ಭವಿಷ್ಯ ಸಾಬೀತು ಮಾಡಿದ 130 ಕೋಟಿ ಜನ: ಸಿದ್ದರಾಮಯ್ಯ ಹೇಳಿಕೆ ಡಿಸಿಎಂ ಕಾರಜೋಳ ತಿರುಗೇಟು| ಮಾಜಿ ಪ್ರಧಾನಿ ದೇವೇಗೌಡರನ್ನು ಬೆಂಬಲಿಸುವ ವಿಷಯದಲ್ಲಿ ಪಕ್ಷದ ನಿರ್ಣಯ ಅಂತಿಮ| ಈ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ|
ಬಾಗಲಕೋಟೆ(ಜೂ.10): ದೇಶದ 130 ಕೋಟಿ ಜನ ಯಾವ ಪಕ್ಷಕ್ಕೆ ಭವಿಷ್ಯ ಇದೆ. ಯಾವ ಪಕ್ಷಕ್ಕೆ ಇಲ್ಲ ಅಂತ ಈಗಾಗಲೇ ದೇಶದ ಮತದಾರರು ಸಾಬೀತು ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೋವಿಂದ ಕಾರಜೋಳ ಅವರು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಗೆ ಭವಿಷ್ಯವಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಪ್ರಸ್ತಾಪಿಸಿ ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್ ಮೇಲೇಳಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುನ್ನಡೆಸತಕ್ಕ ನಾಯಕರು ಸಹ ಯಾರು ಇಲ್ಲ. ಹೀಗಿದ್ದರೂ ಸಿದ್ದರಾಮಯ್ಯ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸೋನಿಯಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಲು ಹಿಂಜರಿದದ್ದರು. ರಾಹುಲ್ ಗಾಂಧಿ ಪಕ್ಷದ ಹುದ್ದೆ ಒಲ್ಲೆ ಎಂದು ಮೂರು ತಿಂಗಳು ನಾಪತ್ತೆ ಆಗಿದ್ದರು. ನೂರು ವರ್ಷ ಆದ ಮೇಲೆ ಕಾಂಗ್ರೆಸ್ ಪಕ್ಷದ ಆಯುಷ್ಯ ಮುಗಿದಂತೆ ಎಂಬ ಅರ್ಥದಲ್ಲಿ ಮಹಾತ್ಮಾ ಗಾಂಧೀಜಿಯವರು ಅಂದೇ ಕಾಲಜ್ಞಾನಿಗಳಂತೆ ಮುನ್ನುಡಿ ಬರೆದಿದ್ದರು. ಸ್ವಾತಂತ್ರ್ಯಕ್ಕಾಗಿ ಹುಟ್ಟು ಹಾಕಿದ ಸಂಘಟನೆ ಕಾಂಗ್ರೆಸ್‌ನ್ನು ವಿಸರ್ಜಿಸಿ ಎಂದು ಹೇಳಿದ್ದರು, ವಿಸರ್ಜಿಸದೆ ಹೋದರೆ ಕಾಂಗ್ರೆಸ್ ಸಂಸ್ಥೆ ಕಳ್ಳಕಾಕರ ಸಂಸ್ಥೆಯಾಗಿ ಹೆಸರು ಕೆಡಿಸುತ್ತದೆ ಎಂದು ಸಹ ಗಾಂಧೀಜಿ ಹೇಳಿದ್ದರು ಎಂದು ನೆನಪಿಸಿದರು.
'BSY ನೇತೃತ್ವದಲ್ಲಿ ಸರ್ಕಾರ ಸುಭದ್ರ, ಅವರೇ ನಮ್ಮ ನಾಯಕರು'
ಪಕ್ಷದ ಆಯ್ಕೆ:
ರಾಜ್ಯಸಭೆ ಟಿಕೆಟ್ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ಕೊಟ್ಟಿರುವುದಕ್ಕೆ ಎಲ್ಲರಲ್ಲಿಯೂ ಹರ್ಷವಿದೆ ಎಂದು ಹೇಳಿದ ಗೋವಿಂದ ಕಾರಜೋಳ ಆ ಮೂಲಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದಾರೆ ಎಂದು ಬಣ್ಣಿಸಿದರು.
ಪಕ್ಷನಿಷ್ಠೆ, ಕೆಲಸ ಕಾರ್ಯಗಳನ್ನು ಮೆಚ್ಚಿ ನೀಡಿರುವ ಟಿಕೆಟ್ ಇದಾಗಿದೆ. ಇದು ಇಡೀ ಪಕ್ಷದ ಆಯ್ಕೆ. 70 ವರ್ಷ ಸಾಮಾಜಿಕ ನ್ಯಾಯ ನೀಡುತ್ತೇವೆ ಎಂದು ಕಾಂಗ್ರೆಸ್‌ನವರು ಭಾಷಣ ಮಾಡಿದರು ಆದರೆ ನಾವು ಅದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿ ನ್ಯಾಯ ಕೊಟ್ಟಿದ್ದೇವೆ ಎಂದರು.
