
ಬೆಂಗಳೂರು (ನ.06): ರಾಜ್ಯ ರಾಜಕಾರಣದಲ್ಲಿ ದಲಿತ ಸಬಲೀಕರಣ ಹಾಗೂ ಮೀಸಲಾತಿ ಕುರಿತಾದ ಸಂವಾದಗಳು ಕಾವು ಪಡೆದುಕೊಳ್ಳುತ್ತಿರುವ ನಡುವೆಯೇ, ಪ್ರಮುಖ ದಲಿತ ಮುಖಂಡ ಡಾ. ಚಿ.ನಾ. ರಾಮು ಅವರು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಸಂಚಲನ ಮೂಡಿಸುವಂತಹ ಏಕವಚನ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ನಡೆದ ಡಾ. ಚಿ.ನಾ. ರಾಮು ಅವರು ರಚಿಸಿರುವ 'ನನ್ನ ಜನ ಅನಾಥ' ಪುಸ್ತಕದ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ನಡೆದ ಕಾರ್ಯಕ್ರಮದಲ್ಲಿ ಚಿ.ನಾ. ರಾಮು ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವೈಯಕ್ತಿಕ ಹಾಗೂ ರಾಜಕೀಯ ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಡಾ. ಚಿ.ನಾ. ರಾಮು, ಮಲ್ಲಿಕಾರ್ಜುನ ಖರ್ಗೆ ಅವರ ದೀರ್ಘ ರಾಜಕೀಯ ಜೀವನವನ್ನು ಪ್ರಸ್ತಾಪಿಸಿ ಪ್ರಶ್ನೆ ಎತ್ತಿದರು. 'ಮಲ್ಲಿಕಾರ್ಜುನ ಖರ್ಗೆ ಅವರು ಒಂಬತ್ತು ಬಾರಿ ಗೆದ್ದು ಶಾಸಕ, ಮಂತ್ರಿ, ಸಂಸದರಾಗಿದ್ದಾರೆ. ಇಷ್ಟೆಲ್ಲ ಅಧಿಕಾರ ಅನುಭವಿಸಿದ ಮೇಲೆಯೂ ಇನ್ನೂ ನಿಮಗೆ ಮೀಸಲಾತಿ ಏತಕ್ಕೆ ಬೇಕು?' ಎಂದು ಪ್ರಶ್ನಿಸಿದರು. ಇನ್ನು ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಮಾತನಾಡುತ್ತಾ, 'ಪ್ರಿಯಾಂಕ್ ಖರ್ಗೆ ನೀನು ನಿಜವಾದ ಎಳಸು, ಗುಗ್ಗು! ನೀನು ನಿಜಕ್ಕೂ ಬಲಿತ ದಲಿತ. ದಲಿತ ಸಮುದಾಯದಿಂದ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಂಡು ಮೇಲ್ಜಾತಿಯವರ ಸಂಬಂಧ ಬೆಳೆಸಲು ಹೊರಟಿದ್ದೀರಿ' ಎಂದು ಕಿಡಿಕಾರಿದರು.
ತಮ್ಮ ಭಾಷಣವನ್ನು ಮುಂದುವರಿಸಿದ ಚಿ.ನಾ. ರಾಮು, ಪ್ರಿಯಾಂಕ್ ಖರ್ಗೆ ಅವರ ವೈಯಕ್ತಿಕ ಮದುವೆ ವಿಚಾರ ಹಾಗೂ ಕುಟುಂಬದ ಸಂಬಂಧಗಳ ಕುರಿತು ನೇರ ವಾಗ್ದಾಳಿ ನಡೆಸಿದರು. 'ಪ್ರಿಯಾಂಕ್ ಖರ್ಗೆ, ನಿನಗೆ ಮೇಲ್ಜಾತಿಯವರ ಹುಡುಗಿ ಬೇಕು. ನಮ್ಮ ಜಾತಿಯ ದಲಿತ ಹುಡುಗಿಯರು ಎಷ್ಟು ಸುಂದರವಾಗಿದ್ದರು ಗೊತ್ತಾ? ಆದರೆ ನೀನು ಮದುವೆಯಾಗಿರುವುದು ಮೇಲ್ಜಾತಿಯವರನ್ನು. ಅಷ್ಟೇ ಅಲ್ಲದೆ ರಾಧಾಕೃಷ್ಣ ಅವರ ಮಗಳನ್ನೂ ಮೇಲ್ಜಾತಿಯ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದೀರಿ. ನಿನ್ನಂತೆ ಈಗಾಗಲೇ ಸಕಲ ಸೌಲಭ್ಯ ಪಡೆದು 'ಬಲಿತ'ವರೇ ಉದ್ಧಾರವಾದರೆ, ನಿಜವಾದ ಶೋಷಿತ ಹಾಗೂ ಬಡ ದಲಿತರು ಏನು ಮಾಡಬೇಕು?' ಎಂದು ಕಿಡಿಕಾರಿದರು.
ಇತ್ತೀಚೆಗಷ್ಟೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ 'ಬಲಿತ ದಲಿತ' ಎಂಬ ವಿಚಾರವಾಗಿ ಜಾಲತಾಣಗಳಲ್ಲಿ ಭಾರಿ ವಾಕ್ಸಮರ ನಡೆದಿತ್ತು. ಇದೀಗ ಕುಮಾರಸ್ವಾಮಿ ಅವರಿದ್ದ ವೇದಿಕೆಯಲ್ಲೇ ಚಿ.ನಾ. ರಾಮು ಅವರು ಖರ್ಗೆ ಕುಟುಂಬವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ನಿಜವಾದ ದಲಿತರಿಗೆ ಪ್ರಾತಿನಿಧ್ಯ ಹಾಗೂ ಸೌಲಭ್ಯ ಸಿಗುತ್ತಿಲ್ಲ, ಬದಲಿಗೆ ದಶಕಗಳಿಂದ ಅಧಿಕಾರದಲ್ಲಿರುವ ನಾಯಕರ ಕುಟುಂಬಗಳೇ ಮೀಸಲಾತಿ ಫಲ ಉಣ್ಣುತ್ತಿವೆ ಎಂಬ ಆರೋಪಕ್ಕೆ ಈ ಭಾಷಣ ಮತ್ತಷ್ಟು ಕಾವು ನೀಡಿದೆ.