Festival Activities: ಜಾತ್ರೆ ಬಂದ್ರೆ ಬಂದ್ ಆಗೋ ಊರು ಇದು, ಊರಿಗ ಸುತ್ತ ಮುಳ್ಳಿನ ಬೇಲಿ

By Suvarna News  |  First Published Jan 21, 2022, 2:21 PM IST

ಬರೋಬ್ಬರಿ 9 ದಿನಗಳ ಕಾಲ ಇಡೀ ಊರಿಗೆ ಊರೇ ಮುಳ್ಳಿನ ಬೇಲಿಯಲ್ಲಿ ಬಂಧಿಯಾಗುತ್ತದೆ.ಇಡೀ ಊರಿನ ಸುತ್ತಲೂ ಮುಳ್ಳು ಬೇಲಿ ಇರುತ್ತದೆ. ಈ ಅವದಿಯಲ್ಲಿ ಇಡೀ ಊರಿಗೆ ಊರ ಬಾಗಿಲು ಬಿಟ್ಟರೆ ಬೇರೆ ಯಾವುದೇ ಕಡೆಯಿಂದಲೂ ಒಳಗೆ ಬರಲು, ಹೊರ ಹೋಗಲು ಅವಕಾಶ ಇಲ್ಲ. ಯಾರೇ ಬಂದು, ಹೋದರೂ ಇದೇ ಊರ ಬಾಗಿಲಲ್ಲಿಯೇ ಬರಬೇಕು, ಹೋಗಬೇಕು.


ದಾವಣಗೆರೆ(ಜ.21): ಕೊರೋನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಲಾಕ್‍ಡೌನ್ ಭೀತಿಯಲ್ಲಿ ಇಡೀ ರಾಜ್ಯವಿದ್ದರೆ, ಇಲ್ಲೊಂದು ಕಡೆ ಊರಿಗೆ ಊರೇ ಬೇಲಿ ಹಾಕಿಕೊಂಡು, ಶತ ಶತಮಾನಗಳಿಂದಲೂ ತನ್ನದೇ ಆಚರಣೆ ಮೂಲಕ ಮನೆ ಮಾತಾಗಿರುವ ಗ್ರಾಮವೊಂದು ದಾವಣಗೆರೆ ತಾಲೂಕಿನಲ್ಲಿದೆ. ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಗ್ರಾಮ ದೇವತೆ ಶ್ರೀಊರಮ್ಮ ದೇವಿ ಜಾತ್ರೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತದೆ. ಇಡೀ ಗ್ರಾಮದ ಸುತ್ತಲೂ ಸುಮಾರು 3-4 ಕಿಮೀನಷ್ಟು ದೂರ ಊರಿನ ಜನರ ಸಹಕಾರದಲ್ಲಿ ದೇವಸ್ಥಾನ ಸಮಿತಿಯವರು ಮುಳ್ಳು ಬೇಲಿಯನ್ನು ಹಾಕುತ್ತಾರೆ. ಊರ ಹೊರ ಭಾಗಕ್ಕೆ ಸಾಲಾಗಿ ಬೇಲಿ ಹಾಕುವ ಮೂಲಕ ಮಹಾಮಾರಿಗಳಿಂದ ಗ್ರಾಮದ ಜನ, ಜಾನುವಾರುಗಳು, ಗ್ರಾಮವನ್ನು ಕಾಪಾಡುವಂತೆ ಪ್ರಾರ್ಥಿಸಿ, ಬೇಲಿ ಹಾಕುತ್ತಾರೆ.

