ಬಿಲ್‌ ನೋಡಿ ಬೆಚ್ಚಿ ಆಸ್ಪತ್ರೆಯಿಂದಲೇ ಎದ್ದು ಹೋದ ಕೊರೋನಾ ಸೋಂಕಿತರು..!

By Kannadaprabha News  |  First Published Jul 11, 2020, 7:19 AM IST

ಕೊರೋನಾ ಚಿಕಿತ್ಸೆ ಹೆಸರಿನಲ್ಲಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಲಕ್ಷಗಟ್ಟಲೆ ಬಿಲ್‌ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಭಾರೀ ಬಿಲ್‌ ನೋಡಿ ಬೆಚ್ಚಿದ ಇಬ್ಬರು ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಎದ್ದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ಮಂಗಳೂರು(ಜು.11): ಕೊರೋನಾ ಚಿಕಿತ್ಸೆ ಹೆಸರಿನಲ್ಲಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಲಕ್ಷಗಟ್ಟಲೆ ಬಿಲ್‌ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಭಾರೀ ಬಿಲ್‌ ನೋಡಿ ಬೆಚ್ಚಿದ ಇಬ್ಬರು ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಎದ್ದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ವಿಧಿಸಬೇಕಾದ ದರಪಟ್ಟಿಯನ್ನು ಈಗಾಗಲೇ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದರೂ ಅದಕ್ಕೂ ಹೆಚ್ಚಿನ ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಈ ನಡುವೆ ಕಾಸಿಲ್ಲದೆ ಕಂಗೆಟ್ಟಇಬ್ಬರು ಸೋಂಕಿತರು, ಆಸ್ಪತ್ರೆಯ ದುಬಾರಿ ಬಿಲ್‌ ನೋಡಿ ಕಂಗಾಲಾಗಿದ್ದಾರೆ. ದರ ಕಡಿಮೆ ಮಾಡುವಂತೆ ಮನವಿ ಮಾಡಿದರೂ ಆಸ್ಪತ್ರೆ ಪಟ್ಟು ಸಡಿಲಿಸದೆ ಇದ್ದುದರಿಂದ ಆಸ್ಪತ್ರೆಯಿಂದ ಹೊರ ನಡೆದಿದ್ದಾರೆ.

Tap to resize

Latest Videos

ಆದದ್ದೇನು?: ಇಬ್ಬರು ಕೊರೋನಾ ಸೋಂಕಿತರು ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ದಿನಗಳ ಬಳಿಕ ಅವರಿಬ್ಬರೂ ಗುಣಮುಖರಾಗಿದ್ದು, ಡಿಸ್ಚಾರ್ಜ್‌ ಮಾಡಲು ಆಸ್ಪತ್ರೆ ಮುಂದಾಗಿತ್ತು. ಬಿಲ್‌ ಕೈಗೆ ಸಿಕ್ಕಿದಾಗ ಇಬ್ಬರಿಗೂ ಮೂರ್ಛೆ ತಪ್ಪುವುದೊಂದು ಬಾಕಿ. ಒಬ್ಬರಿಗೆ ಬರೋಬ್ಬರಿ 2 ಲಕ್ಷ ರು.ಗೂ ಅಧಿಕ ಬಿಲ್‌ ಮಾಡಿದ್ದರೆ, ಇನ್ನೊಬ್ಬರಿಗೆ ಸುಮಾರು 1.90 ಲಕ್ಷ ರು. ಬಿಲ್‌ ಮಾಡಲಾಗಿತ್ತು. ಈ ಕುರಿತು ಆಸ್ಪತ್ರೆಯವರ ಬಳಿ ಇಬ್ಬರೂ ಪ್ರಶ್ನೆ ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು  ಮಾಹಿತಿ ನೀಡಿದ್ದಾರೆ.

‘ಅವರಲ್ಲಿ ಒಬ್ಬ ಸೋಂಕಿತ ತನ್ನ ಬಳಿ ಅಷ್ಟುಹಣ ಇಲ್ಲ. ಸ್ವಲ್ಪ ಕಡಿಮೆ ಮಾಡಿ ಎಂದು ಮನವಿ ಮಾಡುತ್ತಿದ್ದ. ಆದರೆ ಆಸ್ಪತ್ರೆಯವರು ಬಿಲ್‌ ಕಡಿಮೆ ಮಾಡಲು ಒಪ್ಪಲಿಲ್ಲ. ಮಾತುಕತೆ ನಡೆದು ಕೊನೆಗೆ, ಗುಣಮುಖರಾದ ಸೋಂಕಿತರು ಆಸ್ಪತ್ರೆಯವರ ಎದುರಲ್ಲೇ ಹೊರ ನಡೆದು ಮನೆಗೆ ಹೋಗಿದ್ದನ್ನು ನೋಡಿದ್ದೇನೆ’ ಎಂದು ಎಂದು ಅವರು ತಿಳಿಸಿದ್ದಾರೆ. ಅದರ ಮರುದಿನ ಇಬ್ಬರೂ ಆಸ್ಪತ್ರೆಗೆ ಬಂದು ‘ಸೆಟ್‌್ಲಮೆಂಟ್‌’ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು, ಅಗತ್ಯವಾಗಿ ತಿಳ್ಕೊಳ್ಳಿ

ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾಗುವವರಿಗೆ ಸಾಮಾನ್ಯ ವಾರ್ಡ್‌ ಚಿಕಿತ್ಸೆಗೆ ದಿನಕ್ಕೆ 10 ಸಾವಿರ ರು.ಗಳನ್ನು ರಾಜ್ಯ ಸರ್ಕಾರ ನಿಗದಿಗೊಳಿಸಿದೆ. ಆದರೆ ಇದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡುತ್ತಿರುವ ಕುರಿತು ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಫೇಸ್‌ಬುಕ್‌, ವಾಟ್ಸಪ್‌ ಗ್ರೂಪ್‌ಗಳಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ನಡುವೆ ಸಮಾಧಾನಕರ ಬೆಳವಣಿಗೆಯೊಂದರಲ್ಲಿ ನಗರದ ಖಾಸಗಿ ಆಸ್ಪತ್ರೆಯೊಂದು ಕೊರೋನಾ ಚಿಕಿತ್ಸೆಯ ದರಗಳನ್ನು ಈಗಾಗಲೇ ಅಧಿಕೃತವಾಗಿ ಪ್ರಕಟಿಸಿ ಮಾದರಿಯಾಗಿದೆ.

ಸರ್ಕಾರಿ ಆಸ್ಪತ್ರೆಗೆ ಹೋಗಿ, ಕಾಸು ಉಳಿಸಿ!

ಪ್ರಸ್ತುತ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೋನಾ ಚಿಕಿತ್ಸೆ ನೀಡಲಾಗುತ್ತಿದೆ. ದುಬೈನಿಂದ ಬಂದ ಅಂತಾರಾಷ್ಟ್ರೀಯ ಕಂಪನಿಯ ಸಿಇಒ ಮತ್ತವರ ಕುಟುಂಬ ಕೂಡ ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ತೆರಳದೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಒಂದು ವೇಳೆ ಸರ್ಕಾರಿ ಆಸ್ಪತ್ರೆ ಭರ್ತಿಯಾಗಿ ಖಾಸಗಿ ಆಸ್ಪತ್ರೆಗೆ ಹೋಗುವ ಸಂದರ್ಭ ಬಂದರೆ ಸರ್ಕಾರಿ ವೈದ್ಯಾಧಿಕಾರಿಗಳ ಅನುಮೋದನೆ ಮೇರೆಗೆ ಸಾಮಾನ್ಯ ವಾರ್ಡ್‌ಗೆ ದಿನಕ್ಕೆ 5200 ರು., ಸ್ಪೆಷಲ್‌ ವಾರ್ಡ್‌ಗೆ 7 ಸಾವಿರ ರು., ವೆಂಟಿಲೇಟರ್‌ ರಹಿತ ಐಸೊಲೇಶನ್‌ ವಾರ್ಡ್‌ಗೆ 8,500 ರು., ವೆಂಟಿಲೇಟರ್‌ ಸಹಿತ ಐಸೊಲೇಶನ್‌ ವಾರ್ಡ್‌ಗೆ 10 ಸಾವಿರ ರು.ಗಳನ್ನು ಸರ್ಕಾರವೇ ನೀಡುತ್ತದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಹ್ಯಾಪಿ ಹಾರ್ಮೋನ್ಸ್ ಹೆಚ್ಚಿಸಿಕೊಳ್ಳಿ, ಖುಷಿಯಾಗಿರಿ

ದುಬಾರಿ ಬಿಲ್‌ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ, ಜಿಲ್ಲಾಡಳಿತವು ಕ್ರಮ ಕೈಗೊಳ್ಳಬೇಕು. ಆಗಾಗ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತ ಜಿಲ್ಲಾಡಳಿತವು ಇಂತಹ ಆಸ್ಪತ್ರೆಗಳನ್ನು ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಜನಸಾಮಾನ್ಯರು ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೂ ಈಡಾಗಲಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್‌ ಟವರ್ಸ್ ತಿಳಿಸಿದ್ದಾರೆ.

ಕೆಪಿಎಂಇ (ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟ್ಯಾಬ್ಲಿಷ್‌ಮೆಂಟ್‌) ಕಾಯ್ದೆ ಪ್ರಕಾರ ಯಾವ ರೋಗಕ್ಕೆ ಎಷ್ಟುದರ (ವಿವಿಧ ಸ್ತರಗಳಲ್ಲಿ) ಎನ್ನುವುದನ್ನು ಸೂಚನಾ ಫಲಕದಲ್ಲೇ ಹಾಕಬೇಕಾಗುತ್ತದೆ. ಕೊರೋನಾ ಚಿಕಿತ್ಸಾ ದರವನ್ನೂ ಅದೇ ಮಾದರಿಯಲ್ಲೇ ಹಾಕಬೇಕು. ಒಂದು ವೇಳೆ ಅದಕ್ಕಿಂತ ಜಾಸ್ತಿ ವಸೂಲಿ ಮಾಡಿದರೆ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ್‌ ತಿಳಿಸಿದ್ದಾರೆ.

click me!