ತೀಟೆ ತೀರಿಸಿಕೊಳ್ಳಲು ಬೆಂಬಲ ಕೊಡ್ತಿದ್ದಾರೆ : ಲಕ್ಷ್ಮಣ್ ಸವದಿ ಗರಂ

By Kannadaprabha NewsFirst Published Nov 1, 2020, 7:25 AM IST
Highlights

ತೀಟೆ ತೀರಿಸಿಕೊಳ್ಳುವ ಸಲುವಾಗಿ ಬೆಂಬಲ ಕೊಡ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು

ಬೆಳಗಾವಿ (ನ.01): ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಕರೆ ನೀಡಿರುವ ‘ಕರಾಳ ದಿನಾಚರಣೆ’ಗೆ ಬೆಂಬಲ ನೀಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆನೆ ಹೊರಟರೆ ನಾಯಿ ಬೊಗಳುತ್ತದೆ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಇದೇ ವೇಳೆ ಅವರು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೂರ್ಯ ಚಂದ್ರ ಇರುವ ತನಕ ಬೆಳಗಾವಿ ಕರ್ನಾಟಕದ್ದೆ. ಮಹಾರಾಷ್ಟ್ರ ಸರ್ಕಾರ ತೀಟೆ ತೀರಿಸಿಕೊಳ್ಳಲು ಕರಾಳ ದಿನಾಚರಣೆಗೆ ಬೆಂಬಲ ನೀಡುವ ಕೆಲಸ ಮಾಡುತ್ತಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಅವರು ಈ ರೀತಿ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನ 5 ಶಾಸಕರು ಬಿಜೆಪಿಗೆ: ಡಿಸಿಎಂ ಸಿಡಿಸಿದ ಬಾಂಬ್! ...

ಮಹಾರಾಷ್ಟ್ರದವರು ನಮ್ಮ ನೆಲದಲ್ಲಿ ನಿಂತು ಹೇಳಿಕೆ ನೀಡಿದರೆ ನಾವು ತಿರುಗೇಟು ಕೊಡುತ್ತೇವೆ. ಅದು ಬಿಟ್ಟು ಅವರ ನೆಲದಲ್ಲಿ ಕುಳಿತು ಈ ರೀತಿಯ ಹೇಳಿಕೆ ನೀಡಿದರೆ ನಾವೇಕೆ ತಲೆಕೆಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಸರ್ಕಾರ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ. ಆಗಲಾರದ ಕೆಲಸಕ್ಕೆ ಅವರು ಹೇಳಿಕೆ ನೀಡಿದರೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಬೆಳಗಾವಿ ಕರ್ನಾಟಕದ ಅವಿಭಾಗ್ಯ ಅಂಗ ಎಂದು ಸವದಿ ಪುನರುಚ್ಚರಿಸಿದರು.

click me!