ಹುಬ್ಬಳ್ಳಿಯಲ್ಲಿ ಡಿಜಿಟಲ್‌ ಎಕಾನಮಿ ಮಿಷನ್‌ ಕಚೇರಿ ಆರಂಭ

By Suvarna NewsFirst Published Jul 12, 2021, 10:36 PM IST
Highlights

* ಹುಬ್ಬಳ್ಳಿಯಲ್ಲಿ ಡಿಜಿಟಲ್‌ ಎಕಾನಮಿ ಮಿಷನ್‌ ಕಚೇರಿ ಆರಂಭ
* ಅವಳಿ ನಗರಕ್ಕೆ ಬೃಹತ್‌ ಪ್ರಮಾಣದಲ್ಲಿ ಐಟಿ ವಿಸ್ತರಣೆ / ತಂತ್ರಜ್ಞಾನ-ಆವಿಷ್ಕಾರಕ್ಕೆ ಹೆಚ್ಚು ಒತ್ತು ಎಂದ ಉಪ ಮುಖ್ಯಮಂತ್ರಿ

ಹುಬ್ಬಳ್ಳಿ, (ಜು.12): ಬೆಂಗಳೂರಿನ ನಂತರ ಹುಬ್ಬಳ್ಳಿಯಲ್ಲಿ ಡಿಜಿಟಲ್‌ ಎಕಾನಮಿ ಮಿಷನ್‌ ಕಚೇರಿಯನ್ನು ಸೋಮವಾರ ಉದ್ಘಾಟನೆ ಮಾಡಿದ ಐಟಿ-ಬಿಟಿ ಹಾಗೂ ವಿಜ್ಞಾನ, ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಬಿಯಾಂಡ್‌ ಬೆಂಗಳೂರು ಕಾರ್ಯಕ್ರಮದ ಮೂಲಕ ಈ ಭಾಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಹೆಚ್ಚು ಉತ್ತೇಜನ ನೀಡಲಾಗುವುದು ಎಂದು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಡಿಜಿಟಲ್ ಎಕಾನಮಿ‌ ಮಿಷನ್ ಇಡೀ ದೇಶದಲ್ಲೇ ಅತ್ಯಂತ ಕ್ರಾಂತಿಕಾರಕ ಉಪಕ್ರಮ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಇದನ್ನು ಸ್ಥಾಪನೆ ಮಾಡಲಾಗಿದೆ. ಇದರಲ್ಲಿ ಖಾಸಗಿ ಕ್ಷೇತ್ರದ ಪಾಲು 51% ಮತ್ತು 49% ಸರಕಾರದ ಪಾಲು ಇದೆ. ಸರಕಾರ ಮತ್ತು ಖಾಸಗಿ ಕ್ಷೇತ್ರ ಅತ್ಯಂತ ಪರಿಣಾಮಕಾರಿಯಾಗಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮ ಇದಾಗಿದೆ ಎಂದರು.

ಮಂಗಳೂರು: ದೇಶದ ಮೊದಲ ಹಲಸಿನ ಹಣ್ಣಿನ ಚಾಕ್ಲೇಟ್‌ ಮಾರ್ಕೆಟ್‌ಗೆ..!

ಬೆಂಗಳೂರು ನಗರದ ನಂತರ ಎರಡನೇ ಕಚೇರಿ ಹುಬ್ಬಳ್ಳಿಯಲ್ಲಿ ಆರಂಭ ಆಗುತ್ತಿರುವುದು ಖುಷಿಯ ವಿಚಾರ. ಈ ಭಾಗದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ.  ಬೆಂಗಳೂರು ನಂತರ ದೊಡ್ಡ ಪ್ರಮಾಣದಲ್ಲಿ ಐಟಿ ಕ್ಷೇತ್ರದ ವಿಸ್ತರಣೆಗೆ ನೆರವಾಗುತ್ತಿದೆ ಎಂದು ಡಿಸಿಎಂ ಪ್ರತಿಪಾದಿಸಿದರು. 

ಇಆರ್‌&ಡಿ ಉದ್ದೇಶಕ್ಕೆ 600 ಕೋಟಿ
ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕರ್ನಾಟಕ ಸರಕಾರ ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ (ಇಆರ್‌&ಡಿ) ಯನ್ನು ಸ್ಥಾಪಿಸಿ ಆ ಕ್ಷೇತ್ರದ ಅಗತ್ಯಕ್ಕಾಗಿ 600 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಜಾಗತಿಕ ಟೆಂಡ್‌ಗಳನ್ನು ಗಮನಿಸುತ್ತಾ ರಾಜ್ಯವು ಕಾಲಕಾಲಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಅಪ್‌ಡೇಟ್‌ ಆಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ಉಳಿದಂತೆ ಜೈವಿಕ ತಂತ್ರಜ್ಞಾನದ ಮೂಲಕ ವ್ಯವಸಾಯದಲ್ಲಿ ದೊಡ್ಡ ಬದಲಾವಣೆಗಳನ್ನು ತರಲಾಗುತ್ತಿದೆ. ಜತೆಗೆ, ಬೆಂಗಳೂರು ಟೆಕ್ ಸಮಿಟ್ ಮುಂಬರುವ ನವೆಂಬರ್‌ನಲ್ಲಿ ನಡೆಯಲಿದೆ. ಅದಕ್ಕೆ ಮೊದಲೇ ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ಮತ್ತು ಮೈಸೂರು ನಗರಗಳಲ್ಲಿ ಟೆಕ್‌ ಸಮಿಟ್‌ ಪೂರ್ವಭಾವಿ ಶೃಂಗಸಭೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ವೇಳೆ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಅಲ್ಲಿನ ಕಾರ್ಯವೈಖರಿ, ಯೋಜನೆ-ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

click me!