ಕೊಪ್ಪ ತಾಲೂಕಿನ ಮಸೀದಿಗಳಲ್ಲಿ ನಮಾಜು ಆರಂಭ

Kannadaprabha News   | Asianet News
Published : Jun 10, 2020, 09:03 AM ISTUpdated : Jun 10, 2020, 10:30 AM IST
ಕೊಪ್ಪ ತಾಲೂಕಿನ ಮಸೀದಿಗಳಲ್ಲಿ ನಮಾಜು ಆರಂಭ

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪಟ್ಟಣದ ಹೊರವಲಯದ ನೂರ್‌ ಮಸೀದಿ, ಬದ್ರಿಯಾ ಮಸೀದಿ, ಜೋಗಿಸರ, ತಾಲೂಕಿನ ಶಾಂತಿಪುರ ಮತ್ತು ಜಯಪುರ ಜುಮ್ಮಾ ಮಸೀದಿಗಳಲ್ಲಿ ಕೊರೋನಾ ನಿಯಂತ್ರಣವನ್ನು ಪಾಲಿಸಿಕೊಂಡು ನಮಾಜು ನಿರ್ವಹಿಸಲು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾರ್ಕಿಂಗ್‌ ವ್ಯವಸ್ಥೆ ಮಾಡಿ ನಮಾಜು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೊಪ್ಪ(ಜೂ.10): ಕೊರೋನಾ ನಿಯಂತ್ರಣ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮುಚ್ಚಲ್ಪಟ್ಟಿದ್ದ ಮಸೀದಿಗಳಲ್ಲಿ ಜೂ.8ರಿಂದ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಮಸೀದಿಗಳಲ್ಲಿ ನಮಾಜು ಪ್ರಾರಂಭವಾಗಿದೆ. ಮತ್ತೆ ಕೆಲವು ಮಸೀದಿಗಳು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ನಮಾಜು ಪ್ರಾರಂಭಿಸಲು ತೀರ್ಮಾನಿಸಿದೆ.

ಪಟ್ಟಣದ ಹೊರವಲಯದ ನೂರ್‌ ಮಸೀದಿ, ಬದ್ರಿಯಾ ಮಸೀದಿ, ಜೋಗಿಸರ, ತಾಲೂಕಿನ ಶಾಂತಿಪುರ ಮತ್ತು ಜಯಪುರ ಜುಮ್ಮಾ ಮಸೀದಿಗಳಲ್ಲಿ ಕೊರೋನಾ ನಿಯಂತ್ರಣವನ್ನು ಪಾಲಿಸಿಕೊಂಡು ನಮಾಜು ನಿರ್ವಹಿಸಲು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾರ್ಕಿಂಗ್‌ ವ್ಯವಸ್ಥೆ ಮಾಡಿ ನಮಾಜು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸುದೀರ್ಘ ಕಾಲ ಮಸೀದಿಗಳಲ್ಲಿ ನಮಾಜು ನಿರ್ವಹಿಸಲು ಅವಕಾಶವಿಲ್ಲದೇ ಕಂಗೆಟ್ಟಿದ್ದ ಭಕ್ತರು ಸೋಮವಾರ ಮಸೀದಿಗೆ ಆಗಮಿಸಿ ನಮಾಜು ನಿರ್ವಹಿಸಿ, ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್‌-19 ಮಾರಕ ಸಾಂಕ್ರಾಮಿಕ ರೋಗದಿಂದ ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸಿದರು.

ಅಂಗ ಶುದ್ಧಿ/ವುಝೂ ಮನೆಯಲ್ಲಿಯೇ ಮಾಡಿ ಬರುವುದು, ನಮಾಜು ನಿರ್ವಹಿಸಲು ಬೇಕಾದ ಮುಸಲ್ಲ/ಚಾದರ ಸ್ವತಃ ತರುವುದು, ಮಾಸ್ಕ್‌ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಿಕೊಂಡು ನಮಾಜು ನಿರ್ವಹಿಸಬೇಕು. ರವಾತಿಬ್‌ ಸುನ್ನತ್‌ ನಮಾಜ್‌ ಮನೆಯಲ್ಲಿ ನಿರ್ವಹಿಸುವುದು, ನಮಾಜಿನ ಬಳಿಕ ಇತರರೊಡನೆ ಮಾತಿಗೆ ನಿಲ್ಲದೇ ಮಸ್ಜಿದ್‌ನಿಂದ ತೆರಳಬೇಕು. ಕೊರೋನಾ ನಿಯಂತ್ರಣ ಹಿನ್ನೆಲೆ ಈ ನಿಯಮಗಳನ್ನು ಮಸೀದಿಗೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸುವಂತೆ ಮಸೀದಿ ಆಡಳಿತಗಳು ಜಾಗೃತಿ ಮೂಡಿಸಿವೆ.

ಒಂದೇ ವಾರದಲ್ಲಿ ಕೊರೋನಾ ಸೋಂಕು ಗೆದ್ದು ಬಂದ ಕೊಟ್ಟೂರು ಠಾಣೆಯ ಮುಖ್ಯಪೇದೆ..!

ಪಟ್ಟಣದ ಪ್ರಮುಖ ಮಸೀದಿಗಳಾದ ಕೆಳಗಿನ ಪೇಟೆಯ ಜಾಮಿಯಾ ಮಸೀದಿ, ಕೆಸವೆ ರಸ್ತೆಯ ಮೊಹಿದ್ದೀನ್‌ ಶಾಫಿ ಜುಮ್ಮಾ ಮಸೀದಿ, ಮೇಲಿನಪೇಟೆಯ ಮದೀನ ಮಸೀದಿ, ರಾಘವೇಂದ್ರ ನಗರದ ನೂರುಲ್‌ ಆಲಂ ಮದರಸ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಜೂ.8ರಿಂದ ನಮಾಜಿಗೆ ಅವಕಾಶ ದೊರೆತ ಸರ್ಕಾರದ ಆದೇಶವಿದ್ದರೂ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಿ ಸರ್ಕಾರದೊಂದಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಸಾಕಷ್ಟುಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಇದರಿಂದ ಆಯಾ ಮಸೀದಿ ಆಡಳಿತ ಮಂಡಳಿಗಳು ಈಗಾಗಲೇ ಸಭೆ ನಡೆಸಿದ್ದು, ಮುಂದಿನ ವಾರದಲ್ಲಿ ಪ್ರಮುಖ ಸಭೆ ನಡೆಸಿ ತೀರ್ಮಾನಿಸಿದ ಬಳಿಕ ಮಸೀದಿಗಳಲ್ಲಿ ನಮಾಜಿಗೆ ಅವಕಾಶ ನೀಡುವ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು