ರೇಷನ್‌ ಕಾರ್ಡ್‌ಗೆ ಉಚಿತ ಅಕ್ಕಿ ಬದಲು ಇನ್ನು ಡಿಜಿಟಲ್‌ ಕರೆನ್ಸಿ, ಭಾರೀ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ

Published : Nov 27, 2026, 03:40 PM IST
Ration Card  and Fair Price Shop

ಸಾರಾಂಶ

ಕೇಂದ್ರ ಸರ್ಕಾರ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಚಿಂತಿಸಿದ್ದು, ಉಚಿತ ಅಕ್ಕಿ ಬದಲಿಗೆ ಡಿಜಿಟಲ್ ಕರೆನ್ಸಿ ನೀಡುವ ಪ್ರಸ್ತಾವನೆ ಮುಂದಿಟ್ಟಿದೆ. ಈ ಹೊಸ ವ್ಯವಸ್ಥೆಯಿಂದ ಫಲಾನುಭವಿಗಳು ಕ್ಯೂಆರ್ ಕೋಡ್ ಬಳಸಿ ತಮಗೆ ಬೇಕಾದಷ್ಟು ಅಕ್ಕಿ ಖರೀದಿಸಬಹುದು.

ಬೆಂಗಳೂರು (ನ.27): ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ರೇಷನ್ ಕಾರ್ಡ್‌ದಾರರಿಗೆ ಉಚಿತ ಅಕ್ಕಿ ಬದಲಾಗಿ ಡಿಜಿಟಲ್ ಕರೆನ್ಸಿ (Digital currency) ನೀಡುವ ಪ್ರಸ್ತಾವನೆ ಇದ್ದು, ಡಿಜಿಟಲ್ ವಾಲೆಟ್ ಮೂಲಕ ಫಲಾನುಭವಿಗಳ ಮೊಬೈಲ್‌ಗೆ ಹಣ ವರ್ಗಾವಣೆ ಮಾಡುವ ಯೋಜನೆಯ ಕುರಿತು ಪರಿಶೀಲನೆ ನಡೆಯುತ್ತಿದೆ.

ಕೇಂದ್ರದ ಪಾಲಿನ ಅಕ್ಕಿಗೆ ಬದಲಾಗಿ ಡಿಜಿಟಲ್ ಕರೆನ್ಸಿ ನೀಡುವ ಈ ಯೋಜನೆಯು ಜಾರಿಯಾದರೆ ಆಹಾರ ವಿತರಣಾ ವ್ಯವಸ್ಥೆಯಲ್ಲಿ ದೊಡ್ಡ ಪರಿವರ್ತನೆ ಉಂಟಾಗಲಿದೆ. ಕರ್ನಾಟಕದಲ್ಲಿ ಪ್ರಸ್ತುತ ಅಂತ್ಯೋದಯ ಕಾರ್ಡ್‌ದಾರರಿಗೆ ತಿಂಗಳಿಗೆ 35 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಇನ್ನು ಬಿಪಿಎಲ್ (BPL) ಕಾರ್ಡ್‌ದಾರರಿಗೆ ಕೇಂದ್ರದ 5 ಕೆ.ಜಿ. ಹಾಗೂ ರಾಜ್ಯದ 5 ಕೆ.ಜಿ. ಸೇರಿ ಒಟ್ಟು 10 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದೆ.

ಡಿಜಿಟಲ್ ವಾಲೆಟ್ ಮತ್ತು ಕ್ಯೂಆರ್ ಕೋಡ್ ಖರೀದಿ ವ್ಯವಸ್ಥೆ ಹೇಗಿರುತ್ತದೆ?