ರಾಜ್ಯಸಭೆ ಟಿಕೆಟ್ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಯಾರಿಗೂ ಅಸಮಾಧಾನವಿಲ್ಲ. ಹೈಕಮಾಂಡ್ ಯಾವುದೇ ನಿರ್ಣಯವನ್ನು ಕೈಗೊಳ್ಳುವ ಮುನ್ನ ಪಕ್ಷದ ರಾಜ್ಯಾಧ್ಯಕ್ಷರನ್ನು ಹಾಗೂ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುತ್ತಾರೆ ಎಂದು ಹೇಳಿದರು.
ಸದ್ಯ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಬೆಂಬಲಿಸುವ ವಿಷಯದಲ್ಲಿ ಪಕ್ಷದ ನಿರ್ಣಯ ಅಂತಿಮ. ಈ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ವಿಚಾರದಲ್ಲಿ ಪಕ್ಷಕ್ಕೆ ದುಡಿದವರನ್ನು ಕಂಡಿತವಾಗಿಯೂ ಪರಿಗಣಿಸಲಾಗುತ್ತದೆ ಎಂದರು.
ನಾನು ರಾಜಕಾರಣದ 30 ವರ್ಷಗಳಲ್ಲಿ ಯಾವುದೇ ಔತಣಕೂಟಕ್ಕೆ ಹೋಗುವಂತಹ ಅಭ್ಯಾಸವನ್ನು ಇಟ್ಟುಕೊಂಡಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ಶ್ರದ್ಧೆಯಿಂದ ಮಾಡುವ ಸ್ವಭಾವದವನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತಿಕ್ರಿಯೆಗೆ ಹಿಂದೇಟು:
ಜಿಲ್ಲೆಯ ಸಕ್ಕರೆ ಉದ್ಯಮಿ ಸ್ವಪಕ್ಷದ ಶಾಸಕರು ಆಗಿರುವ ಮುರುಗೇಶ ನಿರಾಣಿ ಅವರು ಮಂಡ್ಯ ಜಿಲ್ಲೆಯ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಲೀಜ್‌ಗೆ ಪಡೆದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನನಗೆ ಯಾವುದೇ ಉದ್ಯೋಗದ ಬಗ್ಗೆ ಮಾಹಿತಿ ಇಲ್ಲ. ಹಳ್ಳಿಯೊಳಗೆ ಒಂದು ಮಾತಿದೆ ತೊದಲಾಗಿನ ಬಲ್ಲ ತಿಮ್ಮ ಎಂದು, ನನಗೆ ಮಾಹಿತಿ ಇಲ್ಲ. ಆ ವ್ಯಾಪಾರಕ್ಕೂ ನನಗೂ ಸಂಬಂಧವಿಲ್ಲದ ಮನುಷ್ಯ ನಾನು ಎಂದು ಹೇಳಿದರು.
ಸರ್ಕಾರ ರೈತರ ಕಾಳಜಿ ಮಾಡುತ್ತಿದೆ. ಅವರ ವ್ಯಾಪಾರ ಉದ್ಯೋಗದಲ್ಲಿ ನನಗೇನು ಗೊತ್ತು. ಬಿಡ್‌ನಲ್ಲಿ ಭಾಗವಹಿಸಿ ತೆಗೆದುಕೊಂಡಿರುವುದರ ಬಗ್ಗೆಯೂ ನನಗೆ ಪರಿಕಲ್ಪನೆ ಇಲ್ಲ. ಟೆಂಡರ್‌ನಲ್ಲಿ ಹೆಚ್ಚು ಬಿಡ್ ಮಾಡಿದವರಿಗೆ ಕೊಡುವುದು ಸ್ವಾಭಾವಿಕ. ಸರ್ಕಾರಕ್ಕೆ ಆದಾಯ ಹೆಚ್ಚಿಗೆ ಬರುವ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮವನ್ನು ಕೈಗೊಂಡಿರಬಹುದು ಎಂದು ತಿಳಿಸಿದರು.
ಸದ್ಯ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಬೆಂಬಲಿಸುವ ವಿಷಯದಲ್ಲಿ ಪಕ್ಷದ ನಿರ್ಣಯ ಅಂತಿಮ. ಈ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ವಿಚಾರದಲ್ಲಿ ಪಕ್ಷಕ್ಕೆ ದುಡಿದವರನ್ನು ಕಂಡಿತವಾಗಿಯೂ ಪರಿಗಣಿಸಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.