
ಬೆಂಗಳೂರು (ಆ.3): ರಾಜಧಾನಿ ಬೆಂಗಳೂರಿನ ಕೆಂಗೇರಿ ಸಮೀಪವಿರುವ ಅಂದಾಜು 30,000 ಕೋಟಿ ರೂಪಾಯಿ ಮೌಲ್ಯದ 530ಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ಕಬಳಿಸಲು ನಡೆಸಿದ್ದ ಭಾರೀ ಸಂಚನ್ನು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಭೇದಿಸಿದ್ದಾರೆ. ಈ ಭೂಮಿಯ ಮೇಲಿನ ಹಕ್ಕಿನ ಪ್ರತಿಪಾದನೆಯನ್ನು ವಜಾಗೊಳಿಸಿರುವ ತಹಸೀಲ್ದಾರ್, ಇದು ನಕಲಿ ದಾಖಲೆಗಳನ್ನು ಬಳಸಿ ನಡೆಸಲಾದ ಸಂಘಟಿತ ಕೃತ್ಯ ಎಂದು ಆದೇಶಿಸಿದ್ದಾರೆ. 1935ರಲ್ಲಿ ಮೈಸೂರಿನ ಅಂದಿನ ಸರ್ಕಾರವು 'ರಾಜ್ಯ ಅರಣ್ಯ' ಎಂದು ಅಧಿಸೂಚನೆ ಹೊರಡಿಸಿದ್ದ 'ಬಿ.ಎಂ ಕಾವಲ್' (BM Kaval) ಅರಣ್ಯ ಭೂಮಿಯ ಒಂದು ಭಾಗವನ್ನು ಖರೀದಿಸಲು ಹೂಡಿಕೆದಾರರೊಬ್ಬರು ಮುಂದಾಗಿದ್ದರು. ಈ ವೇಳೆ ಅವರು ಜಮೀನಿನ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದಾಗ, 2025ರ ನವೆಂಬರ್‌ನಲ್ಲಿ ಅರಣ್ಯ ಇಲಾಖೆಗೆ ಈ ಕಬಳಿಕೆಯ ಯತ್ನದ ಸುಳಿವು ಸಿಕ್ಕಿತ್ತು.
ಸದರಿ ಜಮೀನು 'ಎಂ.ಬಿ. ನೇಮಣ್ಣ ಗೌಡ' ಎಂಬುವವರಿಗೆ ಸೇರಿದ್ದು ಎಂದು ಪ್ರತಿಪಾದಿಸುವ ಹೈಕೋರ್ಟ್ ಆದೇಶದ ಪ್ರತಿಯೊಂದನ್ನು ಜಮೀನು ಖರೀದಿಸಲು ಬಂದಿದ್ದ ವ್ಯಕ್ತಿ ಒದಗಿಸಿದ್ದ. ಆದರೆ, ರಾಜ್ಯ ಸರ್ಕಾರ ಸಲ್ಲಿಸಿದ್ದ ರಿಟ್ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, "ನೇಮಣ್ಣ ಗೌಡ ಅವರ ಅರ್ಜಿಯನ್ನು/ಹಕ್ಕನ್ನು ಕೇವಲ ಪರಿಶೀಲಿಸುವಂತೆ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆಯೇ ಹೊರತು ಭೂಮಿ ಅವರದ್ದೆಂದು ಘೋಷಿಸಿಲ್ಲ" ಎಂದು ಸ್ಪಷ್ಟಪಡಿಸಿತ್ತು.