ಕಕ್ಕರಗೊಳ್ಳಕ್ಕೆ ಮಂಗಳವಾರ ಸಂಜೆಯಿಂದ ತಡರಾತ್ರಿವರೆಗೆ ಊರಿಗೆ ಬೇಲಿ ಹಾಕುವ ಕೆಲಸ ಆಗಿದೆ. ಬುಧವಾರದಿಂದ ಬರೋಬ್ಬರಿ 9 ದಿನಗಳ ಕಾಲ ಇಡೀ ಊರಿಗೆ ಊರೇ ಮುಳ್ಳಿನ ಬೇಲಿಯಲ್ಲಿ ಬಂಧಿಯಾಗುತ್ತದೆ. ಜ.25ರ ಬೆಳಗಿನ ಜಾವದವರೆಗೂ ಇಡೀ ಊರಿನ ಸುತ್ತಲೂ ಮುಳ್ಳು ಬೇಲಿ ಇರುತ್ತದೆ. ಈ ಅವದಿಯಲ್ಲಿ ಇಡೀ ಊರಿಗೆ ಊರ ಬಾಗಿಲು ಬಿಟ್ಟರೆ ಬೇರೆ ಯಾವುದೇ ಕಡೆಯಿಂದಲೂ ಒಳಗೆ ಬರಲು, ಹೊರ ಹೋಗಲು ಅವಕಾಶ ಇಲ್ಲ. ಯಾರೇ ಬಂದು, ಹೋದರೂ ಇದೇ ಊರ ಬಾಗಿಲಲ್ಲಿಯೇ ಬರಬೇಕು, ಹೋಗಬೇಕು.

Tap to resize

Latest Videos

ಕಸಾಯಿಖಾನೆ ಪಾಲಾಗ್ತಿದ್ದ 70ಕ್ಕೂ ಹೆಚ್ಚು ಗೋವುಗಳಿಗೆ ಮರುಜನ್ಮ..!

ಊರಿಗೆ ಪಾರು ಬೇಲಿ ಹಾಕಿದ ನಂತರ ಊರ ಬಾಗಿಲ ಮೂಲಕ ಒಳಗೆ ಹೋಗುವವರು ಅಲ್ಲಿರುವ ಫಲಕ ಓದಿಯೇ ಒಳಗೆ ಹೋಗಬೇಕು. ಆಕಸ್ಮಾತ್ ಒಳಗೆ ಹೋಗುವಾಗ ತಾವು ಧರಿಸಿದ ಬೆಲ್ಟ್, ವಾಚ್, ಪರ್ಸ್, ಕನ್ನಡಕ, ವಾಚ್, ಕೈಗೆ ಕಟ್ಟಿದ ದಾರ, ಶೂ, ಚಪ್ಪಲಿ ಹೊರಗೆ ಬಿಟ್ಟು ಹೋಗಬೇಕು. ತೊಟ್ಟಿರುವ ಬಟ್ಟೆ, ನೋಟು ಬಿಟ್ಟು ಏನನ್ನೂ 9 ದಿನ ಹೊರಗೆ ತರುವಂತಿಲ್ಲ. 

ಬೇಲಿ ಒಳಗೆ ಊರಿಗೆ ಏನನ್ನಾದರೂ ಒಯ್ಯಬಹುದು. ಆದರೆ, ಅಲ್ಲಿಂದ 9 ದಿನಗಳ ಕಾಲ ಹೊರಗೆ ಅವುಗಳನ್ನು ತರುವಂತಿಲ್ಲ. ಗೊತ್ತಿಲ್ಲದೇ ವಾಹನ ಹೋದರೂ, ಬೇಲಿ ತೆಗೆದ ನಂತರವೇ ಆ ವಾಹನ ಹೊರ ಬರಬೇಕು. 9 ದಿನದ ನಂತರ ಜ.26ರಂದು ಜಾತ್ರೆಯು ಸೀಮಿತ ಜನರ ಸಮ್ಮುಖದಲ್ಲಿ ನಡೆಯುತ್ತದೆ. ಆ ನಂತರವೇ ಪಾರು ಬೇಲಿ ತೆಗೆಯಲಾಗುತ್ತದೆ. ಆ ನಂತರವೇ ಹೊರಗೆ ಬರಲು, ಒಳಗೆ ಹೋಗಲು ಮುಕ್ತ ಅವಕಾಶ.

ಮದ್ದಿಲ್ಲದ KFD ತಡೆಗೆ ಕೋವಿಡ್‌ ಲಸಿಕೆ ಅಡ್ಡಿ..!

