ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋಣ್‌ ಸರ್ವೆ : ಎಚ್ಚೆತ್ತುಗೊಂಡ ಇಲಾಖೆ

By Kannadaprabha NewsFirst Published Aug 11, 2021, 3:59 PM IST
Highlights
  •  ಬೆಚ್ಚಿ ಬೀಳಿಸಿದ್ದ ಹಿರೇನಾಗವೇಲಿ ಅಕ್ರಮ ಗಣಿ ಸ್ಫೋಟ ಘಟನೆ
  • ಗಣಿ ಸ್ಫೋಟ ಘಟನೆ ಬಳಿಕ ಎಚ್ಚೆತ್ತುಕೊಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
  • ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಪತ್ತೆಗೆ ಡ್ರೋಣ್‌ ಸರ್ವೆ ಕಾರ್ಯ

ವರದಿ : ಕಾಗತಿ ನಾಗರಾಜಪ್ಪ.
 
ಚಿಕ್ಕಬಳ್ಳಾಪುರ (ಆ.11):
 ಶಿವಮೊಗ್ಗ ಬಳಿ ಸಂಭವಿಸಿದ್ದ ಗಣಿ ಸ್ಫೋಟ ಪ್ರಕರಣದ ನಂತರ ಇಡೀ ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆಯ ಹಿರೇನಾಗವೇಲಿ ಅಕ್ರಮ ಗಣಿ ಸ್ಫೋಟ ಘಟನೆ ಬಳಿಕ ಎಚ್ಚೆತ್ತುಕೊಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಪತ್ತೆಗೆ ಡ್ರೋಣ್‌ ಸರ್ವೆ ಕಾರ್ಯಕ್ಕೆ ಮುಂದಾಗಿದೆ.

ಬಳ್ಳಾರಿಯನ್ನು ಮೀರಿಸುವ ರೀತಿಯಲ್ಲಿ ಜಿಲ್ಲಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆ, ಕ್ರಷರ್‌ಗಳ ಹಾವಳಿ ಕಲ್ಲು ಕ್ವಾರಿಗಳ ಅರ್ಭಟದ ಸದ್ದು ಜೋರಾಗಿದ್ದು ಜಿಲ್ಲೆಯ ಪ್ರಾಕೃತಿಕ ಸೌಂದರ್ಯಕ್ಕೆ ಅಕ್ರಮ ಗಣಿಗಾರಿಕೆ ಘಾಸಿ ಮಾಡುತ್ತಿದೆ.

ಹಿರೇನಾಗವೇಲಿ ಸ್ಫೋಟ ಪ್ರಕರಣ

ಹಿರೇನಾಗವೇಲಿ ಬಳಿ ಜಿಲಿಟಿನ್‌ ಮಹಾ ಸ್ಫೋಟಕ್ಕೆ 6 ಮಂದಿ ಅಮಾಯಕ ಕೂಲಿ ಕಾರ್ಮಿಕರು ಅಸುನೀಗಿದ್ದರು. ಈ ದುರ್ಘಟನೆಯ ಜಿಲ್ಲೆಯಲ್ಲಿ ತಿಂಗಳಗಟ್ಟಲೇ ಗಣಿಗಾರಿಕೆ ಸದ್ದು ನಿಂತಿತ್ತು. ಈಗ ಮತ್ತೆ ಗಣಿಗಾರಿಕೆ ಮತ್ತು ಅಕ್ರಮ ಗಣಿಗಾರಿಕೆ ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿನ ಸಕ್ರಮ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಪತ್ತೆ ಹಚ್ಚಲು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಡ್ರೋಣ್‌ ಸರ್ವೆ ಮಾಡಲು ಮುಂದಾಗಿದ್ದಾರೆ.

ಮಂಡ್ಯ : 11 ಕಲ್ಲು ಗಣಿಗಾರಿಕೆ ರದ್ದು

ಜಿಲ್ಲೆಯಲ್ಲಿ ಒಟ್ಟು 173 ವಿವಿಧ ಬಗೆಯ ಕ್ವಾರಿ, ಕ್ರಷರ್‌ ಸೇರಿದಂತೆ ಕಲ್ಲು ಗಣಿಗಾರಿಕೆಗಳು ಇವೆ. ಕೆಲವರು ಒಂದು ಪರವಾನಿಗೆಯಲ್ಲಿ 2, 3 ಕಡೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿ ಇಲಾಖೆ ಗುರುತಿಸಿರುವ ಗಡಿ ಮೀತಿ ಅತಿಕ್ರಮಿಸಿ ಸರ್ಕಾರಿ ಬೆಟ್ಟ, ಗುಡ್ಡಗಳನ್ನು ಒತ್ತುವರಿ ಮಾಡಿಕೊಂಡು ಕೆಲ ಗಣಿ ಮಾಲೀಕರು ಅಕ್ರಮ ಗಣಿಗಾರಿಕೆ ನಡೆಸುತ್ತಾ ಸರ್ಕಾರದ ರಾಜಧನ ಕೊಡದೇ ಕೊಟ್ಯಂತರ ರು. ವಂಚಿಸುತ್ತಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಸರ್ವೇ ಆರಂಭ

ಇಂತಹ ಅಕ್ರಮ ಗಣಿಗಾರಿಕೆಯನ್ನು ಪತ್ತೆ ಮಾಡಲು ಸೆಪ್ಪೆಂಬರ್‌ನಲ್ಲಿ ಜಿಲ್ಲಾದ್ಯಂತ ಡ್ರೋನ್‌ ಸರ್ವೆ ಕಾರ್ಯಕ್ಕೆ ಗಣಿ ಇಲಾಖೆ ಮುಂದಾಗಿದೆ. ವಿಶೇಷವಾಗಿ ಇಡೀ ಜಿಲ್ಲೆಯ ಪೈಕಿ ಚಿಕ್ಕಬಳ್ಳಾಪುರ ತಾಲೂಕು ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿವೆ. ಗಣಿ ಮಾಲೀಕರು ತಮಗೆ ಸೂಚಿಸಿದ ಸ್ಥಳದಲ್ಲಿ ಗಣಿಗಾರಿಕೆ ನಡೆಸದೇ ಇಡೀ ಬೆಟ್ಟಗಡ್ಡುಗಳನ್ನು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆಯಲ್ಲಿ ತೊಡಗಿರುವ ಪ್ರಕರಣಗಳು ಡ್ರೋನ್‌ ಸರ್ವೆಯಲ್ಲಿ ಪತ್ತೆಯಾಗಲಿವೆ.

ಗಣಿಗಾರಿಕೆ: 'ಅಡಿಪಾಯಕ್ಕೆ ಧಕ್ಕೆಯಾದ್ರೆ KRS ಕುಸಿದು ಬೀಳುವ ಅಪಾಯ'

ಗಣಿಸ್ಫೋಟ ವರದಿ ಸಲ್ಲಿಕೆ

ಕಳೆದ ಫೆಬ್ರವರಿ 22 ರ ಮಧ್ಯರಾತ್ರಿ ಹಿರೇನಾಗವೇಲಿ ದಟ್ಟಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ಪರಿಣಾಮದಿಂದ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಜಿಲೆಟಿನ್‌ ಕಡ್ಡಿಗಳನ್ನು ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ 6 ಮಂದಿ ಕಾರ್ಮಿಕರು ಬಲಿಯಾಗಿದ್ದರು. ಗಣಿ ಮಾಲೀಕತ್ವ ಹೊಂದಿದ್ದ ಬಿಜೆಪಿ ಮುಖಂಡ ಸೇರಿ 13 ಮಂದಿಯನ್ನು ಪೊಲೀಸರು ಬಲೆ ಬೀಸಿ ಬಂಧಿಸಿದ್ದರು. ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿ ಇತ್ತೀಚೆಗೆ ಸಿಐಡಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಜಿಲ್ಲೆಯಲ್ಲಿ ಒಟ್ಟು ವಿವಿಧ ಬಗೆಯ 173 ಸ್ಥಳಗಳಲ್ಲಿ ಕ್ರಷರ್‌, ಕಲ್ಲು ಕ್ವಾರಿಯಂತಹ ಗಣಿಗಾರಿಕೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಗಣಿ ಪ್ರದೇಶಗಳ ಅಕ್ರಮ ಒತ್ತುವರಿ ಸೇರಿದಂತೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಸರ್ವೆ ಕಾರ್ಯ ಮಾಡಿಸುವ ಸಲುವಾಗಿ ಇಲಾಖೆಯಿಂದ ಡ್ರೋಣ್‌ ಸರ್ವೆ ಕಾರ್ಯಕ್ಕೆ ನಿರ್ಧರಿಸಲಾಗಿದೆ. ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದ್ದು ಸೆಪ್ಪೆಂಬರ್‌ನಿಂದ ಸರ್ವೆ ಕಾರ್ಯ ಆರಂಭಗೊಳ್ಳಲಿದೆ.

ಕೃಷ್ಣವೇಣಿ, ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಿಕ್ಕಬಳ್ಳಾಪುರ,

click me!