ಅಂಬಾರಿ ಹೊತ್ತ ಅಭಿಮನ್ಯು ಆನೆ ತೂಕವೆಷ್ಟು..?

By Kannadaprabha NewsFirst Published Oct 7, 2022, 4:33 AM IST
Highlights

ಮೈಸೂರು ಅರಮನೆ ಆವರಣದಲ್ಲಿ 550 ಕೆ.ಜಿ. ತೂಕ ಹೆಚ್ಚಿಸಿಕೊಂಡ ಅಂಬಾರಿ ಆನೆ ಅಭಿಮನ್ಯು ಮತ್ತು 400 ಕೆ.ಜಿ. ತೂಕ ಹೆಚ್ಚಿಸಿಕೊಂಡ ಕುಮ್ಕಿ ಆನೆ ಚೈತ್ರಾ ವಿಶ್ರಾಂತಿ ಪಡೆಯುತ್ತಿರುವುದು. ಚಿತ್ರ- ಅನುರಾಗ್‌ ಬಸವರಾಜ್‌

ಬಿ. ಶೇಖರ್‌ ಗೋಪಿನಾಥಂ

  ಮೈಸೂರು (a.07): ದಸರಾ ಗಜಪಡೆಯ ತೂಕ ಪರೀಕ್ಷೆಯಲ್ಲಿ ಅಂಬಾರಿ ಆನೆ ಅಭಿಮನ್ಯು ಆನೆಯು ತೂಕ ಹೆಚ್ಚಿಸಿಕೊಳ್ಳುವುದರಲ್ಲಿ ಈ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ.

ಕಳೆದ ಹಲವು ವರ್ಷಗಳಿಂದ ಮಾಜಿ ಅಂಬಾರಿ ಆನೆ (Elephant) ಅರ್ಜುನ ತೂಕ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮುಂದಿರುತ್ತಿತ್ತು. ಆದರೆ, ಈ ಬಾರಿ ವಿಶೇಷ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದಿರುವ ಗಜರಾಜ ಅಭಿಮನ್ಯು ಬರೋಬರಿ 550 ಕೆ.ಜಿ ತೂಕ ಹೆಚ್ಚಿಸಿಕೊಂಡಿದೆ.

ಆಯುಧ ಪೂಜೆಯಂದು ಧನ್ವಂತ್ರಿ ರಸ್ತೆಯಲ್ಲಿನ (Road)  ವೇ ಬ್ರಿಡ್ಜ್‌ನಲ್ಲಿ 14 ಆನೆಗಳ ಪೈಕಿ 5 ಆನೆಗಳ ತೂಕವನ್ನು ಮಾತ್ರ ಪರಿಶೀಲಿಸಲಾಗಿದೆ. ಇದರಲ್ಲಿ ಅಭಿಮನ್ಯು ಆನೆಯು ಕಾಡಿನಿಂದ ನಾಡಿಗೆ ಬಂದಾಗ 4770 ಕೆ.ಜಿ ತೂಕ ಹೊಂದಿದ್ದು, ಈಗ 5320 ಕೆ.ಜಿ. ತೂಕವಿದ್ದು, ಬರೋಬರಿ 550 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ. ಗೋಪಾಲಸ್ವಾಮಿ ಆನೆಯು ಬಂದಾಗ 5240 ಕೆ.ಜಿ ಇದ್ದು, ಈಗ 5650 ಕೆ.ಜಿ ತೂಕವಿದ್ದು 410 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ.

ಕುಮ್ಕಿ ಆನೆ ಚೈತ್ರಾ ಆನೆಯು ಬಂದಾಗ 3050 ಕೆ.ಜಿ. ಇದ್ದು, ಈಗ 3450 ಕೆ.ಜಿ. ತೂಕದೊಂದಿಗೆ 400 ಕೆ.ಜಿ ತೂಕ ಹೆಚ್ಚು ಮಾಡಿಕೊಂಡಿದೆ. ಮಾಜಿ ಅಂಬಾರಿ ಆನೆಯು ಅರ್ಜುನ ಬಂದಾಗ 5725 ಕೆ.ಜಿ ತೂಕವಿದ್ದು ಈಗ 6100 ಕೆ.ಜಿ. ಇದ್ದು, 375 ಕೆ.ಜಿ ತೂಕ ಹೆಚ್ಚಿಸಿಕೊಂಡಿದೆ. ನೌಫತ್‌ ಆನೆಯಾದ ಮಹೇಂದ್ರ ಬಂದಾಗ 4260 ಕೆ.ಜಿ. ತೂಕವಿದ್ದು, ಈಗ 4600 ಕೆ.ಜಿ ತೂಕದೊಂದಿಗೆ 340 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ.