ಅಲ್ಲದೇ, 9 ದಿನಗಳ ಕಾಲ ಗ್ರಾಮಸ್ಥರು ಸರದಿಯಲ್ಲಿ ಊರ ಬಾಗಿಲಿನಲ್ಲಿದ್ದ ಹೊಸಬರಿಗೆ ಅಲ್ಲಿ ರೀತಿ, ರಿವಾಜು, ನಿಯಮ ಹೇಳುತ್ತಾರೆ. ಈ ಅವದಿಯಲ್ಲಿ ಶಾಲಾ-ಕಾಲೇಜು, ಕೆಲಸ, ವ್ಯಾಪಾರಗಳಿಗೆ ಹೋಗುವವರು ತಮ್ಮ ಸಂಬಂಧಿಗಳ ಮನೆಯಲ್ಲಿ, ಬೇಲಿ ಹೊರಗಿನ ಪರಿಚಯಸ್ಥರ ಮನೆಯಲ್ಲಿ ಸೈಕಲ್ ವಾಹನ, ಚಪ್ಪಲಿ, ಬೆಲ್ಟ್, ಪರ್ಸ್, ಬ್ಯಾಗ್, ಚರ್ಮದ ವಸ್ತುಗಳನ್ನು ಬಿಟ್ಟು, ಬರಿಗಾಲಲ್ಲಿ ತೊಟ್ಟ ಬಟ್ಟೆಯಲ್ಲಿ ಊರೊಳಗೆ ಬರುತ್ತಾರೆ. ಊರಿನಿಂದ ಹೊರ ಬರುವಾಗಲೂ ಒಣ ಬಟ್ಟೆಯಲ್ಲಿ ಬರಿಗಾಲಲ್ಲೇ ಹೊರಗೆ ಹೆಜ್ಜೆ ಇಡಬೇಕು. ಹಸಿ ಬಟ್ಟೆ, ಹಸಿಯಾದ ದಾರ ಹೀಗೆ ಯಾವುದೇ ಹಸಿ ಪದಾರ್ಥ ಊರಿನಿಂದ ಹೊರಗೆ ಬೇಲಿ ದಾಟುವುದಕ್ಕೆ ಅವಕಾಶವೂ ಇಲ್ಲ. ಇಂತಹದ್ದೊಂದು ಆಚರಣೆ ಮೂಲಕ ಕಕ್ಕರಗೊಳ್ಳ ಗ್ರಾಮದ ಊರಮ್ಮ ದೇವಿ ಜಾತ್ರೆಯು ಗಮನ ಸೆಳೆಯುತ್ತದೆ.

ಕೊರೋನಾ ಮಹಾಮಾರಿಗಿಂತಲೂ ಮುಂಚೆ ಅಂದರೆ, ಶತ ಶತಮಾನಗಳ ಹಿಂದೆ ಬಂದಂತೆ ಮಾರಿಗಳಿಂದ ಜನ, ಜಾನುವಾರುಗಳ ರಕ್ಷಣೆಗೆ ತಾಯಿ ಊರಮ್ಮನ ಜಾತ್ರೆ ಮಾಡಿಕೊಂಡು ಬಂದ ಜನರು ಇಡೀ ಊರಿಗೆ ಪಾರು ಬೇಲಿ ಹಾಕಿಕೊಂಡು, 9 ದಿನಗಳ ಕಾಲ ದೇವಿ ಆರಾಧಿಸುತ್ತಾರೆ. ಎಲ್ಲೆಡೆ ಜಾತ್ರೆಯೆಂದರೆ ಸಾವಿರಾರು, ಲಕ್ಷಾಂತರ ಜನ ಸೇರಿ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವುದನ್ನು ಕಾಣುತ್ತೇವೆ. ಆದರೆ, ಅದಕ್ಕೆ ಭಿನ್ನವೆಂಬಂತೆ ಸರ್ಕಾರ ಈಗ ಹೇಳಿರುವ ಮಾರ್ಗಸೂಚಿಗಳನ್ನು, ಲಾಕ್‍ಡೌನ್ ನಿಯಮಗಳನ್ನು ಕಕ್ಕರಗೊಳ್ಳ ಗ್ರಾಮಸ್ಥರು ಶತ ಶತಮಾನಗಳಿಂದಲೇ ಆಚರಿಸಿಕೊಂಡು ಬರುತ್ತಿದ್ದಾರೆ. ಊರಮ್ಮನ ಹೆಸರಿನಲ್ಲಿ, ದೇವಿಯ ಜಾತ್ರೆ ಹೆಸರಿನಲ್ಲಿ 9 ದಿನಗಳ ಕಾಲ ಇಡೀ ಊರಿಗೆ ಮುಳ್ಳು ಬೇಲಿಯ ದಿಗ್ಭಂಧನ ಇರುವುದು ಸಹ ವಿಶೇಷವಾಗಿದೆ.

