ಧಾರವಾಡದಲ್ಲಿ ಬಾಲ ಮತ್ತು ಕಿಶೋರ್ ಕಾರ್ಮಿಕರ ಪತ್ತೆಗಾಗಿ ವಿಕ್ಷಣ ದಳಗಳನ್ನು ರಚಿಸಿಕೊಂಡು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಎಫ್.ಐ.ಆರ್.ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೂಚನೆ ನೀಡಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಫೆ.16): ಜಿಲ್ಲೆಯಲ್ಲಿ ಬಾಲ ಮತ್ತು ಕಿಶೋರ್ ಕಾರ್ಮಿಕರ ಪತ್ತೆಗಾಗಿ ವಿಕ್ಷಣ ದಳಗಳನ್ನು ರಚಿಸಿಕೊಂಡು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಎಫ್.ಐ.ಆರ್.ದಾಖಲಿಸಬೇಕು ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೂಚನೆ ನೀಡಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಧಾರವಾಡ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಮಾಡಬೇಕು.ಲ ಶಾಲಾ ಶಿಕ್ಷಣ ಮತ್ತು ಸುಧಾರಣೆ ಇಲಾಖೆ ಸಮೀಕ್ಷೆಯಲ್ಲಿ ಕಂಡು ಬಂದ ಮಕ್ಕಳ ಬಗ್ಗೆ ಪರಿಶೀಲನೆ ಮಾಡಿ, ಅವರನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳುವಳಿಕೆ ನೀಡಬೇಕು ಎಂದು ಅವರು ಹೇಳಿದರು.
ಮುಂದಿನ ಎರಡು ವಾರಗಳಲ್ಲಿ ಈಗಾಗಲೇ ಪತ್ತೆ ಆಗಿರುವ ಪ್ರಕರಣಗಳ ಕುರಿತು ವಿವರ ವರದಿಯನ್ನು ಸಲ್ಲಿಸಬೇಕು. ಪ್ರತಿ ಮಗು ಶಾಲೆಗೆ ಹೋಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು ಬೇಕರಿ, ಹೋಟೆಲ್, ಬಾರ್, ಇಟ್ಟಂಗಿ ಭಟ್ಟಿಗಳಲ್ಲಿ ನಿರಂತರವಾಗಿ ಪರಿಶೀಲನೆ ಮಾಡಿ, ಮಾಲೀಕರಿಗೆ ಎಚ್ಚರಿಕೆ ಕೊಡಿ, ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಪೋಲಿಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರತಿ ತಿಂಗಳು ರಾಷ್ಟ್ರೀಯ ಬಾಲ ಕಾರ್ಮಿಕ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ವರದಿ ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅವರು ತಿಳಿಸಿದರು . ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ಬಾಲ ಮತ್ತು ಕಿಶೋರ್ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ಚುನಾವಣೆಯಲ್ಲಿ ಮಕ್ಕಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಅನೇಕರು ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ, ಬ್ಯಾನರ್, ಬಟಿಂಗ್ ಕಟ್ಟಲು, ಕರಪತ್ರ ಹಂಚಲು ಬಳಕೆ ಮಾಡುತ್ತಾರೆ. ಈ ಕುರಿತು ಮಕ್ಕಳಿಗೆ, ಪಾಲಕರಿಗೆ ತಿಳುವಳಿಕೆ ಮೂಡಿಸಿ. ಯಾವುದೇ ರೀತಿಯಿಂದ ಮಕ್ಕಳು ಚುನಾವಣೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿಗಾವಹಿಸಬೇಕು. ಇಂತಹ ಪ್ರಕರಣ ಆಗದಂತೆ ಸಂಬಂಧಿಸಿದ ಕಾರ್ಮಿಕ ಹಾಗೂ ಇತರ ಅಧಿಕಾರಿಗಳನ್ನು ಜವಾಬ್ದಾರಿ ವಹಿಸಬೇಕು. ತಪ್ಪು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳನ್ನು ಜವಾಬ್ದರರನ್ನಾಗಿ ಮಾಡಿ, ಸೂಕ್ತ ಕ್ರಮಕ್ಕಾಗಿ ಶಿಪಾರಸ್ಸು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಬಾಲ್ಯ ವಿವಾಹವಾದವರನ್ನು ಬಂಧಿಸಿದ್ದಕ್ಕೆ ಅಸ್ಸಾಂ ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಗ್ರಾಮ ಮಟ್ಟದ ಮಕ್ಕಳು, ಮಕ್ಕಳ ಗ್ರಾಮಸಭೆಗಳಲ್ಲಿ ತಪ್ಪದೆ ಭಾಗವಹಿಸುವಂತೆ ಮಾಡಬೇಕು. ಈ ಕುರಿತು ಜಿಲ್ಲಾ ಪಂಚಾಯತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಗ್ರಾಮೀಣ ಮಕ್ಕಳಲ್ಲಿ ಅವರ ಹಕ್ಕು, ಬೇಡಿಕೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಿಇಓ ಅವರು ತಿಳಿಸಿದರು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಸಂಗಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಬಾಲ ಕಾರ್ಮಿಕ ಸಂಘದ ರೀನಿವಲ್, ಉಳಿದ ಅನುದಾನ ಬಳಕೆ, ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಗಳ ಕುರಿತು ಸಭೆಯಲ್ಲಿ ವಿವರಿಸಿದರು.
ರಾಯಚೂರಲ್ಲಿ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ..!
ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘದ ಜಿಲ್ಲಾ ನಿರ್ದೇಶಕ ಬಸವರಾಜ ಪಂಚಾಕ್ಷರಿಮಠ ಸ್ವಾಗತಿಸಿ, ಸಭೆ ನಿರ್ವಹಿಸಿದರು ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಾರಿಕಾಂಬಾ ಹುಲಕೋಟಿ, ಉಪ ಪೊಲೀಸ್ ಅಧೀಕ್ಷಕ ಎಸ್.ಎಸ್.ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಎಚ್.ಕುಕನೂರ, ಮಹಾನಗರ ಪೊಲೀಸ್ ಆಯುಕ್ತರ ಕಚೇರಿಯ ಎಸಿಪಿ ಬಿ.ಎನ್. ಹುಲ್ಲಣ್ಣವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸರೋಜಿನಿ ಹಳಕಟ್ಟಿ, ಹೆಸ್ಕಾಂ ಧಾರವಾಡ ನಗರ ಕಾರ್ಯಪಾಲಕ ಅಭಿಯಂತರ ಎಂ.ಎಂ.ನದಾಫ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ರಜನಿ ಹಿರೇಮಠ, ಅಶೋಕ ಒಡೆಯರ, ಸಂಗೀತಾ ಬೆನಕನಕೊಪ್ಪ, ಅಕ್ರಮ ಅಲ್ಲಾಪುರ, ಲತಾ ಮಲ್ಲಾಪುರ, ಭುವನೇಶ್ವರಿ ಕೊಟಿಮಠ, ಶಿಂದಿಹಟ್ಟಿ ಸೇರಿದಂತೆ ಮಹಾನಗರ ಪಾಲಿಕೆ, ಲೋಕೋಪಯೋಗಿ ಹಾಗೂ ಇತರರ ಇಲಾಖೆ ಅಧಿಕಾರಿಗಳು ಇದ್ದರು ಸಭೆ ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಇಓ ಡಾ.ಸುರೇಶ ಇಟ್ನಾಳ, ಕಾರ್ಮಿಕ ಆಯುಕ್ತೆ ಶ್ವೇತಾ ಸಂಗಮ ಹಾಗೂ ಅಧಿಕಾರಿಗಳು ಬಾಲ ಕಾರ್ಮಿಕ ಜಾಗೃತಿ ಬ್ಯಾನರ್ ಹಾಗೂ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು.