ವಿಜಯಪುರ ನಗರದಲ್ಲಿ ಹೊಸದಾಗಿ ಸ್ಟೇಶನ್ ರಸ್ತೆ, ಕೇಂದ್ರ ಬಸ್‌ನಿಲ್ದಾಣ, ಜಿಲ್ಲಾ ಪಂಚಾಯಿತಿ ಕಚೇರಿ, ಮೀನಾಕ್ಷಿ ವೃತ್ತ, ಗಣಪತಿ ವೃತ್ತ ಸೇರಿ ಒಟ್ಟು ಐದು ಕಡೆಗಳಲ್ಲಿ ಜನರಿಂದ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ರುದ್ರಪ್ಪ ಆಸಂಗಿ
ವಿಜಯಪುರ(ಜು.05): ಬಿಜೆಪಿ ಸರ್ಕಾರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ನೂತನ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒತ್ತು ನೀಡುವ ನಿರ್ಧಾರ ಕೈಗೊಂಡ ಬೆನ್ನ ಹಿಂದೆಯೇ ನಗರದಲ್ಲಿ ಹೊಸದಾಗಿ ಮತ್ತೆ ಐದು ಇಂದಿರಾ ಕ್ಯಾಂಟೀನ್‌ಗಳಿಗೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದೆ. ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುವ ಇಂದಿರಾ ಕ್ಯಾಂಟೀನ್‌ಗಳು ಬಡವರ ಪಾಲಿನ ಅಕ್ಷಯ ಪಾತ್ರೆಯಾಗಿವೆ. ಹಾಗಾಗಿ, ಬಡವರು ಇಂದಿರಾ ಕ್ಯಾಂಟೀನ್‌ಗಳನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಿಜಯಪುರ ನಗರದಲ್ಲಿ ಮಹಾನಗರ ಪಾಲಿಕೆ, ಸ್ಯಾಟ್‌ಲೈಟ್ ಬಸ್‌ನಿಲ್ದಾಣ, ಐಟಿಐ ಕಾಲೇಜು, ಎಪಿಎಂಸಿ ಬಳಿ ಸೇರಿ ಒಟ್ಟು ನಾಲ್ಕು ಕಡೆ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿವೆ. ಈ ಇಂದಿರಾ ಕ್ಯಾಂಟೀನ್‌ಗಳಲ್ಲಿ ದಿನಂಪ್ರತಿ ಬೆಳಗ್ಗೆ 7.30ರಿಂದ ಬೆಳಗ್ಗೆ 11ರವರೆಗೆ ಉಪ್ಪಿಟ್ಟು, ಇಡ್ಲಿ, ಶಿರಾ ಉಪಾಹಾರ ನೀಡಲಾಗುತ್ತದೆ. ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಹಾಗೂ ರಾತ್ರಿ 7ರಿಂದ 9 ಗಂಟೆವರೆಗೆ ಮಸಾಲಾ ರೈಸ್, ವೈಟ್ ರೈಸ್, ಮೊಸರನ್ನ ನೀಡಲಾಗುತ್ತದೆ.
ಮಳೆಗಾಗಿ ತಾಮ್ರದ ಬಿಂದಿಗೆ ಬಳಿ ಭವಿಷ್ಯ ಕೇಳಿದ ವಿಜಯಪುರ ಜನ! ಬಿಂದಿಗೆ ನುಡಿದ ಭವಿಷ್ಯ ನಿಜವಾಗುತ್ತಾ?
ಉಪಾಹಾರಕ್ಕೆ .5 ಹಾಗೂ ಊಟಕ್ಕೆ .10 ದರ ನಿಗದಿಯಾಗಿದೆ. ಹೀಗಾಗಿ, ಬಡವರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ ಸಿಗುತ್ತಿರುವುದು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆಗೆ ಬೇಡಿಕೆ ಬಂದಿದೆ.
ನಗರದಲ್ಲಿ ಹೊಸದಾಗಿ ಸ್ಟೇಶನ್ ರಸ್ತೆ, ಕೇಂದ್ರ ಬಸ್‌ನಿಲ್ದಾಣ, ಜಿಲ್ಲಾ ಪಂಚಾಯಿತಿ ಕಚೇರಿ, ಮೀನಾಕ್ಷಿ ವೃತ್ತ, ಗಣಪತಿ ವೃತ್ತ ಸೇರಿ ಒಟ್ಟು ಐದು ಕಡೆಗಳಲ್ಲಿ ಜನರಿಂದ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಸ್ಟೇಶನ್ ರಸ್ತೆ, ಕೇಂದ್ರ ಬಸ್‌ನಿಲ್ದಾಣ, ಜಿಲ್ಲಾ ಪಂಚಾಯಿತಿ ಕಚೇರಿ, ಮೀನಾಕ್ಷಿ ವೃತ್ತ, ಗಣಪತಿ ವೃತ್ತಗಳಲ್ಲಿ ಬಡ ಶ್ರಮಿಕ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿ ಇರುತ್ತಾರೆ. ಈ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯಾದರೆ ತುತ್ತಿನಚೀಲ ತುಂಬಿಸಿಕೊಳ್ಳಲು ಬಡವರಿಗರ ಹೆಚ್ಚು ಅನುಕೂಲ ಆಗುತ್ತದೆ. ಸರ್ಕಾರದ ಮಹತ್ವಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆ ಸಾರ್ಥಕ ಆಗುತ್ತದೆ ಎಂಬುದು ಆಕಾಂಕ್ಷಿಗಳ ಮನದಾಳದ ಮಾತಾಗಿದೆ.
ಭೀಮಾ ನದಿಗೆ ಬಟ್ಟೆ ತೊಳೆಯಲು ಹೋದ ತಾಯಿ-ಮಗು ಸಾವು!
ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಇಂದಿರಾ ಕ್ಯಾಂಟೀನ್ ಮಾಡಲು ಸರ್ಕಾರ ಅನುಮತಿ ನೀಡುವುದು ಕಷ್ಟದ ಕೆಲಸವಲ್ಲ. ಈ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸರ್ಕಾರದ ಮುಂದೆ ಸಾರ್ವಜನಿಕರ ಅಂಬೋಣ ಇಡಬೇಕು. ಈ ಸಣ್ಣ ಕಾಳಜಿಯನ್ನು ಜನಪ್ರತಿನಿಧಿಗಳು ತೋರಿದರೆ ನಿಜಕ್ಕೂ ಹೆಚ್ಚಿನ ಇಂದಿರಾ ಕ್ಯಾಂಟೀನ್‌ಗಳಿಗೆ ಮಂಜೂರಾತಿ ಖಂಡಿತವಾಗಿ ದೊರೆಯುತ್ತದೆ.
ಸದ್ಯಕ್ಕೆ ಹೊಸದಾಗಿ ಹೆಚ್ಚಿನ ಇಂದಿರಾ ಕ್ಯಾಂಟೀನ್ ಸ್ಥಾಪಿಸುವ ಬಗ್ಗೆ ಯಾವುದೇ ಪ್ರಸ್ತಾವ ಇಲ್ಲ. ಜುಲೈ 7ರಂದು ನಡೆಯುವ ಬಜೆಟ್‌ನಲ್ಲಿ ಸರ್ಕಾರ ಹೆಚ್ಚಿನ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಹಸಿರು ನಿಶಾನೆ ತೋರಿದರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಅಂತ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಬದರುದ್ದೀನ್ ಸೌದಾಗರ ತಿಳಿಸಿದ್ದಾರೆ.