‘ಕನ್ನಡಪ್ರಭ' ಸುವರ್ಣ ನ್ಯೂಸ್‌' ವರದಿಗೆ ಸ್ಪಂದಿಸಿದ ದಾನಿಗಳು: ದೊಡ್ಡಪ್ಪಗೆ ಹರಿದು ಬಂದ ನೆರವು

By Kannadaprabha NewsFirst Published Mar 13, 2020, 11:37 AM IST
Highlights

ರಾಷ್ಟ್ರೀಯ ಮಟ್ಟದ ಗಮನ ಸೆಳೆದ ಭರವಸೆಯ ಓಟಗಾರ ದೊಡ್ಡಪ್ಪ ನಾಯಕ್‌ಗೆ ನೆರವು|  ಆಸ್ಪ್ರೇಲಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾದ ದೊಡ್ಡಪ್ಪ ನಾಯಕ್‌| ದಾನಿಗಳಿಂದ ಹಣದ ನೆರವು| ‘ಕನ್ನಡಪ್ರಭ' ಸುವರ್ಣ ನ್ಯೂಸ್‌' ಧನ್ಯವಾದ ತಿಳಿಸಿದ ದೊಡ್ಡಪ್ಪ| 

ಯಾದಗಿರಿ(ಮಾ.13): ಇದೇ ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹಣದ ಕೊರತೆಯಿಂದಾಗಿ, ಕೂಲಿಗೆ ಮುಂದಾಗಿದ್ದ ಯಾದಗಿರಿ ತಾಲೂಕಿನ ಹಳಿಗೇರಾ ಗ್ರಾಮದ ಭರವಸೆಯ ಓಟಗಾರ ದೊಡ್ಡಪ್ಪ ನಾಯಕ್‌ ಅವರ ಕಳ್ಳು ಮುಳ್ಳಿನ ದಾರಿಯ ಕುರಿತು ಗುರುವಾರ ಪ್ರಕಟಗೊಂಡ ‘ಕನ್ನಡಪ್ರಭ' ಸುವರ್ಣ ನ್ಯೂಸ್‌' ವರದಿಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

ಬಡತನದ ಬೇಗೆಯ ಮಧ್ಯೆಯೂ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದ ಗಮನ ಸೆಳೆದ ಭರವಸೆಯ ಓಟಗಾರ ದೊಡ್ಡಪ್ಪ ನಾಯಕ್‌ ಅವರಿಗೆ ನೆರವು ನೀಡುವಲ್ಲಿ ರಾಜ್ಯದ ವಿವಿಧೆಡೆ ಸೇರಿದಂತೆ ಅನೇಕ ಕಡೆಗಳಿಂದ ದಾನಿಗಳು ಧಾವಿಸಿದ್ದಾರೆ. ಆಸ್ಪ್ರೇಲಿಯಾಕ್ಕೆ ತೆರಳುವಲ್ಲಿ ಉಂಟಾದ ಹಣದ ಅಡಚಣೆಯಿಂದ ಎಲೆಮರೆಯಂತಿರುವ ಗ್ರಾಮೀಣ ಕ್ರೀಡಾಪಟುವೊಬ್ಬನ ಪ್ರತಿಭೆ ಕುಗ್ಗುವಂತಾಗಬಾರದು, ಕೂಲಿ ಮಾಡಿ ಬದುಕು ಸಾಗಿಸುತ್ತ ಸಾಧನೆ ಮೆರೆದದ್ದು ಮರೆಯಾಗಬಾರದು ಎಂಬ ಕಾರಣದಿಂದ ಅನೇಕರು ದೊಡ್ಡಪ್ಪನಿಗೆ ಸಹಾಯದ ಹಸ್ತ ಚಾಚಿದ್ದಾರೆ.

ಯಾದಗಿರಿ ಜಿಲ್ಲೆಗೆ ಹೆಸರು ತಂದುಕೊಟ್ಟ ಹೆಮ್ಮೆಯ ಕ್ರೀಡಾಪಟು ದೊಡ್ಡಪ್ಪ ನಾಯಕ್‌!

