ದಕ್ಷಿಣ ಕನ್ನಡದ ಹಲವು ದೇಗುಲಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭವಾಗಿದೆ. ಮೀನುಗಳಿಗೂ ನೀರಿಲ್ಲದೇ ನೀರು ಹಾಯಿಸುವಂತಹ ಪರಿಸ್ಥಿತಿ ಎದುರಾಗಿದೆ.
ದುರ್ಗಾಕುಮಾರ್ ನಾಯರ್‌ಕೆರೆ
ಸುಳ್ಯ [ಮಾ.13]: ಸುಳ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗೆ ಹಾಹಾಕಾರ ಉಂಟಾಗಿದ್ದು, ಕುಡಿಯುವ ನೀರಿನ ಆತಂಕ ಒಂದು ಕಡೆಯಾದರೆ ಬಿಸಿಲಿನ ಪ್ರಮಾಣ ಏರಿಕೆಯಾಗಿ ನದಿ, ಕೆರೆಗಳ ನೀರು ಬಿಸಿಯಾಗುತ್ತಿರುವ ಪರಿಣಾಮ ತಾಲೂಕಿನ ಪುಣ್ಯಕ್ಷೇತ್ರಗಳಲ್ಲಿ ಇರುವ ದೇವರ ಮೀನುಗಳಿಗೆ ಈಗಾಗಲೇ ಬಿಸಿಲ ಬೇಗೆ ತಟ್ಟಿದೆ.
ಸುಳ್ಯ ತಾಲೂಕಿನ ತೊಡಿಕಾನದ ಪುರಾಣ ಪ್ರಸಿದ್ಧ ಶ್ರಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಮತ್ಸ್ಯ ತೀರ್ಥ ನದಿಯಲ್ಲಿ ಮಹಶೀರ್ ಮೀನುಗಳಿವೆ. ಆದರೆ ಪ್ರತಿ ವರ್ಷ ಬೇಸಿಗೆ ಬಂದರೆ ಮೀನುಗಳಿಗೂ ಜಲಕ್ಷಾಮದ ಭೀತಿಯನ್ನು ತಂದೊಡ್ಡುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವದಿಂದಾಗಿ ಈ ಮೀನುಗಳನ್ನು ಸಂರಕ್ಷಿಸುವುದೇ ಒಂದು ಸವಾಲಾಗುತ್ತಿದೆ. ಈ ಬಾರಿ ಸಾಕಷ್ಟುಬೇಗನೇ ಎಚ್ಚೆತ್ತು ಕೊಂಡಿರುವ ದೇವಸ್ಥಾನದ ಆಡಳಿತ ಮಂಡಳಿ ಇವುಗಳಿಗೆ ಶುದ್ಧ ನೀರನ್ನು ಪೂರೈಸುವ ಕಾರ್ಯವನ್ನು ನಡೆಸುತ್ತಿದೆ.
ಮಹಶೀರ್ ಮೀನುಗಳು ವಾಸಿಸುವ ಅಣೆಕಟ್ಟಿಗೆ ಪೈಪ್‌ಗಳ ಮೂಲಕ ನೀರನ್ನು ತಂದು ಅವುಗಳನ್ನು ಕಾರಂಜಿಯಂತೆ ಚಿಮ್ಮಿಸಿ ಅಣೆಕಟ್ಟಿನ ನೀರು ಬಿಸಿ ಆಗದಂತೆ ಎಚ್ಚರ ವಹಿಸಲಾಗುತ್ತದೆ. ಕಳೆದ ಎರಡು ತಿಂಗಳಿನಿಂದ ಈ ರೀತಿ ನದಿಯ ಮೇಲೆ ನೀರನ್ನು ಕಾರಂಜಿಯಂತೆ ಚಿಮ್ಮಿಸಲಾಗುತ್ತದೆ.
ಶುದ್ಧ ನೀರಿನ ದರ ಹೆಚ್ಚಳ: ದುಪ್ಪಟ್ಟು ವಸೂಲಿ.
ಹಿಂದೆಲ್ಲ ಕಡು ಬೇಸಿಗೆ ಬಂದರೆ ನೀರಿನ ಕೊರತೆಯಿಂದ ಈ ಮೀನುಗಳು ವಿಲವಿಲನೆ ಒದ್ದಾಡುವ ಪರಿಸ್ಥಿತಿ ಉಂಟಾಗಿತ್ತು. ದೇವಸ್ಥಾನದ ಪಕ್ಕದಲ್ಲಿರುವ ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರಿನಲ್ಲಿ ಮೀನುಗಳು ಓಡಾಡುತ್ತವೆ. ಬೇಸಿಗೆಯಲ್ಲಿ ಎಲ್ಲೆಡೆ ನದಿ, ಹಳ್ಳ, ಕೊಳ್ಳಗಳು ಬತ್ತುತ್ತಿರುವಂತೆಯೇ ಮತ್ಸ್ಯ ತೀರ್ಥ ಹೊಳೆಯಲ್ಲಿಯೂ ನೀರಿನ ಹರಿವು ಕಡಿಮೆಯಾಗುವುದು ಬರುವುದು ಮೀನುಗಳಿಗೆ ಕಂಟಕಪ್ರಾಯವಾಗಿ ಪರಿಣಮಿಸುತ್ತದೆ.
