BCM: ಅಧಿಕಾರಿ ಕೇವಲ ಮುಖವಾಡವಾ? ಒಬ್ಬ ತಾಲೂಕು ಅಧಿಕಾರಿಗೆ ಇಷ್ಟೊಂದು ಧೈರ್ಯ ಬರಲು ಹೇಗೆ ಸಾಧ್ಯ? ವಿದ್ಯಾರ್ಥಿನಿಯರು ಬಯಲಿಗೆಳೆದ ಧಾರವಾಡ ಹಾಸ್ಟೆಲ್ ಹಗರಣ!

Published : Sep 04, 2026, 05:56 PM IST
Vinay Kulkarni.jpg

ಸಾರಾಂಶ

ಧಾರವಾಡದ ಬಿಸಿಎಂ ಹಾಸ್ಟೆಲ್‌ನಲ್ಲಿ ಲಂಚ ಪಡೆದು ಸೀಟು ಹಂಚಿಕೆ ಮಾಡುತ್ತಿದ್ದ ಹಗರಣವನ್ನು ವಿದ್ಯಾರ್ಥಿನಿಯರೇ ವಿಡಿಯೋ ಸಮೇತ ಬಯಲಿಗೆಳೆದಿದ್ದಾರೆ. ಶಾಸಕ ವಿನಯ್ ಕುಲಕರ್ಣಿ ಮಧ್ಯಪ್ರವೇಶಿಸಿ ಅಧಿಕಾರಿಯನ್ನು ಅಮಾನತುಗೊಳಿಸಲು ಸೂಚಿಸಿದ್ದು, ಈ ಭ್ರಷ್ಟಾಚಾರದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದೆ.

ಧಾರವಾಡ; ವಿದ್ಯಾಕಾಶಿ ಧಾರವಾಡದ ನೆಲದಲ್ಲಿ ಇವತ್ತು ಬಡ ತಂದೆ-ತಾಯಂದಿರ ಕಣ್ಣೀರು ಮತ್ತು ಹಳ್ಳಿಯ ಹೆಣ್ಣುಮಕ್ಕಳ ಆಕ್ರೋಶದ ಶಾಪ ಏಕಕಾಲಕ್ಕೆ ಮೊಳಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ಹಾಸ್ಟೆಲ್‌ನಲ್ಲಿ ನಡೆದ ಲಂಚಾವತಾರದ ಕರಾಳ ದಂಧೆ ಇಡೀ ವ್ಯವಸ್ಥೆಯ ಅಸಲಿ ಮುಖವಾಡವನ್ನು ಕಳಚಿ ಬೆತ್ತಲಾಗಿಸಿದೆ. ಶೇ. 90ಕ್ಕೂ ಹೆಚ್ಚು ಅಂಕ ಪಡೆದು, ತಲೆಯಲ್ಲೊಂದು ಜ್ಞಾನದ ಜ್ಯೋತಿ ಹೊತ್ತು ಬಂದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ಸಿಗುತ್ತಿಲ್ಲ. ಆದರೆ, ಶೇ. 70ರಷ್ಟು ಅಂಕ ಗಳಿಸಿದರೂ ಕಂತೆ ಕಂತೆ ಲಂಚದ ಹಣ ಎಸೆದವರಿಗೆ ಮಾತ್ರ ಹಾಸ್ಟೆಲ್‌ನ ರೂಮುಗಳು ರಾಜಾತಿಥ್ಯ ನೀಡುತ್ತಿವೆ. ಈ ಮಹಾವಂಚನೆಯನ್ನು ಹೆಣ್ಣುಮಕ್ಕಳೇ ರಹಸ್ಯ ಕಾರ್ಯಾಚರಣೆಯ ಮೂಲಕ ವಿಡಿಯೋ ಸಮೇತ ಬಯಲಿಗೆಳೆದಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಧಾರವಾಡ ತಾಪಂನಲ್ಲಿ ಅಧಿಕಾರಿಗಳ ಸಭೆ!

ಧಾರವಾಡ ತಾಲೂಕು ಪಂಚಾಯತಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಎಂದಿನಂತೆ ಅಧಿಕಾರಿಗಳ ಬೂಟಾಟಿಕೆಯ ವರದಿಗಳೊಂದಿಗೆ ಸಾಗುತ್ತಿತ್ತು. ಆದರೆ, ಸಭೆಯ ಒಳಗೆ ಹತ್ತಾರು ಬಡ ವಿದ್ಯಾರ್ಥಿನಿಯರು ನೇರವಾಗಿ ನುಗ್ಗಿದಾಗ ಇಡೀ ಸನ್ನಿವೇಶದ ಗಾಂಭೀರ್ಯವೇ ಬದಲಾಯಿತು. ವಿದ್ಯಾರ್ಥಿನಿಯರು ತಮ್ಮ ಮೊಬೈಲ್‌ನಲ್ಲಿದ್ದ ವಿಡಿಯೋ ಸಾಕ್ಷಿಯನ್ನು ಶಾಸಕರ ಮುಂದಿಟ್ಟು, ನಮಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಧ್ವನಿ ಎತ್ತಿದರು. ಬಿಸಿಎಂ ತಾಲೂಕಾ ಅಧಿಕಾರಿ ಕೇಸರಿ ಎಂಬಾತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳಿಂದಲೇ ನೇರವಾಗಿ ಹಣ ಪಡೆಯುತ್ತಿದ್ದ ದೃಶ್ಯ ಆ ವಿಡಿಯೋದಲ್ಲಿತ್ತು.