ನೇಮಣ್ಣ ಗೌಡ ಅವರು ತಾವು ಸಲ್ಲಿಸಿದ್ದ ಅರ್ಜಿಯಲ್ಲಿ, "ಇನಾಂ ರದ್ದತಿ ಕಾಯ್ದೆಯಡಿ ಹಾಸನ ವಿಭಾಗದ ವಿಶೇಷ ಉಪವಿಭಾಗಾಧಿಕಾರಿಗಳು (Special DC for Inam Abolition) 1973ರ ಡಿಸೆಂಬರ್‌ನಲ್ಲಿ ತಮಗೆ ದಕ್ಷಿಣ ಬೆಂಗಳೂರಿನ ಬಿ.ಎಂ. ಕಾವಲ್ ಅರಣ್ಯದ 516 ಎಕರೆ 35 ಗುಂಟೆ ಸೇರಿದಂತೆ ಒಟ್ಟು 532 ಎಕರೆ 15 ಗುಂಟೆ ಜಮೀನನ್ನು ಮಂಜೂರು ಮಾಡಿದ್ದಾರೆ" ಎಂದು ವಾದಿಸಿದ್ದರು.
ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಅಶ್ವಿನಿ ಜಿ. ಅವರು, ನೇಮಣ್ಣ ಗೌಡಗೆ ತಮ್ಮ ವಾದ ಮಂಡಿಸಲು ಹಲವು ಅವಕಾಶಗಳನ್ನು ನೀಡಿದರೂ, ಅವರು ಖುದ್ದಾಗಿ ಹಾಜರಾಗಲಿಲ್ಲ ಅಥವಾ ತಮ್ಮ ಪರ ವಕೀಲರನ್ನೂ ಕಳುಹಿಸಲಿಲ್ಲ. ಅಂತಿಮವಾಗಿ ಜುಲೈ 21ರಂದು ಆದೇಶ ಹೊರಡಿಸಿದ ತಹಸೀಲ್ದಾರ್, 10ಕ್ಕೂ ಹೆಚ್ಚು ಪ್ರಬಲ ಕಾರಣಗಳನ್ನು ನೀಡಿ ಅವರ ಅರ್ಜಿಯನ್ನು ವಜಾಗೊಳಿಸಿದರು.
ಇನ್ನು ತಹಶೀಲ್ದಾರ್ ನೀಡಿರುವ ಕಾರಣಗಳ ಪೈಕಿ, ಸದರಿ ಜಮೀನಿಗೆ ಸಂಬಂಧಿಸಿದಂತೆ ನೇಮಣ್ಣ ಗೌಡ ಅವರ ಹೆಸರಿನಲ್ಲಿ ಪಹಣಿ (RTC) ಸೇರಿದಂತೆ ಯಾವುದೇ ಕಂದಾಯ ದಾಖಲೆಗಳು ಲಭ್ಯವಿಲ್ಲ. ಹಾಸನ ಮತ್ತು ಬೆಂಗಳೂರು ನಗರ ಜಿಲ್ಲೆಯ ಉಪವಿಭಾಗಾಧಿಕಾರಿಗಳು 1973ರಲ್ಲಿ ಇಂತಹ ಯಾವುದೇ ಜಮೀನು ಮಂಜೂರಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಹಾಸನ ವಿಭಾಗದ ವಿಶೇಷ ಉಪವಿಭಾಗಾಧಿಕಾರಿಗೆ ಬೆಂಗಳೂರಿನಲ್ಲಿರುವ ಜಮೀನನ್ನು ಮಂಜೂರು ಮಾಡುವ ಯಾವುದೇ ಅಧಿಕಾರ ವ್ಯಾಪ್ತಿಯೂ ಇಲ್ಲ.
