳು ಬರಲಿದ್ದು, ​ಮೀಸಲು ಆನೆಗಳಾಗಿ ಭೀಮ ಹಾಗೂ ಹರ್ಷ ಆನೆಯನ್ನು ಕಾಯ್ದಿರಿಸಿದ್ದಾರೆ.

ಭೀಮನ ಅಭಿಮಾನಿಗಳಿಗೆ ನಿರಾಸೆ

ಅಪಾರ ಅಭಿಮಾನಿ ಬಳಗ ಹೊಂದಿರುವ ಭೀಮ ಆನೆಗೆ ಪ್ರಸ್ತುತ ಮದ ಏರಿರುವುದರಿಂದ ಸದ್ಯಕ್ಕೆ ಮೀಸಲು ಪಟ್ಟಿಯಲ್ಲಿಡಲಾಗಿದೆ. ಮಸ್ತು ಇಳಿದರೆ ಮಾತ್ರ ದಸರಾ ಕ್ಯಾಂಪ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ​ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದ್ದಾರೆ.

ಒಟ್ಟಾರೆ ಅಭಿಮನ್ಯು ಆನೆಗೆ 60 ವರ್ಷ ಪೂರ್ಣಗೊಂಡಿರುವ ಕಾರಣ ನಿಯಮಾವಳಿ ಪ್ರಕಾರ ವಿಶ್ರಾಂತಿ ನೀಡಲಾಗಿದೆ. ಆತನ ಸ್ಥಾನ ತುಂಬಲು ನಾಲ್ಕು ಆನೆಗಳ ನಡುವೆ ಸ್ಪರ್ಧೆ ಏರ್ಪಡಲಿದ್ದು, ಅಂತಿಮವಾಗಿ ಯಾರಾಗ್ತಾರೆ ಈ ಬಾರಿ ಗಜಪಡೆ ಕ್ಯಾಪ್ಟನ್ ಎಂಬ ಕೂತೂಹಲ ಹೆಚ್ಚಾಗಿದೆ. (ವರದಿ: ಮಧು ಎಂ ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು) 

PREV
Read more Articles on
click me!

Recommended Stories

ಪವಿತ್ರಾ ಗೌಡ ನನ್ನ ಮಗಳಿದ್ದಂತೆ, ನೋಡಲಾಗ್ತಿಲ್ಲ- ಜೈಲಿಗೆ ಹೋಗಿ ಬಂದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಹೇಳಿದ್ದೇನು
ವಾಲ್ಮೀಕಿ ಹಗರಣ; 'ನಮ್ಮ ಸಮುದಾಯ ಗಮನಿಸುತ್ತಿದೆ, ಸುಮ್ನೆ ಬಿಡಲ್ಲ', ನಾಗೇಂದ್ರ ತಿರುಗೇಟು