ಉತ್ತಮ ಶಿಕ್ಷಣ, ಆರೋಗ್ಯದಿಂದ ದೇಶದ ಅಭಿವೃದ್ಧಿ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Jul 19, 2023, 1:19 PM IST
Highlights

ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ದೇಶದ ಅಭಿವೃದ್ಧಿ ಹಾಗೂ ಒಂದು ಕುಟುಂಬದ ಅಭಿವೃದ್ಧಿ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತಿದ್ದ ನಾನು ಎರಡು ಅವಧಿಯಲ್ಲೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. 

ಚನ್ನಪಟ್ಟಣ (ಜು.19): ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ದೇಶದ ಅಭಿವೃದ್ಧಿ ಹಾಗೂ ಒಂದು ಕುಟುಂಬದ ಅಭಿವೃದ್ಧಿ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತಿದ್ದ ನಾನು ಎರಡು ಅವಧಿಯಲ್ಲೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ, ರೋವರ್ಸ್‌ ಮತ್ತು ರೇಂಜ​ರ್‍ಸ್, ರೆಡ್‌ಕ್ರಾಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾಲೇಜು ಸಂಭ್ರಮೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮೊದಲ ಬಾರಿ ಸಿಎಂ ಆದಾಗ ರಾಜ್ಯದಲ್ಲಿ ಕೇವಲ 169 ಪ್ರಥಮ ದರ್ಜೆ ಕಾಲೇಜುಗಳಿದ್ದವು. 

ಒಂದೇ ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 179 ಪ್ರಥಮ ದರ್ಜೆ ಕಾಲೇಜನ್ನು ಆರಂಭ ಮಾಡಿದೆ. ಇದರ ಜತೆಗೆ 500 ಜ್ಯೂನಿಯರ್‌ ಕಾಲೇಜು, 1400ಕ್ಕೂ ಹೆಚ್ಚು ಪ್ರೌಢಶಾಲೆಗಳನ್ನು ಆರಂಭಿಸಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸಿದೆ ಎಂದು ತಿಳಿಸಿದರು. ಎರಡನೇ ಬಾರಿ ಸಿಎಂ ಆಗಿದ್ದಾಗ 6 ಎಂಜಿನಿಯರಿಂಗ್‌ ಕಾಲೇಜು, 6 ಮೆಡಿಕಲ್‌ ಕಾಲೇಜು ಆರಂಭಿಸಿದೆ. ಇದಲ್ಲದೆ ಗ್ರಾಮೀಣ ಭಾಗದ ಬಡಮಕ್ಕಳಿಗೂ ಆಂಗ್ಲ ಭಾಷೆಯ ಶಿಕ್ಷಣ ದೊರಕಿಸಬೇಕೆಂಬ ಮಹತ್ವಾಕಾಂಕ್ಷಿಯೊಂದಿಗೆ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಮಾರ್ಪಾಟು ಮಾಡಿದೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದ ಶಿಕ್ಷಣ ದೊರಕಿಸಲು ಪ್ರಯತ್ನಿಸಿದೆ. ಆದರೆ, ಆ ಶಾಲೆಗಳು ನನ್ನ ನಿರೀಕ್ಷೆಗೆ ತಕ್ಕಂತೆ ಬೆಳೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Latest Videos

ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್‌ ಘೋಷಿಸಿ: ದರ್ಶನ್‌ ಪುಟ್ಟಣ್ಣಯ್ಯ

ಕೌಶಲಾಭಿವೃದ್ಧಿಯಲ್ಲಿ ಹಿಂದೆ: ವಿಶ್ವದ ಬೇರೆಲ್ಲ ರಾಷ್ಟ್ರಗಳಲ್ಲೂ 15ರಿಂದ 45 ವರ್ಷದೊಳಗಿನ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಈ ವಯೋಮಾನದ ಯುವಜನರ ಸಂಖ್ಯೆ ಬೆಳೆಯುತ್ತಿದ್ದು, ಇನ್ನೊಂದು 15ರಿಂದ 20 ವರ್ಷದ ಅವಧಿಯಲ್ಲಿ ಈ ವಯೋಮಾನದ ಯುವಕರು ಇರುವ ಪ್ರಮುಖ ದೇಶ ನಮ್ಮದಾಗಲಿದೆ. ವಿಶ್ವಕ್ಕೆ ಅತ್ಯಂತ ದೊಡ್ಡಮಟ್ಟದಲ್ಲಿ ಮಾನವಶಕ್ತಿಯನ್ನು ನೀಡುವಂತ ಶಕ್ತಿ ದೇಶಕ್ಕಿದೆ. ಆದರೆ, ಯುವಜನರಿಗೆ ತಕ್ಕ ಉದ್ಯೋಗ ಸೃಷ್ಟಿಸುವ ಕೆಲಸ ದೇಶದಲ್ಲಿ ಆಗುತ್ತಿಲ್ಲ. ಜನರಿಗೆ ಕೌಶಾಲಭಿವೃದ್ಧಿ ತರಬೇತಿ ನೀಡುವ ವಿಷಯದಲ್ಲಿ ದೇಶ ಹಿಂದೆ ಬಿದ್ದಿದೆ. ಚೀನಾ, ಜಪಾನ್‌, ಕೊರಿಯಾ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಶೇ.65ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುತ್ತಿದ್ದರೆ, ನಮ್ಮ ದೇಶದಲ್ಲಿ ಆ ಪ್ರಮಾಣ ಕೇವಲ ಶೇ.5ರಷ್ಟುಮಾತ್ರ ಇದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದ್ದು, ಸರ್ಕಾರ ನಡೆಸುವವರಿಗೆ ಈ ಕುರಿತು ಚಿಂತನೆ ಇರಬೇಕು ಎಂದರು.