ಆನೆಗಳ ಬಲಾಬಲ

ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಮೊದಲ ತಂಡದಲ್ಲಿ 9 ಹಾಗೂ 2ನೇ ತಂಡದಲ್ಲಿ 5 ಸೇರಿದಂತೆ ಒಟ್ಟು 14 ಆನೆಗಳು ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದವು.

ಮೊದಲ ತಂಡದಲ್ಲಿ ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಭೀಮ, ಮಹೇಂದ್ರ, ಕಾವೇರಿ, ಚೈತ್ರಾ ಮತ್ತು ಲಕ್ಷೀ್ಮ ಆನೆಗಳು ಆಗಮಿಸಿದ್ದವು. ಇವುಗಳ ತೂಕ ಪರಿಶೀಲನೆಯಲ್ಲಿ ಅರ್ಜುನ 5725 ಕೆ.ಜಿ, ಗೋಪಾಲಸ್ವಾಮಿ- 5240 ಕೆ.ಜಿ, ಧನಂಜಯ- 4800 ಕೆ.ಜಿ, ಅಭಿಮನ್ಯು- 4770 ಕೆ.ಜಿ, ಮಹೇಂದ್ರ- 4260 ಕೆ.ಜಿ, ಭೀಮ- 3950 ಕೆ.ಜಿ, ಕಾವೇರಿ- 3110 ಕೆ.ಜಿ, ಚೈತ್ರಾ- 3050 ಕೆ.ಜಿ ಮತ್ತು ಲಕ್ಷೀ್ಮ - 2920 ಕೆ.ಜಿ ತೂಕ ಹೊಂದಿದ್ದವು.

ಎರಡನೇ ತಂಡದಲ್ಲಿ ಗೋಪಿ, ಸುಗ್ರೀವ, ಶ್ರೀರಾಮ, ಪಾರ್ಥಸಾರಥಿ ಮತ್ತು ವಿಜಯ ಆನೆಗಳು ಆಗಮಿಸಿ ಮೊದಲ ತಂಡದೊಂದಿಗೆ ಸೇರಿಕೊಂಡಿಗದ್ದವು. ಹೀಗಾಗಿ ಮತ್ತೊಮ್ಮೆ ಎಲ್ಲಾ 14 ಆನೆಗಳನ್ನು ತೂಕ ಪರಿಶೀಲಿಸಲಾಯಿತು.

ಆವಾಗ ಅರ್ಜುನ ಆನೆ 5950 ಕೆ.ಜಿ., ಗೋಪಾಲಸ್ವಾಮಿ 5460 ಕೆ.ಜಿ., ಅಂಬಾರಿ ಆನೆ ಅಭಿಮನ್ಯು 5000 ಕೆ.ಜಿ., ಧನಂಜಯ ಆನೆ 4890 ಕೆ.ಜಿ, ಸುಗ್ರೀವ ಆನೆ 4785 ಕೆ.ಜಿ, ಗೋಪಿ ಆನೆ 4670 ಕೆ.ಜಿ., ಶ್ರೀರಾಮ ಆನೆ 4475 ಕೆ.ಜಿ, ಮಹೇಂದ್ರ ಆನೆ 4450 ಕೆ.ಜಿ, ಭೀಮ ಆನೆ 4345 ಕೆ.ಜಿ, ಪಾರ್ಥಸಾರಥಿ ಆನೆ 3445 ಕೆ.ಜಿ, ಕಾವೇರಿ ಆನೆ 3245 ಕೆ.ಜಿ, ಚೈತ್ರಾ 3235 ಕೆ.ಜಿ, ಲಕ್ಷ್ಮೀ 3150 ಕೆ.ಜಿ. ಹಾಗೂ ವಿಜಯ ಆನೆ 2760 ಕೆ.ಜಿ. ತೂಕ ಹೊಂದಿದ್ದವು.

