Covid 3rd Wave: ಸೋಂಕಿತರ ಸಾವು ಏರಲು ವಿಳಂಬ ಚಿಕಿತ್ಸೆಯೇ ಕಾರಣ..!

By Kannadaprabha NewsFirst Published Jan 30, 2022, 4:41 AM IST
Highlights

*  ಆಸ್ಪತ್ರೆಗೆ ಸೇರುತ್ತಿದ್ದಂತೆ ಸೋಂಕಿತರ ಸಾವು ಹೆಚ್ಚಳ
*  ಕೋವಿಡ್‌ ಬಗ್ಗೆ ಅಸಡ್ಡೆಯಿಂದ ತಡವಾಗಿ ಆಸ್ಪತ್ರೆಗೆ ಹೋಗುವ ರೋಗಿಗಳು
*  ಶೇ. 70-75% ಸೋಂಕಿತರು 3 ದಿನದಲ್ಲಿ ಸಾವು
 

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಜ.30):  ಕೊರೋನಾ(Coronavirus) ಸೋಂಕು ಹಾಗೂ ಅದರ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಮಾರಣಾಂತಿಕವಾಗುತ್ತಿದೆಯೇ?. ಹೌದು ಎನ್ನುತ್ತಿವೆ ಅಂಕಿ-ಅಂಶಗಳು. ಕಳೆದ 2 ತಿಂಗಳಲ್ಲಿ ಕೋವಿಡ್‌ನಿಂದ ಮರಣವನ್ನಪ್ಪಿದ ಶೇ.70 ಮಂದಿ ಆಸ್ಪತ್ರೆ(Hospital) ಸೇರಿದ ಮೂರು ದಿನದೊಳಗೆ ಅಸುನೀಗಿದ್ದಾರೆ. ಅದರಲ್ಲೂ ಕಳೆದ 14 ದಿನದಲ್ಲಿ ಮರಣವನ್ನಪ್ಪಿದ(Death) ಪ್ರತಿ ನಾಲ್ವರಲ್ಲಿ ಮೂವರು ಆಸ್ಪತ್ರೆಗೆ ದಾಖಲಾದ ಮೂರು ದಿನದೊಳಗೆ ಸಾವನ್ನಪ್ಪಿದ್ದಾರೆ. ಜತೆಗೆ, ಆಸ್ಪತ್ರೆಗೆ ದಾಖಲಾದ ದಿನದಂದೇ ಮೃತರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಸಹ ಅಸ್ವಸ್ಥತೆ, ರೋಗದ ಕುರಿತು ಅತೀವ ನಿರ್ಲಕ್ಷ್ಯದಿಂದ ಆರೋಗ್ಯ ತೀರಾ ಹದಗೆಟ್ಟ ಬಳಿಕ ಆಸ್ಪತ್ರೆಗೆ ದೌಡಾಯಿಸುತ್ತಿರುವುದರಿಂದ ಚಿಕಿತ್ಸೆಗೂ(Treatment) ಮುಂಚಿತವಾಗಿ ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಸಾವಿನ ಅಂಕಿ-ಅಂಶ:

ಡಿ.1ರಿಂದ ಜ.28ರ ಅವಧಿಯಲ್ಲಿ ಒಟ್ಟು 592 ಮಂದಿ ಕೋವಿಡ್‌ನಿಂದ(Covid19) ಸಾವನ್ನಪ್ಪಿದ್ದಾರೆ. ಈ ಪೈಕಿ 419 ಮಂದಿ ಆಸ್ಪತ್ರೆಗೆ ದಾಖಲಾಗುವ ಮುನ್ನ ಅಥವಾ ದಾಖಲಾದ 3 ದಿನದೊಳಗೆ ಮರಣ ಹೊಂದಿದ್ದಾರೆ. ಡಿಸೆಂಬರ್‌ 1ರಿಂದ ಜ.13ರ ಮಧ್ಯೆ 185 ಜನ ಮೃತರಾಗಿದ್ದಾರೆ. ಈ ಪೈಕಿ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ 25 ಮಂದಿ, ದಾಖಲಾದ 24 ಗಂಟೆಗಳ ಅವಧಿಯಲ್ಲಿ 46 ಮತ್ತು ದಾಖಲಾದ ಎರಡು ದಿನದೊಳಗೆ 26 ಮಂದಿ ಇಹಲೋಕ ತ್ಯಜಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟಾರೆ 185 ಸಾವಿನಲ್ಲಿ 113 ಸಾವು ಮೊದಲ ಮೂರು ದಿನದೊಳಗೆ ಘಟಿಸಿದೆ. ಚಿಕಿತ್ಸೆ ಫಲಿಸದೆ ಐದು ದಿನಗಳ ಬಳಿಕ 55 ಮಂದಿ ಮರಣವನ್ನಪ್ಪಿದ್ದಾರೆ.

Covid Crisis: ಬೆಂಗ್ಳೂರಲ್ಲಿ ಕೊರೋನಾ ಸೋಂಕು ಇಳಿಕೆ..!