ಗರಂ ಆದ ಶಾಸಕ!

ಇದನ್ನು ನೋಡುತ್ತಿದ್ದಂತೆ ತೀವ್ರವಾಗಿ ಗರಂ ಆದ ಶಾಸಕ ವಿನಯ್ ಕುಲಕರ್ಣಿ, ನನ್ನ ಕ್ಷೇತ್ರದಲ್ಲೇ, ನನ್ನ ಮಾತೇ ನಡೆಯದಂತೆ ಹಣ ಪಡೆದು ಹಾಸ್ಟೆಲ್ ಕೊಡ್ತೀರಾ? 90% ಬಂದವನಿಗೆ ಸಿಗದ ಹಾಸ್ಟೆಲ್ 70% ಬಂದವನಿಗೆ ಹೇಗೆ ಸಿಕ್ತು? ಎಂದು ಸಾಮಾನ್ಯವಾಗಿ ಗದರಿದ್ದಾರೆ. ಅಷ್ಟೇ ಅಲ್ಲದೆ, ಧಾರವಾಡ ಗ್ರಾಮೀಣ ಭಾಗದಲ್ಲಿ ಬಡವರಿಂದ 20 ಸಾವಿರ ಅಲ್ಲ, 50 ಸಾವಿರ ರೂಪಾಯಿ ವರೆಗೂ ಲಂಚ ಕೀಳಲಾಗುತ್ತಿದೆ ಎಂದು ಸ್ವತಃ ಶಾಸಕರೇ ಹೇಳುತ್ತಿರುವುದು ಶೋಚನೀಯ ಸ್ಥಿತಿ. ಕೂಡಲೇ ಭ್ರಷ್ಟ ಅಧಿಕಾರಿ ಕೇಸರಿಯನ್ನು ಅಮಾನತು ಮಾಡುವಂತೆ ಸ್ಥಳದಲ್ಲೇ ಜಿಲ್ಲಾ ಪಂಚಾಯತಿ ಸಿಇಓಗೆ ಕಡಕ್ ಸೂಚನೆ ನೀಡಿದರು. ಆದರೆ ಇವತ್ತು ಇಡೀ ರಾಜ್ಯ ಕೇಳಬೇಕಾದ ಅತ್ಯಂತ ಗಂಭೀರ ಹಾಗೂ ವಿಶ್ಲೇಷಣಾತ್ಮಕ ಪ್ರಶ್ನೆ ಏನು? ಎಂದು ನೋಡೋಣ ಬನ್ನಿ.

ಕೇಳಬೇಕಾದ ಪ್ರಶ್ನೆ ಏನು?

ಕೇವಲ ಒಬ್ಬ ತಾಲೂಕು ಅಧಿಕಾರಿಗೆ ಇಷ್ಟೊಂದು ದೊಡ್ಡ ಧೈರ್ಯ ಬರಲು ಹೇಗೆ ಸಾಧ್ಯ? ಸಿಸಿಟಿವಿಗಳಿರುವ ಕಾಲದಲ್ಲಿ, ಮೊಬೈಲ್ ಕ್ಯಾಮೆರಾಗಳ ಕಣ್ಗಾವಲಿರುವ ಜಗತ್ತಿನಲ್ಲಿ ಬಡ ಹೆಣ್ಣುಮಕ್ಕಳಿಂದ ಬಹಿರಂಗವಾಗಿ ಸಾವಿರಾರು ರೂಪಾಯಿ ಲಂಚ ಕೀಳಲು ಕೇವಲ ಒಬ್ಬ ತಾಲೂಕು ಅಧಿಕಾರಿ ಸಿದ್ಧನಾಗುತ್ತಾನೆ ಎಂದರೆ, ಅವನ ಬೆನ್ನ ಹಿಂದೆ ಇರುವ ಆ ಕರಾಳ ಶಕ್ತಿ ಯಾವುದು? ಖಂಡಿತವಾಗಿಯೂ ಈ ಅಧಿಕಾರಿ ಕೇವಲ ಒಂದು ಮುಖವಾಡ ಅಷ್ಟೇ ಅನಿಸುತ್ತೆ ಅಲ್ವಾ? ಈತ ವಸೂಲಿ ಮಾಡುವ ಲಂಚದ ಕಂತೆಗಳು ಕೇವಲ ಇವನ ಜೇಬು ಸೇರುತ್ತಿಲ್ಲ, ಇದರ ದೊಡ್ಡ ಪಾಲು ಮೇಲಧಿಕಾರಿಗಳಿಗೆ ಹಾಗೂ ಇವರನ್ನು ವರ್ಗಾವಣೆ ಮಾಡಿಸುವ ರಾಜಕೀಯ ಶಕ್ತಿಗಳಿಗೂ ತಲುಪುತ್ತಿರುತ್ತದೆಯಾ ಎನ್ನುವ ಪ್ರಶ್ನೆ ಎಲ್ಲೆಡೆ ಮೂಡುತ್ತಿದೆ.

