ದಾವಣಗೆರೆ ಜಿಲ್ಲೆಯ ಬಸವನಹಳ್ಳಿಯಲ್ಲಿ ಗ್ರಾಮದಲ್ಲಿ ದೇವರಿಗೆ ಬಿಟ್ಟಿದ್ದ ಕೋಣವೊಂದು ಎಮ್ಮೆಗಳ ಜೊತೆಗೆ ಸೇರಲು ಬಿಡದೇ ಹೊಡೆಯುತ್ತಿದ್ದ ಎಮ್ಮೆಗಳ ಮಾಲೀಕನನ್ನು ತಿವಿದು ಸಾಯಿಸಿದೆ.
ವರದಿ: ವರದರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಜೂ.19): ಅದು ರಾಕ್ಷಸ ಕೋಣ, ಎದುರಿಗೆ ಬಂದೋರಿಗೆ ಗತಿ ಕಾಣಿಸದೇ ಹಾಗೇ ಮುಂದೇ ಹೋದ ಉದಾಹರಣೆ ಇಲ್ಲ. ಹೊಲ, ತೋಟಗಳನ್ನ ನಾಶಪಡಿಸಿ ರಾಕ್ಷಸತನ ಮೆರೆಯುತ್ತಿದ್ದ ಕೋಣ, ದ್ವೇಷ ಸಾಧಿಸಿ ವ್ಯಕ್ತಿಯೊಬ್ಬನ ಬಲಿ ಪಡೆದಿದೆ. ಅಷ್ಟಕ್ಕೂ ಕೋಣನಿಗೆ ಇದ್ದ ದ್ವೇಷ ಏನು ಎಂಬುದರ ಡಿಟೆಲ್ಸ್ ಇಲ್ಲಿದೆ.
ಚಿರತೆ, ಕರಡಿ, ಹುಲಿ ದಾಳಿ ಮಾಡುವುದನ್ನು ನೋಡಿದ್ದೇವೆ. ಆದರೆ ಕೋಣ ಗುದ್ದಿ ಬಲಿ ಪಡೆದ ಘಟನೆಗಳು ಅಪರೂಪ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಎನ್. ಬಸವನಹಳ್ಳಿ ಗ್ರಾಮದಲ್ಲಿ ದೇವರಿಗೆ ಬಿಟ್ಟ ಕೋಣದಿಂದ ವ್ಯಕ್ತಿ ಬಲಿಯಾಗಿದ್ದಾನೆ. ಲಿಂಗದಹಳ್ಳಿ ಗ್ರಾಮದಲ್ಲಿ ದೇವರಿಗೆ ಬಿಟ್ಟ ಕೋಣ ಇದಾಗಿದ್ದು, ಪಕ್ಕದ ಬಸವನಹಳ್ಳಿಯಲ್ಲಿ ಸಾಕಷ್ಟು ದಾಂದಲೆ ಮಾಡುತಿತ್ತು. ಬಸವನಹಳ್ಳಿ ಎಮ್ಮೆಗಳ ಜೊತೆ ಸೇರಿ ದಾಂದಲೆ ಮಾಡುತ್ತಿತ್ತು. ಅಷ್ಟೆ ಯಾಕೆ ಹೊಲ ಗದ್ದೆಗಳನ್ನ ನಾಶ ಪಡಿಸುತ್ತಿತ್ತು. ಅಡಿಕೆ, ತೆಂಗು ಗಿಡಗಳನ್ನ ಕೊಂಬಿನಿಂದ ಗುದ್ದಿ ಬೀಳಿಸುತ್ತಿತ್ತು.
