ಕೊರೋನಾ ಕಾಟ: ಸಾಲ ವಸೂಲಿಗೆ ಗ್ರಾಹಕರ ಮೇಲೆ ಒತ್ತಡ ಹಾಕಿದರೆ ಕ್ರಮ

By Kannadaprabha News  |  First Published May 31, 2020, 7:11 AM IST

ಯಾವುದೇ ರೀತಿಯ ಸಾಲಗಾರರಿಂದ ಇಎಂಐ ತುಂಬಲು ಒತ್ತಾಯಿಸುವುದು ಅಥವಾ ಟಾಪ್‌ ಆಫ್‌ ಆಫರ್‌ದಂತ ಆಮಿಷಗಳನ್ನು ಒಡ್ಡುವ ಮೂಲಕ ಒತ್ತಡ, ಮಾನಸಿಕ ಕಿರಿಕಿರಿ ಉಂಟು ಮಾಡಿದ ಬಗ್ಗೆ ದೂರುಗಳು ಬಂದಲ್ಲಿ ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಲಿದೆ| ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್‌|


ಧಾರವಾಡ(ಮೇ.31): ಯಾವುದೇ ರೀತಿಯ ಹಣಕಾಸು ಸಂಸ್ಥೆ, ಬ್ಯಾಂಕ್‌ಗಳು ತಮ್ಮಲ್ಲಿ ಸಾಲ ಪಡೆದ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಅಥವಾ ನೋಟಿಸ್‌ ನೀಡುವ ಮೂಲಕ ವಸೂಲಿಗೆ ಒತ್ತಡ ಹಾಕಿದರೆ ಸರ್ಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಬ್ಯಾಂಕ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ರಾಷ್ಟ್ರೀಕೃತ, ವಾಣಿಜ್ಯ ಹಾಗೂ ಕಿರುಹಣಕಾಸು ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್‌-2020ರ ವರೆಗೆ ಯಾವುದೇ ರೀತಿಯ ಸಾಲಗಾರರಿಂದ ಇಎಂಐ ತುಂಬಲು ಒತ್ತಾಯಿಸುವುದು ಅಥವಾ ಟಾಪ್‌ ಆಫ್‌ ಆಫರ್‌ದಂತ ಆಮಿಷಗಳನ್ನು ಒಡ್ಡುವ ಮೂಲಕ ಒತ್ತಡ, ಮಾನಸಿಕ ಕಿರಿಕಿರಿ ಉಂಟು ಮಾಡಿದ ಬಗ್ಗೆ ದೂರುಗಳು ಬಂದಲ್ಲಿ ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಲಿದೆ.

Latest Videos

undefined

ಲಾಕ್‌ಡೌನ್‌ ಎಫೆಕ್ಟ್‌: ಮದುವೆ ಮುಂದೂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಕೊರೋನಾದಂತಹ ವಿಷಮ ಪರಿಸ್ಥಿತಿಯಲ್ಲಿ ಎಲ್ಲ ರೀತಿಯ ಆರ್ಥಿಕ ಹಾಗೂ ಕೃಷಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಸರ್ಕಾರ ಅಸಹಾಯಕರ ನೆರವಿಗಾಗಿ ಹಲವಾರು ಯೋಜನೆ, ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಾಲಗಾರರಿಗೆ ಕರೆ ಮಾಡಿ ಇಎಂಐ ಕಂತು ತುಂಬಲು, ಟಾಪ್‌ ಆಪ್‌ ಯೋಜನೆ ಆಮಿಷ ನೀಡುವುದು ಹಾಗೂ ವಸೂಲಾತಿಗೆ ನೋಟಿಸ್‌ ನೀಡುವುದು ಸೂಕ್ತವಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಗ್ರಾಹಕರು ಲೀಡ್‌ಬ್ಯಾಂಕ್‌ಗೆ ಈ ಕುರಿತು ದೂರುಗಳನ್ನು ನೀಡುತ್ತಿದ್ದಾರೆ. ಲೀಡ್‌ಬ್ಯಾಂಕ್‌ ಮೂಲಕ ಅಗತ್ಯ ಮಾಹಿತಿಯನ್ನು ಎಲ್ಲ ಬ್ಯಾಂಕ್‌, ಬ್ಯಾಂಕ್‌ ಶಾಖೆಗಳಿಗೆ ಈಗಾಗಲೇ ತಲುಪಿಸಲಾಗಿದೆ. ಇದರ ಹೊರತಾಗಿಯೂ ಇನ್ನೂ ಮುಂದೆ ಗ್ರಾಹಕರಿಂದ ಒತ್ತಾಯದ ವಸೂಲಾತಿ ಕುರಿತು ನಿರ್ದಿಷ್ಟದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಇಎಂಐ ಕಂತುಗಳ ಮುಂದೂಡಿಕೆಯ ಬಗ್ಗೆ ಮತ್ತು ಒತ್ತಾಯದಿಂದ ಸಾಲ ವಸೂಲಿ ಮಾಡದಂತೆ ಎಲ್ಲ ಬ್ಯಾಂಕ್‌ ಮತ್ತು ಬ್ಯಾಂಕ್‌ ಶಾಖೆಗಳ ಮುಖ್ಯಸ್ಥರಿಗೆ ಸರ್ಕಾರ, ಆರ್‌ಬಿಐ ನೀಡಿರುವ ಸುತ್ತೋಲೆಗಳೊಂದಿಗೆ ಪೂರ್ಣ ಮಾಹಿತಿ, ತಿಳಿವಳಿಕೆ ನೀಡಲು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದರು.

ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಕಿರು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಹೊಸ ಯೋಜನೆಗಳ ಕುರಿತು ಸಾರ್ವಜನಿಕವಾಗಿ ಮಾಹಿತಿ ನೀಡಿ, ಪ್ರಕಟಿಸಲಿ. ಆದರೆ ಸಾಲ ವಸೂಲಾತಿ, ಹೊಸ ಸಾಲದ ಬಗ್ಗೆ ಈ ಸಂದರ್ಭದಲ್ಲಿ ವೈಯಕ್ತಿಕ ಕರೆ ಮಾಡುವ ಅಗತ್ಯವಿಲ್ಲ ಎಂದರು.

ಲೀಡ್‌ಬ್ಯಾಂಕ್‌ ಮ್ಯಾನೇಜರ್‌ ಈಶ್ವರನಾಥ ಮಾತನಾಡಿ, ಸರ್ಕಾರ ಹಾಗೂ ಆರ್‌ಬಿಐ ನೀಡುವ ಎಲ್ಲ ನಿರ್ದೇಶನ, ಸುತೋಲೆಗಳನ್ನು ಕಾಲಕಾಲಕ್ಕೆ ಜಿಲ್ಲೆಯ ಬ್ಯಾಂಕ್‌ ಮತ್ತು ಬ್ಯಾಂಕ್‌ ಶಾಖೆಗಳಿಗೆ ತಲುಪಿಸಲು ಕ್ರಮಕೈಗೊಳ್ಳಲಾಗಿದೆ. ಗ್ರಾಹಕರಿಂದ ಯಾವುದೇ ರೀತಿಯ ಸಾಲ ವಸೂಲಿ ಹಾಗೂ ಇಎಂಐ ತುಂಬುವಂತೆ ಒತ್ತಾಯಿಸಲು ಅವಕಾಶವಿಲ್ಲ. ಸ್ವಯಂ ಪ್ರೇರಣೆಯಿಂದ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐ ತುಂಬಲಿ. ಇದಕ್ಕೆ ಎಲ್ಲ ರೀತಿಯ ಹಣಕಾಸು ಸಂಸ್ಥೆಗಳು ಅವಕಾಶ ಮಾಡಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ, ಕರ್ನಾಟಕ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ಐತಾಳ, ಕೆನರಾ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಮಂಜುನಾಥ ಕೆ., ಬ್ಯಾಂಕ್‌ ಆಪ್‌ ಬರೋಡಾ ಧಾರವಾಡ ಶಾಖೆಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಬೆಲ್ಲದ, ನಬಾರ್ಡ್‌ ಸಂಸ್ಥೆ ಜಿಲ್ಲಾ ಉಪ ವ್ಯವಸ್ಥಾಪಕಿ ಶೀಲಾ ಭಂಡಾರಕರ, ಕಿರುಹಣಕಾಸು ಸೇವಾ ಸಂಸ್ಥೆ ಅಧ್ಯಕ್ಷ ರಾಘವೆಂದ್ರ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು, ಕಿರುಹಣಕಾಸು ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.
 

click me!