ಕಳವಳಕಾರಿ ಅಂಶವೆಂದರೆ ಜನವರಿ 14ರಿಂದ 28ರ ಮಧ್ಯೆ ಚಿಕಿತ್ಸೆಯ ಆರಂಭದಲ್ಲೇ ಮರಣ ಹೊಂದುವವರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಈ ಅವಧಿಯಲ್ಲಿ 407 ಮಂದಿ ಸಾವನ್ನಪ್ಪಿದ್ದು ಈ ಪೈಕಿ 306 ಮಂದಿ ಮೊದಲ ಮೂರು ದಿನದೊಳಗೆ ನಿಧನರಾಗಿದ್ದಾರೆ. ಇವರಲ್ಲಿ ಆಸ್ಪತ್ರೆಗೆ ಬಂದ ದಿನದಂದು 130 ಮಂದಿ ಮರಣವನ್ನಪ್ಪಿದ್ದಾರೆ. ಮರುದಿನ 94, ಎರಡನೇ ದಿನ 51 ಮತ್ತು ಮೂರನೇ ದಿನ 31 ಮಂದಿ ಅಸುನೀಗಿದ್ದಾರೆ. ಮರಣವನ್ನಪ್ಪಿರುವ ಸೋಂಕಿತರಲ್ಲಿ ಶೇ.75 ಮಂದಿ ಮೊದಲ ಮೂರು ದಿನದಲ್ಲೇ ಅಸುನೀಗಿದ್ದಾರೆ.

ನಿರ್ಲಕ್ಷ್ಯವೇ ಕಾರಣ- ತಜ್ಞರು:

ಮೂರನೇ ಅಲೆಯಲ್ಲಿ(Covid 3rd Wave) ವೆಂಟಿಲೇಟರ್‌ ಸಹಿತ ಐಸಿಯು, ಐಸಿಯು ಸೇರಿದಂತೆ ಹಾಸಿಗೆಗಳ ಕೊರತೆ ಕಾಡಿಲ್ಲ. ಅಂಬ್ಯುಲೆನ್ಸ್‌ಗಳು(Ambulance) ಯಥೇಚ್ಛವಾಗಿ ದೊರಕುತ್ತಿವೆ. ಆದರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಸೋಂಕಿನ ಬಗ್ಗೆಗಿನ ನಿರ್ಲಕ್ಷ್ಯವೇ ಕಾರಣ ಎಂದು ಕೆಲ ತಜ್ಞರು ಹೇಳಿದರೆ ಇನ್ನು ಕೆಲ ತಜ್ಞರ ಪ್ರಕಾರ ಸಹ ಅಸ್ವಸ್ಥತೆಯಿಂದ ಸಾವು ಘಟಿಸುತ್ತಿದೆ. ಆದರೆ ಸಹ ಅಸ್ವಸ್ಥತೆ ಹೊಂದಿಲ್ಲದವರು ಕೂಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪ್ರಾರಂಭಗೊಳ್ಳುತ್ತಿದ್ದಂತೆ ಮರಣ ಹೊಂದುತ್ತಿದ್ದಾರೆ. ಸಹ ಅಸ್ವಸ್ಥತೆ ಹೊಂದಿಲ್ಲದ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾದ ಎರಡ್ಮೂರು ದಿನದೊಳಗೆ ಮರಣವನ್ನಪ್ಪಿರುವ ಅನೇಕ ನಿದರ್ಶನಗಳಿವೆ.

Covid Testing Guidelines ಕೊರೋನಾ ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌(Dr CN Manjunath) ಪ್ರಕಾರ, ಸಹ ಅಸ್ವಸ್ಥತೆ ಹೊಂದಿರುವವರು ಕೋವಿಡ್‌ ಖಚಿತಗೊಂಡರೆ ಸಂಭಾವ್ಯ ಅಪಾಯದ ಬಗ್ಗೆ ಪರೀಕ್ಷೆ ನಡೆಸಿಕೊಳ್ಳಬೇಕು. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆಗಳ ಜೊತೆಗೆ ಬೊಜ್ಜು ಸಹ ಅಸ್ವಸ್ಥತೆ. ಸದ್ಯ ಒಮಿಕ್ರೋನ್‌(Omicron) ಹೆಚ್ಚಿದ್ದರೂ ಅಪಾಯಕಾರಿ ಡೆಲ್ಟಾ(Delta) ಸೋಂಕು ಇನ್ನೂ ಚಾಲ್ತಿಯಲ್ಲಿದೆ. ಸೋಂಕಿತರು ಆಮ್ಲಜನಕ ಮಟ್ಟದ ಬಗ್ಗೆ ಸದಾ ಗಮನ ಇಟ್ಟಿರಬೇಕು ಎಂದು ಹೇಳುತ್ತಾರೆ.

ವಯೋವೃದ್ಧರು ಮತ್ತು ವಿವಿಧ ರೀತಿಯ ಸಹ ಅಸ್ವಸ್ಥತೆ ಹೊಂದಿರುವರು ಮರಣವನ್ನಪ್ಪುತ್ತಿದ್ದಾರೆ. ಆವರು ಸಹ ಅಸ್ವಸ್ಥತೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ಮರಣವನ್ನಪ್ಪಿರಬಹುದು. ಪರೀಕ್ಷೆ ಮಾಡುವಾಗ ಕೋವಿಡ್‌ ಪಾಸಿಟಿವ್‌ ಬಂದಿರಬಹುದು ಅಂತ ಕೋವಿಡ್‌ ಕ್ಲಿನಿಕಲ್‌ ತಜ್ಞರ ಸಮಿತಿ ಮುಖ್ಯಸ್ಥ ಡಾ.ಕೆ.ರವಿ ಹೇಳಿದ್ದಾರೆ. 
 

click me!