ಈ ಮೀನುಗಳಿಗೆ ಬದುಕಲು ತಂಪಾದ ಶುದ್ಧ ಹರಿಯುವ ನೀರು ಬೇಕಾಗಿದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಮೀನುಗಳಿಗೆ ನೀರಿನ ಕೊರತೆ ಎದುರಾಗುತ್ತದೆ. ಆದರೆ ಈ ವರ್ಷ ಎಲ್ಲೆಡೆ ನೀರಿನ ಅಭಾವ ಸಾಕಷ್ಟುಬೇಗನೇ ಕಂಡು ಬಂದಿರುವುದರಿಂದ ಮತ್ಸ್ಯ ತೀರ್ಥ ನದಿಯ ನೀರು ಕೂಡ ಕಡಿಮೆಯಾಗದಂತೆ ಮೇಲಿರುವ ದೊಡ್ಡ ಅಣೆಕಟ್ಟಿನ ಕೆಳಗೆ ಮತ್ತೊಂದು ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಶೇಖರಿಸಲಾಗುತ್ತದೆ. ಅಲ್ಲದೆ ದೂರದ ದೇವರಗುಂಡಿ ಜಲಪಾತದಿಂದ ಪೈಪ್ ಮೂಲಕ ನೀರನ್ನು ತಂದು ಡ್ಯಾಂಗೆ ಹರಿಸಲಾಗುತ್ತದೆ.
ಜನರು ಅತ್ಯಂತ ಪೂಜ್ಯ ಭಾವದಿಂದ ಕಾಣುವ ಮತ್ತು ಪ್ರಕೃತಿಯ ಅಪರೂಪದ ಸಂಪತ್ತಾದ ಈ ಮಹಶೀರ್ ಮೀನುಗಳನ್ನು ಸಂರಕ್ಷಿಸಲು ದೇವಸ್ಥಾನದ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕಳೆದ ವರ್ಷ ಕಡು ಬೇಸಿಗೆ ಎದುರಾದಾಗಲೂ ಇದೇ ರೀತಿ ದೇವರಗುಂಡಿಯ ನೀರನ್ನು ಪೈಪ್‌ಗಳ ಮೂಲಕ ಹಾಯಿಸಿ ಮೀನುಗಳನ್ನು ಸಂರಕ್ಷಿಸಲಾಗಿತ್ತು.
ಈ ಹಿಂದೆಯೂ ಆತಂಕ ಇತ್ತು:
ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯಿಂದ ದೇವರ ಮೀನುಗಳ ಜೀವಕ್ಕೆ ಕುತ್ತು ಬಂದ ಹಲವು ನಿದರ್ಶನಗಳಿವೆ. 1999 ಮತ್ತು 2003 ರಲ್ಲಿ ಭೀಕರ ಬರಗಾಲ ಅಪ್ಪಳಿಸಿ ನೀರಿನ ಕೊರತೆ ಉಂಟಾಗಿ ಮೀನನ ಸಂತತಿಗೆ ತೀವ್ರ ತೊಂದರೆ ಎದುರಾಗಿತ್ತು. ವಿಶಿಷ್ಟಪ್ರಭೇದದ ಈ ಮೀನು ಒಮ್ಮೆ ನಾಶವಾದರೆ ಮತ್ತೆ ಅವುಗಳು ವೃದ್ಧಿಯಾಗುವುದು ಬಲು ಕಷ್ಟ. ಈ ಮೀನುಗಳಿಗೆ ಬದುಕಲು ಕಲುಷಿತಗೊಳ್ಳದೆ ಹರಿಯುವ ನೀರು ಅತೀ ಅಗತ್ಯ. ಮತ್ಸ್ಯತೀರ್ಥದ ನೀರಿನ ಹರಿವು ಕಡಿಮೆಯಾದಾಗಲೆಲ್ಲ ದೇವರಗುಂಡಿ ಜಲಪಾತದಿಂದ ಪೈಪ್ ಹಾಕಿ ನೀರನ್ನು ಮತ್ಸ್ಯ ತೀರ್ಥಕ್ಕೆ ಹರಿಸಲಾಗುತ್ತದೆ.
ದೇವರ ಮೀನುಗಳು:
ತೊಡಿಕಾನದ ಮಲ್ಲಿಕಾರ್ಜುನ ಕ್ಷೇತ್ರದ ಸಮೀಪದಲ್ಲಿಯೇ ಹರಿಯುವ ಮತ್ಸ್ಯತೀರ್ಥ ನದಿ ಮತ್ತು ಮತ್ಸ್ಯಸಂಕುಲವನ್ನು ಜನರು ಬಲು ಪೂಜನೀಯ ಭಾವದಿಂದ ಕಾಣುತ್ತಾರೆ. ಶಿವಲಿಂಗವನ್ನು ಕಣ್ವ ಮಹರ್ಷಿಗಳು ತೊಡಿಕಾನದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಶಿವನು ಮಹಾವಿಷ್ಣುವನ್ನು ಮತ್ಸ್ಯವಾಹನವನ್ನಾಗಿಸಿ ಅಂತರ್‌ಮಾರ್ಗದಲ್ಲಿ ಧಾವಿಸಿ ಬಂದನು ಎಂಬ ಪ್ರತೀತಿ ಇದೆ. ಹೀಗೆ ಮೀನಾಗಿ ಬಂದ ಮಹಾವಿಷ್ಣು ದೇವಸ್ಥಾನದ ಬಳಿಯ ನದಿಯಲ್ಲಿ ನೆಲೆಸುತ್ತಾನೆ ಎಂಬುದು ನಂಬಿಕೆ. ಆದುದರಿಂದಲೇ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅರ್ಚನೆಯಾದ ನೈವೇದ್ಯವನ್ನು ಮೀನುಗಳಿಗೆ ಅರ್ಪಿಸಲಾಗುತ್ತದೆ. ಭಕ್ತರು ಮೀನುಗಳಿಗೆ ಅಕ್ಕಿ ಹಾಗೂ ಇತರ ಆಹಾರ ಪದಾರ್ಥಗಳನ್ನು ಹಾಕಿ ಕೃತಾರ್ಥರಾಗುತ್ತಾರೆ.