
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟುಹಿಡಿದು ವಿಪಕ್ಷಗಳು ಸದನದಲ್ಲಿ ಹೋರಾಟ ಮುಂದುವರಿಸಿವೆ. ಇದರ ನಡುವೆ ಸುದ್ದಿಗೋಷ್ಠಿ ಮಾಡಿರುವ ನಾಗೇಂದ್ರ ಅವರು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ನಾಗೇಂದ್ರ, ನಾನು ಹೈಕಮಾಂಡ್ಗೆ ಒತ್ತಡ ಹಾಕಿ ಸಚಿವಗಿರಿ ಪಡೆದಿಲ್ಲ. ಇಡೀ ಪ್ರಕರಣದ ಬಗ್ಗೆ ಚರ್ಚೆ ಮಾಡಿ ನನಗೆ ಅವಕಾಶ ಕೊಟ್ಟಿದ್ದಾರೆ. ಸಿಬಿಐನವರು ರಾಜ್ಯಪಾಲರ ಬಳಿ ತನಿಖೆಗೆ ಮನವಿ ಮಾಡಿದ್ದಾರೆ. ಏನೇ ಆದರೂ ನಾನು ತನಿಖೆ ಎದರಿಸುತ್ತೇನೆ. ನಾನು ದಲಿತ ಆ ಕಾರಣಕ್ಕಾಗಿ ದಲಿತನಿಗೆ ಅನ್ಯಾಯ ಮಾಡಬೇಡಿ. ಇಡೀ ಪ್ರಕರಣದಲ್ಲಿ ನನ್ನದೇನು ತಪ್ಪಿಲ್ಲ. ಚರ್ಚೆಗೆ ಬಂದರೆ ಸದನದಲ್ಲಿ ನಾನು ಉತ್ತರ ಕೊಡುತ್ತೇನೆ. ಶ್ರೀರಾಮುಲು ಅವರು ನನಗೆ ರಾಜಕೀಯ ಪ್ರತಿಸ್ಪರ್ಧಿ, ಅವರ ಹೇಳಿಕೆಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ದಲಿತ ಮೀಸಲು ಕ್ಷೇತ್ರದಲ್ಲಿ ಗೆದ್ದು ಬಂದವನು ಎಂದು ಟಾಂಗ್ ನೀಡಿದ್ದಾರೆ.
ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಬಿ ನಾಗೇಂದ್ರ, ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿ ಹಲವು ವಿಚಾರ ಚರ್ಚೆ ಮಾಡಲು ಬಯಸಿದ್ದೇವು. ಆದರೆ ಅಧಿವೇಶನ ನಡೆಯಲು ಪ್ರತಿಪಕ್ಷ ಬಿಡ್ತಾ ಇಲ್ಲ. ನನ್ನ ರಾಜೀನಾಮೆಗೆ ಒತ್ತಾಯ ಮಾಡ್ತಿದ್ದಾರೆ. ಅವರು ಸದನದ ಬಾವಿಗೆ ಇಳಿದಿಲ್ಲ. ತಮ್ಮ ಸ್ಥಾನದಲ್ಲಿ ಇದ್ದು ಘೋಷಣೆ ಹಾಕ್ತಾ ಇದ್ದಾರೆ. ಅವರ ಘೋಷಣೆ ಕೇಳಿ ನನಗೆ ಬೇಸರ ಆಗಿದೆ. ಆದರೆ ನಾನು ನನ್ನ ಸಮಾಜಕ್ಕೆ ತಿಳಿಸಬೇಕಾಗಿದೆ. ಪ್ರಕರಣದ ಬಗ್ಗೆ ನಾನು ಬೆಳಕು ಚೆಲ್ಲಬೇಕಾಗಿದೆ. ಸಿಎಂ, ಸಚಿವರು ಎಲ್ಲಾ ಶಾಸಕರು ನಾವು ಚರ್ಚೆ ಗೆ ರೆಡಿ ಇದ್ದೇವೆ. ಆದರೆ ಅವರು ಚರ್ಚೆಗೆ ಬರುತ್ತಿಲ್ಲ. ಸದನದಲ್ಲಿ ಚರ್ಚೆ ಆಗದ ಕಾರಣಕ್ಕೆ ನಾನು ಮಾಧ್ಯಮಗಳ ಮುಂದೆ ವಿವರಣೆ ನೀಡಬೇಕಾಗಿದೆ ಎಂದು ಹೇಳಿದರು.