ಪ್ರಸ್ತಾವಿತ ವ್ಯವಸ್ಥೆಯ ಪ್ರಕಾರ, ಫಲಾನುಭವಿಗಳಿಗೆ ಆರ್ಥಿಕ ಮತ್ತು ಖರೀದಿ ಸ್ವಾತಂತ್ರ್ಯ ನೀಡುವ ಹಲವು ಅಂಶಗಳನ್ನು ಸೇರಿಸಲಾಗಿದೆ. ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಮ್ (OMSS) ದರದ ಆಧಾರದಲ್ಲಿ ಅಕ್ಕಿಯ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಇದರನ್ವಯ ಪ್ರತಿ ಕೆ.ಜಿ. ಅಕ್ಕಿಗೆ ಅಂದಾಜು ₹40ರಿಂದ ₹45ರಂತೆ ಡಿಜಿಟಲ್ ಮೊತ್ತವನ್ನು ವರ್ಗಾವಣೆ ಮಾಡುವ ಸಾಧ್ಯತೆಯಿದೆ. ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ (Fair price shops) ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಅಕ್ಕಿ ಖರೀದಿಸಲು ಅವಕಾಶ ಕಲ್ಪಿಸಲಾಗುತ್ತದೆ. ತಮಗೆ ಎಷ್ಟು ಅಕ್ಕಿ ಬೇಕಾಗುತ್ತದೆಯೋ ಅಷ್ಟನ್ನೇ ಖರೀದಿಸಿ, ಉಳಿದ ಮೊತ್ತವನ್ನು ತಮ್ಮ ಡಿಜಿಟಲ್ ವಾಲೆಟ್‌ನಲ್ಲಿ ಉಳಿಸಿಕೊಳ್ಳಬಹುದು. ಈ ಡಿಜಿಟಲ್ ಕರೆನ್ಸಿಗೆ 3ರಿಂದ 6 ತಿಂಗಳ ಕಾಲಮಿತಿ ಇರಲಿದೆ ಎಂದು ವರದಿಯಾಗಿದೆ.

ಕಾಳಸಂತೆ ಮಾರಾಟ ಮತ್ತು ತೂಕದ ಮೋಸಕ್ಕೆ ಕಡಿವಾಣ ಹಾಕುವ ಗುರಿ

ಪಡಿತರ ವ್ಯವಸ್ಥೆಯಲ್ಲಿನ ಸೋರಿಕೆ ಮತ್ತು ಅಕ್ರಮಗಳನ್ನು ತಡೆಗಟ್ಟುವುದೇ ಈ ಡಿಜಿಟಲ್ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ. ನಕಲಿ ಪಡಿತರ ಚೀಟಿಗಳು ಹಾಗೂ ಪಡಿತರ ಅಕ್ಕಿಯ ಕಾಳಸಂತೆ (Black market) ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಚಿಂತನೆ ನಡೆದಿದೆ. ತೂಕದಲ್ಲಿ ನಡೆಯುವ ಮೋಸ ಹಾಗೂ ಪಡಿತರ ದುರ್ಬಳಕೆಯನ್ನು ತಡೆಯಲು ಡಿಜಿಟಲ್ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ರಾಜ್ಯದ ಆಹಾರ ವಿತರಣಾ ವ್ಯಾಪ್ತಿಯ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1.24 ಕೋಟಿ ಪಡಿತರ ಚೀಟಿಗಳು ಇದ್ದು, ರಾಜ್ಯದಲ್ಲಿ 4.46 ಕೋಟಿಗೂ ಹೆಚ್ಚು ಪಡಿತರ ಫಲಾನುಭವಿಗಳು ಇದ್ದಾರೆ.

PREV
Read more Articles on
click me!

Recommended Stories

ನಾವು ಓದುತ್ತಿರುವ ಸಂವಿಧಾನ ಪೀಠಿಕೆ ಅಂಬೇಡ್ಕರ್ ಬರೆದಿದ್ದಾ? ಇಂದಿರಾಗಾಂಧಿ ಬರೆಸಿದ್ದಾ? ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಸಿಂಹ ವಾಗ್ದಾಳಿ
ಮಂಗಳೂರಿನಲ್ಲಿ ಡಿ. 30ರಂದು ಬೃಹತ್‌ ಉದ್ಯೋಗ ಮೇಳ, 200ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುವ ನಿರೀಕ್ಷೆ