
ಬೆಂಗಳೂರು (ನ.06): ರಾಜ್ಯದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಲಯದ ಎಲ್ಲಾ ಹಂತದ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಹುದ್ದೆಗಳನ್ನು ಕಾಯ್ದಿರಿಸುವ ಪ್ರಣಾಳಿಕೆಯ ಭರವಸೆಯನ್ನು ತಕ್ಷಣವೇ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ್ದ ಈ ಪ್ರಮುಖ ಭರವಸೆಯನ್ನು ಈಡೇರಿಸುವುದು ಸರ್ಕಾರದ ಸಾಂವಿಧಾನಿಕ ಹಾಗೂ ನೈತಿಕ ಕರ್ತವ್ಯವಾಗಿದೆ. ಈ ಬಾರಿಯ ದೀಪಾವಳಿ ಹಬ್ಬದ ಕೊಡುಗೆಯಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕನ್ನಡಿಗರ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಹಿರಂಗ ಪತ್ರ ಹಂಚಿಕೊಂಡಿರುವ ನಾರಾಯಣಗೌಡರು, 'ನೀವು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ರೂಪುಗೊಂಡಿದೆ. ನೀವು ಅಪಾರ ಕನ್ನಡ ಪ್ರೇಮ ಹೊಂದಿರುವವರು. ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತೇವೆ ಎಂಬ ಭರವಸೆ ನೀಡಿ ನಾಲ್ಕು ವರ್ಷಗಳಾಗುತ್ತ ಬಂದರೂ ಅದು ಈಡೇರಿಲ್ಲ. ಇದಕ್ಕಿಂತ ದೊಡ್ಡ ಆದ್ಯತೆಯ ವಿಷಯ ಇನ್ನೊಂದಿರಲು ಸಾಧ್ಯವಿಲ್ಲ. ಏಕೆಂದರೆ ಇದು ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ' ಎಂದು ಉಲ್ಲೇಖಿಸಿದ್ದಾರೆ. ಸರ್ಕಾರ ಈ ಬೇಡಿಕೆಯನ್ನು ಈಡೇರಿಸಿದರೆ ಕರವೇ ವತಿಯಿಂದ ಯಾವುದೇ ಅಭಿಯಾನ ನಡೆಸುವ ಅಗತ್ಯವಿರುವುದಿಲ್ಲ. ಲಕ್ಷಾಂತರ ಕನ್ನಡದ ಮಕ್ಕಳನ್ನು ಸೇರಿಸಿ ಇಡೀ ಸರ್ಕಾರಕ್ಕೆ ಬೃಹತ್ ಅಭಿನಂದನಾ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲವೂ ಇದೆ ಎಂಬುದನ್ನು ನಾರಾಯಣಗೌಡರು ಪತ್ರದಲ್ಲಿ ನೆನಪಿಸಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಈ ಕಾಯ್ದೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕರವೇ ಆಗ್ರಹ ಅಭಿಯಾನವನ್ನು ಬೆಂಬಲಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಈ ಹಿಂದೆ ಶೇ.80ರಷ್ಟು ಹುದ್ದೆ ಕಾಯ್ದಿರಿಸುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದರು.
ಎಲ್ಲಾ ರಾಜಕೀಯ ನಾಯಕರ ಬೆಂಬಲವಿರುವಾಗ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ ಹಾಗೂ ಛಲವನ್ನು ನಾನು ಬಲ್ಲೆ. ಇಂತಹ ಬ್ಲಾಕ್ ಮೇಲ್ಗಳನ್ನು ಮೆಟ್ಟಿನಿಲ್ಲುವ ಸ್ಥೈರ್ಯ ನಿಮಗಿದೆ. ನಿಮ್ಮ ಅವಧಿಯಲ್ಲಿ ಈ ಕಾಯ್ದೆ ಬಂದಲ್ಲಿ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾರೆ' ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ 'ಆಗ್ರಹ ಅಭಿಯಾನ'ದ ಭಾಗವಾಗಿ ಇದುವರೆಗೆ ಸುಮಾರು 350ಕ್ಕೂ ಹೆಚ್ಚು ಸಣ್ಣ ಹಾಗೂ ಬೃಹತ್ ಸಂಸ್ಥೆಗಳನ್ನು ತಲುಪಲಾಗಿದೆ. ಎಲ್ಲೂ ಕೂಡ ಯಾವುದೇ ಕಹಿ ಘಟನೆ ನಡೆಯದೆ ಶಾಂತಿಯುತವಾಗಿ ಹಾಗೂ ಗೌರವಯುತವಾಗಿ ಸಂವಾದ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಈ ಅಭಿಯಾನಕ್ಕೆ ಆಶಾದಾಯಕವಾಗಿ ಸ್ಪಂದಿಸುತ್ತಿದ್ದು, ಈ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ-ಅಂಶಗಳನ್ನು ಸರ್ಕಾರದ ಗಮನಕ್ಕೆ ತರಲು ವರದಿ ರೂಪದಲ್ಲಿ ಸಲ್ಲಿಸಲಾಗುವುದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವ ಉದ್ಯೋಗ ಮಸೂದೆಯನ್ನು ಈ ಕೂಡಲೇ ಜಾರಿಗೆ ತರಲು ಸರ್ಕಾರ ತಕ್ಷಣವೇ ಹೆಜ್ಜೆ ಇಡಬೇಕೆಂಬುದು ಕರವೇಯ ಮುಖ್ಯ ಆಗ್ರಹವಾಗಿದೆ.