
ಬೆಂಗಳೂರು (ಆ.03): ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ (Dharwad Assembly Constituency) ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಬಹುದೊಡ್ಡ ಕಾನೂನು ಸಮಾಧಾನ ದೊರಕಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (High Court of Karnataka) ತಡೆ ನೀಡಿದ ಹಿನ್ನೆಲೆಯಲ್ಲಿ, ಅವರ ಶಾಸಕತ್ವದ ಅನರ್ಹತೆಯನ್ನು (Disqualification) ಹಿಂಪಡೆದು ಕರ್ನಾಟಕ ವಿಧಾನಸಭೆ ಸಚಿವಾಲಯ ಅಧಿಕೃತ ಅಧಿಸೂಚನೆ (Notification) ಹೊರಡಿಸಿದೆ.
ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಕುರಿತ ವಿಶೇಷ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರದ ಮೇಲೆ, ಭಾರತೀಯ ಸಂವಿಧಾನದ ವಿಧಿ 191(1)(e) ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರ ಅಡಿಯಲ್ಲಿ (Representation of the People Act, 1951) ಮೇ 02ರಂದು ವಿನಯ್ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ವಿಧಾನಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು.
ವಿಚಾರಣಾ ನ್ಯಾಯಾಲಯದ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ (CRL.A-764/2026) ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು ಜುಲೈ 31ರಂದು ಕೆಳನ್ಯಾಯಾಲಯದ ಶಿಕ್ಷೆಯ ಆದೇಶಕ್ಕೆ ತಡೆ ನೀಡಿದೆ (Stay Order).
ಹೈಕೋರ್ಟ್ ನೀಡಿರುವ ತಡೆಜ್ಞೆಯ ಆದೇಶವನ್ನು ಆಧರಿಸಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ (M.K. Vishalakshi) ಅವರು ಆಗಸ್ಟ್ 03ರಂದು ನೂತನ ಅಧಿಸೂಚನೆ ಹೊರಡಿಸಿದ್ದಾರೆ. 'ಹೈಕೋರ್ಟ್ ನೀಡಿರುವ ತಡೆಜ್ಞೆಯ ಆದೇಶದ ಹಿನ್ನೆಲೆಯಲ್ಲಿ, ವಿನಯ್ ಕುಲಕರ್ಣಿ ಅವರ ಅನರ್ಹತೆಯ ಅಧಿಸೂಚನೆಯು ತಕ್ಷಣದಿಂದ ಜಾರಿಗೆ ಬರುವಂತೆ ರದ್ದಾಗಿದೆ. ನ್ಯಾಯಾಂಗದ ಮುಂದಿನ ತೀರ್ಪುಗಳಿಗೆ ಒಳಪಟ್ಟು ಅವರ ಶಾಸಕತ್ವವನ್ನು ಮರುಸ್ಥಾಪಿಸಲಾಗಿದೆ' ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಮೂಲಕ ವಿನಯ್ ಕುಲಕರ್ಣಿ ಅವರು ಧಾರವಾಡ ಕ್ಷೇತ್ರದ ಶಾಸಕರಾಗಿ ತಮ್ಮ ಅಧಿಕೃತ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಹಸಿರು ನಿಶಾನೆ ಸಿಕ್ಕಂತಾಗಿದೆ. ವಿಧಾನಸಭೆ ಸಚಿವಾಲಯದ ಈ ಆದೇಶದ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗ (Election Commission of India) ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೂ (CEO) ರವಾನಿಸಲಾಗಿದೆ.