
ಇತ್ತಿಚೆಗೆ ದೇಶಿ ಹಸುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಗುಜರಾತ್ ಮೂಲದ ಗಿರ್, ಆಂಧ್ರ ಮೂಲದ ಪುಂಗನೂರ್ ಹಸುಗಳು ಸೇರಿದಂತೆ ಹಲವು ದೇಶಿಯ ಹಸುಗಳ ತಳಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅದೇ ರೀತಿ ದೇಶದ ದೇಶಿಯ ತಳಿಯ ಹಸುಗಳಲ್ಲಿ ರಾಜ್ಯದ ಮಲ್ನಾಡು ಗಿಡ್ಡ ತಳಿಯ ಹಸುಗಳು ಕೂಡ ಒಂದಾಗಿವೆ. ಈ ಮಲ್ನಾಡು ಗಿಡ್ಡ ಕರ್ನಾಟಕದ ಪಶ್ಚಿಮ ಘಟ್ಟಗಳ ಸ್ಥಳೀಯ, ಸಣ್ಣ ಗಾತ್ರದ ಹಸುಗಳ ತಳಿಯಾಗಿದ್ದು, ಅವುಗಳ ಗಟ್ಟಿಮುಟ್ಟಾದ ದೇಹ, ರೋಗ ನಿರೋಧಕತೆ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಈ ತಳಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕರಾವಳಿ ಜಿಲ್ಲೆಗಳ ಮಲೆನಾಡು ಪ್ರದೇಶದಲ್ಲಿ ಕಂಡುಬರುತ್ತದೆ, ಕಡಿಮೆ ಎತ್ತರ, ಅತಿ ಹುರುಪು ಮತ್ತು ಉತ್ತಮ ಹಾಲಿನ ಉತ್ಪಾದನೆಗೆ ಈ ಮಲೆನಾಡು ಗಿಡ್ಡ ಹಸು ತಳಿಗಳು ಹೆಸರುವಾಸಿಯಾಗಿದೆ.
ರೈಲಿನಲ್ಲಿ ಸಹ್ಯಾದ್ರಿಯ ಮಡಿಲು ಕೊಲ್ಹಾಪುರ ತಲುಪಿದ ಮಲ್ನಾಡ್ ಗಿಡ್ಡ ಕರುಗಳು
ಈ ತಳಿಯ ಹಸುಗಳಿಗೂ ಈಗ ಬೇಡಿಕೆ ಹೆಚ್ಚಾಗಿದ್ದು, ಈಗ ನಮ್ಮ ರಾಜ್ಯದ ಎರಡು ಮಲ್ನಾಡು ಗಿಡ್ಡ ದೇಶಿ ತಳಿಯ ಕರುಗಳು ಮಹಾರಾಷ್ಟ್ರದ ಕೊಲ್ಹಾಪುರವನ್ನು ತಲುಪುತ್ತಿವೆ. ಹೌದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ವಾಸವಾಗಿರುವ ಉದ್ಯಮಿ ಸಂತೋಷ್ ಶಿರೋಮಣಿ ಹಾಗೂ ಸವಿತಾ ಶಿರೋಮಣಿ ದಂಪತಿ ಮಲ್ನಾಡು ಗಿಡ್ಡ ತಳಿಗೆ ಮನಸೋತಿದ್ದು, ಸಾಕಲು ಮುಂದಾಗಿದ್ದಾರೆ. ಇವರಿಗೆ ಬೆಳ್ಳಾರೆಯ ಗೋಪಾಲಕ ಪ್ರವೀಣ್ ಬೆಳ್ಳಾರೆ ಅವರು ಎರಡು ಮಲ್ನಾಡು ಕರುಗಳನ್ನು ಮಾರಾಟ ಮಾಡಿದ್ದಾರೆ.