ಸಸ್ಪೆಂಡ್‌ ಕಣ್ಣೊರೆಸುವ ತಂತ್ರವೆ?

ಇವತ್ತು ಇವನ ಬಾಯಿ ಮುಚ್ಚಿಸಲು ಸಸ್ಪೆಂಡ್ ಎಂಬ ನಾಟಕವಾಡಲಾಗಿದೆ. ಕೆಲವೇ ತಿಂಗಳುಗಳಲ್ಲಿ ಇವನು ಮತ್ಯಾರದ್ದೋ ಕಾಲು ಹಿಡಿದು, ಮತ್ತೊಂದು ಕಡೆಗೆ ಪೋಸ್ಟಿಂಗ್ ಪಡೆದು ವಾಪಸ್ ಬರುತ್ತಾನೆ. ಮತ್ತೆ ಬಂದು ಬಡವರನ್ನು ಲೂಟಿ ಮಾಡುತ್ತಾನೆ. ಧಾರವಾಡದ ಹಾಸ್ಟೆಲ್‌ಗಳಲ್ಲಿ ಇಂತಹ ಅನ್ಯಾಯಗಳು ಇದೇ ಮೊದಲೇನಲ್ಲ. ಈ ಹಿಂದೆ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ತಮಗೆ ದಿನನಿತ್ಯ ಕೊಡುವ ಊಟದಲ್ಲಿ ಕನಿಷ್ಠ ಮಟ್ಟದ ತರಕಾರಿ ಇಲ್ಲ, ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ಬೀದಿಗಿಳಿದು ಹೋರಾಟ ಮಾಡಿದ್ದರು. ಬಡ ಮಕ್ಕಳ ಹೊಟ್ಟೆಗೆ ಹಾಕುವ ಬೇಳೆ, ತರಕಾರಿಯ ಹಣದಲ್ಲೂ ಕಮಿಷನ್ ತಿನ್ನುವ ಭ್ರಷ್ಟರು ತುಂಬಿಹೋಗಿದ್ದಾರೆ. ಗ್ರೌಂಡ್ ಲೆವೆಲ್‌ನಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ.

ನೆನಪಾಗುತ್ತಾರೆ ಅರಸರು!

ಇವತ್ತು ನಮಗೆ ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನೆನಪಾಗುತ್ತಾರೆ. ಹಳ್ಳಿಯ ಬಡವನ ಮಗನೂ ಪಟ್ಟಣಕ್ಕೆ ಬಂದು ಗೌರವದಿಂದ ಓದಲಿ ಎಂಬುದು ಅವರ ಕನಸಾಗಿತ್ತು. ಆದರೆ ಇವತ್ತಿನ ಭ್ರಷ್ಟರು ಆ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ಕೂಲಿ-ನಾಲಿ ಮಾಡಿ ಬದುಕುವ ಬಡ ತಂದೆ ತನ್ನ ಮಗಳ ಓದಿಗೆ 50 ಸಾವಿರ ಲಂಚ ಎಲ್ಲಿಂದ ತರಬೇಕು? ಅವರಿಗೂ ಒಂದು ಬದುಕಿದೆ, ಅದನ್ನು ನೀವು ಕಣ್ಣು ಬಿಟ್ಟು ನೋಡಬೇಕಿದೆ. ಈ ವಿದ್ಯಾರ್ಥಿನಿಯರ ಶಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ. ಕೇವಲ ಸಸ್ಪೆಂಡ್ ಶಿಕ್ಷೆಯಲ್ಲ, ಇದು ಇಲಾಖೆಯ ತನಿಖೆಯಿಂದ ತಪ್ಪಿಸಿಕೊಳ್ಳುವ ದಾರಿ. ಇಡೀ ಜಿಲ್ಲೆಯ ಹಾಸ್ಟೆಲ್ ದಂಧೆಯ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು. ಶಿಕ್ಷಣ ಬಡವನ ಭಿಕ್ಷೆಯಲ್ಲ, ಅದು ಅವನ ಹಕ್ಕು.

PREV
Read more Articles on
click me!

Recommended Stories

ಬೆಂಗಳೂರಿನ ದಾಹ ತೀರಿಸಲು ಭೂಮಿಯೊಳಗೆ ಇಳಿಯಲಿದೆ 18.45 ಕೋಟಿ ಲೀಟರ್ ಮಳೆನೀರು, ಹೇಗೆ ಗೊತ್ತಾ?
ಮೈಸೂರು-ಅಜ್ಮೀರ್ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಕೊಟ್ಟೂರು ಮೂಲಕ ಈ ಹೊಸ ಎಕ್ಸ್‌ಪ್ರೆಸ್ ರೈಲು!