‘ಕನ್ನಡಪ್ರಭ' ಸುವರ್ಣ ನ್ಯೂಸ್‌' ಮೂಲಕ ದೊಡ್ಡಪ್ಪನ ಸಂಪರ್ಕಿಸಿದ ಅನೇಕರು, ಆತನ ಬ್ಯಾಂಕ್‌ ಖಾತೆಗೆ ತಮಗೆ ಅನುಕೂಲವಾದಷ್ಟು ಹಣ ಜಮೆ ಮಾಡಿದ್ದಾರೆ. ಕೆಲವರು ಕನ್ನಡಪ್ರಭ ಕಚೇರಿಗೂ ಆಗಮಿಸಿ, ಒಂದಿಷ್ಟು ಹಣ ನೀಡುವ ಮೂಲಕ ಆತನಿಗೆ ನೀಡುವಂತೆ ಹೇಳಿ, ದೊಡ್ಡಪ್ಪನ ಸಾಧನೆಗೆ ಬೆನ್ನೆಲುವಾಗಿ ನಿಲ್ಲುವ ಭರವಸೆ ನೀಡಿದ್ದಾರೆ. ದಾನಿಗಳ ನೆರವಿನಿಂದ ದೊಡ್ಡಪ್ಪನ ಮೊಗದಲ್ಲಿ ಮತ್ತೇ ಉತ್ಸಾಹ ಮೂಡಿಸಿದ್ದ, ವಿದೇಶದಲ್ಲಿ ರಾಷ್ಟ್ರಧ್ವಜದ ಗರಿಮೆ ಹೆಚ್ಚಿಸಲು ಮತ್ತಷ್ಟೂ ಸಿದ್ಧತೆ ನಡೆಸಿದ್ದಾರೆ.

ಆಸ್ಪ್ರೇಲಿಯಾ ಕ್ರೀಡೆಗಾಗಿ ಕೂಲಿ ಮಾಡುತ್ತಿರುವ ರನ್ನರ್‌!

ಎಲೆಮರೆಯಂತಾಗಿರುವ ತಮ್ಮ ಸಾಧನೆ ಗುರುತಿಸಿ ಕೋಟ್ಯಂತರ ಜನರಿಗೆ ತಲುಪಿಸಿದ ‘ಕನ್ನಡಪ್ರಭ' ಸುವರ್ಣ ನ್ಯೂಸ್‌' ವರದಿಗೆ ಧನ್ಯವಾದಗಳನ್ನು ಅರ್ಪಿಸಿದ ದೊಡ್ಡಪ್ಪ, ಇದು ತಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಯಿತೆಂದು ತಿಳಿಸಿದ್ದಾರೆ.

ಅಧಿಕಾರಿಗಳ ಕೆಂಗಣ್ಣು:

‘ಕನ್ನಡಪ್ರಭ' ಸುವರ್ಣ ನ್ಯೂಸ್‌' ವರದಿಗೆ ಅನೇಕ ದಾನಿಗಳು, ಸಾರ್ವಜನಿಕರು ಸ್ಪಂದಿಸಿದ್ದಾರೆ. ಆದರೆ, ಸಂಬಂಧಿತ ಅಧಿಕಾರಿಗಳ ಮಾತ್ರ ಮುನಿಸಿಕೊಂಡಂತಿದೆ ಎನ್ನಲಾಗಿದೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್‌ ಕೋಚ್‌ ಆಗಿ, ಏಜೆನ್ಸಿಯೊಂದರ ಮೂಲಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ದೊಡ್ಡಪ್ಪ ಆಸ್ಪ್ರೇಲಿಯಾಕ್ಕೆ ತೆರಳಲು ಕೂಲಿ ಮಾಡುವ ಅನಿವಾರ‍್ಯತೆ ಬಂದೊದಗಿದೆ. ತಮಗೆ ಸಿಗುವ ಸಂಬಳವೂ ಅಷ್ಟಕ್ಕಷ್ಟೇ ಎಂದು ವರದಿಯಲ್ಲಿನ ಅಂಶಗಳು ಅಧಿಕಾರಿಗಳ ಕೆಂಗಣ್ಣಿಗೆ ಕಾರಣವಾಗಿದೆ ಎನ್ನಲಾಗಿದೆ.
 

click me!