ಶತಮಾನಗಳು ಕಳೆದರೂ ಸ್ಮರಣೆಯಲ್ಲಿರುವ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಿ ಶ್ರದ್ಧಾಭಕ್ತಿಯಿಂದ ಭಾವನಾತ್ಮಕವಾಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿದರು.
ಕನಕಪುರ (ಡಿ.03): ಶತಮಾನಗಳು ಕಳೆದರೂ ಸ್ಮರಣೆಯಲ್ಲಿರುವ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಿ ಶ್ರದ್ಧಾಭಕ್ತಿಯಿಂದ ಭಾವನಾತ್ಮಕವಾಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿದರು. ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲೂಕು ಘಟಕ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ವ ಜನರ ಶ್ರೇಯಸ್ಸನ್ನು ಬಯಸಿದ್ದ ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದರು. ಈ ಸಂದೇಶವನ್ನು ಸಾರುವ ಸಲುವಾಗಿಯೇ ಜನರ ಭಾವನೆಯಿಂದ ಪ್ರತಿಮೆ ರೂಪುಗೊಂಡು ಸ್ಥಾಪನೆಯಾಗಿದೆ.
ಮಾಗಡಿ ಕೆಂಪೇಗೌಡರ ಪರಿಕಲ್ಪನೆಯಲ್ಲಿ ಕಟ್ಟಿದ ಬೆಂಗಳೂರಿನ ಮಾದರಿ ಮತ್ತು ಅಭಿವೃದ್ಧಿಯ ಸಂತೃಪ್ತಿಯಿಂದಲೇ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆನಪು ಮಾಡಿಕೊಳ್ಳುವಂತೆ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ಅನಾವರಣ ಮಾಡಿ ಐತಿಹಾಸಿಕ ಕಾರ್ಯಕ್ರಮದ ಮೂಲಕ ಅವರಿಗೆ ಗೌರವ ಸಮರ್ಪಿಸಿದ್ದೇವೆ ಎಂದು ತಿಳಿಸಿದರು. ಕೆಂಪೇಗೌಡರ ಪ್ರತಿಮೆ ಸ್ಥಾಪನೆಗಾಗಿ ಕರ್ನಾಟಕದ 24 ಸಾವಿರ ಸ್ಥಳಗಳಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ. ಒಮ್ಮೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ದರ್ಶನ ಮಾಡಿ ಸ್ಪರ್ಶ ಮಾಡಿದರೆ ಕರ್ನಾಟಕದ ಪುಣ್ಯ ಸ್ಥಳಗಳನ್ನು ಸ್ಪರ್ಶಿಸಿದಂತೆ ಆಗುತ್ತದೆ.
Ramanagara: ಮಾಗಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯೇ ಇಲ್ಲ!
ತಾಲೂಕಿನ ಜನತೆ ನನಗೆ ನೀಡಿದ ಈ ಸನ್ಮಾನ ನಾನೆಂದೂ ಮರೆಯಲು ಸಾಧ್ಯವಿಲ್ಲ. ನನ್ನ ಉಸಿರಿರುವ ವರೆಗೂ ನಿಮಗೆ ಚಿರಋುಣಿಯಾಗಿ ನಿಮ್ಮ ಸೇವೆಗೆ ಸದಾ ಸಿದ್ದನಿರುವುದಾಗಿ ಅಶ್ವತ್ಥ ನಾರಾಯಣ ಹೇಳಿದರು. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ರಾಜ್ಯ ರೇಷ್ಮೆ ಉದ್ಯಮಗಳ ನಿಗಮ ಅಧ್ಯಕ್ಷ ಗೌತಮ್‌ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕುರುಬರಹಳ್ಳಿ ವೆಂಕಟೇಶ್, ನಗರಾಧ್ಯಕ್ಷ ಮುತ್ತುರಾಜು, ಬಗರ್ ಹುಕುಂ ಸಾಗುವಳಿ ಕಮಿಟಿ ಸದಸ್ಯ ಶಿವಮುತ್ತು, ಸೀಗೆಕೋಟೆ ರವಿ, ರಾಂಪುರ ಶಶಿಕಲಾ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಜಗನ್ನಾಥ್, ನಿರ್ದೇಶಕ ಪೈ ಆನಂದ್, ನಗರಸಭಾ ಸದಸ್ಯೆ ಮಾಲತಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.
