ಹೊಸ ಕಟ್ಟಡ ನಿರ್ಮಾಣವಾಗಂಗಿಲ್ಲ, ಹಳೆ ಕಟ್ಟಡ ಬಿಡಂಗಿಲ್ಲ. ಈ ರೀತಿ ಸ್ಥಿತಿ ಇದೆ. ಹಾಗಾದ್ರೆ ಏನಿದು ವಿಚಾರ..?
ವರದಿ : ವಿಶ್ವನಾಥ್ ಶ್ರೀರಾಂಪುರ
ಹೊಸದುರ್ಗ (ನ.17): ಹೊಸ ಕಟ್ಟಡ ನಿರ್ಮಾಣವಾಗಂಗಿಲ್ಲ, ಹಳೆ ಕಟ್ಟಡ ಬಿಡಂಗಿಲ್ಲ. ಸಣ್ಣ ಮಳೆ ಬಂದರೂ ಸೋರೋದು ನಿಲ್ಲಂಗಿಲ್ಲ, ದಾಖಲೆ ಹಾಗೂ ಕಂಪ್ಯೂಟರ್ ರಕ್ಷಣೆಗೆ ಟಾರ್ಪಲ್ ಮುಚ್ಚೋದು ತಪ್ಪಂಗಿಲ್ಲ. ಇದು ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾದ ಶ್ರೀರಾಂಪುರ ನಾಡಕಚೇರಿಯ ದುಸ್ಥಿತಿ.
ಸಣ್ಣ ಮಳೆ ಬಂದರೂ ಕಚೇರಿಯ ಒಳಗೆ ತೊಟ್ಟಿಕ್ಕುವ ಮಳೆ ನೀರು. ಅದರಿಂದ ತಪ್ಪಿಸಿಕೊಳ್ಳಲು ಟೇಬಲ್ ಹಾಗೂ ಕುರ್ಚಿಗಳನ್ನು ಆಚೀಚೆ ಜರುಗಿಸಿ ಕುಳಿತು ಕೆಲಸ ಮಾಡುವ ಸಿಬ್ಬಂದಿಯ ಕಥೆ ಒಂದುಕಡೆಯಾದರೆ, ಇನ್ನೂ ಕಂಪ್ಯೂಟರ್ ಕೊಠಡಿಗೆ ಟಾರ್ಪಲೇ ಗತಿ. ಇದಕ್ಕೆ ಉಪತಹಸೀಲ್ದಾರ್ ಕಚೇರಿಯೂ ಹೊರತಾಗಿಲ್ಲ.
ಕಳೆದ 30 ವರ್ಷಗಳಿಂದಲೂ ನಾಡಕಚೇರಿ ಚಟುವಟಿಕೆಗಳು ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಮಳೆ ಬಂದಾಗಲೆಲ್ಲಾ ಕಂಪ್ಯೂಟರ್ ಕೊಠಡಿ, ಉಪತಹಸೀಲ್ದಾರ್ ಕಚೇರಿಯಲ್ಲಿ ನೀರು ಸೋರುತ್ತದೆ. ಸಿಬ್ಬಂದಿ ಕೆಲವೊಮ್ಮೆ ಕಂಪ್ಯೂಟರ್ ಅನ್ನು ತಾಡಪಾಲಿನಿಂದ ಮುಚ್ಚಿಡುತ್ತಾರೆ. ರಾತ್ರಿ ವೇಳೆ ಮಳೆ ಬಂದಾಗ ಕಂಪ್ಯೂಟರ್ ಹಾಳಾಗಿ ಕೆಲವು ಸಲ ನೆಮ್ಮದಿ ಕೇಂದ್ರವನ್ನೂ ಮುಚ್ಚಲಾಗಿದೆ. ಇದರಿಂದ ಸಾರ್ವಜನಿಕರು, ರೈತರಿಗೆ ಬಹಳಷ್ಟುತೊಂದರೆಯೂ ಆಗಿದೆ. ಅದೃಷ್ಟವಶಾತ್ ಇಡೀ ಕಟ್ಟಡದಲ್ಲಿ ದಾಖಲೆಗಳ ಕೊಠಡಿ ಮಾತ್ರ ಸುರಕ್ಷಿತವಾಗಿದ್ದು, ಒಂದು ವೇಳೆ ಅದರಲ್ಲಿ ನೀರು ತುಂಬಿದರೆ ಹೋಬಳಿಗೆ ಸೇರಿದ ದಾಖಲೆ ಪತ್ರಗಳು ಹಾಳಗಬಹುದು ಎಂಬ ಆತಂಕ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ.