ವಾಲ್ಮೀಕಿ ನಿಗಮದಿಂದ ಹಣ ಒಂದು ಬ್ಯಾಂಕ್ ಗೆ ಹಣ ವರ್ಗಾವಣೆ ಆಗಿದೆ. 187 ಕೋಟಿ ರೂ ನಮ್ಮ ನಿಗಮದಿಂದ ನನ್ನ ಗಮನಕ್ಕೆ ಬಾರದೇ ಹಣ ವರ್ಗಾವಣೆ ಆಗಿದೆ. ನಿಗಮದ ಅಧ್ಯಕ್ಷರು ಇರುತ್ತಾರೆ. ಆದರೆ ಹಣಕಾಸು ಇಲಾಖೆಯ ಅನುಮತಿ ಪಡೆಯದೇ ಹಣ ವರ್ಗಾವಣೆ ಆಗಿದೆ. ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ತನಿಖೆ ನಡೆದಿದೆ. 187 ಕೋಟಿ ರೂ ಹಣ ಹಸ್ತಾಂತರ ಆದ ಬಗ್ಗೆ ಮಾಹಿತಿ ಬಂದ ನಂತರ, ತಕ್ಷಣ ನಾವು ನಿಗಮದಲ್ಲೇ 100 ಕೋಟಿ ರೂ ನಿಗಮದಲ್ಲೇ ಉಳಿಸುವ ತಿರ್ಮಾನ ಮಾಡಿದೇವು. ಪ್ರಕರಣದ ಬಗ್ಗೆ ಎಸ್ ಐ ಟಿ ತನಿಖೆ ಪಾರದರ್ಶಕ ಆಗಿ ನಡೆಯುವ ಸಲುವಾಗಿ ನಾನು ರಾಜೀನಾಮೆ ನೀಡಿದೆ. ಎಸ್ ಐ ಟಿ ದೇಶ ಮೆಚ್ಚುವ ರೀತಿಯಲ್ಲಿ ತನಿಖೆ ಮಾಡಿದೆ. ವರ್ಗಾವಣೆ ಗೊಂಡಿದ್ದ 87 ಕೋಟಿ ರೂ ಗಳಲ್ಲಿ 48 ಕೋಟಿ ರೂಪಾಯಿ ವಾಪಸ್ ಬಂದಿದೆ ಎಂದು ವಿವರಣೆ ನೀಡಿದರು.
ಪ್ರಕರಣದಲ್ಲಿ ಇಡಿ ಎಂಟ್ರಿ ಆಯ್ತು. ಇಡಿ ವಿಚಾರಣೆ ವೇಳೆ ನಡೆದ ವಿದ್ಯಮಾನಗಳ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸರ್ಕಾರ ಇರದ ಹಾಗೆ ನೋಡಿಕೊಳ್ಳುವ ಷಡ್ಯಂತ್ರ ನಡೆಯಿತು ಅನ್ನೋದನ್ನು ಈಗಾಗಲೇ ತಿಳಿಸಿದ್ದೇನೆ. ದಲಿತ ಸಮೂದಾಯಕ್ಕೆ ಸೇರಿದ ನಾನು ಎರಡನೇ ಬಾರಿ ಮಂತ್ರಿಯಾದೆ. ಅದನ್ನು ಈ ಮನುವಾದಿಗಳು ಸಹಿಸುತ್ತಿಲ್ಲ, ಪರಿಶಿಷ್ಟ ಪಂಗಡಕ್ಕೆ ಸೇರಿದವನು, ಆದಿವಾಸಿ ಮಂತ್ರಿಯಾಗಿದ್ದಕ್ಕೆ ಸಹಿಸುತ್ತಿಲ್ಲ. ಈ ಬೆಳವಣಿಗೆ ಬಗ್ಗೆ ನಮ್ಮ ಸಮಾಜ ನೋಡ್ತಾ ಇದೆ. ಇದನ್ನು ನಮ್ಮ ಜನ ಸುಮ್ಮನೆ ಬಿಡಲ್ಲ. ಒಬ್ಬ ದಲಿತನನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಅಂತ ನೋಡ್ತಾ ಇದೆ, ಮುಂದೆ ಗೊತ್ತಾಗಲಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ನಮ್ಮ ವಾಲ್ಮೀಕಿ ಸಮಾಜ ಬಿಜೆಪಿ ನಿಲುವುಗಳನ್ನು ನೋಡ್ತಾ ಇದೆ. ನಮ್ಮ ಸಿಎಂ ಡಿಕೆಶಿ ಸಹ ಯಾವುದೇ ಚರ್ಚೆ ಮಾಡಲು