ಬತ್ತಿದ ಜಲಮೂಲ, ಧಾರವಾಡ ಜಿಲ್ಲೆಯ 15 ಹಳ್ಳಿಗೆ ನೀರಿನ ಬರ; ಗ್ರಾಮಗಳ ಸಂಖ್ಯೆ ಹೆಚ್ಚಾಗುವ ಆತಂಕ

Published : Apr 22, 2026, 07:32 AM IST
Dharwad

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೇಸಿಗೆಯ ತಾಪಮಾನದಿಂದಾಗಿ 15 ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೆರೆಗಳು ಮತ್ತು ಬೋರ್‌ವೆಲ್‌ಗಳು ಬತ್ತುತ್ತಿರುವುದರಿಂದ, ಜಿಲ್ಲಾಡಳಿತವು ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಬೇಸಿಗೆಯ ಬೇಗೆಯಿಂದ ಕುಡಿಯುವ ನೀರಿನ ತತ್ವಾರ ಶುರುವಾಗಿದ್ದು ಸದ್ಯ ಧಾರವಾಡ ಜಿಲ್ಲೆಯ 15 ಹಳ್ಳಿಗಳಲ್ಲಿ ಸಮಸ್ಯೆ ತಲೆದೋರಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಳ್ಳಿಗಳ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಾಗುವ ಆತಂಕ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಬೋರ್‌ವೆಲ್‌ ಗುರುತಿಸಿದ್ದು ಅಗತ್ಯ ಬಿದ್ದರೆ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಕಳೆದ 10 ವರ್ಷಗಳಲ್ಲೇ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಬಿಸಿಲು ಪ್ರಮಾಣ ಏರಿಕೆಯಾಗಿದೆ. 2016ರಲ್ಲಿ 40-41 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಉಳಿದಂತೆ 37-38ರ ಆಸುಪಾಸಿನಲ್ಲೇ ಇತ್ತು. ಆದರೆ, ಈ ವರ್ಷ ಈಗಲೇ 38ರಿಂದ 39 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಇದರಿಂದ ಕೆರೆ, ಹಳ್ಳ-ಕೊಳ್ಳ ಬತ್ತಿ ಜನ- ಜಾನುವಾರು ನೀರಿಗಾಗಿ ಪರಿತಪಿಸುವಂತೆ ಆಗಿದೆ. ಪ್ರಾಣಿ-ಪಕ್ಷಿ ನೀರಿಗಾಗಿ ಹಪಹಪಿಸಿದರೆ, ರಸ್ತೆ ಬದಿ ನೆಟ್ಟ ಗಿಡ ಒಣಗುತ್ತಿವೆ. ಅಂತರ್ಜಲಮಟ್ಟ ಕುಸಿಯುತ್ತಿದ್ದು ಬೋರ್‌ವೆಲ್‌ ಬತ್ತುತ್ತಿವೆ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ.

ಜಿಲ್ಲೆಯಲ್ಲಿರುವ ಕೆರೆಗಳೆಷ್ಟು?

ಜಿಲ್ಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ, ವಿವಿಧ ಪಟ್ಟಣ, ಗ್ರಾಮ ಸೇರಿ 1000ಕ್ಕೂ ಅಧಿಕ ಕೆರೆಗಳಿದ್ದು 150-200 ಕೆರೆ ನೀರನ್ನು ಕುಡಿಯಲು ಬಳಸಲಾಗುತ್ತಿದೆ.

ಜಿಲ್ಲೆಯಲ್ಲಿ 370ಕ್ಕೂ ಹೆಚ್ಚು ಗ್ರಾಮಗಳಿದ್ದು 90ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಲಕ್ಷಣಗಳಿವೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಸದ್ಯ 15 ಗ್ರಾಮಗಳಲ್ಲಿ 15 ದಿನದಿಂದ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದ್ದು ಆಡಳಿತ ಯಂತ್ರ ನೀರೊದಗಿಸಲು ಹರಸಾಹಸ ಪಡುತ್ತಿದೆ.

ಯಾವ್ಯಾವ ಗ್ರಾಮ?

ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಗೂರ, ಮುಗದ, ಮನಗುಂಡಿ, ಹುಬ್ಬಳ್ಳಿ ತಾಲೂಕಿನ ಅದರಗುಂಚಿ, ಕುರಡಿಕೇರಿ, ನೂಲ್ವಿ, ಛಬ್ಬಿ, ಕಲಘಟಗಿ ತಾಲೂಕಿನ ನೆಲಹರವಿ, ಬಿ. ಹೂಲಿಕಟ್ಟಿ, ದ್ಯಾಮನಕೊಂಡ, ಮುಕ್ಕಲ, ಹಿರೇಹುಣಸಿಕಟ್ಟಿ, ಕೂಡಲಗಿ ಸೇರಿ 15 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕ್ಕೇರಿದೆ. ಈ ಮೊದಲು ಕೆರೆಯಲ್ಲಿ ಸಂಗ್ರಹಗೊಂಡಿರುವ ನೀರನ್ನು ಶುದ್ಧೀಕರಿಸಿ ಮನೆ-ಮನೆಗೆ ಸರಬರಾಜು ಮಾಡಲಾಗುತ್ತಿತ್ತು. ಇದೀಗ ಕೆರೆ ಬತ್ತಿದ ಪರಿಣಾಮ ಸ್ಥಳೀಯ ಆಡಳಿತ ವರ್ಷಕ್ಕೆ ₹ 12000 ಬಾಡಿಗೆ ನೀಡಿ ಖಾಸಗಿ ಬೋರ್‌ವೆಲ್‌ನಿಂದ ನೀರು ಪಡೆದು ಶುದ್ಧೀಕರಿಸಿ ಜನರಿಗೆ ನೀಡುತ್ತಿದ್ದರೂ ದಾಹ ಮಾತ್ರ ನೀಗುತ್ತಿಲ್ಲ. ಇನ್ನು 90 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು ಮುನ್ನಚ್ಚರಿಕಾ ಕ್ರಮವಾಗಿ 180 ಖಾಸಗಿ ಬೋರ್‌ವೆಲ್‌ ಗುರುತಿಸಲಾಗಿದೆ. ಅಗತ್ಯ ಬಿದ್ದರೆ ಈ ಬೋರ್‌ವೆಲ್‌ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ.

ಇದನ್ನೂ ಓದಿ: 37 ವರ್ಷದ ಮಹಿಳೆ 22ರ ಯುವಕನ ಪ್ರೀತಿಸಿ ಮದುವೆ, 14 ವರ್ಷದ ಮಗನನ್ನು ಬಿಟ್ಟು ಬಂದವಳಿಗೆ ಜೀವ ಬೆದರಿಕೆ, ಪೊಲೀಸ್ ರಕ್ಷಣೆ ಕೋರಿದ ಜೋಡಿ!

ಒಟ್ಟಿನಲ್ಲಿ ಏರುತ್ತಿರುವ ತಾಪಮಾನದಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು ಅಧಿಕಾರಿಗಳ ನಿದ್ದೆಗೆಡಿಸಿದೆ. ತಕ್ಷಣ ಮಳೆಯಾಗಿ ಕೆರೆಗಳು ಭರ್ತಿಯಾದರೆ ನೀರಿನ ತಾಪತ್ರಯ ತಪ್ಪುತ್ತದೆ ಎನ್ನುತ್ತಿದ್ದಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ 90 ಗ್ರಾಮಗಳನ್ನು ಗುರುತಿಸಿದ್ದು ಸದ್ಯಕ್ಕೆ 15 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ. ಇಲ್ಲಿ 17 ಬೋರ್‌ವೆಲ್‌ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಧಾರವಾಡ ಜಿ.ಪಂ.ನ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ್ ಪಾಟೀಲ್ ಹೇಳುತ್ತಾರೆ.

ಇದನ್ನೂ ಓದಿ: ತಂದೆ, ತಾಯಿಗೆ ನಾನು ಒಳ್ಳೆ ಮಗ ಆಗಲಿಲ್ಲ, ಈಗ ಹೆಸರು ಗಳಿಸಲೂ ಆಗುತ್ತಿಲ್ಲ: ನಲಪಾಡ್‌

PREV
Read more Articles on
click me!

Recommended Stories

ಸಿಎಂ ಈಗ ಕಾಂಪ್ರಮೈಸ್ ರಾಜಕಾರಣ ಮಾಡುತ್ತಿದ್ದಾರೆ: ಸಿದ್ದರಾಮಯ್ಯರ ರಾಜಕೀಯದ ಅನಿವಾರ್ಯತೆ ಬಗ್ಗೆ ಜಾರಕಿಹೊಳಿ ಹೇಳಿದ್ದೇನು?
1 Year After Pahalgam Terror Attack : ಪಹಲ್ಗಾಂ ಆಘಾತದಿಂದ ಇನ್ನೂಹೊರಬರದ ಮಂಜುನಾಥ್‌ ಕುಟುಂಬ, ಪತ್ನಿ ಪಲ್ಲವಿ ಈಗ ಹೇಗಿದ್ದಾರೆ?