ಈ ಕರುಗಳನ್ನು ಮಂಗಳೂರಿನಿಂದ ರೈಲಿನಲ್ಲಿ ಕೊಲ್ಹಾಪುರಕ್ಕೆ ಕರೆದುಕೊಂಡು ಹೋಗಲಾಗಿದೆ. ಹೀಗೆ ಕರುಗಳನ್ನು ಸಾಗಿಸುವುದಕ್ಕೆ ರೈಲ್ವೆಗೆ ಬೇಕಾದ ವಿಶೇಷ ದಾಖಲೆಗಳನ್ನು ಬೆಳ್ಳಾರೆಯ ಪಶುವೈದ್ಯ ಡಾ. ಸೂರ್ಯನಾರಾಯಣ ಭಟ್ ಮಾಡಿಕೊಟ್ಟಿದ್ದಾರೆ. ಈ ಕರುಗಳನ್ನು ನೀಡಿರುವ ಪ್ರವೀಣ್ ಬೆಳ್ಳಾರೆ ಅವರು ಪ್ರಸಿದ್ದ ದೇಸಿ ತಳಿಯ ಹಸು ಸಾಕಣೆಗಾರರಾಗಿದ್ದಾರೆ. ಇವರು ಉತ್ತಮ ಗುಣಮಟ್ಟದ ಗೋವುಗಳನ್ನು ಅಭಿವೃದ್ಧಿಪಡಿಸಿದ್ದು, ಇವರಿಗೆ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ.
ಮಂಗಳೂರಿನಿಂದ ಕರುಗಳು ರೈಲಲ್ಲಿ ಪ್ರಯಾಣ ಬೆಳೆಸಿದ್ದು ಇದೇ ಮೊದಲು
ಅಂದಹಾಗೆ ಕರಾವಳಿಯಿಂದ ಹೊರರಾಜ್ಯಕ್ಕೆ ಕರುಗಳು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು ಇದೇ ಮೊದಲು ಎಂಬ ಮಾಹಿತಿ ಇದೆ. ಬೆಳ್ಳಾರೆಯಿಂದ, ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಮಲೆನಾಡು ಗಿಡ್ಡ ತಳಿಯ ಗೋವುಗಳು ರೈಲು ಪ್ರಯಾಣ ಬೆಳೆಸಿವೆ. ದೇಶೀ ಗೋತಳಿ, ಅಳಿವಿನ ಅಂಚಿಗೆ ಬಂದಿದೆ ಅನ್ನುವ ಕೂಗು ಎಲ್ಲೆಡೆ ಕೇಳಿಸುತ್ತಿರುವ ಈ ಸಮಯದಲ್ಲಿ ಪ್ರವೀಣ್ ಬೆಳ್ಳಾರೆ ಅವರು ಈ ದೇಶಿ ತಳಿಗಳನ್ನು ಸಾಕಿ ಅವುಗಳ ಸಂತತಿಯನ್ನು ರಾಜ್ಯದ ಹೊರಗೂ ಬೆಳೆಸಲು ಬಯಸುವವರಿಗೆ ಸಹಾಯ ಮಾಡುವ ಮೂಲಕ ದೇಸಿ ಗೋತಳಿಗಳ ಉಳಿವಿಗೆ ಶ್ರಮಪಡುತ್ತಿರುವುದು ಶ್ಲಾಘನೀಯ. ಹೀಗಾಗಿಯೇ ಅರೆಮಲೆನಾಡು ಎನಿಸಿರುವ ಬೆಳ್ಳಾರೆಯಿಂದ ಈ ಮಲ್ನಾಡು ಗಿಡ್ಡ ಕರುಗಳು ಮಹಾರಾಷ್ಟ್ರದ ಸಹ್ಯಾದ್ರಿಯನ್ನು ತಲುಪಿವೆ.
ಇದನ್ನೂ ಓದಿ: ಮದುವೆಗೂ ಮೊದಲು 10 ಅಸಾಮಾನ್ಯ ಬೇಡಿಕೆ ಇಟ್ಟ ವರ: ನೋ ನೋ ಎಂದ ಹೆಣ್ಣು ಮಕ್ಕಳು
ಇದನ್ನೂ ಓದಿ: ತಲೆಗೆ 14 ಲಕ್ಷ ಬಹುಮಾನ ಘೋಷಿಸಲ್ಪಟ್ಟಿದ್ದ ಮಹಿಳಾ ಮಾವೋವಾದಿ ನಕ್ಸಲೈಟ್ ಪೊಲೀಸರಿಗೆ ಶರಣು