
ಬೆಂಗಳೂರಿನ ಕೆಂಗೇರಿಯ ಪೆಟ್ರೋಲ್ ಬಂಕ್‌ನಲ್ಲಿ ಪಾಲುದಾರಿಕೆ ನೀಡುವುದಾಗಿ ಆಮಿಷ ಒಡ್ಡಿ ತುಮಕೂರಿನ ವ್ಯಕ್ತಿಯೊಬ್ಬರಿಂದ ₹1.5 ಕೋಟಿ ಹಣ ಮತ್ತು 100 ಗ್ರಾಂ ಚಿನ್ನ ಪಡೆದು ವಂಚಿಸಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತುಮಕೂರು ನಗರದ ಹೊಸ ಬಡಾವಣೆ ಪೊಲೀಸರು ಮೂವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ತುಮಕೂರು ಮೂಲದ ಪ್ರಭು ಎಂಬುವವರು ತಮ್ಮ ಮಗ ಮತ್ತು ಸೊಸೆಯ ಸಾಫ್ಟ್‌ವೇರ್ ಎಂಜಿನಿಯರಿಂಗ್ ಹಿನ್ನೆಲೆಯಿಂದಾಗಿ ಉದ್ಯಮದಲ್ಲಿ ಬಂಡವಾಳ ಹೂಡುವ ಚಿಂತನೆ ನಡೆಸಿದ್ದರು. ಈ ವೇಳೆ, 2026ರ ಮೇ ತಿಂಗಳಲ್ಲಿ ಮಧ್ಯವರ್ತಿಗಳ ಮೂಲಕ ಪ್ರಭು ಅವರಿಗೆ ಪರಿಚಯವಾದ ಆರೋಪಿಗಳು, ಬೆಂಗಳೂರಿನ ಕೆಂಗೇರಿಯಲ್ಲಿರುವ ನಯರಾ ಪೆಟ್ರೋಲ್ ಬಂಕ್‌ನಲ್ಲಿ ₹2 ಕೋಟಿಗೆ ಪಾಲುದಾರಿಕೆ ಕೊಡಿಸುವುದಾಗಿ ನಂಬಿಸಿದ್ದರು.
ಲಾಭದ ಆಮಿಷ: ಹೂಡಿಕೆ ಮಾಡಿದರೆ ಪ್ರತಿ ತಿಂಗಳ ಲಾಭಾಂಶದಲ್ಲಿ ಶೇ. 30ರಷ್ಟು ಹಣ ಬರುತ್ತದೆ ಎಂದು ಮಧ್ಯವರ್ತಿಗಳು ಆಸೆ ಹುಟ್ಟಿಸಿದ್ದರು.
ದಾಖಲೆ ಮತ್ತು ಒಪ್ಪಂದ: ಮಧ್ಯವರ್ತಿಗಳ ಮಾತು ನಂಬಿ ಪೆಟ್ರೋಲ್ ಬಂಕ್ ಪಾಲುದಾರರಾದ ಯಶವಂತ್ ಸಿಂಗ್ ಮತ್ತು ಆತನ ಪತ್ನಿ ವೀಣಾ ಅವರನ್ನು ಪ್ರಭು ಭೇಟಿಯಾಗಿದ್ದರು. ಬಂಕ್‌ನ ಒಟ್ಟು ಶೇ. 100ರ ಪಾಲುದಾರಿಕೆಯಲ್ಲಿ ತಮ್ಮದು ಶೇ. 70ರಷ್ಟು ಪಾಲಿದ್ದು, ಉಳಿದ ಶೇ. 30ರಷ್ಟು ಪಾಲುದಾರಿಕೆ ನೀಡುವುದಾಗಿ ದಂಪತಿ ತಿಳಿಸಿದ್ದರು. ನಂಬಿಕೆ ಬರಿಸಲು ದಾಖಲೆ ತೋರಿಸುವುದು, ಆಡಿಟರ್ ಜತೆ ಚರ್ಚೆ, ಪೆಟ್ರೋಲ್ ಬಂಕ್ ಭೇಟಿ ಹಾಗೂ ಒಪ್ಪಂದ ಪತ್ರವನ್ನೂ ಮಾಡಿಸಿದ್ದರು.