ಅಪರಾಧಿ ಹಿನ್ನೆಲೆಯುಳ್ಳವರಿಗೆ ಅವಕಾಶ ಇಲ್ಲ: ನಮ್ಮದು ಜನರ ಪಕ್ಷ. ಅಪರಾಧಿ ಹಿನ್ನೆಲೆ ಇರುವಂತಹ ವ್ಯಕ್ತಿಗಳಿಗೆ ಪಕ್ಷದಲ್ಲಿ ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೆಲವೊಂದು ತತ್ವ ಸಿದ್ದಾಂತಗಳನ್ನು ಇಟ್ಟುಕೊಂಡಿದೆ. ಜೆಡಿಎಸ್ ಪಕ್ಷದಲ್ಲಿ ಇರುವ ರೀತಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ರೌಡಿಗಳನ್ನು ಆಪರೇಷನ್ ಮಾಡಿ ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ. ಇರುವ ಜನರೆಲ್ಲರು ನಮ್ಮ ಪಕ್ಷಕ್ಕೆ ಸೇರಿದವರು.
ಕಾಂಗ್ರೆಸ್ ನವರು ನಮ್ಮವರು ಎಲ್ಲಿದ್ದಾರೆಂದು ಹುಡುಕಿಕೊಳ್ಳುವಂತಾಗಿದೆ. ಕಾಂಗ್ರೆಸ್ ಜನ ಬೆಂಬಲ ಇಲ್ಲದ ಪಕ್ಷವಾಗಿದೆ ಎಂದು ಟೀಕಿಸಿದರು. ಬಿಜೆಪಿ ಜನರ ಉಳಿವಿಗಾಗಿ ಇರುವ ಹಾಗೂ ಜನರ ಭಾವನೆಗಳಿಗೆ ಸ್ಪಂದಿಸುವ ಪಕ್ಷ. ದೇಶದಲ್ಲಿ ಕಾಂಗ್ರೆಸ್ ಯಾವ ಸ್ಥಿತಿಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲ ಕಡೆಗಳಲ್ಲಿ ಆ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿದೆ.ಅಂತಹ ಪಕ್ಷದ ಜೊತೆ ಯಾವುದೇ ನಾಯಕರಾಗಲಿ ಅಥವಾ ಕಾರ್ಯಕರ್ತರಾಗಲಿ ಇರುವುದಿಲ್ಲ ಎಂದರು. ಕನಕಪುರದಲ್ಲಿ ಬಿಜೆಪಿ ಪಕ್ಷ ಸಂಘಟನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಕೆಂಪೇಗೌಡರ ಸೇವೆ ಮಾಡಲು ಬಂದಿದ್ದೇವೆ. ಕೆಂಪೇಗೌಡರ ಪ್ರತಿಮೆ ಅನಾವರಣದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸೋಣ ಎಂದಷ್ಟೆಉತ್ತರಿಸಿದರು.
ಸಾತನೂರು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಮನವಿ: ಸಾತನೂರನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಮನವಿ ಸಲ್ಲಿಸಿದರು. 1984 ಹಾಗೂ 2008ರಲ್ಲಿ ಡಿ.ಎಂ.ಉಂಡೇಕರ್ ನೇತೃತ್ವದ ಸಮಿತಿ, ಎಂಬಿ.ಪ್ರಕಾಶ್ ನೇತೃತ್ವದ ಸಮಿತಿ, ಗದ್ದಿಗೌಡ ಸಮಿತಿಗಳು ಸಾತನೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೂ ಇವರ ವರದಿಗಳನ್ನು ಮೂಲೆಗುಂಪು ಮಾಡಿ ಪ್ರಸ್ತಾವನೆಯಲ್ಲೇ ಇಲ್ಲದ ಹಾರೋಹಳ್ಳಿಯನ್ನು ಸರ್ಕಾರ ನೂತನ ತಾಲೂಕಾಗಿ ಘೋಷಣೆ ಮಾಡಿ ಸಾತನೂರಿಗೆ ವಂಚನೆ ಮಾಡಿರುವುದಾಗಿ ಸಚಿವರಿಗೆ ವಿವರಿಸಿದರು.
Ramanagara: ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತದಿಂದಲೂ ತಯಾರಿ
ಸಾತನೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ಕೆ.ಎನ್.ಶಿವಲಿಂಗೇಗೌಡರ ನೇತೃತ್ವದಲ್ಲೂ ಹೋರಾಟ ನಡೆದಿತ್ತು. ಈ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿಯೇ ಸಾತನೂರನ್ನು ತಾಲೂಕು ಕೇಂದ್ರವನ್ನಾಗಿ ಘೊಷಣೆ ಮಾಡಿ ಈ ಭಾಗದ ಬಹುಜನರ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಸಾತನೂರು ಘಟಕದ ರೈತ ಮುಖಂಡರಾದ ಕಾಡಹಳ್ಳಿ ಅನುಕುಮಾರ್, ಸ್ವಾಮಿಗೌಡ, ಶಿವಗೂಳಿಗೌಡ, ಭೂವಳ್ಳಿ ಪುಟ್ಟಸ್ವಾಮಿ, ಆಟೋ ಕುಮಾರ್, ಕೆಮ್ಮಾಳೆ ಮಾದೇಶ್ ಹಾಜರಿದ್ದರು.