ಬನ್ನಿ ಅಂದಿದ್ದಾರೆ. ನಾವು ಚರ್ಚೆಗೆ ಕರೆದರೂ ಚರ್ಚೆಗೆ ಬರ್ತಿಲ್ಲ. ಒಂದು ಸುಳ್ಳುನ್ನು ಹೇಳಿ ಹೇಳಿ ಸತ್ಯ ಮಾಡಲು ಬಿಜೆಪಿ ಹೊರಟಿದೆ. ನನ್ನ ಯಾಕೆ ವಜಾ ಮಾಡಬೇಕು? ಸಂವಿಧಾನ ನನ್ನ ರಕ್ಷಣೆ ಮಾಡ್ತಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನ ನಮ್ಮ ಕಾಪಾಡಲಿದೆ. ಹೌದು ನಾನು ದಲಿತ, ಹುಟ್ಟಿನಲ್ಲಿ ದಲಿತ - ಸಾಯುವಾಗಲೂ ದಲಿತ. ಕೇಂದ್ರದ ಸಚಿವರು ಸೇರಿದಂತೆ ಬಿಜೆಪಿಯ 126 ಜನರ ಮೇಲೆ ಗಂಭೀರವಾದ ಪ್ರಕರಣ ಇದೆ. ಅವರು ಯಾಕೆ ರಾಜೀನಾಮೆ ಕೊಟ್ಟಿಲ್ಲ? ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಾನು ಈ ಪ್ರಕರಣದಲ್ಲಿ ಅಪರಾಧಿ ಆಗಿಲ್ಲ. ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜೀನಾಮೆಗೆ ಸಿದ್ಧ. ಸದನದಲ್ಲಿ ಇದನ್ನು ಹೇಳಲು ಸಹ ಅವಕಾಶ ಕೊಡ್ತಾ ಇಲ್ಲ.
ರಾಜ್ಯಪಾಲರು ಯಾಕೆ ನನಗೆ ಪ್ರಮಾಣವಚನ ಕೊಟ್ಟರು? ರಾಜ್ಯಪಾಲರಿಗಿಂತ ಇವರು ದೊಡ್ಡವರಾ? ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ವಿಜಯೇಂದ್ರ ಹೇಳಿಕೆಯನ್ನು ನಾನು ಸ್ವಾಗತ ಮಾಡ್ತೇನೆ. ರಾಮ ಯಾರು? ರಾಮರಾಜ್ಯ ಎನು ಅಂತ ಇವರಿಗೆ ಗೊತ್ತಿಲ್ಲ. ನಾವು ವಾಲ್ಮೀಕಿಯ ಸಂತತಿ ಕಾಪಾಡುವ ಕೆಲಸ ಮಾಡ್ತಿದ್ದೇವೆ. ರಾಮನ ಹುಂಡಿ ಹೊಡೆದವರು ಇವರು, ಇದಕ್ಕಿಂತ ದೊಡ್ಡ ಪ್ರಕರಣ? ನಾನು ಬೇಲ್ ಮೇಲೆ ಇರುವುದು ಹೌದು, 126 ಬಿಜೆಪಿ ನಾಯಕರು ಬೇಲ್ ಮೇಲೆ ಇಲ್ವಾ? ಪ್ರಕರಣ ಕೋರ್ಟ್ ನಲ್ಲಿ ಇದ್ದಾಗ ಯಾಕೆ ಮಾತಾಡ್ತಿರಾ? ಇಡಿ ವಿಚಾರಣೆ ವೇಳೆ ತುಂಬಾ ತೊಂದರೆ ಕೊಟ್ಟರು. ಸಿಕ್ಕ ಸಿಕ್ಕವರ ಹೆಸರು ಹೇಳಲು ಒತ್ತಡ ಹಾಕಿದ್ದರು. ಈಗ ಸಿಬಿಐ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರಿಗೆ ಕೇಳಿದೆ, ಆದರೆ ನಾನು ಈ ಪ್ರಕರಣದಲ್ಲಿ ಬೇಲ್ ಪಡೆದಿದ್ದೇನೆ. ಈ ವಿಚಾರ ರಾಜ್ಯಪಾಲರಿಗೆ ವಿಚಾರ ಗೊತ್ತಿದೆ ಎಂದು ಸ್ಪಷ್ಟನೆ ನೀಡಿದರು.