ಹಣ ಮತ್ತು ಚಿನ್ನ ವರ್ಗಾವಣೆ: ಇದನ್ನು ನಂಬಿದ ಪ್ರಭು, ಮೊದಲು 100 ಗ್ರಾಂ ಚಿನ್ನ ನೀಡಿ, ಬಳಿಕ ಹಂತ ಹಂತವಾಗಿ ₹1.5 ಕೋಟಿ ಹಣವನ್ನು ಬ್ಯಾಂಕ್‌ನ ಆರ್‌ಟಿಜಿಎಸ್ (RTGS) ಮೂಲಕ ವರ್ಗಾಯಿಸಿದ್ದರು.
ಗೊಂದಲ ಮತ್ತು ಬೆದರಿಕೆ: ನಂತರ ಅಶೋಕ್ ಎಂಬುವವರು ಈ ಹಿಂದೆ ಶೇ. 30ರಷ್ಟು ಪಾಲುದಾರರಾಗಿದ್ದರು ಮತ್ತು ಈಗ ನೀವು ಆ ಜಾಗದಲ್ಲಿ ಭಾಗಿಯಾಗಿದ್ದೀರಿ ಎಂದು ವೀಣಾ ದಂಪತಿ ಹೇಳಿದ್ದು ಪ್ರಭು ಅವರಲ್ಲಿ ಗೊಂದಲ ಮೂಡಿಸಿತ್ತು. ಜತೆಗೆ, ಪ್ರತಿ ತಿಂಗಳು ನೀಡಬೇಕಿದ್ದ ಲಾಭಾಂಶದ ಬದಲಿಗೆ ಕೇವಲ ₹4.50 ಲಕ್ಷ ನೀಡಿ ವಂಚಿಸಿದ್ದಾರೆ. ಈ ಕುರಿತು ಪ್ರಶ್ನಿಸಿದಾಗ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಕಿಂಗ್‌ಪಿನ್ ಎನ್ನಲಾದ ಯಶವಂತ್ ಸಿಂಗ್ ನಾಪತ್ತೆಯಾಗಿದ್ದು, ಆತನ ಪತ್ನಿ ವೀಣಾ, ಮಗ ನಮಿತ್ ಸಿಂಗ್ ಹಾಗೂ ಮಧ್ಯವರ್ತಿಗಳಾದ ಉಮಾಪತಿ ಮತ್ತು ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಮೂವರನ್ನು ತುಮಕೂರು ನಗರದ ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ತನಿಖೆ ವೇಳೆ ಆರ್.ಸಿ. ಜಯರಾಂ, ವಿಜಯಲಕ್ಷ್ಮಿ, ಭಗವಾನ್, ಶಿವಣ್ಣ ಮತ್ತು ಸಿದ್ದಲಿಂಗಯ್ಯ ಎಂಬುವವರಿಗೂ ಇದೇ ಕುಟುಂಬ ವಂಚಿಸಿರುವುದು ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿರುವುದು ಗೊತ್ತಾಗಿದೆ. ಅಲ್ಲದೆ, ವೀಣಾ ವಿರುದ್ಧ ಬೆಂಗಳೂರಿನ ಕಾಡುಗೊಂಡನಹಳ್ಳಿ, ಸುಬ್ರಹ್ಮಣ್ಯಪುರ, ಬಸವೇಶ್ವರ ನಗರ ಮತ್ತು ಸುಬ್ರಹ್ಮಣ್ಯ ನಗರ ಠಾಣೆಗಳಲ್ಲಿ ವಿವಿಧ ಬಗೆಯ ವಂಚನೆ ಪ್ರಕರಣಗಳು ಇರುವುದು ಪತ್ತೆಯಾಗಿದೆ.
ಮೇಲ್ನೋಟಕ್ಕೆ ಪೆಟ್ರೋಲ್ ಬಂಕ್‌ಗೆ ನಾಲ್ವರು ಪಾಲುದಾರರಿದ್ದು, ಅದರಲ್ಲಿ ವೀಣಾ ಕೂಡ ಒಬ್ಬರಾಗಿದ್ದಾರೆ. ಆದರೆ, ತಾವೇ ಸಂಪೂರ್ಣ ಮಾಲೀಕರೆಂದು ಹೇಳಿಕೊಂಡು ಪಾಲುದಾರಿಕೆ ನೆಪದಲ್ಲಿ ಹಲವರಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದ್ದು, ಹೊಸ ಬಡಾವಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.