ದಾವಣಗೆರೆ ದಕ್ಷಿಣ ಉಪಚುನಾವಣೆ 'ಬಿಜೆಪಿಯ ಮಾಸ್ಟರ್ ಪ್ಲಾನ್'ಗೆ ಕಾಂಗ್ರೆಸ್ ಕಂಗಾಲು; ಕೈ ಪಾಳಯದಲ್ಲೂ ಅಹಿಂದ ಜಪ!

Published : Mar 19, 2026, 02:17 PM IST
Davanagere South BJP Candidate Srinivas Dasa Kariyappa

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯಲ್ಲಿ, ಬಿಜೆಪಿ ಸಾಮಾನ್ಯ ಕ್ಷೇತ್ರದಲ್ಲಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದೆ. ಈ ನಡೆಯಿಂದಾಗಿ, ಲಿಂಗಾಯತ ಅಥವಾ ಮುಸ್ಲಿಂ ಅಭ್ಯರ್ಥಿಯನ್ನು ನಿರೀಕ್ಷಿಸುತ್ತಿದ್ದ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.

ದಾವಣಗೆರೆ (ಮಾ.19): ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾರಕಕ್ಕೇರಿದೆ. ಇದು ಸಾಮಾನ್ಯ ಕ್ಷೇತ್ರವಾಗಿದ್ದರೂ ಇಲ್ಲಿ ಬಿಜೆಪಿ ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಅಥವಾ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ಕೊಡಬೇಕು ಎನ್ನುತ್ತಿದ್ದ ಕಾಂಗ್ರೆಸ್ ಪಾಳಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಮತ್ತು ಗೊಂದಲಗಳಿಗೆ ಕಾರಣವಾಗಿದೆ.

ಬಿಜೆಪಿಯ ಎಸ್‌ಟಿ ಅಸ್ತ್ರ ಮತ್ತು ಜಾತಿ ಸಮೀಕರಣ:

ದಾವಣಗೆರೆ ದಕ್ಷಿಣದಲ್ಲಿ ಕೇಸರಿ ಪಡೆ ಈ ಬಾರಿ ಅತ್ಯಂತ ಚಾಣಾಕ್ಷ ನಡೆ ಇಟ್ಟಿದೆ. ಹತ್ತು ಹಲವು ಲೆಕ್ಕಾಚಾರಗಳನ್ನು ಹಾಕಿರುವ ಬಿಜೆಪಿ ಹೈಕಮಾಂಡ್, ಸಾಮಾನ್ಯ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯದ ಶ್ರೀನಿವಾಸ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ನಿರಂತರವಾಗಿ ಸೋಲುತ್ತಿರುವ ಅಭ್ಯರ್ಥಿಗಳನ್ನು ಬದಲಿಸಿ, 'ಗೆಲ್ಲುವುದೊಂದೇ ಮಾನದಂಡ' ಎಂಬ ಸೂತ್ರದಡಿ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ.

ಶ್ರೀನಿವಾಸ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷದೊಳಗಿನ ಬಣ ರಾಜಕಾರಣಕ್ಕೆ ಬ್ರೇಕ್ ಹಾಕಲು ಬಿಜೆಪಿ ಮುಂದಾಗಿದೆ. ದಾವಣಗೆರೆಯ ಸ್ಥಳೀಯ ಎರಡು ಬಣಗಳ ನಾಯಕರೊಂದಿಗೂ ಆತ್ಮೀಯತೆ ಹೊಂದಿರುವ ಇವರು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬಲ್ಲರು ಎಂಬುದು ಪಕ್ಷದ ನಂಬಿಕೆ. ಅಲ್ಲದೆ, ಬಾಗಲಕೋಟೆ ಮತ್ತು ವಿಧಾನಪರಿಷತ್‌ನ 3 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಮಣೆ ಹಾಕಿರುವ ಹಿನ್ನೆಲೆಯಲ್ಲಿ, ಇಲ್ಲಿ ದಲಿತ ವರ್ಗಕ್ಕೆ ಅವಕಾಶ ನೀಡಿ ಜಾತಿ ಸಮೀಕರಣದ ಮೂಲಕ ಮತಬೇಟೆಗೆ ಬಿಜೆಪಿ ಸಜ್ಜಾಗಿದೆ.