ಹಾಳು ಮಾಡಲು ಚುನಾವಣೆಗೆ ನಿಲ್ಲಿಸಿ!: ಇಂದು ಚುನಾವಣೆ ವ್ಯವಸ್ಥೆ ಎಂಬುದು ಸಂಪೂರ್ಣ ಹಾಳಾಗಿದೆ. ಒಂದು ಚುನಾವಣೆಗೆ ಚುನಾವಣಾ ಆಯೋಗ 40 ಲಕ್ಷ ವೆಚ್ಚ ನಿಗದಿಪಡಿಸಿದೆ. ಆದರೆ, ಕೋಟ್ಯಂತರ ಹಣ ವಿನಿಯೋಗಿಸುವ ಪರಿಸ್ಥಿತಿ ಇದೆ. ಕೋಟ್ಯಂತರ ರೂ. ನೀಡಿ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ನೀಡಿ ಬಂದ ಅಧಿಕಾರಿ ಜನರನ್ನೇ ಸುಲಿಯುತ್ತಾನೆ. ಇಂತಹ ಒಂದು ಪರಿಸ್ಥಿತಿಯನ್ನು ಸರಿಪಡಿಸುವ ಕೆಲಸ ರಾಜಕಾರಣಿಗಳಿಂದ ಸಾಧ್ಯವಿಲ್ಲ ಎಂಬಂತಾಗಿದೆ. ಈ ನಾಡಿಗೆ ಹಣಕ್ಕೆ ಕೊರತೆ ಇಲ್ಲ. ತೆರಿಗೆಯಿಂದ ಬರುವ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಎಂಬ ನಿಟ್ಟಿನಲ್ಲಿ ಯಾರು ಚಿಂತನೆ ಮಾಡುತ್ತಿಲ್ಲ. ಇವುಗಳನ್ನು ಬದಲಿಸುವಂತ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬೇಕು ಎಂದರು.

ಜಿಲ್ಲೆ ಪ್ರಥಮ: ನೀತಿ ಆಯೋಗದ ವರದಿ ಪ್ರಕಾರ ದೇಶದಲ್ಲಿ 15 ಕೋಟಿಗೂ ಅಧಿಕ ಜನರ ಬಡತನ ನಿರ್ಮೂಲನೆ ಮಾಡಲಾಗಿದೆ. ಈ ವಿಚಾರದಲ್ಲಿ ರಾಮನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಇದರ ಜತೆಗೆ ರಾಜ್ಯದ ಬೇರೆ ಭಾಗದ ಜನರ ಭವಣೆ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಪ್ರಾಮಾಣಿಕವಾಗಿ ಯಾರು ಕೆಲಸ ಮಾಡುತ್ತಾರೋ ಅಂತಹ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತ ಅಧಿಕಾರ ನಿಮ್ಮ ಕೈಯಲ್ಲಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿಂದೆ ರಾಜಮಹಾರಾಜರ ಕಾಲದಲ್ಲಿ ಜನರು ಗುಲಾಮರಾಗಿದ್ದರು. ಆ ನಂತರ ಈಸ್ಟ್‌ ಇಂಡಿಯಾ ಕಂಪನಿ ಬಂದಾಗ ಜನರನ್ನು ಗುಲಾಮರನ್ನಾಗಿ ಮಾಡಿದರು. ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಜನರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರ ಮಾಡಲಾಗಿದೆ. ಬಡವರು ಬಡವರಾಗಿಯೇ ಉಳಿದಿದ್ದರೆ, ಶ್ರೀಮಂತರು ಇನ್ನು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಈ ತಾರಾತಮ್ಯವನ್ನು ನೀಗಿಸುವ ಕೆಲಸವನ್ನು ನಾಳೆಗೆ ಪ್ರಜೆಗಳಾದ ವಿದ್ಯಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು. ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಪ್ಯಾರಾ ಒಲಂಪಿಯನ್‌ ಗಿರೀಶ್‌, ಎನ್‌ಸಿಸಿ ಬೆಟಾಲಿಯನ್‌ ಲೆಫ್ಟಿನೆಂಟ್‌ ಕರ್ನಲ್‌ ದಾಮೋದರನ್‌, ಪ್ರಾಂಶುಪಾಲ ಡಾ.ವಿ.ವೆಂಕಟೇಶ, ಉಪನ್ಯಾಸಕರಾದ ಪ್ರಭು ಉಪಾಸೆ, ನಂಜುಂಡ, ಶ್ರೀಕಾಂತ್‌, ಮುಜಾಹಿದ್‌ ಖಾನ್‌ ಇತರರಿದ್ದರು.