ಕಾಡೊಳಗೆ 24 ಗಂಟೆ ಏಕಾಂಗಿಯಾಗಿ ಕಳೆದ 6ರ ಪುಟ್ಟ ಬಾಲೆ ..
ಇಲ್ಲಿನ ಗೂಳಿಹಳ್ಳಿ ರಸ್ತೆಯ ನಿವೇಶನದಲ್ಲಿ ನೂತನ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ಕಳೆದ ವರ್ಷ ಶಾಸಕ ಗೂಳಿಹಟ್ಟಿಶೇಖರ್ ಭೂಮಿ ಪೂಜೆ ನೆರವೇರಿಸಿದ್ದರು. ಅದಾದ ನಂತರ ಕೆಲಸ ಆರಂಭಿಸಿದ ನಿರ್ಮಿತಿ ಕೇಂದ್ರದವರು ಕಟ್ಟಡಕ್ಕೆ ಬುನಾದಿ ಪೂರ್ಣಗೊಳಿಸಿ ಕೆಲಸ ನಿಲ್ಲಿಸಿಸಿದ್ದಾರೆ. ಕೇಳಿದರೆ, ಅನುದಾನ ಬಂದಿಲ್ಲ ಹಾಗಾಗಿ ಕೆಲಸ ನಿಲ್ಲಿಸಲಾಗಿದೆ ಎಂದು ಉತ್ತರಿಸುತ್ತಾರೆ. ಇಡೀ ಹೋಬಳಿಯ ಸಂಪೂರ್ಣ ದಾಖಲೆ ಹೊಂದಿರುವ ನಾಡಕಚೇರಿಗೆ ಶೀರ್ಘವಾಗಿ ಹೊಸ ಕಟ್ಟಡ ನಿರ್ಮಾಣವಾಗಬೇಕು. ಇಲ್ಲವೇ ಇರುವ ಕಟ್ಟಡದ ದುರಸ್ತಿಯಾದರೂ ಮಾಡಿಸಬೇಕು ಎಂಬುದು ಹೋಬಳಿಯ ಜನರ ಆಗ್ರಹವಾಗಿದೆ.
ಶ್ರೀರಾಂಪುರ ನಾಡಕಚೇರಿ ಕಟ್ಟಡಕ್ಕೆ 18 ಲಕ್ಷ ರು. ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ತಳಪಾಯದಲ್ಲಿ ಸಡಿಲವಾಗಿ ಮಣ್ಣು ಇದ್ದಿದ್ದರಿಂದ ತಳಪಾಯಕ್ಕೆ ಹೆಚ್ಚು ಹಣ ಖರ್ಚಾಗಿದೆ. ಇರುವ ಹಣದಲ್ಲಿ ಗೋಡೆ ಕಟ್ಟಡ ನಿರ್ಮಾಣ ಮಾಡಬಹುದು. ಆರ್‌ಸಿಸಿ ಇನ್ನಿತರೆ ಕೆಲಸಗಳಿಗೆ ಅನುದಾನದ ಕೊರತೆಯಾಗುತ್ತದೆ. ಇದನ್ನು ಶಾಸಕರ ಗಮನಕ್ಕೆ ತಂದಿದ್ದು, ಹೆಚ್ಚುವರಿಯಾಗಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ದೀಪಾವಳಿ ಹಬ್ಬದ ನಂತರ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು.
- ಕೃಷ್ಣೇಗೌಡ, ಎಂಜಿನಿಯರ್, ನಿರ್ಮಿತಿ ಕೇಂದ್ರ ಹೊಸದುರ್ಗ