ಕಾಂಗ್ರೆಸ್‌ನಲ್ಲಿ ಶುರುವಾದ ಟಿಕೆಟ್ ಗೊಂದಲ:

ಬಿಜೆಪಿಯ ಈ ನಡೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿಯ ಎಸ್‌ಟಿ ಅಭ್ಯರ್ಥಿ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ನಾಳೆ (ಬುಧವಾರ) ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಲಿದ್ದು, ದಾವಣಗೆರೆ ದಕ್ಷಿಣದ ಟಿಕೆಟ್ ಗೊಂದಲದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅವರು ಚುನಾವಣಾ ಸಮಿತಿ ಸದಸ್ಯರು ಮತ್ತು ಸ್ಥಳೀಯ ನಾಯಕರೊಂದಿಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಮುಸ್ಲಿಂ ಸಮುದಾಯದ ಪಟ್ಟು:

ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಈ ಬಾರಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ. 'ಅತಿ ಹೆಚ್ಚು ಸಂಖ್ಯೆಯಲ್ಲಿರುವ ನಮಗೆ ಈ ಬಾರಿ ಆದ್ಯತೆ ನೀಡಬೇಕು' ಎಂದು ಮುಸ್ಲಿಂ ಮುಖಂಡರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಒಂದೊಮ್ಮೆ ತಾಂತ್ರಿಕ ಕಾರಣಗಳಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ಸಾಧ್ಯವಾಗದಿದ್ದರೆ, ಅದನ್ನು 'ಅಹಿಂದ' (AHINDA) ವರ್ಗದವರಿಗೆ ನೀಡಬೇಕು ಎಂಬ ಹೊಸ ಬೇಡಿಕೆಯನ್ನು ಅವರು ಇಟ್ಟಿದ್ದಾರೆ. ಕುರುಬ ಅಥವಾ ಎಸ್‌ಸಿ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯ ಎಸ್‌ಟಿ ಅಸ್ತ್ರಕ್ಕೆ ಪ್ರತಿತಂತ್ರ ಹೂಡಬೇಕು ಎಂಬುದು ಇವರ ವಾದ.

ನಿರ್ಣಾಯಕ ಹಂತದಲ್ಲಿ ದಕ್ಷಿಣದ ರಾಜಕೀಯ:

ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿ ಪ್ರಚಾರದ ಅಖಾಡಕ್ಕೆ ಇಳಿದಿದ್ದರೆ, ಕಾಂಗ್ರೆಸ್ ಮಾತ್ರ ಇನ್ನೂ ಅಭ್ಯರ್ಥಿಯ ಆಯ್ಕೆಯಲ್ಲೇ ತೊಳಲಾಡುತ್ತಿದೆ. ಸುರ್ಜೇವಾಲಾ ಅವರ ಭೇಟಿಯ ನಂತರ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಬೇಡಿಕೆಗೆ ಮಣಿಯುತ್ತದೆಯೇ ಅಥವಾ ಅಹಿಂದ ವರ್ಗದ ಬೇರೆ ನಾಯಕರಿಗೆ ಅವಕಾಶ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ದಾವಣಗೆರೆ ದಕ್ಷಿಣದ ರಾಜಕೀಯ ಈಗ ರಂಗೇರಿದ್ದು, ಜಾತಿ ಮತ್ತು ತಂತ್ರಗಾರಿಕೆಯ ನಡುವೆ ಯಾರಿಗೆ ಜಯ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

PREV
Read more Articles on
click me!

Recommended Stories

ದಾವಣಗೆರೆಯಲ್ಲಿ ಕೊನೆಕ್ಷಣ ಏನಾದರೂ ಆಗಬಹುದು: ಶಾಮನೂರು ಕುಟುಂಬಕ್ಕೆ ‌ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ: ಯತ್ನಾಳ್
Bengaluru Cab Scam: ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು