ಹಾವೇರಿಯ ಕೂಸನೂರಿನಲ್ಲಿ ಪತ್ತೆಯಾದ 12ನೇ ಶತಮಾನದ ಯಾದವರ ಆಳ್ವಿಕೆಯ ಮೂರು ರಹಸ್ಯ ದಾನ ಶಾಸನಗಳು!

Gowthami K   | Kannada Prabha
Published : Nov 18, 2026, 09:14 AM IST
Inscriptions Discovered in haveri

ಸಾರಾಂಶ

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕೂಸನೂರ ಗ್ರಾಮದಲ್ಲಿ ಸುಮಾರು 12ನೇ ಶತಮಾನಕ್ಕೆ ಸೇರಿದ ಮೂರು ಪ್ರಾಚೀನ ದಾನ ಶಾಸನಗಳು ಪತ್ತೆಯಾಗಿವೆ. ದೇವಗಿರಿ ಯಾದವರ ಆಳ್ವಿಕೆಯ ಕಾಲಘಟ್ಟಕ್ಕೆ ಸಂಬಂಧಿಸಿರಬಹುದಾದ ಶಾಸನಗಳು ಎಂದು ಅಂದಾಜಿಸಲಾಗಿದೆ. ಶಾಸನದ ಬರಹ ಈ ಲೇಖನದಲ್ಲಿದೆ.

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕಿನ ಕೂಸನೂರ ಗ್ರಾಮದಲ್ಲಿ 12ನೇ ಶತಮಾನಕ್ಕೆ ಸೇರಿದ ಮೂರು ದಾನ ಶಾಸನಗಳು ಪತ್ತೆಯಾಗಿದೆ. ರಟ್ಟಿಹಳ್ಳಿಯ ಪ್ರಿಯದರ್ಶಿನಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಚಾಮರಾಜ ಕಮ್ಮಾರ ಅವರು ಕ್ಷೇತ್ರಕಾರ್ಯಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಹಿರೇಕೆರೆಯ ಕೆಳಭಾಗದಲ್ಲಿರುವ ಗದ್ದೆಗಳಲ್ಲಿ ಈ ಮೂರು ಶಾಸನಗಳನ್ನು ಪತ್ತೆಹಚ್ಚಿದ್ದಾರೆ.

ಸುಮಾರು 12ನೇ ಶತಮಾನದ ಕೊನೆಯ ಘಟ್ಟದ ದೇವಗಿರಿ ಯಾದವರ ಕಾಲಕ್ಕೆ ಸೇರಿದ ಈ ಶಾಸನವು ಒಂಬತ್ತು ಸಾಲುಗಳನ್ನು ಒಳಗೊಂಡಿದೆ. ಶಾಸನದಲ್ಲಿ ಸಮಸ್ತಗಣ ಸ್ಥಾಪಕ ಬಲಗಿದೇವ ಜಾಡ್ಯಲನು, ಗ್ರಾಮದ ಪ್ರಭು ಕನಗೌಡ ಹಾಗೂ ಊರಿನ ಸಮಸ್ತ ಪ್ರಜೆಗಳು ರಾಮನಾಥ ದೇವರ ಚಪ್ಪರಕ್ಕೆ ಗದ್ದೆಯನ್ನು ದಾನವಾಗಿ ನೀಡಿದ ಉಲ್ಲೇಖವಿದೆ. ಶಾಸನದ ಮೇಲ್ಭಾಗದಲ್ಲಿ ಗೋವಿನ ರೇಖಾಚಿತ್ರ ಹಾಗೂ ಎದುರಿಗೆ ಖಡ್ಗದ ಚಿತ್ರವಿದೆ.

ಮೊದಲ ಶಾಸನದಿಂದ ಸ್ವಲ್ಪ ದೂರದಲ್ಲಿ ಪಾಲಾಕ್ಷಪ್ಪ ಸುರಳೇಶ್ವರ ಅವರ ಹೊಲದ ಬದುವಿನಲ್ಲಿ ಮತ್ತೊಂದು ಶಾಸನ ಪತ್ತೆಯಾಗಿದೆ. ಏಳು ಸಾಲುಗಳನ್ನು ಹೊಂದಿರುವ ಈ ಶಾಸನವು ಶೈವ ಪರಂಪರೆಗೆ ಸಂಬಂಧಿಸಿದ್ದಾಗಿದೆ. ಮೂರನೇ ಶಾಸನವು ನಿಂಗಪ್ಪ ಬಿಳೆಕಸದ ಅವರ ತೋಟದ ಬದುವಿನಲ್ಲಿ ಪತ್ತೆಯಾಗಿದ್ದು, ಒಂಬತ್ತು ಸಾಲುಗಳನ್ನು ಹೊಂದಿದೆ. ಈ ಶಾಸನವು ಅಸ್ಪಷ್ಟವಾಗಿದ್ದರೂ, ದುಂದುಭಿ ಸಂವತ್ಸರದ ಜೇಷ್ಠ ಶುದ್ಧ ಬಹುಳ ಎಂಬ ಕಾಲದ ಉಲ್ಲೇಖ ಕಂಡುಬಂದಿದೆ. ಕ್ಷೇತ್ರ ಕಾರ್ಯದಲ್ಲಿ ಬಂಕಾಪುರ ಇತಿಹಾಸ ಉಪನ್ಯಾಸಕ ಡಾ. ರಾಜೇಶ ಎಸ್. ಸೂಡಂಬಿ ಸಹಕಾರ ನೀಡಿದ್ದಾರೆ.

ಯಳಂಬಳಸೆಯಲ್ಲಿ ಪಾಳೇಗಾರರ ಕಾಲದ ಅಪರೂಪದ ಶಾಸನ ಪತ್ತೆ

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಯಳಂಬಳಸೆಯ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪ ಪಾಳೇಗಾರರ ಕಾಲಕ್ಕೆ ಸೇರಿದ ಅಪರೂಪದ ಐದು ಸಾಲುಗಳ ಶಾಸನ ಪತ್ತೆಯಾಗಿದೆ. ಸಂಶೋಧಕ ಡಾ. ಮಹೇಶ್ ಕುಂಚಿಗನಾಳು ಅವರು ಕ್ಷೇತ್ರಕಾರ್ಯದ ವೇಳೆ ಈ ಶಾಸನವನ್ನು ಪತ್ತೆಹಚ್ಚಿದ್ದಾರೆ.

ಶಾಸನದಲ್ಲಿ ನಂದನ ಹೊಸೂರಿನ ಗೋವಿಂದ ಎಂಬ ವ್ಯಕ್ತಿ ದೇವಾಲಯಕ್ಕೆ ಸಲ್ಲಿಸಿದ ಸೇವೆಯ ಉಲ್ಲೇಖವಿದೆ. ಶಾಸನದಲ್ಲಿರುವ 'ಪ್ರಮತಿ ಸಂವತ್ಸರ'ದ ಆಧಾರದ ಮೇಲೆ ಇದು ಕ್ರಿ.ಶ. 1639 ಅಥವಾ 1693ರ ಅವಧಿಗೆ ಸೇರಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ದೇವಾಲಯದ ಇತಿಹಾಸ, ಹೆಸರುಗಳ ಬದಲಾವಣೆ ಹಾಗೂ ಸ್ಥಳೀಯ ಸಾಂಸ್ಕೃತಿಕ ಸಂಘರ್ಷಗಳ ಅಧ್ಯಯನಕ್ಕೆ ಈ ಶಾಸನ ಮಹತ್ವದ ಐತಿಹಾಸಿಕ ದಾಖಲೆಯಾಗಲಿದೆ ಎಂದು ಡಾ. ಮಹೇಶ್ ತಿಳಿಸಿದ್ದಾರೆ. ಶಾಸನದ ಪಠ್ಯವನ್ನು ಶಾಸನ ತಜ್ಞ ಶಶಿಕುಮಾರ್ ನಾಯಕ ಅವರು ಓದಿದ್ದಾರೆ.

PREV
Read more Articles on
click me!

Recommended Stories

Bengaluru: ಮುಸ್ಲಿಂ ಎಂಬ ಕಾರಣಕ್ಕೆ ಫ್ಲ್ಯಾಟ್ ಬಾಡಿಗೆ ನಿರಾಕರಣೆ: ಟೆಕ್ಕಿ ಪೋಸ್ಟ್
ಬೇಡ್ತಿ-ವರದಾ ನದಿ ಜೋಡಣೆ ಯೋಜನೆ: ನೀರು ಶೇಖರಣಾ ಘಟಕ ಎಲ್ಲಿ? ಭೂಸ್ವಾಧೀನ ಪ್ರಕ್ರಿಯೆ