
ಬಸವರಾಜ ಹಿರೇಮಠ
ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ವಿನಯ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದರಿಂದ ಧಾರವಾಡ 71ರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಸಿದ್ಧತೆಯ ಗರಿಗೆದರಿದೆ.
ತಮಗಾಗಿರುವ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ಗೆ ವಿನಯ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರೂ ಮಧ್ಯಂತರ ತಡೆ ಇನ್ನೂ ದೊರೆತಿಲ್ಲ. ಒಂದು ವೇಳೆ ಅಲ್ಲೂ ಅಪರಾಧ ಸಾಬೀತಾದರೆ ಚುನಾವಣಾ ಆಯೋಗ ಮುಂಬರುವ ದಿನಗಳಲ್ಲಿ ಧಾರವಾಡ -71 ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಂಭಾವ್ಯ ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ.
ಜಿಲ್ಲೆಗೆ ವಿನಯ ಕುಲಕರ್ಣಿ ಪ್ರವೇಶ ನಿಷೇಧ ಇದ್ದಾಗ 2023ರ ವಿಧಾನಸಭಾ ಚುನಾವಣೆ ಪ್ರಚಾರವನ್ನು ಮುನ್ನಡೆಸಿ ಚುನಾವಣೆ ಗೆಲ್ಲಿಸಿಕೊಂಡು ಬರುವಲ್ಲಿ ಶಿವಲೀಲಾ ಕುಲಕರ್ಣಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರ ಶಾಸಕರ ಅನುಪಸ್ಥಿತಿ ಮಧ್ಯೆಯೂ ಕ್ಷೇತ್ರವನ್ನು ಗಮನಿಸುವ ಮೂಲಕ, ಪಕ್ಷದ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಅನುಕಂಪದ ಅಲೆಯೂ ಇದ್ದು, ಉಪ ಚುನಾವಣೆ ನಡೆದರೆ, ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಗಳು ದಟ್ಟಿವಾಗಿವೆ ಎಂದು ಪಕ್ಷದ ಸ್ಥಳೀಯ ಮುಖಂಡ ಅರವಿಂದ ಏಗನಗೌಡರ ಮಾಹಿತಿ ನೀಡಿದರು.
ಇದೇ ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್ಸಿನ ಹಿರಿಯ ಮುಖಂಡ ತವನಪ್ಪ ಅಷ್ಟಗಿ ಸಹ ಉತ್ಸುಕರಾಗಿದ್ದು, ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ಉಪ ಚುನಾವಣೆ ಘೋಷಣೆಯಾದರೆ ಖಂಡಿತ ಸ್ಪರ್ಧಿಸುತ್ತೇನೆ ಎಂದು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.
ಏತನ್ಮಧ್ಯೆ, ಬಿಜೆಪಿ ಸಹ ಉಪ ಚುನಾವಣೆಗೆ ತಯಾರಾಗುತ್ತಿದೆ. ಕಾಂಗ್ರೆಸ್ಸಿನಿಂದ ವಿನಯ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬಹುದು ಎಂಬ ಚಿಂತನೆಯಲ್ಲಿ ಮಹಿಳಾ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಶಾಸಕಿಯಾಗಿ ಕ್ಷೇತ್ರಕ್ಕೆ ಮಾಡಿರುವ ಕಾರ್ಯ, ಪಕ್ಷಕ್ಕಾಗಿ ಶ್ರಮಕ್ಕಾಗಿ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಸೀಮಾ ಮಸೂತಿ ಹೇಳುತ್ತಾರೆ. ಅದೇ ರೀತಿ ಸವಿತಾ ಅಮರಶೆಟ್ಟಿ ಸಹ ಆಕಾಂಕ್ಷಿಯಾಗಿದ್ದಾರೆ.
ಸಾಮಾನ್ಯವಾಗಿ ಇಡೀ ಪಕ್ಷವೇ ಉಪಚುನಾವಣೆಗೆ ಹೋರಾಡುವ ಕಾರಣ ಪಕ್ಷವೇ ಮುಖ್ಯ ಎನಿಸುತ್ತದೆಯೇ ಹೊರತು ಸ್ಪರ್ಧಿಸಿರುವ ವ್ಯಕ್ತಿ ನೆಪ ಮಾತ್ರ. ಇಲ್ಲಿ ಅನುಕಂಪ ಸಹ ನಡೆಯೋದಿಲ್ಲ. ಆದ್ದರಿಂದ ಕ್ಷೇತ್ರದ ಶಾಸಕನಾಗಲು ನಾನು ಸಹ ಅರ್ಹನಾಗಿದ್ದೇನೆ ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಹೇಳುತ್ತಾರೆ. ಇನ್ನು, ಕ್ಷೇತ್ರವನ್ನು ಈ ಮೊದಲು ಪ್ರತಿನಿಧಿಸಿದ್ದ ಮಾಜಿ ಶಾಸಕ ಅಮೃತ ದೇಸಾಯಿ ಸ್ಪರ್ಧಿಸಲಿದ್ದಾರೆಯೇ ಎಂಬುದು ಖಚಿತಗೊಂಡಿಲ್ಲ. ಇದರೊಂದಿಗೆ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಶಶಿಮೌಳಿ ಕುಲಕರ್ಣಿ ನನಗೂ ಟಿಕೆಟ್ ಕೊಡಿ ಎಂದು ವರಿಷ್ಠರಿಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಪರಿಸಬಹುದು.
ಕಳೆದ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದು, ಧಾರವಾಡ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೆ, ಅದೇ ಮಾದರಿಯಲ್ಲಿ ಗೆಲ್ಲಿಸಿಕೊಂಡು ಬರಲು ಮುಖ್ಯಮಂತ್ರಿ ಆದಿಯಾಗಿ ಸರ್ಕಾರವೇ ಪಣ ತೊಡಬಹುದು. ಹಾಗೆಯೇ, ತಾನು ಕಳೆದುಕೊಂಡ ಕ್ಷೇತ್ರವನ್ನು ಬಿಜೆಪಿ ಮರಳಿ ಪಡೆಯಲು ಬಿಜೆಪಿ ಭಗೀರಥ ಪ್ರಯತ್ನ ಮಾಡುವುದರಲ್ಲಿ ಸಂಶಯವೇ ಇಲ್ಲ. ಒಟ್ಟಾರೆ, ಉಪ ಚುನಾವಣೆ ಘೋಷಣೆಯಾದರೆ, ಎರಡು ಪಕ್ಷಗಳಿಂದ ತೀವ್ರ ಪೈಪೋಟಿ ಏರ್ಪಡಲಿದ್ದು, 2028ರ ಚುನಾವಣೆಯ ದಿಕ್ಸೂಚಿಯಾಗಿ ಉಪ ಚುನಾವಣೆ ಪರಿಣಮಿಸುವುದು ಮಾತ್ರ ನಿಶ್ಚಿತ ಎನ್ನುವುದು ರಾಜಕೀಯ ವಿಶ್ಲೇಷಣೆ.
ಟಿಕೆಟ್ ಆಕಾಂಕ್ಷಿಗಳು