ಮೈಸೂರು ಅರಣ್ಯ ನಿಯಮಾವಳಿ 1900ರ ಸೆಕ್ಷನ್ 30 ಅಥವಾ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 28ರ ಅಡಿಯಲ್ಲಿ ಬಿ.ಎಂ. ಕಾವಲ್ ಅರಣ್ಯ ಭೂಮಿಯನ್ನು ಎಂದಿಗೂ ಅರಣ್ಯೇತರ ಭೂಮಿಯನ್ನಾಗಿ (De-notified) ಮಾರ್ಪಡಿಸಿಲ್ಲ. ಅರಣ್ಯ ಎಂದು ಅಧಿಸೂಚನೆಯಾದ ಜಮೀನನ್ನು ಅಧಿಕೃತವಾಗಿ ಡಿ-ನೋಟಿಫೈ ಮಾಡದೆ ಬೇರೆ ಉದ್ದೇಶಕ್ಕೆ ಬಳಸಲು ಬರುವುದಿಲ್ಲ. ನೇಮಣ್ಣ ಗೌಡ ಅವರು ಬಿ.ಎಂ. ಕಾವಲ್ ಅನ್ನು 'ಜೋಡಿ ಗ್ರಾಮ' (ಜೋಡಿದಾರರಿಗೆ ಬಳುವಳಿಯಾಗಿ ನೀಡಿದ ಹಳ್ಳಿ) ಎಂದು ಬಿಂಬಿಸಲು ನಕಲಿ ದಾಖಲೆ ಸೃಷ್ಟಿಸಿದ್ದರು.
ನೇಮಣ್ಣ ಗೌಡ ಅವರು ಸಲ್ಲಿಕೆ ಮಾಡಿದ್ದ ಬೆಂಗಳೂರು ಡಿಸಿ ಹೊರಡಿಸಿದ್ದಾರೆ ಎನ್ನಲಾದ ದಿನಾಂಕವಿಲ್ಲದ ಪತ್ರ, 1983ರ ಕಂದಾಯ ಇಲಾಖೆಯ ಪತ್ರ, 1984ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಂದಾಯ ಇಲಾಖೆಗೆ ಬರೆದಿದ್ದಾರೆ ಎನ್ನಲಾದ ಪತ್ರ ಹಾಗೂ ಸರ್ವೇ ಸ್ಕೆಚ್‌ಗಳು ಸೇರಿದಂತೆ ಪ್ರತಿಯೊಂದು ದಾಖಲೆಯೂ ನಕಲಿ ಮತ್ತು ಕಲ್ಪಿತ ಎಂದು ತಹಸೀಲ್ದಾರ್ ಆದೇಶದಲ್ಲಿ ತಿಳಿಸಿದ್ದಾರೆ. "ಅರಣ್ಯ ಭೂಮಿಯನ್ನು ಕಬಳಿಸುವ ಏಕೈಕ ಉದ್ದೇಶದಿಂದ ಈ ಎಲ್ಲಾ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಲಾಗಿದೆ" ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಅರಣ್ಯ ಭೂಮಿ ಕಬಳಿಸಲು ಯತ್ನಿಸಿದ ನೇಮಣ್ಣ ಗೌಡ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂಬ ಅರಣ್ಯ ಇಲಾಖೆಯ ವಾದವನ್ನು ತಹಸೀಲ್ದಾರ್ ಆದೇಶದಲ್ಲಿ ಪುರಸ್ಕರಿಸಿದ್ದಾರೆ. ಆದರೆ, ನಕಲಿ ದಾಖಲೆ ಸೃಷ್ಟಿಸಿದ ಸಂಬಂಧ ಕಂದಾಯ ಇಲಾಖೆಯು ಪ್ರತ್ಯೇಕ ದೂರು ದಾಖಲಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಶೇಷವೆಂದರೆ, ಈ ನೇಮಣ್ಣ ಗೌಡ ಎಂಬುವವರು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿವಿಧ ಅರ್ಜಿಗಳನ್ನು ಸಲ್ಲಿಸಿ ಸುಮಾರು 21,000 ಎಕರೆ ಜಮೀನಿನ ಮಾಲೀಕತ್ವ ತನಗೇ ಸೇರಿದ್ದು ಎಂದು ಪ್ರತಿಪಾದಿಸುತ್ತಿದ್ದಾರೆ! ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ 512 ಎಕರೆ ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿದ ಆರೋಪದ ಮೇಲೆಯೂ ಅರಣ್ಯ ಇಲಾಖೆ ಇವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿದೆ.