
ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ಸಂಚರಿಸುವ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ಬಂಟ್ವಾಳ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಂಟ್ವಾಳ ರೈಲು ನಿಲ್ದಾಣವು ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ ಬಹುಭಾಗದ ಹಾಗೂ ಪುತ್ತೂರು ತಾಲೂಕಿನ ಕೆಲವು ಭಾಗಗಳ ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಇಲ್ಲಿ ನಿಲುಗಡೆ ಇಲ್ಲದಿರುವುದರಿಂದ ಈ ಮೂರು ತಾಲೂಕುಗಳ ಜನರು ಗೋವಾ ಸೇರಿದಂತೆ ಇತರ ಪ್ರದೇಶಗಳಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದವರು ಗಮನ ಸೆಳೆದಿದ್ದಾರೆ.
ಈ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯನ್ನು ಪರಿಗಣಿಸಿ, ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಂಟ್ವಾಳ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪ್ರಭಾಕರ ಪ್ರಭು ಅವರು ಸಂಸದರಲ್ಲಿ ವಿನಂತಿಸಿದ್ದಾರೆ.
ಬೆಂಗಳೂರು-ಮಂಗಳೂರು ರೈಲು ಮಾರ್ಗವನ್ನು ಡಬಲ್ ಲೈನ್‌ಗೊಳಿಸುವ ಮಹತ್ವದ ಯೋಜನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿರುವುದು ಕರಾವಳಿ ಜನತೆಯಲ್ಲಿ ಹೊಸ ನಿರೀಕ್ಷೆ ಹಾಗೂ ಸಂತಸ ಮೂಡಿಸಿದೆ ಎಂದು ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಬೆಂಗಳೂರುದಿಂದ ಆರಂಭಗೊಂಡು ಮಂಗಳೂರು ಮೂಲಕ ಮಡಗಾಂವ್‌ವರೆಗೆ ಸಂಚರಿಸಲಿರುವ ನೂತನ ವಂದೇ ಮಾತರಂ ರೈಲಿಗೆ ಮಂಗಳೂರು ಜಂಕ್ಷನ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಚಿವರೊಂದಿಗೆ ರೈಲಿನಲ್ಲಿ ಬೆಂಗಳೂರುವರೆಗೆ ಪ್ರಯಾಣಿಸಿದರು.
ಲಖನೌ: ಬಂಧುಗಳನ್ನು ಬೀಳ್ಕೊಡಲೆಂದು ವಂದೇ ಭಾರತ್ ರೈಲು ಹತ್ತಿದ್ದ 12 ಪ್ರಯಾಣಿಕರು ಭರ್ಜರಿ 36000 ರು. ದಂಡ ಕಟ್ಟಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
12 ಜನರ ತಂಡವೊಂದು 2 ದಿನಗಳ ಹಿಂದೆ ಲಖನೌ ರೈಲ್ವೆ ನಿಲ್ದಾಣದಲ್ಲಿ ಬಂದುಗಳನ್ನು ಬೀಳ್ಕೊಡಲು ಆಗಮಿಸಿತ್ತು. ವಂದೇ ಭಾರತ್ ರೈಲು ಹೊರಡುವ ಸಮಯ ಆದರೂ ಅವರ್‍ಯಾರೂ ಕೆಳಗೆ ಇಳಿದಿರಲಿಲ್ಲ. ಈ ನಡುವೆ ಹೊರಡುವ ಸಮಯ ಬರುತ್ತಲೇ ರೈಲಿನ ಅಟೋಮೆಟಿಕ್ ಬಾಗಿಲು ಮುಚ್ಚಿಕೊಂಡಿವೆ. ಹೀಗಾಗಿ ಬಂದುಗಳ ಜೊತೆಗೆ ಬೀಳ್ಕೊಡಲು ಬಂದವರೂ ರೈಲಿನೊಳಗೇ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಚೈನ್ ಎಳೆದು ರೈಲು ನಿಲ್ಲಿಸಲು ಯತ್ನಿಸಿದರಾದರೂ ಅಷ್ಟರ ವೇಳೆಗಾಗಲೇ ರೈಲು ವೇಗ ಪಡೆದುಕೊಂಡು ಮುಂದೆ ಸಾಗಿದೆ.
ಆ ರೈಲಿನ ಮುಂದಿನ ನಿಲುಗಡೇ ಇದ್ದಿದ್ದೇ 150 ಕಿ.ಮೀ ದೂರದ ಎಟಾವದಲ್ಲಿ. ಹೀಗಾಗಿ ಎಲ್ಲಾ 12 ಜನರು ಟಿಕೆಟ್ ಇಲ್ಲದೇ ಎಟಾವಗೆ ಪ್ರಯಾಣಿಸಿದ್ದಾರೆ. ಅಲ್ಲಿ ಅವರನ್ನು ಇಳಿಸಿದ ರೈಲ್ವೆ ಪೊಲೀಸರ ಜೊತೆ ಟಿಕೆಟ್ ರಹಿತ 12 ಜನರು ಗದ್ದಲ ಎಬ್ಬಿಸಿದ್ದಾರೆ. ಕೊನೆಗೆ ಎಲ್ಲರಿಗೂ ಲಖನೌದಿಂದ ಎಟಾವಾಗೆ ತಗಲುವ ಟಿಕೆಟ್ ವೆಚ್ಚ, ಫ್ಲಾಟ್‌ಫಾರ್ಮ್ ಟಿಕೆಟ್ ಇಲ್ಲದೇ ರೈಲ್ವೆ ನಿಲ್ದಾಣ ಪ್ರವೇಶಿಸಿದ್ದಕ್ಕೆ ದಂಡ, ಗದ್ದಲ ಮಾಡಿದ್ದಕ್ಕೆ ದಂಡ ಸೇರಿದಂತೆ ಸೇರಿದಂತೆ ಪ್ರತಿಯೊಬ್ಬರಿಗೂ ತಲಾ 3000 ರು.ನಂತೆ 12 ಜನರಿಂದ 36000 ರು. ವಸೂಲಿ ಮಾಡಿ 12 ಜನರನ್ನು ಬಿಟ್ಟು ಕಳುಹಿಸಲಾಗಿದೆ.