ಜಂಬೂಸವಾರಿ ಮುನ್ನ ದಿನ ಅಂದರೆ ಆಯುಧಪೂಜೆಯಂದು 14 ಆನೆಗಳ ಪೈಕಿ 5 ಆನೆಗಳ ತೂಕವನ್ನು ಮಾತ್ರ ಪರೀಕ್ಷಿಸಲಾಗಿದ್ದು, ಉಳಿದ 9 ಆನೆಗಳ ತೂಕ ಪರೀಕ್ಷಿಸಲಿಲ್ಲ.

ಭರವಸೆ ಮೂಡಿಸುತ್ತಿರುವ ಮಹೇಂದ್ರ, ಭೀಮ!

ಇದೇ ಮೊದಲ ಬಾರಿಗೆ ದಸರೆಗೆ (Dasara) ಬಂದಿದ್ದ ಮಹೇಂದ್ರ ಆನೆಯು ಶ್ರೀರಂಗಪಟ್ಟಣ ದಸರೆಯಲ್ಲಿ ಅಂಬಾರಿ ಹೊತ್ತು ಹಾಗೂ ನೌಫತ್‌ ಆನೆಯಾಗಿ ಜಂಬೂಸವಾರಿಯಲ್ಲಿ ಸಾಗುವ ಮೂಲಕ ಭರವಸೆ ಮೂಡಿಸಿದೆ. ಎರಡನೇ ಬಾರಿಗೆ ಬಂದಿರುವ ಭೀಮ ಆನೆ ಸಹ ಉತ್ತಮವಾಗಿದ್ದು, ಜಂಬೂಸವಾರಿ ಮಾರ್ಗದಲ್ಲಿ ಸಾಗುತ್ತಿದೆ. ಭವಿಷ್ಯದಲ್ಲಿ ಇವೆರಡು ಆನೆಗಳು ಭರವಸೆ ಮೂಡಿಸಿವೆ ಎಂದು ಡಿಸಿಎಫ್‌ ಡಾ.ವಿ. ಕರಿಕಾಳನ್‌ ತಿಳಿಸಿದರು.

ಹೊಸ ಆನೆಗಳಾದ ಸುಗ್ರೀವ, ಶ್ರೀರಾಮ, ಪಾರ್ಥಸಾರಥಿ ತಾಲೀಮು ವೇಳೆ ಮಾವುತರು ಮತ್ತು ಕಾವಾಡಿಗಳು ನಿಲ್ಲಿಸಿದರು ನಿಲ್ಲುವುದು ತಡ ಮಾಡುತ್ತಿದ್ದವು. ಹೀಗಾಗಿ, ಈ ಆನೆಗಳಿಗೆ ಇನ್ನೂ ಹೆಚ್ಚಿನ ತರಬೇತಿ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಜಂಬೂಸವಾರಿಯಲ್ಲಿ ಪಾಲ್ಗೊಂಡಿಲ್ಲ. ಅಭಿಮನ್ಯು ಆನೆಗೆ 57 ವರ್ಷವಾಗಿದ್ದು, ಇನ್ನೂ 3 ವರ್ಷ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

ಆಯುಧಪೂಜೆ ದಿನ 5 ಆನೆಗಳ ತೂಕ ಮಾತ್ರ ಪರಿಕ್ಷೀಸಿದ್ದು, ಇದರಲ್ಲಿ ಅಭಿಮನ್ಯು ಆನೆ 550 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ. ಉಳಿದ ಆನೆಗಳ ತೂಕ ಸಹ 300 ರಿಂದ 400 ಕೆ.ಜಿ.ಯವರೆಗೆ ತೂಕ ಹೆಚ್ಚಳವಾಗಿದೆ ಎಂದರು.

ಆನೆಗಳ ತೂಕ ಹೀಗಿದೆ (ಕೆ.ಜಿ.ಗಳಲ್ಲಿ)

ಬಂದಾಗ ಈಗ ಹೆಚ್ಚಳ

1. ಅಭಿಮನ್ಯು 4770 5320 550

2. ಗೋಪಾಲಸ್ವಾಮಿ 5240 5650 410

3. ಚೈತ್ರಾ 3050 3450 400

4. ಅರ್ಜುನ 5725 6100 375

5. ಮಹೇಂದ್ರ 4260 4600 340

Close

click me!