ಮಂಗಳೂರು ವಿಮಾನ ನಿಲ್ದಾಣ ಅದಾನಿ ವಶಕ್ಕೆ : ಹೆಸರು ಬದಲಾವಣೆ

By Kannadaprabha NewsFirst Published Nov 1, 2020, 7:18 AM IST
Highlights

ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆ ವಶಕ್ಕೆ ಪಡೆದುಕೊಂಡಿದ್ದು ಅದೇ ಕ್ಷಣದಲ್ಲಿ ಹೆಸರೂ ಕೂಡ ಬದಲಾಗಿದೆ

ಮಂಗಳೂರು (ನ.01):  ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ‘ಅದಾನಿ ಏರ್‌ಪೋರ್ಟ್‌’ ಆಗಿ ಬದಲಾಗಿದೆ.

ಈ ವಿಮಾನ ನಿಲ್ದಾಣದ ನಿರ್ವಹಣೆಯನ್ನು ದೇಶದ ಪ್ರತಿಷ್ಠಿತ ಸಂಸ್ಥೆ ಅದಾನಿ ಗ್ರೂಪ್‌ ವಹಿಸಿಕೊಂಡಿದೆ. ಶುಕ್ರವಾರ ಮಧ್ಯರಾತ್ರಿ ವಿಮಾನ ನಿಲ್ದಾಣ ನಿರ್ದೇಶಕರು ಸಾಂಕೇತಿಕವಾಗಿ ಅದಾನಿ ಗ್ರೂಪ್‌ ಅಧಿಕಾರಿಗಳಿಗೆ ಕೀ ಹಸ್ತಾಂತರಿಸುವ ಮೂಲಕ ಹಸ್ತಾಂತರ ಪ್ರಕ್ರಿಯೆ ನೆರವೇರಿಸಿದರು.

ಇದರಿಂದಾಗಿ ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾಣ ಅದಾನಿ ಏರ್‌ಪೋರ್ಟ್‌ ಆಗಿ ಬದಲಾಗಿದ್ದು, ವಿಮಾನ ಹಾರಾಟ ಹೊರತುಪಡಿಸಿದರೆ, ಬೇರೆ ಎಲ್ಲ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಅದಾನಿ ಗ್ರೂಪ್‌ ನಿರ್ವಹಿಸಲಿದೆ. ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯನ್ವಯ ಈ ವಿಮಾನ ನಿಲ್ದಾಣವನ್ನು ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರಿಸಲಾಗಿದೆ.

‘ಶಾರದೆಯಾಗಿಯೇ ಬಾಳಿ, ಅಗತ್ಯ ಬಿದ್ರೆ ಕಾಳಿಯಾಗಿ’: ಮಹಿಳಾ ಸಬಲೀಕರಣದ ಚಿತ್ರ ಸಂದೇಶ ವೈರಲ್‌..

ಹಸ್ತಾಂತರ ಸಂದರ್ಭ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ವಿ.ವಿ. ರಾವ್‌ ಅವರು ಅದಾನಿ ಮಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ ಸಿಇ ಅಶುತೋಷ್‌ ಚಂದ್ರ ಹಾಗೂ ಅದಾನಿ ಎರ್‌ಪೋಟ್ಸ್‌ರ್‍ನ ಸಿಇಒ ಬೆಹ್ನಾಡ್‌ ಝಂಡಿ ಅವರಿಗೆ ಕೀ ಹಸ್ತಾಂತರಿಸಿದರು. ಈ ವಿಚಾರವನ್ನು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

50 ವರ್ಷಗಳ ಗುತ್ತಿಗೆ:  50 ವರ್ಷಗಳ ಗುತ್ತಿಗೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಒಂದು ವರ್ಷದ ಅವಧಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆ ಜೊತೆಯಾಗಿ ಕಾರ್ಯ ನಿರ್ವಹಿಸಲಿದೆ. ಈ ಸಂದರ್ಭ ಹಣ ವಿನಿಯೋಗ, ಟರ್ಮಿನಲ್‌ನಲ್ಲಿ ವಾಣಿಜ್ಯ ಚಟುವಟಿಕೆ ಸೇರಿದಂತೆ ಎಲ್ಲ ರೀತಿಯ ಪ್ರಕ್ರಿಯೆಗಳನ್ನು ಅದಾನಿ ಸಂಸ್ಥೆ ನೋಡಿಕೊಳ್ಳಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನ ಆಗಮನ- ನಿರ್ಗಮನ ವಿಚಾರಕ್ಕೆ ಸಂಬಂಧಿಸಿ ವ್ಯವಸ್ಥೆಯ ಬಗ್ಗೆ ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸಲಿದೆ. ಸಂಪೂರ್ಣವಾಗಿ ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣದ ಹಸ್ತಾಂತರದ ಬಳಿಕವೂ ವಿಮಾನ ಆಗಮನ- ನಿರ್ಗಮನದ ಉಸ್ತುವಾರಿಯನ್ನು ಪ್ರಾಧಿಕಾರ ನಡೆಸಲಿದೆ. ಭದ್ರತಾ ಸಿಬ್ಬಂದಿ ಹಾಗೂ ಏರ್‌ಲೈನ್‌ ಸಿಬ್ಬಂದಿ ಹೊರತುಪಡಿಸಿ ಟರ್ಮಿನಲ್‌ ಕಟ್ಟಡ, ರನ್‌ ವೇ, ಎಲೆಕ್ಟ್ರಿಕಲ್‌, ಸಿವಿಲ್‌ ಸೇರಿದಂತೆ ಎಲ್ಲ ವಿಚಾರವನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ.