ವಿದ್ಯುತ್‌ ಖರೀದಿ ಕಿಕ್‌ಬ್ಯಾಕ್‌ ಚುನಾವಣೆಗೆ ವಿನಿಯೋಗ!: ಬೇರೆ ರಾಜ್ಯದಿಂದ ವಿದ್ಯುತ್‌ ಖರೀದಿಸಿ ಅದರಿಂದ ಬರುವ ಕಿಕ್‌ಬ್ಯಾಕ್‌ ಹಣವನ್ನು ಚುನಾವಣೆಗೆ ವಿನಿಯೋಗಿಸಲಾಗುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು. ಇಂದಿನ ರಾಜ್ಯ ಸರ್ಕಾರದ ಆಡಳಿತ ನೋಡಿದರೆ ಮುಂದೆ ಏನಾಗುವುದೋ ಎಂಬ ಆತಂಕ ಇದೆ. ಚುನಾವಣೆಗೂ ಮೊದಲು ಪ್ರತಿ ಕುಟುಂಬಕ್ಕೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುತ್ತೇವೆಂದರು. ಆದರೆ, ರಾಜ್ಯದಲ್ಲಿ 2.14 ಕೋಟಿ ಕುಟುಂಬಗಳು ಬಳಸುವ ವಿದ್ಯುತ್‌ ಸರಾಸರಿ ತಿಂಗಳಿಗೆ 54 ಯೂನಿಟ್‌ ದಾಟುವುದಿಲ್ಲ. ಆದರೆ ಇತ್ತೀಚಿಗೆ ಜನ ಗಾಬರಿ ಬೀಳುವಂತ ವಿದ್ಯುತ್‌ ಬಿಲ್‌ ನೀಡಲಾಗಿದೆ. ರಾಜ್ಯದಲ್ಲಿ 31 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಹೊರಗಿನ ಕಂಪನಿಗಳಿಗೆ ಹೆಚ್ಚಿನ ದರ ನೀಡಿ ವಿದ್ಯುತ್‌ ಖರೀದಿಸಲಾಗುತ್ತಿದೆ. ಇದರಿಂದ ಬರುವ ಕಿಕ್‌ ಬ್ಯಾಕ್‌ ಅನ್ನು ಚುನಾವಣೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಸಚಿವರ ಗೈರು: ಸ್ಪೀಕರ್‌ ಅಸಹಾಯಕತೆ ಅಣಕಿಸಿದ ಬಿಜೆಪಿ

ಅದ್ಧೂರಿ ಮೆರವಣಿಗೆ!: ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಪ್ಯಾರಾ ಒಲಂಪಿಯನ್‌ ಗಿರೀಶ್‌, ಎನ್‌ಸಿಸಿ ಬೆಟಾಲಿಯನ್‌ನ ಲೆಫ್ಟಿನೆಂಟ್‌ ಕರ್ನಲ್‌ ದಾಮೋದರನ್‌ ಸೇರಿದಂತೆ ಗಣ್ಯರನ್ನು ನಗರದ ಪ್ರಥಮ ದರ್ಜೆ ಕಾಲೇಜು ಸಂಭ್ರಮೋತ್ಸವದ ಅಂಗವಾಗಿ ನಗರದ ಗಾಂಧಿ ಭವನದಿಂದ ಕಾಲೇಜು ಆವರಣದವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಡೊಳ್ಳುಕುಣಿತ, ಪೂಜಾಕುಣಿತ, ಕಂಸಾಳೆ, ಪಟ್ಟದ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಮೆರೆವಣಿಗೆಯಲ್ಲಿ ಕರೆತರಲಾಯಿತು. ವಿವಿಧ ವೇಷಭೂಷಣ ತೊಟ್ಟವಿದ್ಯಾರ್ಥಿಗಳು ಸಾಂಸ್ಕೃತಿಕ ಮೆರಗು ಹೆಚ್ಚಿಸಿದರು. ಕಳಶವನ್ನು ಹೊತ್ತ ಸಾಗಿದ ವಿದ್ಯಾರ್ಥಿನಿಯರು ಪೂರ್ಣಕುಂಭ ಸ್ವಾಗತದೊಂದಿಗೆ ಅತಿಥಿಗಳನ್ನು ಕಾಲೇಜಿಗೆ ಕರೆತಂದರು.

click me!