Asianet Suvarna News Asianet Suvarna News

ಬೆಂಗಳೂರು ಸಬ್‌ಅರ್ಬನ್‌ ರೈಲು: ಯೋಜನಾ ವೆಚ್ಚ ಹಂಚಿಕೆ

ಕೇಂದ್ರ ಸಂಪುಟದ ಸಮ್ಮತಿ ಬೆನ್ನಲ್ಲೇ 15,767 ಕೋಟಿ ರು. ಯೋಜನಾ ವೆಚ್ಚ 20:20:60 ಅನುಪಾತದಲ್ಲಿ ಹಂಚಿಕೆ| 3,242 ಕೋಟಿ ರು. ಕೇಂದ್ರ ಸರ್ಕಾರ ನೀಡಲಿರುವ ಅನುದಾನದ ಮೊತ್ತ| 4,734 ಕೋಟಿ ರು. ರಾಜ್ಯ ಸರ್ಕಾರ ನೀಡಬೇಕಿರುವ ಅನುದಾನದ ಮೊತ್ತ| 7,791 ಕೋಟಿ ರು. ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕೆ-ರೈಡ್ ಸಂಸ್ಥೆ ಹೊಂದಿಸಬೇಕಾಗಿರುವ ಮೊತ್ತ| 
 

Distribution to Central State Government of Bengaluru Suburban Train Planning Costs grg
Author
Bengaluru, First Published Oct 27, 2020, 7:12 AM IST
  • Facebook
  • Twitter
  • Whatsapp

ಬೆಂಗಳೂರು(ಅ.27): ರಾಜಧಾನಿಯ ಬಹುಬೇಡಿಕೆಯ ‘ಬೆಂಗಳೂರು ಉಪನಗರ ರೈಲು ಯೋಜನೆ’ಯ 15,767 ಕೋಟಿ ರು. ವೆಚ್ಚದ 148.17 ಕಿ.ಮೀ. ಮಾರ್ಗದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ ಯೋಜನೆ ಅನುಷ್ಠಾನಕ್ಕೆ ತಗುಲುವ ಅಂದಾಜು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹಂಚಿಕೆ ಮಾಡಲಾಗಿದೆ.

ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ಮಾದರಿಯಲ್ಲಿ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್‌) ಈ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದೆ. ಎಸ್‌ಪಿವಿಯಡಿ ಒಟ್ಟು 15,767 ಕೋಟಿ ರು. ಯೋಜನಾ ವೆಚ್ಚವನ್ನು 20:20:60 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ 3,242 ಕೋಟಿ ರು. ಹಾಗೂ 4,734 ಕೋಟಿ ರು. ಅನುದಾನ ನೀಡಲಿವೆ. ಇಲ್ಲಿ ರಾಜ್ಯ ಸರ್ಕಾರ ಕೆಲವು ತೆರಿಗೆ ಪಾವತಿಸುವುದರಿಂದ ವೆಚ್ಚದ ಹಂಚಿಕೆ ಪಾಲು ಕೊಂಚ ಹೆಚ್ಚಿದೆ. ಉಳಿದ 7,791 ಕೋಟಿ ರು. ಹಣವನ್ನು ಕೆ-ರೈಡ್‌ ಸಂಸ್ಥೆ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕಾಗುತ್ತದೆ.

148.17 ಕಿ.ಮೀ. ಮಾರ್ಗದ ಈ ಯೋಜನೆಯಲ್ಲಿ ಪ್ರಮುಖವಾಗಿ ನಾಲ್ಕು ಕಾರಿಡಾರ್‌ ನಿರ್ಮಿಸಲಾಗುತ್ತಿದ್ದು, ಆರು ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಆದ್ಯತೆ ಮೇರೆಗೆ ಕೆಎಸ್‌ಆರ್‌ ಬೆಂಗಳೂರು ನಗರ ನಿಲ್ದಾಣ-ದೇವನಹಳ್ಳಿ 41.40 ಕಿ.ಮೀ. ಕಾರಿಡಾರ್‌ ಮೂರೇ ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

ಸಬ್‌ಅರ್ಬನ್‌ ರೈಲು ತಕ್ಷಣಕ್ಕೆ ಓಡಲ್ಲ?

ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಅನುಮೋದನೆ ಬಾಕಿತ್ತು. ಅ.7ರಂದು ಸಮಿತಿಯ ಸಭೆಯಲ್ಲಿ ಡಿಪಿಆರ್‌ಗೆ ಅನುಮೋದನೆ ನೀಡಲಾಗಿತ್ತು. ಇದೀಗ ಯೋಜನೆ ಅನುಷ್ಠಾನದ ವೆಚ್ಚದ ಹಂಚಿಕೆ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟ ಯೋಜನೆ ಡಿಪಿಆರ್‌ಗೆ ಅನುಮೋದನೆ ನೀಡಿದ್ದರೂ ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆ ನೀತಿ ಸಂಹಿತೆ ಜಾರಿಯಿರುವುದರಿಂದ ಅಧಿಕೃತ ಘೋಷಣೆ ಬಾಕಿಯಿದೆ.

ವೆಚ್ಚದ ಮಾಹಿತಿ (ಕೋಟಿ. ರುಗಳಲ್ಲಿ)

ಭೂಸ್ವಾಧೀನ 1,470
ಅಲೈನ್‌ಮೆಂಟ್‌, ಫಾರ್ಮೆಷನ್‌, ಏರ್‌ಪೋರ್ಟ್‌ ಲಿಂಕ್‌ 4,125
ನಿಲ್ದಾಣಗಳ ಕಟ್ಟಡ 1,981
ನಿಲ್ದಾಣ 310
ಪರ್ಮನೆಂಟ್‌ ವೇ 727
ವಿದ್ಯುತ್‌ ಪೂರೈಕೆ 1,050
ಸಿಗ್ನಲಿಂಗ್‌ ಮತ್ತು ಟೆಲಿಕಾಂ 1,373
ಭದ್ರತೆ ಮತ್ತು ಸಿಬ್ಬಂದಿ 379
ಸಿಜಿಎಸ್‌ಟಿ-ಎಸ್‌ಜಿಎಸ್‌ಟಿ 1,341
ಶುಲ್ಕಗಳು 815
ಇಂಟರ್‌ ಡಿಸಿಪ್ಲೀನರಿ ಚೆಕ್‌ ಟೆಕ್ನಾಲಜಿ 353
ಪ್ರತಿ ವರ್ಷ ಶೇ.5ರಷ್ಟುಹೆಚ್ಚಳ 1841
ಒಟ್ಟು 15,767

ಪ್ರಮುಖ ಕಾರಿಡಾರ್‌ಗಳು

* ಕೆಎಸ್‌ಆರ್‌ ಬೆಂಗಳೂರು ನಗರ ನಿಲ್ದಾಣ-ದೇವನಹಳ್ಳಿ 41.40 ಕಿ.ಮೀ.
* ಬೈಯಪ್ಪನಹಳ್ಳಿ ಟರ್ಮಿನಲ್‌-ಚಿಕ್ಕಬಾಣಾವಾರ 25.01 ಕಿ.ಮೀ.
* ಕೆಂಗೇರಿ-ವೈಟ್‌ಫೀಲ್ಡ್‌ 35.52 ಕಿ.ಮೀ.
* ಹೀಲಲಿಗೆ ನಿಲ್ದಾಣ-ರಾಜಾನುಕುಂಟೆ 46.24 ಕಿ.ಮೀ.

25 ಲಕ್ಷ ಮಂದಿಗೆ ಅನುಕೂಲ

ಉಪ ನಗರ ರೈಲು ಯೋಜನೆ ಅನುಷ್ಠಾನದಿಂದ ನಗರದ ಸಂಚಾರ ದಟ್ಟಣೆಗೆ ದೊಡ್ಡ ಪರಿಹಾರ ಸಿಗಲಿದೆ. ಸುಮಾರು 25 ಲಕ್ಷ ಮಂದಿಗೆ ಇದರ ಉಪಯೋಗ ಸಿಗಲಿದೆ. ಭವಿಷ್ಯದಲ್ಲಿ ತುಮಕೂರು, ರಾಮನಗರ, ಬಂಗಾರಪೇಟೆಗೂ ಮಾರ್ಗ ವಿಸ್ತರಿಸಲು ಅವಕಾಶವಿದೆ. ಇದರಿಂದ ಲಕ್ಷಾಂತರ ಮಂದಿಗೆ ಉತ್ತಮ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ.
 

Follow Us:
Download App:
  • android
  • ios