ವರದಿ ಬಾರದೆ 25 ಗಂಟೆ ಮನೆಯಲ್ಲೇ ಶವ ಇಟ್ಟು ಕುಳಿತ ಕುಟುಂಬಸ್ಥರು!

By Kannadaprabha NewsFirst Published Jul 11, 2020, 7:41 AM IST
Highlights

ವಾತದ ಸಮಸ್ಯೆಯಿಂದ ಬಳಲುತ್ತಿದ್ದ 75 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಗುರುವಾರವೇ ಮೃತಪಟ್ಟು ಒಂದು ದಿನ ಕಳೆದರೂ ಅವರ ಕೊರೋನಾ ವರದಿ ಬಾರದೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೆ, 25 ಗಂಟೆಗಳ ಕಾಲ ಶವವನ್ನು ಮನೆಯಲ್ಲೇ ಕೊಳೆಯಲು ಬಿಟ್ಟದಾರುಣ ಘಟನೆ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ.

ಮಂಗಳೂರು(ಜು.11): ವಾತದ ಸಮಸ್ಯೆಯಿಂದ ಬಳಲುತ್ತಿದ್ದ 75 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಗುರುವಾರವೇ ಮೃತಪಟ್ಟು ಒಂದು ದಿನ ಕಳೆದರೂ ಅವರ ಕೊರೋನಾ ವರದಿ ಬಾರದೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೆ, 25 ಗಂಟೆಗಳ ಕಾಲ ಶವವನ್ನು ಮನೆಯಲ್ಲೇ ಕೊಳೆಯಲು ಬಿಟ್ಟದಾರುಣ ಘಟನೆ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ಕೊನೆಗೆ ವರದಿ ಪಾಸಿಟಿವ್‌ ಬಂದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಸುರತ್ಕಲ್‌ನ ಈ ವೃದ್ಧೆಗೆ ವಾತದ ಸಮಸ್ಯೆ ಇತ್ತು. ಬಜಾಲ್‌ನ ಖಾಸಗಿ ಆಯುರ್ವೇದಿಕ್‌ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರು ದಿನದ ಹಿಂದೆ ಅವರ ಸಮಸ್ಯೆ ಉಲ್ಭಣಿಸಿತು. ಮನೆಯವರು ಬಜಾಲ್‌ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ದಾಖಲಿಸುವ ಮುನ್ನ ಕೋವಿಡ್‌ ಪರೀಕ್ಷೆ ಮಾಡಿ ಬನ್ನಿ ಎಂದು ಶರತ್ತು ವಿಧಿಸಿದರು. ಮನೆಯವರು ಜು.8ರಂದು ಸರ್ಕಾರಿ ವೆನ್ಲಾಕ್‌ ಆಸ್ಪತ್ರೆಗೆ ಕೊರೋನ ಪರೀಕ್ಷೆಗಾಗಿ ಕರೆದೊಯ್ದರು. ಅಲ್ಲಿ ಸ್ಯಾಂಪಲ್‌ ಕೊಟ್ಟು ವೃದ್ಧೆಯನ್ನು ಮನೆಗೆ ಕರೆತಂದರು. ಮನೆಯಲ್ಲಿ ವರದಿಗಾಗಿ ಕಾಯುತ್ತಿದ್ದಾಗಲೇ ಚಿಕಿತ್ಸೆ ದೊರಕದೆ ಇದ್ದುದರಿಂದ ಗುರುವಾರ ಸಂಜೆ ವೃದ್ಧೆ ಮೃತಪಟ್ಟಿದ್ದಾರೆ.

ಪೊಳಲಿ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಶಿಕ್ಷಣ ಸಚಿವ: ಇಲ್ಲಿವೆ ಫೋಟೋಸ್

ಬಾಡಿಗೆ ಮನೆಯಲ್ಲಿ ಶವ: ವೃದ್ಧೆ ವಾಸವಾಗಿದ್ದದ್ದು ಸುರತ್ಕಲ್‌ನ ಬಾಡಿಗೆ ಮನೆಯಲ್ಲಿ. ನಿಧನರಾದ ಬಳಿಕ ವೃದ್ಧೆಯ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದ್ದರು. ಆದರೆ ಕೊರೋನಾ ಪರೀಕ್ಷೆ ಮಾಡಿದ ಬಳಿಕ ವ್ಯಕ್ತಿ ಮೃತಪಟ್ಟರೆ ವರದಿ ಸಿಗದೆ ಅಂತ್ಯಕ್ರಿಯೆ ನಡೆಸುವಂತಿಲ್ಲ ಎಂಬ ನಿಯಮ ಇರುವುದರಿಂದ ಶುಕ್ರವಾರ ಸಂಜೆಯಾದರೂ (25 ಗಂಟೆ ಕಳೆದರೂ) ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿಲ್ಲ. ಅತ್ತ ಮೃತದೇಹ ಕೊಳೆಯುವ ಹಂತ ತಲುಪಿತ್ತು. ಕೋವಿಡ್‌ ಭಯದಿಂದ ಮನೆ ಮಾಲೀಕರು, ಅಕ್ಕಪಕ್ಕದವರು ತೀವ್ರ ಆತಂಕಿತರಾಗಿದ್ದರು. ಮೃತದೇಹದ ಬಳಿ ಯಾರೂ ಸುಳಿಯುವಂತಿಲ್ಲ. ಕುಟುಂಬ ಸದಸ್ಯರು ದಿಕ್ಕು ತೋಚದೆ ಪರಿತಪಿಸುತ್ತಿದ್ದರು. 25 ಗಂಟೆ ನರಕಯಾತನೆ ಅನುಭವಿಸಿದ್ದರು.

ಕುದ್ರೋಳಿ ತಂಡದ ಜಾದೂಗಾರ ಯತೀಶ್‌ ಕೊರೋನಾಗೆ ಬಲಿ!

ಆಡಳಿತದ ವಿಳಂಬ ಧೋರಣೆಗೆ ವೃದ್ಧೆಯ ಕುಟುಂಬಸ್ಥರಿಂದ ಹಾಗೂ ಊರಿನವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೊನೆಗೂ ಸುಮಾರು 25 ಗಂಟೆಗಳ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

click me!