ಭಾರಿ ಹೂಡಿಕೆ ನಿರೀಕ್ಷೆ:

ಅದಾನಿ ಸಂಸ್ಥೆ ಇದೀಗ ಅಧಿಕೃತ ನಿರ್ವಹಣೆಯನ್ನು ವಹಿಸಿಕೊಂಡಿರುವುದರಿಂದ ಕೋಟ್ಯಂತರ ರು. ಮೊತ್ತ ಹೂಡಿಕೆ ಮಾಡುವ ನಿರೀಕ್ಷೆ ಇದೆ. ಬಹುನಿರೀಕ್ಷೆಯ ರನ್‌ವೇ ವಿಸ್ತರಣೆ, ದೆಹಲಿ-ಮುಂಬಯಿ ಏರ್‌ಪೋರ್ಟ್‌ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್‌, ಮಾಲ್‌ಗಳು ಬರಲಿವೆ. ಪ್ರಯಾಣಿಕರಿಗೆ ವಿಧಿಸುವ ಶುಲ್ಕದ ಪ್ರಮಾಣ, ಟರ್ಮಿನಲ್‌ ಒಳಗಿನ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಇದಲ್ಲದೆ ಟೂರಿಸ್ಟ್‌ ಟ್ಯಾಕ್ಸಿ ನಿಲ್ದಾಣದ ಹೊಣೆಯನ್ನೂ ಅದಾನಿ ಗ್ರೂಪ್‌ ನೋಡಿಕೊಳ್ಳಲಿದೆ.

 ಹೊಸ ನಾಮಫಲಕ ಬಂತು

ಅದಾನಿ ಗ್ರೂಪ್‌ಗೆ ವಿಮಾನ ನಿಲ್ದಾಣ ಹಸ್ತಾಂತರಗೊಂಡ ಗಳಿಕೆಯಲ್ಲೇ ಮಂಗಳೂರು ವಿಮಾನ ನಿಲ್ದಾಣದ ಹೆಸರು ಕೂಡ ಅದಾನಿ ಏರ್‌ಪೋರ್ಟ್‌ ಎಂದು ಬದಲಾಗಿದೆ. ಈ ಹಸ್ತಾಂತರ ಪ್ರಕ್ರಿಯೆ ಸಾಂಕೇತಿಕವಾಗಿ ಶುಕ್ರವಾರ ಮಧ್ಯರಾತ್ರಿ ನಡೆದಿದ್ದು, ಆಗಲೇ ನಾಮಫಲಕವನ್ನೂ ಬದಲಾಯಿಸಲಾಗಿದೆ. ಕಡಲಿನ ಬೋಟ್‌ ಮಾದರಿಯಲ್ಲಿ ಅದಾನಿ ಏರ್‌ಪೋರ್ಟ್‌ ಎಂದು ಬರೆಯಲಾಗಿದ್ದು, ಜೊತೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬರೆಯಲಾಗಿದೆ. ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಕೂಡ ಅದಾನಿ ಏರ್‌ಪೋರ್ಟ್‌ ನಾಮಫಲಕ ರಾರಾಜಿಸುತ್ತಿದೆ. ವಿಮಾನ ನಿಲ್ದಾಣ ಆಗಮನ ಮತ್ತು ನಿರ್ಗಮನ ರಸ್ತೆಯ ದ್ವಾರ ಇರುವ ಕೆಂಜಾರು-ಬಜಪೆ ಹೆದ್ದಾರಿಯಲ್ಲೂ ಅದಾನಿ ಏರ್‌ಪೋರ್ಟ್‌ ನಾಮಫಲಕ ಅಳವಡಿಸಲಾಗಿದೆ.

ಮರೆಗೆ ಸರಿಯಿತೇ ಪ್ರತ್ಯೇಕ ಹೆಸರಿನ ಪ್ರಸ್ತಾಪ?

ಮಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳೂರಿನಲ್ಲಿ ಪೋಚ್‌ರ್‍ಗೀಸರ ಜೊತೆ ಸೆಣಸಿದ ಉಳ್ಳಾಲದ ರಾಣಿ ಅಬ್ಬಕ್ಕ, ಪ್ರಥಮ ಸಂಸದ ಯು.ಎಸ್‌. ಮಲ್ಯ, ತುಳುನಾಡಿನ ವೀರ ಪುರುಷರ ಕೋಟಿಚೆನ್ನಯ ಮುಂತಾದ ಹೆಸರು ಇರಿಸುವಂತೆ ಬಹಳ ಬೇಡಿಕೆ ಕೇಳಿಬಂದಿತ್ತು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿತ್ತು. ಈ ಕುರಿತು ಹೆಸರು ಸೂಚಿಸುವಂತೆ ರಾಜ್ಯ ಸರ್ಕಾರ ಆಹ್ವಾನಿಸಿತ್ತು. ಆದರೆ ಈಗ ವಿಮಾನ ನಿಲ್ದಾಣದ ಪೂರ್ತಿ ನಿರ್ವಹಣೆ ಅದಾನಿ ಗ್ರೂಪ್‌ ಪಾಲಾದ ಕಾರಣ ಇನ್ನು ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಹೆಸರು ಅಸಂಭವ ಎಂದೇ ಹೇಳಲಾಗುತ್ತಿದೆ.

click me!