ಉತ್ತರ ಕನ್ನಡದಲ್ಲಿ ಬಿಗಡಾಯಿಸಿದ ಕುಡಿಯುವ ನೀರಿನ ಸಮಸ್ಯೆ: ಶಾಲೆಗಳಲ್ಲೂ ನೀರಿನ ಅಭಾವ

By Govindaraj S  |  First Published Jun 3, 2023, 2:00 AM IST

ರಾಜ್ಯಾದ್ಯಂತ ಮಳೆರಾಯ ಅಲ್ಲಲ್ಲಿ ಕಾಣಿಸುತ್ತಿದ್ರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕುಡಿಯುವ ನೀರಿನ‌ ಸಮಸ್ಯೆ ಹೆಚ್ಚಾಗಿಯೇ ಕಾಣಿಸತೊಡಗಿದೆ.‌ ಕಳೆದ 5-6 ತಿಂಗಳಿಂದ ಜನರು ಕುಡಿಯುವ ನೀರು ದೊರಕದೆ ಸಮಸ್ಯೆ ಎದುರಿಸುತ್ತಿದ್ದು, ಸಾಕಷ್ಟು ಕುಡಿಯುವ ನೀರಿನ ಘಟಕಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿಲ್ಲ.


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್, ಕಾರವಾರ

ಉತ್ತರ ಕನ್ನಡ (ಜೂ.03): ರಾಜ್ಯಾದ್ಯಂತ ಮಳೆರಾಯ ಅಲ್ಲಲ್ಲಿ ಕಾಣಿಸುತ್ತಿದ್ರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕುಡಿಯುವ ನೀರಿನ‌ ಸಮಸ್ಯೆ ಹೆಚ್ಚಾಗಿಯೇ ಕಾಣಿಸತೊಡಗಿದೆ.‌ ಕಳೆದ 5-6 ತಿಂಗಳಿಂದ ಜನರು ಕುಡಿಯುವ ನೀರು ದೊರಕದೆ ಸಮಸ್ಯೆ ಎದುರಿಸುತ್ತಿದ್ದು, ಸಾಕಷ್ಟು ಕುಡಿಯುವ ನೀರಿನ ಘಟಕಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಮಸ್ಯೆ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮಾತ್ರವಲ್ಲದೇ, ಶಾಲೆಗಳಿಗೂ ಬಾಧಿಸತೊಡಗಿದ್ದು, ಈ ಕಾರಣದಿಂದ ಹಲವು ಗ್ರಾಮ ಪಂಚಾಯತ್‌ಗಳಿಗೆ ಟ್ಯಾಂಕರ್ ಮೂಲಕವೇ ನೀರು ಪೂರೈಸಲಾಗುತ್ತಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. 

Latest Videos

undefined

ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿಂದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಶಾಲೆಗಳು ಕೂಡಾ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 241 ಕುಡಿಯುವ ನೀರಿನ ಘಟಕವಿದ್ದು, 126 ಘಟಕಗಳಷ್ಟೇ ಕಾರ್ಯರೂಪದಲ್ಲಿದೆ. ಉಳಿದ 115 ಘಟಕಗಳು ಸುಮಾರು 5- 6ತಿಂಗಳಿಂದ ಯಾವುದೇ ಕೆಲಸ ಮಾಡುತ್ತಿಲ್ಲ. ಸರಕಾರ ಲಕ್ಷಗಟ್ಟಲೆ‌ ವೆಚ್ಚ ಮಾಡಿ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದ್ದರೂ, ಇವುಗಳ ಮೈಂಟೈನೆನ್ಸ್‌ಗಳನ್ನು ಕೆಲವು ಏಜೆನ್ಸಿಗಳು ನಡೆಸದ ಕಾರಣ ಘಟಕಗಳು ಕಾರ್ಯನಿರ್ವಹಿಸದೆ ಹಲವು ಸಮಯಗಳಿಂದ ಹಾಗೆಯೇ ಬಿದ್ದುಕೊಂಡಿವೆ.‌ 

ಭಾರತದ ಆರ್ಥಿಕ ಪ್ರಗತಿಗೆ ಜಾಗತಿಕ ಮೆಚ್ಚುಗೆ: ಸಂಸದ ದೇವೇಂದ್ರಪ್ಪ

ಈ ಸಂಬಂಧ ಜಿಲ್ಲಾಡಳಿತ ರಾಜ್ಯದ ಮುಖ್ಯ ಎಂಜಿನಿಯರ್ ಜತೆ ಎರಡು ಬಾರಿ ಮಾತುಕತೆ ನಡೆಸಿದ್ದು, ಈ ಘಟಕಗಳನ್ನು ನೋಡಿಕೊಳ್ಳುತ್ತಿದ್ದ ಏಜೆನ್ಸಿಗಳನ್ನು ಬ್ಲ್ಯಾಕ್ ಲಿಸ್ಟ್ ಮಾಡಲು ಅಥವಾ ಅವುಗಳನ್ನು ತೆರವುಗೊಳಿಸಲು ರಾಜ್ಯಮಟ್ಟದಿಂದ ಸೂಚನೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.‌ ಇದರೊಂದಿಗೆ ಗ್ರಾಮ‌ ಪಂಚಾಯತ್‌ ಮಟ್ಟದಲ್ಲೇ ನೀರಿನ ವ್ಯವಸ್ಥೆ ಮಾಡುವ ಯೋಜನೆಗಳನ್ನು ಅಧಿಕಾರಿಗಳು ರೂಪಿಸುತ್ತಿದ್ದಾರೆ. ಸದ್ಯಕ್ಕೆ 90 ಗ್ರಾ.ಪಂ.ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ನಡೆಸುತ್ತಿದೆ. ಜಿಲ್ಲೆಯ ಮುಂಡಗೋಡ, ಬನವಾಸಿ, ಶಿರಸಿಯ ಗ್ರಾಮಾಂತರ ಭಾಗಗಳ ಶಾಲೆಗಳಲ್ಲೂ ಪದೇ ಪದೇ ಕುಡಿಯುವ ನೀರಿನ ಸಮಸ್ಯೆ ಕಾಣಿಸುತ್ತಿದ್ದು, ಈ ಹಿಂದೆ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಕೂಡಾ ನಡೆಸಿದ್ದರು. 

ನೀರಿನ‌ ಸಮಸ್ಯೆಗಳ‌ನ್ನು ಎದುರಿಸುವ ಶಾಲೆಗಳಿಗೆ ಅಧಿಕಾರಿಗಳು ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಇನ್ನು ಹಲವೆಡೆ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರಿಂದ ಹಾಗೂ ಕೆಲವೆಡೆ ಸರಿಯಾಗಿ ಮೈಂಟೆನೆನ್ಸ್ ಮಾಡಿರದ ಕಾರಣ ಸುಮಾರು 115 ಘಟಕಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿವೆ‌‌. ಎಲ್ಲೆಲ್ಲಿ ಕುಡಿಯುವ ನೀರಿನ ಅಭಾವವಿದೆ ಅಲ್ಲಲ್ಲಿ ವಿಪತ್ತು ನಿರ್ವಹಣೆಗಾಗಿ ಇರಿಸಲಾಗಿರುವ ಮೊತ್ತವನ್ನು ಬಳಸಬಹುದು ಎಂದು ಸಿಎಂ ಕೂಡಾ ಸೂಚನೆ ನೀಡಿದ್ದಾರೆ. ಈ ಕಾರಣದಿಂದ‌ ಕುಡಿಯುವ ನೀರಿಗಾಗಿ 145 ಗ್ರಾಮ ಪಂಚಾಯತ್‌ಗಳಿಗೆ 6.86 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 

ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಜಿ.ಎಸ್‌.ಪಾಟೀಲ್‌ ಎಚ್ಚರಿಕೆ

ಇದರ‌ ಮೂಲಕ ಹೊಸ ಬೋರ್‌ವೆಲ್ ಅಳವಡಿಕೆ, ಹಳೇ ಬೋರ್ ವೆಲ್ ರಿಪೇರಿ, ಪೈಪ್ ಲೈನ್ ದುರಸ್ತಿ ಮುಂತಾದವುಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಕಡೆಗಳಲ್ಲಿ ಕುಡಿಯುವ ನೀರಿ‌ನ ಸಮಸ್ಯೆ ಎದುರಾಗಿದ್ದು, ಇದನ್ನು ಬಗೆಹರಿಸಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೇ, ಸರಿಯಾಗಿ ಮೈಂಟೆನೆನ್ಸ್ ನಡೆಸದ ಏಜೆನ್ಸಿಗಳ ವಿರುದ್ಧ ಕ್ರಮ‌ ಕೈಗೊಂಡು ಪ್ರತೀ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಪೂರೈಸಲು ಯೋಜನೆ ರೂಪಿಸುತ್ತಿದೆ. 

click me!