ಗಂಗಾವತಿಯಿಂದ ತಮಿಳುನಾಡಿಗೆ ಬತ್ತ ಕಟಾವು ಯಂತ್ರ ಸಾಗಣೆ

ತಮ್ಮ ಊರಿನ ಜಾತ್ರೆ ಬಗ್ಗೆ ಗ್ರಾಮದ ಮುಖಂಡರು ಸೇರಿದಂತೆ ಅನೇಕರು, ಕೋವಿಡ್ ಮಾರ್ಗಸೂಚಿಗಳನ್ನು ಈಗ ಎಲ್ಲೆಡೆ ಪಾಲಿಸುವುದನ್ನ ಕಾಣುತ್ತೇವೆ. ಆದರೆ, ನಮ್ಮೂರ ದೇವತೆ ಊರಮ್ಮ ದೇವಿ ಜಾತ್ರೆ ವೇಳೆ ಇಂತಹ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತವೆ. ನಮ್ಮೂರ ದೇವತೆಯ ನಿಯಮಗಳ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನೂ ತಪ್ಪದೇ ಪಾಲಿಸುತ್ತೇವೆ. 9 ದಿನಗಳ ಕಾಲ ನಮ್ಮ ಊರಿಗೆ ಒಂದೇ ಊರ ಬಾಗಿಲಿರುತ್ತದೆ. ಯಾರೇ ಬಂದರೂ ಸ್ಯಾನಿಟೈಸ್ ಮಾಡಿ, ಮಾಸ್ಕ್ ನೀಡುತ್ತೇವೆ ಎನ್ನುತ್ತಾರೆ.

ಸಾವು ಸಂಭವಿಸಿದ್ರೂ ಗ್ರಾಮದ ಹೊರಗೆ ಹೋಗಲ್ಲ

ಪಾರು ಬೇಲಿ ಹಾಕಿದ 9 ದಿನಗಳ ಅವದಿಯಲ್ಲಿ ಇಡೀ ಕಕ್ಕರಗೊಳ್ಳ ಗ್ರಾಮದಲ್ಲಿ ಆಕಸ್ಮಾತ್ ಯಾವುದೇ ಸಾವು ಸಂಭವಿಸಿದರೆ ಗ್ರಾಮದ ಬೇಲಿ ಒಳಗಿನ ಒಂದು ಕಡೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ನಮ್ಮ ಊರಿನಿಂದ ಪಾಲು ಬೇಲಿ ದಾಟಿ, ಒಂದು ಸಣ್ಣ ಸೂಜಿ ಸಹ ಹೊರ ಹೋದ ಇತಿಹಾಸವಿಲ್ಲ. ಹೀಗೆ ಒಯ್ದವರಿಗೆ ಆಪತ್ತೂ ತಪ್ಪಿದ್ದಲ್ಲವೆಂಬ ಭಯವೂ ಜನರಲ್ಲಿದೆ. ಕೊರೋನಾ, ಓಮಿಕ್ರಾನ್ ಮಹಾಮಾರಿಯಿಂದ ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತನ್ನು ಕಾಪಾಡು, ಜನರ ಪ್ರಾಣ ಕಾಪಾಡುವಂತೆ ಪ್ರಾರ್ಥಿಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

click me!