ಮೂಲ ಕಾವೇರಿ ಒಡಲಲ್ಲೇ ಬರದ ಛಾಯೆ! ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಸಂಕಷ್ಟ

Published : Jun 29, 2026, 09:09 AM IST
Kushala nagar Cauvery

ಸಾರಾಂಶ

ಈ ವರ್ಷ ಕುಶಾಲನಗರ ಭಾಗದಲ್ಲಿ ಮಳೆ ತೀವ್ರವಾಗಿ ಕುಸಿದಿದ್ದು, ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ನೀರಿನ ಹರಿವು ಅತ್ಯಂತ ಕಡಿಮೆಯಾಗಿದ್ದು, ಕೃಷಿ, ಕುಡಿಯುವ ನೀರು ಮತ್ತು ಅಂತರರಾಜ್ಯ ಜಲ ವಿವಾದದ ಆತಂಕವನ್ನು ಸೃಷ್ಟಿಸಿದೆ.

ಕೊಡಗು: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಮಳೆ ಪ್ರಮಾಣ ಭಾರಿ ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿ ತುಂಬಿ ಹರಿದು ಅಪಾಯದ ಮಟ್ಟ ಮೀರಿ ನದಿ ತಟದ ಜನತೆಯಲ್ಲಿ ಪ್ರವಾಹದ ಆತಂಕ ಮೂಡಿಸಿತ್ತು.

ಹಾರಂಗಿ ಜಲಾಶಯ ತುಂಬಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಕಳೆದ ವರ್ಷ ಇದೇ ದಿನ ನದಿಗೆ 5000 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗಿತ್ತು. ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಮೂಲಕ ಇದೇ ಪ್ರಮಾಣದ ನೀರಿನ ಒಳಹರಿವು ಕೂಡ ಕಂಡುಬಂದಿತ್ತು. ಇದೀಗ ಮೂಲ ಕಾವೇರಿ ಒಡಲಲ್ಲಿ ಬರದ ಛಾಯೆ ಎದುರಾಗುತ್ತಿದೆ.

ಹಾರಂಗಿ ಜಲಾಶಯ

ಅಂಕಿ ಅಂಶಗಳ ಪ್ರಕಾರ ಗುರುವಾರ ಸಂಜೆ ವೇಳೆಗೆ ಹಾರಂಗಿ ಜಲಾಶಯಕ್ಕೆ ಕೇವಲ 380 ಕ್ಯೂಸೆಕ್ಸ್ ಪ್ರಮಾಣದ ನೀರಿನ ಒಳಹರಿವು ಗೋಚರಿಸಿದೆ. ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 24 ಅಡಿಗಳಷ್ಟು ನೀರಿನ ಮಟ್ಟ ಇಳಿಕೆ ಕಾಣಬಹುದು. 2859 ಅಡಿಗಳಷ್ಟು ಗರಿಷ್ಠ ನೀರಿನ ಮಟ್ಟ ಹೊಂದಿರುವ ಅಣೆಕಟ್ಟಿನಲ್ಲಿ ಈ ಬಾರಿ 2825.97 ಅಡಿಗಳಷ್ಟು ನೀರಿನ ಮಟ್ಟ ಕಂಡುಬಂದಿದೆ.

ಕುಶಾಲನಗರ ಪ್ರವಾಸಿ ಮಂದಿರದ ಮಳೆ ಮಾಪನದ ದಾಖಲೆಯಂತೆ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಕಳೆದ ಮಳೆಗಾಲ ಅವಧಿಯಲ್ಲಿ 720.6 ಮಿಮಿ ಪ್ರಮಾಣದ ಮಳೆ ಸುರಿದರೆ ಈ ಬಾರಿ ಕೇವಲ 204.2 ಮಿಳಿ ಪ್ರಮಾಣದ ಮಳೆ ಸುರಿದಿದೆ.

ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ಕಳೆದ ವರ್ಷ ಕಾವೇರಿ ಸೇತುವೆಯ ಕೆಳ ಭಾಗದಲ್ಲಿ 7 ಮೀಟರ್ ಎತ್ತರಕ್ಕೆ ಅಪಾಯದ ಮಟ್ಟ ಮೀರಿ ನೀರಿನ ಹರಿವು ನಿರಂತರವಾಗಿ ಕಂಡುಬಂದಿತ್ತು. ಅದೇ ಈ ಬಾರಿ ಕಾವೇರಿ ನದಿಯಲ್ಲಿ ಇನ್ನೂ ಕನಿಷ್ಠ ಒಂದು ಅಡಿಯಷ್ಟು ನೀರಿನ ಹರಿವಿನ ಪ್ರಮಾಣ ಏರಿಕೆ ಆಗದಿರುವ ದೃಶ್ಯ ಭವಿಷ್ಯದ ದಿನಗಳ ಆತಂಕಕ್ಕೆ ಎಡೆ ಮಾಡಿದೆ.

ಕೃಷಿ ಚಟುವಟಿಕೆಗಳಿಗೆ ಸಂಕಷ್ಟ

ಕಾವೇರಿ ನದಿ ಪ್ರದೇಶದ ಜನರಿಗೆ ಕೃಷಿ ಚಟುವಟಿಕೆಗಳಿಗೆ ಕೂಡ ಈ ಬಾರಿ ಸಂಕಷ್ಟ ಎದುರಾಗಿದೆ. ಕೃಷಿ ಭೂಮಿಗಳಿಗೆ ಸ್ಪ್ರಿಂಕ್ಲರ್ ಬಳಸಿ ನೀರು ಹಾಯಿಸುತ್ತಿರುವ ದೃಶ್ಯ ಕಾಣಬಹುದು. ಬೆಂಗಳೂರು ಸೇರಿದಂತೆ ಪ್ರಮುಖ ಪಟ್ಟಣಗಳಿಗೆ ಕಾವೇರಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾದ್ಯತೆ ಅಧಿಕವಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ರಾಜ್ಯಗಳ ನಡುವೆ ನೀರಿನ ಪಾಲಿನ ಕೂಗು ಮತ್ತೆ ಪ್ರತಿಧ್ವನಿಸುವ ಸಾಧ್ಯತೆ ಅಧಿಕವಾಗಿದೆ.

PREV
Read more Articles on
click me!

Recommended Stories

1.75 ಕೋಟಿ ರೂ. ವೆಚ್ಚದಲ್ಲಿ 37 ಕೊಳವೆಬಾವಿ: ಕೋಲಾರಕ್ಕೆ ಕಾಂಗ್ರೆಸ್ ಶಾಸಕರ ಭರವಸೆ
'ಅಂತ್ಯವಾಯ್ತು' ಎಂದವನ ಬದುಕೇ ಅಂತ್ಯ! ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವು