ಟೊಯೋಟ-ಕಿರ್ಲೋಸ್ಕರ್‌ ಬಿಕ್ಕಟ್ಟು; ಮುಷ್ಕರ ನಿಷೇಧ, ಲಾಕ್‌ಔಟ್‌ ತೆರವು

By Suvarna News  |  First Published Nov 17, 2020, 3:49 PM IST

ಟೊಯೋಟ-ಕಿರ್ಲೋಸ್ಕರ್‌ ಬಿಕ್ಕಟ್ಟು ನಿವಾರಣೆಗೆ ಸರಕಾರ ಯತ್ನಿಸಿದ್ದು, ಇದೇ ವೇಳೆ ಕಂಪನಿಯಲ್ಲಿ ಮುಷ್ಕರ ನಿಷೇಧಿಸಿ, ಲಾಕ್‌ಔಟ್‌ ತೆರವುಗೊಳಿಸಲು ಸರಕಾರ ಮಂದಾಗಿದೆ. ಈ ಶಂಬಂಧ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ.


ಬೆಂಗಳೂರು (ನ.17): ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ತೀವ್ರ ಕಗ್ಗಂಟಾಗಿದ್ದ ಬಿಡದಿ ಸಮೀಪದ ಟೊಯೋಟ-ಕಿರ್ಲೋಸ್ಕರ್‌ ಬಿಕ್ಕಟ್ಟು ನಿವಾರಣೆಗೆ ಸರಕಾರ ಯತ್ನಿಸಿದ್ದು, ಇದೇ ವೇಳೆ ಕಂಪನಿಯಲ್ಲಿ ಮುಷ್ಕರ ನಿಷೇಧಿಸಿ, ಲಾಕ್‌ಔಟ್‌ ತೆರವುಗೊಳಿಸಲು ಸರಕಾರ ಮಂದಾಗಿದೆ.

ರಾಜ್ಯದ ಏಕೈಕ ಬೃಹತ್‌ ಆಟೋಮೊಬೈಲ್‌ ಕೈಗಾರಿಕೆಯಾಗಿರುವ ಟೊಯೋಟ-ಕಿರ್ಲೋಸ್ಕರ್‌ ಕಂಪನಿಯಲ್ಲಿ ಕೆಲ ದಿನಗಳ ಹಿಂದೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಉಂಟಾದ ತಿಕ್ಕಾಟದಿಂದ ಸುಮಾರು 39 ಕಾರ್ಮಿಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದರೆ, ಕಂಪನಿಯೂ ಲಾಕ್‌ಔಟ್‌ ಘೋಷಣೆ ಮಾಡಿತ್ತು.

Tap to resize

Latest Videos

ಇದರಿಂದ ಕೂಡಲೇ ಮಧ್ಯಪ್ರವೇಶ ಮಾಡಿದ ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ .ಸಿ.ಎನ್.ಅಶ್ವತ್ಥನಾರಾಯಣ, ಕಾರ್ಮಿಕರು ಮತ್ತು ಆಡಳಿತ ಮಂಡಳಿ ಒಳಗೊಂಡಂತೆ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌, ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಮುಂತಾದವರೊಂದಿಗೆ ತುರ್ತು ಸಭೆ ನಡೆಸಿದರಲ್ಲದೆ, ಕಾರ್ಮಿಕ ವ್ಯಾಜ್ಯ ಕಾಯ್ದೆ ಸೆಕ್ಷನ್‌ 10(3)ರ ಪ್ರಕಾರ ಕಂಪನಿಯಲ್ಲಿ ಮುಷ್ಕರ ನಿಷೇಧಿಸಿ ಲಾಕ್‌ಔಟ್‌ ತೆರವುಗೊಳಿಸುವ ಮಹತ್ವದ ಆದೇಶವನ್ನು   ಹೊರಡಿಸಲಾಗುವುದು ಎಂದು ಪ್ರಕಟಿಸಿದರು.

ನಾಳೆ ಬೆಳಗ್ಗೆಯಿಂದಲೇ ಕಂಪನಿಯ ಉತ್ಪಾದನಾ ಚಟುವಟಿಕೆ ಪುನಾರಂಭ ಆಗಬೇಕು. ಕೂಡಲೇ ಕೆಲಸಕ್ಕೆ ಹಾಜರಾಗಿ ಎಂದು ಕಾರ್ಮಿಕರಿಗೆ ಹಾಗೂ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಡಳಿತ ಮಂಡಳಿಗೆ ಡಿಸಿಎಂ ಸೂಚಿಸಿದರು. 

ಹೊಸ ಕಟ್ಟಡ ಕಟ್ಟಂಗಿಲ್ಲ, ಹಳೆ ಕಟ್ಟಡ ಬಿಡಂಗಿಲ್ಲ! ..

ಮುಷ್ಕರ, ಲಾಕ್‌ಔಟ್‌ ಎರಡೂ ಸರಿಯಲ್ಲ:  ಮೊದಲಿನಿಂದಲೂ ರಾಜ್ಯದಲ್ಲಿ ಉತ್ತಮ ಶ್ರಮಸಂಸ್ಕೃತಿ ಇದೆ. ಇದರಿಂದ ಕೈಗಾರಿಗೆಗಳ ಬೆಳವಣಿಗೆ ಉತ್ತಮವಾಗಿ ಆಗಿದೆ ಎಂದು ಹೇಳಬಹುದು. ಇಡೀ ಏಷ್ಯಾದಲ್ಲಿಯೇ ಉತ್ತಮ ಹೂಡಿಕೆ ಹಾಗೂ ಕೈಗಾರಿಕೆಗಳಿಗೆ ಪೂರಕ ವಾತಾವರಣ ರಾಜ್ಯದಲ್ಲಿದೆ. ಕೋವಿಡ್‌ ನಂತರ ಕುಸಿತ ಕಂಡಿರುವ ಆರ್ಥಿಕತೆಯನ್ನು ಮತ್ತೆ ಮೇಲೆತ್ತುವ ಕೆಲಸ ಎಲ್ಲರೂ ಮಾಡಬೇಕಿದೆ. ಆದರೆ, ಮುಷ್ಕರ ಮತ್ತು ಲಾಕ್‌ಔಟ್‌ನಿಂದ ನಾವು ಎಂಥ ಸಂದೇಶ ನೀಡಲು ಸಾಧ್ಯ? ಎಂದು ಡಿಸಿಎಂ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕ ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳನ್ನು ಖಾರವಾಗಿ ಪ್ರಶ್ನಿಸಿದರು.

ಚೀನಾಕ್ಕೆ ಪರ್ಯಾಯವಾಗಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಆದರಲ್ಲೂ ಕರ್ನಾಟಕದಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜಪಾನ್‌, ದಕ್ಷಿಣ ಕೊರಿಯಾ, ತೈವಾನ್‌ನಂಥ ದಕ್ಷಿಣ ಆಸಿಯಾ ದೇಶಗಳು ತುದಿಗಾಲ ಮೇಲೆ ನಿಂತಿವೆ. ಇಂಥ ಹೊತ್ತಿನಲ್ಲಿ ಮುಷ್ಕರ, ಲಾಕ್‌ಡೌನ್‌ನಂಥ ಮಾತುಗಳು ಬರಲೇಬಾರದು ಎಂದ ಅವರು; ಜಪಾನಿಯರಲ್ಲಿ ಇರುವ ವರ್ಕ್‌ ಕಲ್ಚರ್‌ ನಮ್ಮಲ್ಲೂ ಬರಬೇಕು.  ಇದು ಸ್ಪರ್ಧಾತ್ಮಕ ಜಗತ್ತು. ಮಾರಕಟ್ಟೆಯಲ್ಲಿ ನೂರೆಂಟು ಕಾರುಗಳಿವೆ. ಗ್ರಾಹಕನಿಗೆ ಆಯ್ಕೆ ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು ಎಂದು ಕಾರ್ಮಿಕ ಪ್ರತಿನಿಧಿಗಳಿಗೆ ಸೂಕ್ಷ್ಮವಾಗಿ ತಿಳಿಹೇಳಿದರು ಡಿಸಿಎಂ.

ಸಭೆಯಲ್ಲಿ ಮಾಗಡಿ ಶಾಸಕ ಮಂಜುನಾಥ, ಡಿಸಿಎಂ ಕಾರ್ಯದರ್ಶಿ ಪಿ.ಪ್ರದೀಪ್, ರಾಮನಗರ ಜಿಲ್ಲಾಧಿಕಾರಿ ಅರ್ಚನಾ, ಎಸ್ಪಿ ಗಿರೀಶ್, ಹೆಚ್ಚುವರಿ ಕಾರ್ಮಿಕ ಆಯುಕ್ತ ಮಂಜುನಾಥ ಸಭೆಯಲ್ಲಿ ಹಾಜರಿದ್ದರು.

click me!