ರಾಜ್ಯದ ಬಳಿ ಸ್ವಲ್ಪವೂ ಅಕ್ಕಿ ದಾಸ್ತಾನಿಲ್ಲ: ಅನ್ನಭಾಗ್ಯ ಯೋಜನೆ ಜಾರಿ ಕಷ್ಟಕಷ್ಟ
ಎಮ್ಮೆ ಜೊತೆ ಸೇರಲು ಬಿಡದೇ ಕೋಣವನ್ನು ಓಡಿಸುತ್ತಿದ್ದ ಜಯಣ್ಣ: ಎಮ್ಮೆಗಳ ಹಿಂಡಿನ ಜೊತೆ ಸೇರಿ ಹಾಯುವುದು, ಹತ್ತುವುದನ್ನು ಮಾಡುತ್ತಿತ್ತು. ಕೋಣನ ಉಪಟಳಕ್ಕೆ ಬೇಸತ್ತು ಸಿಟ್ಟಿಗೆದ್ದಿದ್ದ ಜಯಣ್ಣ ದೊಣ್ಣೆಯಿಂದ ಹೊಡೆದು ಓಡಿಸುತ್ತಿದ್ದನು. ಆದರೂ ಮನೆ ಬಳಿ ಬಂದು ಜಯ್ಯಣ್ಣನ ಎಮ್ಮೆಗಳಿಗೆ ತೊಂದರೆ ಕೊಡ್ತಾ ಇತ್ತು. ಇದರಿಂದ ಎಮ್ಮೆ ಜೊತೆ ಸೇರಲು ಬಿಡದ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸುತ್ತಲೇ ಬರುತ್ತಿತ್ತು. ದ್ವೇಷದ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಜಯಣ್ಣನ ಮೇಲೆ ಕೋಣ ದಾಳಿ ಮಾಡಿತ್ತು. ಆದರೆ, ಅದೃಷ್ಟವಶಾತ್ ಹಿಂದಿನ ದಾಳಿಗಳಲ್ಲಿ ಜಯ್ಯಣ್ಣ ಪಾರಾಗಿದ್ದನು.
ಯಾರೂ ಇಲ್ಲದ ವೇಳೆ ಜಯಣ್ಣನ ಮೇಲೆ ಕೋಣ ದಾಳಿ: ಆದರೆ ಭಾನುವಾರ ಸಂಜೆ ಜಯ್ಯಣ್ಣನ ಅದೃಷ್ಟ ನೆಟ್ಟಗಿರಲಿಲ್ಲವೇನೋ, ಯಾರು ಇಲ್ಲದ್ದನ್ನು ನೋಡಿ ಜಯಣ್ಣನ ಮೇಲೆ ಕೋಣ ದಾಳಿ ಮಾಡಿ ಮನಸೋ ಇಚ್ಚೆ ತಿವಿದಿದೆ. ಎದೆ, ಹೊಟ್ಟೆ ಭಾಗಗಳಿಗೆ ಕೊಂಬಿನಿಂದ ತಿವಿದು ದಾಳಿ ಮಾಡಿದ್ದರಿಂದ ಗಂಭೀರ ಗಾಯಗೊಂಡಿದ್ದ ಬಸವನಹಳ್ಳಿ ಗ್ರಾಮದ ನೀರಗಂಟಿ ಜಯಣ್ಣ (48) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಕೋಣವನ್ನ ಗ್ರಾಮದ ದೇವರಿಗೆ ಬಿಡಲಾಗಿತ್ತು. ಪಕ್ಕದ ಹಳ್ಳಿ ಬಸವನಹಳ್ಳಿಗೆ ಹೋಗಿ ದಾಂಧಲೆ ಮಾಡುತ್ತಿತ್ತು, ಇದರ ಬಗ್ಗೆ ಲಿಂಗದಹಳ್ಳಿ ಗ್ರಾಮ ಪಂಚಾಯತಿಗೆ, ಪೊಲೀಸ್ ಠಾಣೆಯಲ್ಲೂ ಕೂಡ ದೂರು ದಾಖಲಾಗಿತ್ತು.
ಬೆಂಗಳೂರಿನಿಂದ ಕೇವಲ 6 ಗಂಟೆಗಳಲ್ಲಿ ಧಾರವಾಡ ತಲುಪಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಕೋಣವನ್ನು ಸೆರೆಹಿಡಿದ ಪೊಲೀಸರು: ಆದರೆ ಇದರ ಬಗ್ಗೆ ಅಧಿಕಾರಿಗಳು ಲಿಂಗದಹಳ್ಳಿ ಗ್ರಾಮಸ್ಥರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಕೋಣದ ದ್ವೇಷಕ್ಕೆ ವ್ಯಕ್ತಿ ಬಲಿಯಾಗಿದ್ದು ಕುಟುಂಬಸ್ಥರ ಅಕ್ರದನ ಮುಗಿಲು ಮುಟ್ಟಿದೆ. ಒಟ್ಟಾರೆ ಕೋಣದ ರಾಕ್ಷಸತನಕ್ಕೆ ವ್ಯಕ್ತಿ ಬಲಿಯಾಗಿದ್ದಾನೆ. ಇನ್ನು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಕೋಣವನ್ನ ಸೆರೆ ಹಿಡಿದು ಗೋ ಶಾಲೆಯಲ್ಲಿ ಕೂಡಿಹಾಕಲಾಗಿದೆ.