ಧಾರವಾಡದಲ್ಲಿ ಯುಗಾದಿ ದಿನವೇ ರಕ್ತಪಾತ: ಆಸ್ತಿಗಾಗಿ ಒಡ ಹುಟ್ಟಿದ ತಂಗಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಅಣ್ಣ!

Published : Mar 19, 2026, 06:14 PM IST
Dharawad Crime

ಸಾರಾಂಶ

ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತನ್ನ ತಂಗಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಜಮೀನಿನಲ್ಲಿ ಪಾಲು ಕೇಳಿದ್ದಕ್ಕೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಧಾರವಾಡ (ಮಾ.19): ಹೊಸ ವರ್ಷದ ಸಂಭ್ರಮ ತರಬೇಕಿದ್ದ ಯುಗಾದಿ ಹಬ್ಬದ ದಿನವೇ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಭೀಕರ ರಕ್ತಪಾತ ನಡೆದಿದೆ. ಕೇವಲ ಆಸ್ತಿ ಆಸೆಗಾಗಿ ಅಣ್ಣನೇ ತನ್ನ ಒಡಹುಟ್ಟಿದ ತಂಗಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಕೊಲೆಯಾದ ದುರ್ದೈವಿಯನ್ನು ಶಿವಲೀಲಾ ಸಂಗೊಳ್ಳಿ (35) ಎಂದು ಗುರುತಿಸಲಾಗಿದೆ. ಅಮ್ಮಿನಬಾವಿಯ ಹಣಮಂತ ಎಲೆವಾಳ ಎಂಬಾತನೇ ತನ್ನ ತಂಗಿಯನ್ನ ಕೊಂದ ಆರೋಪಿ. ಎಲೆವಾಳ ಕುಟುಂಬವು ಗ್ರಾಮದಲ್ಲಿ ಒಟ್ಟು ಆರು ಎಕರೆ ಕೃಷಿ ಭೂಮಿಯನ್ನು ಹೊಂದಿತ್ತು. ಈ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಶಿವಲೀಲಾ ಕಳೆದ ಕೆಲವು ದಿನಗಳಿಂದ ಪಟ್ಟು ಹಿಡಿದಿದ್ದರು.

ಯುಗಾದಿ ಶುಭ ದಿನವಾದ ಇಂದು, ಜಮೀನಿನಲ್ಲಿ ಭೂಮಿ ಪೂಜೆ ಮಾಡಲು ಅಣ್ಣ-ತಂಗಿ ಇಬ್ಬರೂ ಹೊಲಕ್ಕೆ ತೆರಳಿದ್ದರು. ಈ ವೇಳೆ ಶಿವಲೀಲಾ ಅವರು "ಇಂದೇ ನನ್ನ ಪಾಲಿನ ಭೂಮಿಯಲ್ಲಿ ಪೂಜೆ ಮಾಡುತ್ತೇನೆ" ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಅಣ್ಣ-ತಂಗಿಯ ನಡುವೆ ಭೀಕರ ವಾಗ್ವಾದ ನಡೆದಿದೆ.

ವಿಕೋಪಕ್ಕೆ ತಿರುಗಿದ ಜಗಳ, ಹರಿದ ನೆತ್ತರು

ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಆಕ್ರೋಶಗೊಂಡ ಅಣ್ಣ ಹಣಮಂತ, ತನ್ನ ಬಳಿಯಿದ್ದ ಮಾರಕಾಸ್ತ್ರಗಳಿಂದ ತಂಗಿಯ ಮೇಲೆ ದಾಳಿ ಮಾಡಿದ್ದಾನೆ. ಶಿವಲೀಲಾ ಅವರನ್ನು ಬರ್ಬರವಾಗಿ ಕೊಚ್ಚಿ ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ. ಹಬ್ಬದ ದಿನವೇ ಭೂಮಿ ಪೂಜೆ ಮಾಡಬೇಕಿದ್ದ ಜಮೀನಿನಲ್ಲಿ ಅಣ್ಣನ ಕ್ರೌರ್ಯಕ್ಕೆ ತಂಗಿಯ ನೆತ್ತರು ಹರಿದಿದೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಹಣಮಂತ ಎಲೆವಾಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

PREV
Read more Articles on
click me!

Recommended Stories

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟ ಜನರನ್ನ ಶಿವನ ಪಾದ ಸೇರಿಸುತ್ತಾ BMTC? ಒಬ್ಬರಿಗೆ ಎಣ್ಣೆಕಿಕ್, ಮತ್ತೊಬ್ಬರಿಗೆ ಪಿಟ್ಸ್!
ಸರ್ಕಾರ ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುತ್ತಿದೆ: ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